Posts

Showing posts from 2009

ಬುಗುರಿಯಾಟ

ತೋಳ್ಬಲವು ಚಾವಟಿಯಲಿ ಹರಿದಾಡಿ
ತಿರುತಿರುಗುವ ನರ್ತನಕೆ
ನೂಕಿದೆ ಬುಗುರಿಯನು

ಭವದ ದುಃಖದ ವರ್ತುಲಗಳ ದಾಟಿ
ನೆಮ್ಮದಿಯ ಬಿಂದುವನರಸಿದಂತಿದೆ
ಎಂದೋ ತಪ್ಪಿದ್ದ ನಿಯಂತ್ರಣ ಮರುಕಳಿಸಿದಂತಿದೆ

ಗಿರಗಿರನೆ ತಿರುಗುತ ಪಡೆದಿದೆ ಆವೇಗ
ಯಾರ ಹಂಗೂ ಬೇಡವಾಗಿ
ಮರೆತಂತಿದೆ ಮೈಮನ

ನಿಲುವು ಸ್ವತಂತ್ರ, ಸ್ಥಿತಿ ನಿರ್ಭಾರ
ಬೇಕಿಲ್ಲ ಇನ್ನಾವ ಆಧಾರ
ಜಗಕೆಲ್ಲ ತಾನೇ ಕೇಂದ್ರ

ತಗ್ಗುತಿರಲು ವೇಗ ಮೂಡಿದೆ ತಲ್ಲಣಗಳ ಕಂಪನ
ಗುರುತ್ವದ ಸೆಳೆತಕೆ ತಲೆದೂಗುತ
ಓಲಾಡಿದೆ ತನುವೆಲ್ಲ

ಭ್ರಮಣೆಯ ಭ್ರಮೆ ಕಳೆದು
ಭಾರವಾಗಿದೆ ತಲೆಯೆಲ್ಲ
ಸೋತು ನೆಲಕ್ಕುರುಳಿದೆ ಬುಗುರಿ

ಉಳಿದಿದೆ ಹಂಬಲ ತೀರದೆ
ಚಾವಟಿಯ ಸಂಗವ ಕಟ್ಟಲು
ಮತ್ತದೇ ಉನ್ಮತ್ತ ಆವರ್ತನೆಗೆ ಜಾರಲು!

ಗುಂಗು ಹಿಡಿಸುವ ಮಧುರಾನುಭವ

ಇತ್ತೀಚೆಗೆ ಬಿಡುಗಡೆಯಾದ ಸೋನು ನಿಗಮ್ ಹಾಡಿರುವ ಕನ್ನಡದ ಪ್ರಪ್ರಥಮ ಗೀತಗುಚ್ಛ (Music album) "ನೀನೇ ಬರೀ ನೀನೇ" - ಇದರಲ್ಲಿನ ಎಲ್ಲ ಹಾಡುಗಳೂ ಜಯಂತ್ ಕಾಯ್ಕಿಣಿಯವರ ಕಾವ್ಯಕುಂಚದಲ್ಲಿ ಮೂಡಿಬಂದಿರುವ ವರ್ಣಚಿತ್ರಗಳಂತಿವೆ. ಈ ಹಾಡುಗಳ ಸಾಲುಗಳು ಹಿಡಿಸುವ ಗುಂಗು ಮಧುರಾನುಭವಕ್ಕೆ ತಿರುಗುವುದು ಮನೋಮೂರ್ತಿಯವರ ಸಂಗೀತದಿಂದ. ಮೇಲುನೋಟಕ್ಕೆ ಪ್ರೇಮಗೀತೆಗಳೆನಿಸುವ ಈ ಹಾಡುಗಳು, ಕೇಳುತ್ತಾಹೋದಂತೆ ಘಜ಼ಲ್ ಗಳಲ್ಲಿರುವ ಭಾವತೀವ್ರತೆ, ಸುಗಮ ಸಂಗೀತದಲ್ಲಿ ಸಿಗುವ ಸರಳತೆ, ಕವಿತೆಗಳಲ್ಲಿನ ಮುಗ್ಧತೆ ಈ ಎಲ್ಲವನ್ನು ಒಟ್ಟಿಗೇ ನೀಡುತ್ತವೆ. ಎಲ್ಲ ಹಾಡುಗಳಿಗೂ ಸೋನು ನಿಗಮ್ ಏಕಮೇವ ಗಾಯಕ. ತನ್ನ ಪ್ರೇಯಸಿಯ ನೆನಪಿನಲ್ಲಿ ಹಾಡುವ, ಅಲೆದಾಡುವ ಯುವಕನೊಬ್ಬನ ಆರ್ತದನಿ ಈ ಗೀತೆಗಳಲ್ಲಿ ಕೇಳಿಬರುತ್ತದೆ. ಈ ಹಾಡುಗಳಿಗೆ ಯಾವುದೇ ನಾಯಕ ನಟ/ನಟಿಯ ಹಂಗಿಲ್ಲ, ಚಿತ್ರಕಥೆಯ ಕಟ್ಟುಪಾಡಿಲ್ಲ. ಹಾಡುಗಳಲ್ಲಿ ಬರುವ ಪ್ರೇಮಿಗಳು ಕಲ್ಪನೆಯಲ್ಲೆ ಕೇಳುಗರನ್ನು ಕಾಡುತ್ತಾರೆ. ಸರಳ ಸುಂದರ ಮನೋಲಹರಿಯೇ ಮಂಜುಳ ಗಾನವಾಗಿ ಹೊರಹೊಮ್ಮಿದಂತಿದೆ. ಕಾಯ್ಕಿಣಿಯವರ ಈ ಹಿಂದಿನ ಚಿತ್ರಗೀತೆಗಳಿಗೆ ಹೋಲಿಸಿದರೆ ಇವು ಸಿನೆಮಾ ಪರಿಭಾಷೆಯ ಚೌಕಟ್ಟಿನಿಂದ ಹೊರಸರಿದು ಕವಿತೆಗಳ ಛಾಯೆಯನ್ನು ಇನ್ನಷ್ಟು ಢಾಳಾಗಿ ಪಡೆದಿವೆಯೆನಿಸುತ್ತದೆ. ಪ್ರೀತಿ-ಪ್ರೇಮದ ವಿಷಯವಸ್ತುಗಳುಳ್ಳ ಕವಿತೆಗಳಲ್ಲಿ ಸಾಮನ್ಯವಾಗಿ ಕಾಣಸಿಗುವ ಸಿದ್ಧ ಪ್ರತಿಮೆಗಳನ್ನು ಮೀರಿ ಬಲು ವಿಭಿನ್ನವಾದ ಚಿತ್ರಣಗಳನ್ನು ತುಂಬ…

ಚಿತ್ರಶಾಲೆ

ಜಿನುಗುತ ಮಿನುಗುತ ಸವಿಗಾನವ ಗುನುಗುತ
ಧರೆಗೆ ಲಗ್ಗೆ ಇಟ್ಟಿದೆ ಮುಂಗಾರು
ಕನಸುಗಳ ಕಟ್ಟುತ ಕಂಗಳ ಕೋರೈಸುತ
ಬಿತ್ತರಗೊಂಡಿವೆ ಬಣ್ಣಗಳು ನೂರಾರು

ಕಪ್ಪು-ಬಿಳುಪಿನ ಮುಗಿಲ ಪರದೆಗಳಲಿ
ಮುದ್ದಾಗಿ ಮೂಡಿದೆ ನೆನಪಿನ ಚಿತ್ರಾವಳಿ
ಜಡಿಮಳೆಯ ಹಸಿಬಣ್ಣಗಳನು ಎರಚಿದೆ ತಂಗಾಳಿ
ಆರ್ದ್ರವಾಗಿದೆ ಮನವು ಓಕುಳಿಯಲಿ

ತರು-ಲತೆಗಳ ಬೇರಿನಡಿಯಲಿ
ಮನಬಿಚ್ಚಿ ಅರಳಿದೆ ಮಣ್ಣಿನ ಕೆಂಬಣ್ಣ
ನೇಗಿಲ ಹೊತ್ತು ನಿದ್ದೆಯ ಮರೆತ
ಕೃಷಿಕನ ಕಣ್ತುಂಬಿದೆ ಆಶಾಕಿರಣದ ಹೊಂಬಣ್ಣ

ಸುಮಗಳ ಸೊಬಗು ಭ್ರಮರಕೆ ಸಮ್ಮೋಹದ ಗುಂಗು
ಮಕರಂದವ ಜೇನಾಗಿಸಿದೆ ಅನುರಾಗದ ರಂಗು
ಅವಿನಾಭಾವ ಬಂಧಗಳ ಬೆಸೆಯಲು
ಸಾಕೇನು ಏಳೇ ಬಣ್ಣ?

ಚಿಟ್ಟೆಯ ರೆಕ್ಕೆಗೆ ಚಿತ್ತಾರದ ಮೊಹರು
ಸೋನೆಯ ಸಿಂಚನಕೆ ಜಗವೆಲ್ಲ ಹಸಿರು
ರಂಗೇ ಇರದ ಜಲವು ಅವನಿಯ ರಂಗೇರಿಸುವುದೆಂತು?
ಋತುಗಳ ಲೀಲೆಯೋ ಪ್ರಕೃತಿಯ ಬಗೆಯೋ!

ಅವಸಾನ

ಇನ್ನೂ ಬದುಕುಳಿದಿರುವೆ, ಅರೆಜೀವಂತಿಕೆಯಲಿ
ತಿಳಿದವರಿಗೆ ನಾನೊಂದು ಕಪೋತವಷ್ಟೆ
ಲಾಭವೇನು ನನ್ನಿಂದ ಯಾರಿಗೆ?
ಹೆಸರು ನನ್ನದು ನೆನಪಿದೆ ಯಾರಿಗೆ?

ಹಾಗೂ ಹೀಗೂ ಸವಕಲು ರೆಕ್ಕೆಗಳ ಬಡಿಯುತ್ತ
ಮೇಲೇರುವೆ.ಮೊದಲಿನಂತಲ್ಲ.
ಹೆಚ್ಚು ಹಾರಲಾರೆ
ಆಗಸವೆಲ್ಲ ಕೆಂಪು ಕೆಂಪು
ಮುಸ್ಸಂಜೆಯ ನಸುಗೆಂಪಲ್ಲ ಅದು
ಸಿಡಿದ ಹಸಿನೆತ್ತರ ಗಾಢ ಕೆಂಪು
ಬಾನೆತ್ತರದ ಕನಸುಗಳೆಲ್ಲ ಮಿಂದಿವೆ ಇದೇ ರಕ್ತವರ್ಣದಲ್ಲಿ

ಎದೆ ನಡುಗುವುದು ಒಮ್ಮೆಲೆ
ಕಿವಿಗಡಚಿಕ್ಕುವ ಅಟ್ಟಹಾಸಕೆ
ಅದೆಂಥದ್ದೊ ಬೀಭತ್ಸ ರೂಪ
ಗುರುತಿಗೇ ಸಿಗದ ಆಕಾರ
ಹಿಂದೊಮ್ಮೆ ಮನುಷ್ಯನಂತಿದ್ದ
ತಾ ಹೇಳಿದ್ದೇ ನೀತಿ,ಮುನ್ನುಗ್ಗಿದ್ದೇ ಪ್ರಗತಿ
ಆಳದಲ್ಲೆಲ್ಲೋ ದಳ್ಳುರಿಯ ಹೊತ್ತಿಸಿಕೊಂಡು
ವಿಷಮಕೊಳದಲ್ಲಿ ಜೀಕುತಿಹನಿಂದು

ಇನ್ನು ಹಾರಲಾರನೇನೋ!
ಗಾಳಿಯೂ ಕುದಿಯುತಿದೆ
ಇನ್ನೆಷ್ಟು ಹಗುರಾಗಲಿ?
ಉರಿವ ಕೊಳ್ಳಿಯಾದರೂ ಆರೀತು
ಉರಿಸುವ ಕೈಗಳು ತಣ್ಣಗಾದಾವೆ?

ಕಾವ್ಯ ಸಂಭವ

ಪದಗಳ ನಡುವಿನಿಂದ ಬೆಳಕೊಂದು ಹೊರಟಿದೆ
ಭಾವ ಸಾಗರವ ಉದ್ದೀಪಿಸುತ
ಗಾಳಿಗೆ ಸಿಕ್ಕ ಹೊಗೆಯಂತೆ
ಸಾಗಿದೆ ಅಮೂರ್ತ ರೂಪಗಳ ಪಡೆಯುತ

ಭಾಷೆ-ಪ್ರಾಸಗಳ ಸಂಕೋಲೆಗಳ ಲೆಕ್ಕಿಸದೆ
ಪ್ರಶ್ನೆ-ತರ್ಕಗಳ ಹಿಡಿತಗಳಿಗೆ ನಿಲುಕದೆ
ಭಾಸಗಳ ಜಗವ ಹುಟ್ಟು ಹಾಕುತ
ಅಗೋಚರ ದಿಕ್ಕುಗಳ ಕವಲುಗಳ ಹೊಳೆಸಿದೆ

ಬದುಕಿನ ಸಂದುಗೊಂದುಗಳಲಿ ನುಸುಳುತ
ಸಂವೇದನೆಗಳ ಹಾಯ್ದು ಹಂದರದಂತೆ ಹಬ್ಬುತಲಿದೆ
ನೆರಳೊಳು ಪ್ರತಿಮೆಯ ಮೂಡಿಸಿ
ಎಲ್ಲವನು ವ್ಯಾಪಿಸುತ ಹಿಗ್ಗುತಿದೆ

ಅನುಭವಗಳ ಲೋಕದಿಂದ ಅನುಭಾವದ ಕ್ಷಿತಿಜದೆಡೆಗೆ
ಮನವ ತೇಲಿಸಿಕೊಂಡು ಕರೆದೊಯ್ಯುತಲಿದೆ
ಹಿಂದೆ ಕಾಣದ ಒಳನೋಟವೊಂದು ತೆರೆದುಕೊಳ್ಳುತಿರಲು
ಕವಿತೆಯೊಂದು ಜನ್ಮತಾಳಿ ನಿಂತಿದೆ

ನನ್ನ ಪ್ರಶ್ನೆ

ನಾನೇನು ಬಲ್ಲೆನು? ಬಲ್ಲೆನೆಂದು ಹೇಳುವುದ ಬಿಟ್ಟು ಅರೆಪಾವು ವಿದ್ಯೆ, ಚಟಾಕು ತಿಳುವಳಿಕೆ ಆತ್ಮವಿಮರ್ಶೆ, ಅದೇನದು? ನಾನೇನು ಬಲ್ಲೆನು? ಜಾಡಿಸಿ ತೊಳೆದರೂ ಮರುಕಳಿಸುವುದು ಮನದ ಕೋಣೆಯಲ್ಲಿ ಗರ್ವದ ಧೂಳು ಬೆಸೆದುಕೊಂಡಿದೆ ಅಹಮ್ಮಿನ ಬಲೆಯೊಡನೆ ಪರರ ಹೊಗಳಲು ಭುಗಿಲೇಳುವುದು ಮತ್ಸರ ಬಲ್ಲೆನೆಂದು ನಾ ನನಗೇ ಹೇಳಿಕೊಳ್ಳುವ ಸುಳ್ಳು ನುಡಿಯು ಮಾರುದ್ದ ನಡೆಯು ಗೇಣುದ್ದ ನುಡಿಯ ನಡೆಸಬಲ್ಲೆನೆ? ನಾನೇನು ಬಲ್ಲೆನು? ಬೇಕಾಗಿದೆಯೊಂದು ಮಾಯಾದರ್ಪಣ ಮನದ ಮುಖವ ನೋಡಲು ಅದರ ಕೋರೆಗಳ ಕಾಣಲು ವಿಕೃತಿಗಳ ಎತ್ತಿ ತೋರಿಸಲು ಆಗಿಬಿಡಲಿ ಭ್ರಮನಿರಸನ ಹುಚ್ಚು ಮನಸಿನ ರೂಪದರ್ಶನ ಅದೆಲ್ಲಿರುವುದು ದರ್ಪಣ? ನಾನೇನು ಬಲ್ಲೆನು?

ಕಾಯುತಲೇ ಇರುವೆನು...

ಕಾಯುತಲೇ ಇರುವೆನು ನೊಂದು
ಕೊನೆಗೊಳಿಸುವೆ ಇದನೆಲ್ಲ ನೀನೆಂದು
ಹಿಂದೆ ನೀ ಹೀಗಿರಲಿಲ್ಲ
ನನ್ನೊಡಲಿಗೇ ಕೊಡಲಿಯಿಡುತ್ತಲಿರಲಿಲ್ಲ
ನಿನ್ನ ಸ್ವಾರ್ಥಕೆ ದುಡುಕಿ
ನನ್ನ ಹೂಗಳ ಹೊಸಕಿ
ಎಷ್ಟೆತ್ತರದ ಸೌಧವ ಕಟ್ಟುವೆ?
ಎಂಥ ಬದುಕು ನಡೆಸುವೆ?
ನನ್ನ ಹಣ್ಣು ನಿನಗಿನ್ನು ಬೇಡವೇನು?
ನನ್ನ ನೆರಳು ಸುಡುವ ಬಿಸಿಲಾಯಿತೇನು?
ಆ ಹಕ್ಕಿಯ ಮರಿಗಳಿಗೆ ಗೂಡಿಲ್ಲ
ಗೋವು ಶ್ವಾನಗಳಿಗೆ ಸೂರಿಲ್ಲ
ಆರ್ತನಾದಗಳಿಗೆ ಅಭಯವೇ ಇಲ್ಲ
ನಿನ್ನ ಸಾಧನೆಯೇ ನಿನಗೆಲ್ಲ
ನಿನ್ನ ರೌದ್ರವ ನೀನರಿಯೆ
ಹೇಳು,ಇದೆಲ್ಲಾ ನಿನಗೆ ಸರಿಯೆ?
ಕಾಯುತಲೇ ಇರುವೆನು ನೊಂದು
ನಿನಗೆ ಕರುಣೆ ಮರುಕಳಿಸುವುದೆಂದು
ತುಸು ತಾಳ್ಮೆ ಬೆಳೆಯುವುದೆಂದು
ನೀನು ನಿಜಕ್ಕೂ ಮಾನವನಾಗುವೆಯೆಂದು