Posts

Showing posts from September, 2009

ಬುಗುರಿಯಾಟ

ತೋಳ್ಬಲವು ಚಾವಟಿಯಲಿ ಹರಿದಾಡಿ ತಿರುತಿರುಗುವ ನರ್ತನಕೆ ನೂಕಿದೆ ಬುಗುರಿಯನು ಭವದ ದುಃಖದ ವರ್ತುಲಗಳ ದಾಟಿ ನೆಮ್ಮದಿಯ ಬಿಂದುವನರಸಿದಂತಿದೆ ಎಂದೋ ತಪ್ಪಿದ್ದ ನಿಯಂತ್ರಣ ಮರುಕಳಿಸಿದಂತಿದೆ ಗಿರಗಿರನೆ ತಿರುಗುತ ಪಡೆದಿದೆ ಆವೇಗ ಯಾರ ಹಂಗೂ ಬೇಡವಾಗಿ ಮರೆತಂತಿದೆ ಮೈಮನ ನಿಲುವು ಸ್ವತಂತ್ರ, ಸ್ಥಿತಿ ನಿರ್ಭಾರ ಬೇಕಿಲ್ಲ ಇನ್ನಾವ ಆಧಾರ ಜಗಕೆಲ್ಲ ತಾನೇ ಕೇಂದ್ರ ತಗ್ಗುತಿರಲು ವೇಗ ಮೂಡಿದೆ ತಲ್ಲಣಗಳ ಕಂಪನ ಗುರುತ್ವದ ಸೆಳೆತಕೆ ತಲೆದೂಗುತ ಓಲಾಡಿದೆ ತನುವೆಲ್ಲ ಭ್ರಮಣೆಯ ಭ್ರಮೆ ಕಳೆದು ಭಾರವಾಗಿದೆ ತಲೆಯೆಲ್ಲ ಸೋತು ನೆಲಕ್ಕುರುಳಿದೆ ಬುಗುರಿ ಉಳಿದಿದೆ ಹಂಬಲ ತೀರದೆ ಚಾವಟಿಯ ಸಂಗವ ಕಟ್ಟಲು ಮತ್ತದೇ ಉನ್ಮತ್ತ ಆವರ್ತನೆಗೆ ಜಾರಲು!

ಗುಂಗು ಹಿಡಿಸುವ ಮಧುರಾನುಭವ

ಇತ್ತೀಚೆಗೆ ಬಿಡುಗಡೆಯಾದ ಸೋನು ನಿಗಮ್ ಹಾಡಿರುವ ಕನ್ನಡದ ಪ್ರಪ್ರಥಮ ಗೀತಗುಚ್ಛ (Music album) "ನೀನೇ ಬರೀ ನೀನೇ" - ಇದರಲ್ಲಿನ ಎಲ್ಲ ಹಾಡುಗಳೂ ಜಯಂತ್ ಕಾಯ್ಕಿಣಿಯವರ ಕಾವ್ಯಕುಂಚದಲ್ಲಿ ಮೂಡಿಬಂದಿರುವ ವರ್ಣಚಿತ್ರಗಳಂತಿವೆ. ಈ ಹಾಡುಗಳ ಸಾಲುಗಳು ಹಿಡಿಸುವ ಗುಂಗು ಮಧುರಾನುಭವಕ್ಕೆ ತಿರುಗುವುದು ಮನೋಮೂರ್ತಿಯವರ ಸಂಗೀತದಿಂದ. ಮೇಲುನೋಟಕ್ಕೆ ಪ್ರೇಮಗೀತೆಗಳೆನಿಸುವ ಈ ಹಾಡುಗಳು, ಕೇಳುತ್ತಾಹೋದಂತೆ ಘಜ಼ಲ್ ಗಳಲ್ಲಿರುವ ಭಾವತೀವ್ರತೆ, ಸುಗಮ ಸಂಗೀತದಲ್ಲಿ ಸಿಗುವ ಸರಳತೆ, ಕವಿತೆಗಳಲ್ಲಿನ ಮುಗ್ಧತೆ ಈ ಎಲ್ಲವನ್ನು ಒಟ್ಟಿಗೇ ನೀಡುತ್ತವೆ. ಎಲ್ಲ ಹಾಡುಗಳಿಗೂ ಸೋನು ನಿಗಮ್ ಏಕಮೇವ ಗಾಯಕ. ತನ್ನ ಪ್ರೇಯಸಿಯ ನೆನಪಿನಲ್ಲಿ ಹಾಡುವ, ಅಲೆದಾಡುವ ಯುವಕನೊಬ್ಬನ ಆರ್ತದನಿ ಈ ಗೀತೆಗಳಲ್ಲಿ ಕೇಳಿಬರುತ್ತದೆ. ಈ ಹಾಡುಗಳಿಗೆ ಯಾವುದೇ ನಾಯಕ ನಟ/ನಟಿಯ ಹಂಗಿಲ್ಲ, ಚಿತ್ರಕಥೆಯ ಕಟ್ಟುಪಾಡಿಲ್ಲ. ಹಾಡುಗಳಲ್ಲಿ ಬರುವ ಪ್ರೇಮಿಗಳು ಕಲ್ಪನೆಯಲ್ಲೆ ಕೇಳುಗರನ್ನು ಕಾಡುತ್ತಾರೆ. ಸರಳ ಸುಂದರ ಮನೋಲಹರಿಯೇ ಮಂಜುಳ ಗಾನವಾಗಿ ಹೊರಹೊಮ್ಮಿದಂತಿದೆ. ಕಾಯ್ಕಿಣಿಯವರ ಈ ಹಿಂದಿನ ಚಿತ್ರಗೀತೆಗಳಿಗೆ ಹೋಲಿಸಿದರೆ ಇವು ಸಿನೆಮಾ ಪರಿಭಾಷೆಯ ಚೌಕಟ್ಟಿನಿಂದ ಹೊರಸರಿದು ಕವಿತೆಗಳ ಛಾಯೆಯನ್ನು ಇನ್ನಷ್ಟು ಢಾಳಾಗಿ ಪಡೆದಿವೆಯೆನಿಸುತ್ತದೆ. ಪ್ರೀತಿ-ಪ್ರೇಮದ ವಿಷಯವಸ್ತುಗಳುಳ್ಳ ಕವಿತೆಗಳಲ್ಲಿ ಸಾಮನ್ಯವಾಗಿ ಕಾಣಸಿಗುವ ಸಿದ್ಧ ಪ್ರತಿಮೆಗಳನ್ನು ಮೀರಿ ಬಲು ವಿಭಿನ್ನವಾದ ಚಿತ್ರಣಗಳನ್ನು ತುಂಬಿ