Posts

Showing posts from 2008

ಅಲೆದಾಟದ ಜೊತೆಗಾರನಿಗೊಂದು ಪತ್ರ

ಗೆಳೆಯ,
ಎಲ್ಲಿಂದ ಪ್ರಾರಂಭಿಸಬೇಕೊ ತಿಳಿಯುತ್ತಿಲ್ಲ. ಮೊನ್ನೆ ಜಯನಗರದ ೩ನೇ ಬ್ಲಾಕ್ ನ ಟ್ರಾಫಿಕ್ಕ್ ಸಿಗ್ನಲ್ಲಿನಲ್ಲಿ ನೀನು ಯಾವುದೋ ಯೋಚನೆಯಲ್ಲಿ ಕಳೆದು ಹೋಗಿ ಒಬ್ಬೊಬ್ಬನೆ ನಗುತ್ತಾ ಬರುವುದನ್ನು ನಾನು ದೂರದಿಂದಲೇ ನೋಡಿದ ಕ್ಷಣದಿಂದಲೋ ಅಥವಾ ೩ ವರ್ಷಗಳ ಹಿಂದೆ ವಿಪ್ರೋ ಸಂಸ್ಥೆ ಸೇರಿದ ಹೊಸತರಲ್ಲಿ ತರಬೇತಿಯ ತರಗತಿಗಳಲ್ಲಿ ನಾವಿಬ್ಬರೂ ಎದುರಾಗಿ ಪರಿಚಯಗೊಂಡ ಕ್ಷಣದಿಂದಲೋ. ನಾವು ಭೇಟಿಯಾದಾಗ ನನ್ನ-ನಿನ್ನ ಸ್ನೇಹದ ಸೇತುವಾಗಿದ್ದು ಬರಿ ಮೇಲ್ಮೇಲಿನ ಪರಿಚಯವಷ್ಟೆ. ಈಗ ಆ ಸೇತುವೆಗೆ ಒಡನಾಟ, ಪುಸ್ತಕಗಳು, ಸಾಹಿತ್ಯ, ನಾಟಕ, ಭೈರಪ್ಪನವರ ವೈಚಾರಿಕತೆ ಎಂಬ ಅಮೂರ್ತ ಸ್ತಂಭಗಳು ಹುಟ್ಟಿಕೊಂಡಂತೆ ತೋರುತ್ತಿದೆ.

ಜೀವನವನ್ನು ನಾವು ಕೆಲವೊಮ್ಮೆ ಖುಷಿಯಿಂದ ಕಳೆದಿರುತ್ತೇವೆ, ಹಾಗೆಯೇ ದುಃಖದಲ್ಲಿ ಬೆಂದೂ ಇರುತ್ತೇವೆ. ನಗು, ಅಳು, ಮೌನ, ಅಸಮಾಧಾನ ಇತ್ಯದಿ ವಿವಿಧ ಭಾವನೆಗಳ ಅಲೆಗಳು ಅಪ್ಪಳಿಸಿರುತ್ತವೆ. ಹೀಗೆ ಗತಿಸಿದ ಕ್ಷಣಗಳು ನೆನಪುಗಳಾಗಿ ಆಗೊಮ್ಮೆ ಈಗೊಮ್ಮೆ ಬದುಕೆಂಬ ಪಯಣದ ಹೆದ್ದಾರಿಯಲ್ಲಿ ತಂಗುದಾಣಗಳಂತೆ ಕಾಣುತ್ತವೆ. ನಮ್ಮ ಮುಂದೆ ಸರಿಯುತ್ತಿರುವ ಕಾಲ ಮತ್ತು ನಮ್ಮನ್ನೂ ಒಳಗೊಂಡು ನಾಟಕವಲ್ಲದ ನಾಟಕದಂತೆ ನಡೆಯುವ ಘಟನಾವಳಿಗಳು ಒಂದು ರೀತಿಯಲ್ಲಿ ವಿಶಿಷ್ಟವೆನಿಸಿ "ಇದು ನನ್ನ ಬಾಳಿನಲ್ಲಿ ಮರೆಯಲಾಗದ ನೆನಪಾಗಿ ಉಳಿಯುತ್ತದೆ" ಎಂದು ನಮಗೆ ಆ ಕ್ಷಣವೇ ಅನಿಸತೊಡಗುವುದು ಸೋಜಿಗವೆನಿಸುತ್ತದೆ. ಮೊನ್ನೆ ಶನಿವಾರ ನಾವಿಬ್ಬರೂ ಇಂಡಿಯನ್ ಇನ್ಸ್…

ಆವರಿಸು ಬಾ ಒಲವೆ!

ಪಿಸುಮಾತುಗಳ ಪಯಣದೊಳೊಂದು ಮೌನದ ನಿಲ್ದಾಣ ನೋಟಗಳು ಹಾಡಿವೆ ನಲ್ಮೆಯ ಸವಿಗಾನ ರೆಪ್ಪೆಗಳ ನಡುವಲುಂಟು ಹೊಸದೊಂದು ಜಗ ಸೋತ ಹೃದಯಗಳಲಿ ಮೂಡಿದೆ ಅನುರಾಗ ಅನುಪಮವೀ ಭಾವವು ನಲಿದಾಡಿದೆ ಜೀವವು ಆವರಿಸು ಬಾ ಒಲವೆ ಬೆಚ್ಚಗಾವರಿಸು ಬಾ
ಎದುರಿರಲು ಸಂಗಾತಿ ಹೃದಯದ ಧಾವಂತ ಮನದ ಸುತ್ತಲೂ ಕನಸುಗಳ ದಿಗಂತ ಬಣ್ಣದ ಬಾನಲಿ ಪ್ರೇಮದ ಬಾನುಲಿ ಮಾತೆಲ್ಲ ಮುಗಿದು ಮೌನವೊಂದೇ ಹಾಡಲಿ ದನಿಗೂಡಿಸು ಬಾ ಒಲವೆ ಶೃತಿ ಸೇರಿಸು ಬಾ ||ಪ||
ಕೈಗಳು ಕೂಡಿವೆ ಹೊಸ ಬಂಧನದಲಿ
ಮನಗಳು ಬೆರೆತಿವೆ ಆಲಿಂಗನದಲಿ ವಿರಹದ ಗಾಯವು ಮಾಯುವಂತೆ ಮುನಿಸಿನ ಬಿಸಿಯು ತಣಿಯುವಂತೆ ನೇವರಿಸು ಬಾ ಒಲವೆ ಮೈಮರೆಸು ಬಾ ||ಪ||
(ಇಲ್ಲ ಇಲ್ಲ ನಾನೇನೂ ಪ್ರೇಮ ಪಾಶಕ್ಕೆ ಸಿಲುಕಿಲ್ಲ!! ನನ್ನ ಗೆಳೆಯ ಚರಣನ ಸ್ನೇಹಿತರೊಬ್ಬರು ಕಿರುಚಿತ್ರವೊಂದನ್ನು ನಿರ್ದೇಶಿಸುತ್ತಿದ್ದಾರೆ ಎಂದೂ ಅವರಿಗೆ ಒಂದು ಪ್ರೇಮ ಗೀತೆಯನ್ನು ರಚಿಸಿಕೊಡಬೇಕೆಂದೂ ಚರಣ ಅದೊಂದು ದಿನ ನನಗೆ ದೂರವಾಣಿಯಲ್ಲಿ ಹೇಳಿದ್ದ. ನನಗೂ ಪ್ರಯತ್ನಿಸಲು ಹೇಳಿದ್ದ. ಗೀತೆರಚನೆಯಲ್ಲಿ ನನ್ನ ಮೊದಲ ಪ್ರಯೋಗದ ಫಲ. ಇಷ್ಟಲ್ಲದೆ ಮತ್ತೇನೂ ಅಲ್ಲ!!!)

ಹೊಸ ನೀರಿದ್ದರೂ ಹೊಸ ಬೆಳೆಯಿಲ್ಲ

ಇತ್ತೀಚಿಗೆ ದೇವರಾಯನದುರ್ಗದಲ್ಲಿ ಕನ್ನಡಸಾಹಿತ್ಯ .com ನ ಅಂಗವಾದ ಸಂವಾದ.com ನವರು ನಾಡಿನ ಪ್ರತಿಭಾವಂತ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿಯವರ ಗೌರವಾರ್ಥ ಎರಡು ದಿನಗಳ ಸಿನೆಮಾ ಕುರಿತ ರಸಗ್ರಹಣ ಶಿಬಿರವನ್ನು ಆಯೋಜಿಸಿದ್ದರು. ಅದರ ಪ್ರಯುಕ್ತ "ನನ್ನ ಸಂದರ್ಭದಲ್ಲಿ ಪರ್ಯಾಯ ಸಿನೆಮಾ - ನನಗೆಂಥ ಸಿನೆಮಾ ಬೇಕು" ಎನ್ನುವ ವಿಷಯದ ಮೇಲೆ ಪ್ರಬಂಧ ಸ್ಪರ್ಧೆಯನ್ನು ಇಟ್ಟಿದ್ದರು. ಈ ಸಮಾಚಾರ ತಿಳಿದ ಕೂಡಲೆ ನನ್ನ ಸಾಹಿತ್ಯಾಭಿಮಾನಿ ಗೆಳೆಯ ಚರಣನಿಗೆ ತಿಳಿಸಿದೆ.
ಚರಣ ತುಂಬಾ ಉತ್ಸುಕನಾಗಿ ಪ್ರಬಂಧ ಬರೆದು ಕಳುಹಿಸಿದ. ಮತ್ತೂ ಖುಷಿ ಕೊಟ್ಟ ವಿಚಾರವೆಂದರೆ ಅದಕ್ಕೆ ಪ್ರಥಮ ಬಹುಮಾನವೂ ಬಂತು.
ಕಾಲದ ಪರಿಮಿತಿಯಲ್ಲಿ ನನಗೆ ಬರೆಯುವುದು ಸ್ವಲ್ಪ ಕಷ್ಟವೆನಿಸಿತಾದರೂ ಅದಕ್ಕಿದ್ದ ಕಾಲಾವಕಾಶ ಅಲ್ಪವೇನಿರಲಿಲ್ಲ. ಆಲಸ್ಯವೋ ಏನೋ ನಾನಂತೂ ಪ್ರಬಂಧ ಬರೆಯುವುದರ ಬಗ್ಗೆ ಉದ್ಯುಕ್ತ ನಾಗಲಿಲ್ಲ. ಸ್ಪರ್ಧೆಗೆ ಕಳುಹಿಸಲಾಗದಿದ್ದರೇನಂತೆ ನಿಧಾನವಾಗಿ ಬರೆಯೋಣ ಎಂದುಕೊಂಡೆ. ಕಡೆಗೂ ನನಗೆ ತೋಚಿದ್ದನ್ನು ಬರೆದು ಮುಗಿಸಿದ್ದೇನೆ. ಸ್ಪರ್ಧೆಗೆ ಕಳುಹಿಸದಿದ್ದರೂ ಬರೆದ ಸಂತೃಪ್ತಿ ಇದೆ. ವಿಷಯದ ವ್ಯಾಪ್ತಿ ದೊಡ್ಡದಿದೆ ಹಾಗೂ ಗಂಭೀರವಾಗಿದೆ. ನನಗಿರುವ ಸಿನೆಮಾ ಅಭಿರುಚಿ ಮತ್ತು ಬೆಳ್ಳಿಯ ಪರದೆಯ ಮೇಲಿನ ವ್ಯಾಮೋಹಗಳ ಆಧಾರದ ಮೇಲೆ ಈ ಬರಹವನ್ನು ರೂಪಿಸಿದ್ದೇನೆ. ನನ್ನ ದೃಷ್ಟಿ ಕೋನದಲ್ಲೇನಾದರೂ ಅಭಾಸಗಳು ಅಥವಾ ಸಂಕುಚಿತತೆಯುಳ್ಳ ಅಂಶಗಳು ಇದ್ದಲ್ಲಿ ಮುಕ್ತವಾಗಿ ಪ್ರತಿಕ್ರ…

ಎಲೆ

Image
ಹೊಂಬೆಳಕಿನ ಚಾದರದಲಿ ಕಂಗೊಳಿಸುತ ಬಿಸಿಲ ಬೇಗೆಯ ನುಂಗುತ ಆಶ್ರಿತ ಜೀವಕೆ ನೆರಳಿನ ಸಿಂಚನ

ವಸಂತದಲಿ ಚಿಗುರು ಮುಂಗಾರಿನಲಿ ಹಚ್ಚ ಹಸಿರು ಶೀತಲದಲಿ ಇದರ ಕೊನೆಯುಸಿರು

ಭೂತಾಯಿ ಉಟ್ಟ ಹಸಿರಿನ ಸೀರೆಯ ನೂಲು ಒಡಲ ತುಂಬ ನರ ನಾಡಿಗಳ ಕವಲು ರವಿಚಂದ್ರರಿಗೂ ಹರಿತ್ತಿನ ಹೊನಲು

ಉಣಬಡಿಸುತ ಸಸ್ಯಕೆ ಪ್ರಾಣಾನ್ನ ಹಳೆ ಬೇರು ಕೊಂಬೆಗಳಿಗೆ ನವಚೈತನ್ಯ ಮಂಜಿನ ಹನಿಗಳ ಮೈದಾನ

ತೋರಣವಿರಲಿ ಚಪ್ಪರವಿರಲಿ ಮನೆಯಂಗಳಕೆ ಸಿಂಗಾರ ಮನದಂಗಳದಿ ಚಿತ್ತಾರ

ಹೂವ ಅಂದವ ಮೋಹಿಸುವರು ಎಲೆಮರೆಯ ಕಾಯೆನ್ನುವರು ಎಲೆಯ ಸೊಬಗನ್ನೇ ಮರೆ ಮಾಡಿಹರು!

ಪರಮಪದ

Image
ಮೆದುಹತ್ತಿಯ ಹಾಸುಗಳಂತೆ ತೇಲುತಲಿರಲು ಮುಗಿಲ ಸಾಲು
ಝಗಮಗಿಸುತ್ತ ಸರಸರನೆ ಹರಿದಿರಲು ಕೋಲ್ಮಿಂಚು
ನೇಪಥ್ಯಕೆ ಸರಿದ ಉದಯರವಿ ಕಾದು ಕುಳಿತನಲ್ಲಿ
ಹನಿಮುತ್ತುಗಳ ಭೂಚುಂಬನ ನೋಡುವ ತವಕದಲ್ಲಿ

ಮೋಡಗಳೊಡಲಿನಿಂದ ಜಾರಿತು ಹನಿಯೊಂದು
ಧರೆಯಂಗಳದಿ ಏನಿದೆಯೆಂದು ತಿಳಿಯಲೆಂದು
ಹನಿಯ ಮನವ ಕಾಡುವ ಜಿಜ್ಞಾಸೆ
ಭೂರಮೆಗೇಕಿಷ್ಟು ನೀರಿನಾಸೆ?!!!

ಮೆಲುವಾಗಿ ಸವರಿದ ತಂಗಾಳಿಯ ಸೊಂಪು
ಹನಿಯ ಮೈ ಸೋಕಿ ಕಣಕಣವೂ ತಂಪು
ಪಾವನಗೊಂಡ ಪವನ, ಧನ್ಯ ನಮನ
ತುಂಬಿ ಬಂತು ಹನಿ ಮನ

ಅಚ್ಚರಿಯಲೇ ಕೆಳ ಸಾಗಿರಲು ಹನಿ
ಭೂಲೋಕವೊಂದು ಹಸಿರ ಖನಿ
ಗಿರಿಯಂಚಲಿ ಗರಿಗೆದರಿ ನಲಿವ ಮಯೂರ
ಸಿಹಿಗನಸೊಂದರ ಸುಂದರ ಸಾಕಾರ

ಮೈ ಮುರಿದು ಅರಳಲು ಸಜ್ಜಾದ ಮೊಗ್ಗೊಂದು
ಭೂಸ್ಪರ್ಶಕೆ ಅಣಿಗೊಂಡ ಹನಿಯ ಹೊಳಹು ಕಂಡು
ಸುತ್ತ ನೆರೆದ ಜೀವರಾಶಿಗೆ ಸಾರಿತು ಸವಿದುಂದುಭಿ
ಸಡಗರದ ಸೌರಭ, ಹನಿಗೆ ಭುವಿಯ ಭವ್ಯಾದರ

ಮುಗಿಲುಗಳು ದೂರಾಗಿ ಹಸಿರಿನ ಪಲ್ಲಕ್ಕಿ ಸನ್ನಿಹಿತವಾಗಲು
ಮಣ್ಣಿನ ಬಣ್ಣವು ಸೆಳೆದು ನಗೆಯ ಬೀರಿರಲು
ಇಳೆಯ ಕೋಮಲ ಕೈಗಳು ಆಲಿಂಗನಕೆ ಹಂಬಲಿಸಿರಲು
ಹನಿಯ ಕಣ್ಣಲಿ ಆನಂದಬಾಷ್ಪದ ಮಿನುಗು

ಅಪ್ಪುಗೆಯ ಆ ಕ್ಷಣ, ಒಲುಮೆಯ ಮಿಡಿತ
ಎಳೆ ಮೈಯ ಮುದ್ದಾದ ಕುಡಿಯ ಮೊಳೆತ
ಅಲೆಯೆದ್ದು ಹೊರಟ ಮಣ್ಣಿನ ಸೌಗಂಧ
ಪ್ರಾಣಹನಿಯ ಭೂಪಯಣವೇ ಅದಕೆ ಪರಮಪದ!

ಇಬ್ಬನಿಯ ಹನಿಗಳು

Image
ಅಬ್ಬರವಿದ್ದರೂ ಹೂಹೃದಯದ ಹುಡುಗ ಅಜಯ್ ಸರಳ, ಗಂಭೀರ ಮಾತಾಡಿದರೂ ಮಾತಾಡದ ಚೇತನ
ಮಂದಹಾಸಕ್ಕೆ ಇನ್ನೊಂದು ಹೆಸರು ನಾಗಶ್ರೀ
ಮುಗ್ಧ ಕಂಗಳ ಮೃದುಲ ಮನಸಿನ ರಮ್ಯ
ಮಿತಭಾಷಿಯಾದರೂ ನಕ್ಕು ನಗಿಸುವ ವಿಶ್ವಾಸ್
ಗೆಳೆತನದ ಮೊಗ್ಗರಳಿಸಿ ದೂರಾಗಿ ದೂರದಿಂದಲೇ ಕಂಪು ಸೂಸುವ ಸಂಧ್ಯಾ
ಲವಲವಿಕೆಯ ಚಿಲುಮೆ ಚಟಪಟ ಮಾತಿನ ರೇಖಾ
ಕೇಳಲು ಹಿತವಾದ ಹೆಸರುಳ್ಳ ಸುಕುಮಾರಿ ಮಂಗಳ ಗೌರಿ
ಶ್ವೇತ ವರ್ಣ ಶುಭ್ರ ಮನ ಹೆಂಗೆಳೆಯರ ಕಣ್ಮಣಿ ಶಿವಾಜಿ
ಅರಿತು ಬೆರೆತು ಎಲ್ಲರೊಳಗೊಂದಾಗುವ ಶ್ರೀಜಿತ್
ತಂಪೆರೆದು ತನುಮನಗಳ ತಣಿಸುವ ತಂಗಾಳಿ ಅನಿಲ


ಒಬ್ಬರಿಂದೊಬ್ಬರು ಅಗಲಿದ ಕ್ಷಣಗಳು
ಬಿರು ಬಿಸಿಲಿನ ಸುಡು ಸುಡುವ ಕೆನ್ನಾಲಿಗೆಗಳಂತೆ
ಕೂಡಿ ಸಂಭ್ರಮಿಸಿ ಕಳೆದ ಘಳಿಗೆಗಳು
ಹಸಿರೆಲೆಯ ಚುಂಬಿಸುವ ಇಬ್ಬನಿಯ ಹನಿಗಳಂತೆ
ಸವಿದಷ್ಟೂ ಸಿಹಿಯಾಗುವ ಮಧುರ ನೆನಪುಗಳು
ಬಾಳ ಮುಸ್ಸಂಜೆಯವರೆಗೂ ಜೊತೆಬಿಡದ ವಜ್ರಗಳಂತೆ