Posts

Showing posts from July, 2009

ಚಿತ್ರಶಾಲೆ

ಜಿನುಗುತ ಮಿನುಗುತ ಸವಿಗಾನವ ಗುನುಗುತ ಧರೆಗೆ ಲಗ್ಗೆ ಇಟ್ಟಿದೆ ಮುಂಗಾರು ಕನಸುಗಳ ಕಟ್ಟುತ ಕಂಗಳ ಕೋರೈಸುತ ಬಿತ್ತರಗೊಂಡಿವೆ ಬಣ್ಣಗಳು ನೂರಾರು ಕಪ್ಪು-ಬಿಳುಪಿನ ಮುಗಿಲ ಪರದೆಗಳಲಿ ಮುದ್ದಾಗಿ ಮೂಡಿದೆ ನೆನಪಿನ ಚಿತ್ರಾವಳಿ ಜಡಿಮಳೆಯ ಹಸಿಬಣ್ಣಗಳನು ಎರಚಿದೆ ತಂಗಾಳಿ ಆರ್ದ್ರವಾಗಿದೆ ಮನವು ಓಕುಳಿಯಲಿ ತರು-ಲತೆಗಳ ಬೇರಿನಡಿಯಲಿ ಮನಬಿಚ್ಚಿ ಅರಳಿದೆ ಮಣ್ಣಿನ ಕೆಂಬಣ್ಣ ನೇಗಿಲ ಹೊತ್ತು ನಿದ್ದೆಯ ಮರೆತ ಕೃಷಿಕನ ಕಣ್ತುಂಬಿದೆ ಆಶಾಕಿರಣದ ಹೊಂಬಣ್ಣ ಸುಮಗಳ ಸೊಬಗು ಭ್ರಮರಕೆ ಸಮ್ಮೋಹದ ಗುಂಗು ಮಕರಂದವ ಜೇನಾಗಿಸಿದೆ ಅನುರಾಗದ ರಂಗು ಅವಿನಾಭಾವ ಬಂಧಗಳ ಬೆಸೆಯಲು ಸಾಕೇನು ಏಳೇ ಬಣ್ಣ? ಚಿಟ್ಟೆಯ ರೆಕ್ಕೆಗೆ ಚಿತ್ತಾರದ ಮೊಹರು ಸೋನೆಯ ಸಿಂಚನಕೆ ಜಗವೆಲ್ಲ ಹಸಿರು ರಂಗೇ ಇರದ ಜಲವು ಅವನಿಯ ರಂಗೇರಿಸುವುದೆಂತು? ಋತುಗಳ ಲೀಲೆಯೋ ಪ್ರಕೃತಿಯ ಬಗೆಯೋ!

ಅವಸಾನ

ಇನ್ನೂ ಬದುಕುಳಿದಿರುವೆ, ಅರೆಜೀವಂತಿಕೆಯಲಿ ತಿಳಿದವರಿಗೆ ನಾನೊಂದು ಕಪೋತವಷ್ಟೆ ಲಾಭವೇನು ನನ್ನಿಂದ ಯಾರಿಗೆ? ಹೆಸರು ನನ್ನದು ನೆನಪಿದೆ ಯಾರಿಗೆ? ಹಾಗೂ ಹೀಗೂ ಸವಕಲು ರೆಕ್ಕೆಗಳ ಬಡಿಯುತ್ತ ಮೇಲೇರುವೆ.ಮೊದಲಿನಂತಲ್ಲ. ಹೆಚ್ಚು ಹಾರಲಾರೆ ಆಗಸವೆಲ್ಲ ಕೆಂಪು ಕೆಂಪು ಮುಸ್ಸಂಜೆಯ ನಸುಗೆಂಪಲ್ಲ ಅದು ಸಿಡಿದ ಹಸಿನೆತ್ತರ ಗಾಢ ಕೆಂಪು ಬಾನೆತ್ತರದ ಕನಸುಗಳೆಲ್ಲ ಮಿಂದಿವೆ ಇದೇ ರಕ್ತವರ್ಣದಲ್ಲಿ ಎದೆ ನಡುಗುವುದು ಒಮ್ಮೆಲೆ ಕಿವಿಗಡಚಿಕ್ಕುವ ಅಟ್ಟಹಾಸಕೆ ಅದೆಂಥದ್ದೊ ಬೀಭತ್ಸ ರೂಪ ಗುರುತಿಗೇ ಸಿಗದ ಆಕಾರ ಹಿಂದೊಮ್ಮೆ ಮನುಷ್ಯನಂತಿದ್ದ ತಾ ಹೇಳಿದ್ದೇ ನೀತಿ,ಮುನ್ನುಗ್ಗಿದ್ದೇ ಪ್ರಗತಿ ಆಳದಲ್ಲೆಲ್ಲೋ ದಳ್ಳುರಿಯ ಹೊತ್ತಿಸಿಕೊಂಡು ವಿಷಮಕೊಳದಲ್ಲಿ ಜೀಕುತಿಹನಿಂದು ಇನ್ನು ಹಾರಲಾರನೇನೋ! ಗಾಳಿಯೂ ಕುದಿಯುತಿದೆ ಇನ್ನೆಷ್ಟು ಹಗುರಾಗಲಿ? ಉರಿವ ಕೊಳ್ಳಿಯಾದರೂ ಆರೀತು ಉರಿಸುವ ಕೈಗಳು ತಣ್ಣಗಾದಾವೆ?