Posts

Showing posts from 2010

ವರ್ಣಚಿತ್ರ

ಕನಸು
ಹಾಲುಗಲ್ಲದ ಬೊಚ್ಚುಬಾಯಿಯ
ಪುಟ್ಟ ಬೆರಳಲಿ ಚಂದಿರನ ತೋರುವ
ಹಸುಗೂಸು

ವಾಸ್ತವ
ಕಾಲದ ಮೊನಚು ಖಡ್ಗವ ಬೀಸಿ
ಎಳೆಗನಸ ಕೊಲೆಗಯ್ಯುವ
ಅಂತಕ

ನೆನಪು
ಕನಸಿಗೂ ವಾಸ್ತವಕೂ ಕೊಂಡಿ ಹಾಕುವ
ವಾಸ್ತವದ ಆರ್ಭಟಕೆ ಬೆದರಿ ಹಾರುವ
ಹಕ್ಕಿ

ಬದುಕು
ಕನಸೊಳು ವಾಸ್ತವ ವಾಸ್ತವದೊಳು ಕನಸ
ಹುದುಗಿಸಿ ಎಲ್ಲವನು ಚೌಕಟ್ಟಿನೊಳು
ಸಂಭಾಳಿಸಿಟ್ಟುಕೊಳ್ಳುವ ವರ್ಣಚಿತ್ರ

"ಗಳು ಗಳು" ಪಂಚರಂಗಿ ಅನಿಸಿಕೆ"ಗಳು"

ಕ್ರಿಯಾಪದವೇ ಇರದ "ಗಳು ಗಳು" ಎಂಬ ಉದ್ದುದ್ದ ಕವಿತೆಯ ವಿಸ್ತೃತ ರೂಪಗಳು, ಪಂಚರಂಗಿಯ ಚಿತ್ರಕಥೆಯ ಎಳೆಗಳು, ದಿಗಂತನ ೨ಕಿಲೋ ದೂಧ್ ಪೇಡಾ ನಗೆಗಳು, ನಿಧಿ ಸುಬ್ಬಯ್ಯಳ ನುಲಿದಾಟದ ನಡುವಿನ ಅಭಿನಯಗಳು, ವಿಪರೀತ ಮೊನಚು ಮಾತುಗಳು, ಕೊನೆಯಲ್ಲಿ ಪೂರ್ಣವಿರಾಮದ ಬದಲಿಗೆ ಪಂಚುಗಳು, ಕಥಾನಾಯಕನ ಅಡ್ಡಕಸುಬಿ ವೃತ್ತಿಗಳು, ಎಲ್ಲರ ಕಣ್ಣಿಗೆ ಕಾಲಕಸಗಳು, ಆದರೂ ಬಾಯ ತುಂಬಾ ಸರಳ ತತ್ವಗಳು, ಜಗತ್ತಿಗೊಂದಿಷ್ಟು ಉಡಾಫೆಗಳು ಮತ್ತೊಂದಷ್ಟು ಮೂದಲಿಕೆಗಳು, ಹುಡುಗಿಯರ ಕಾಲೆಳಿಯುವ ಕಿಸಿಕಿಸಿ ವಿಟ್ಟುಗಳು, ಅವರ ಮದುವೆಯ ರಿಕ್ವೈರ್ಮೆಂಟುಗಳು, ತಂದೆ ತಾಯಂದಿರ ಉಗಿತಗಳು, ಹುಡುಗಿಯರ ಎಳಸು ಆಟಗಳು, ನೆಗೆ ನೆಗೆದು ಬರುವ ನಗಿಸಿ ನೆಗೆಸುವ ಗೂಢಾರ್ಥದ ಜೋಕುಗಳು, ಹಿನ್ನೆಲೆಯಲ್ಲಿ ಭಟ್ಟರ ಹ್ಞೂಂ ಕಾರಗಳು, ದಿಗಂತನ ಮುಖದ ಕಿವುಚುಗಳು, ನಿಧಿಯ ಮುರುಕು ಕನ್ನಡ ಪದಗಳು, ಜಯಂತರ ಚೊಚ್ಚಲ ಅಭಿನಯದಲ್ಲಿ ಕಿರುನಗೆಯ ಹೊಳಪುಗಳು, ಸರಿದಾಡಿವೆ ಹಾಡುಗಳಲಿ ನೂತನ ರೂಪಕಗಳು, ಸೀರೆಗಳನು ನೇಯ್ದ ಬೆಳಕುಗಳು, ಕಣ್ಣಲಿ ಗೋಚರಿಸಿದ ಕಾಗುಣಿತಗಳು, ಇಡೀ ಎರಡುವರೆ ತಾಸು ಅಲ್ಲಲ್ಲಿ ಇಣುಕುವುವು ಬದುಕಿನ ಲಿಮಿಟ್ಟುಗಳು, ಪರೀಕ್ಷೆಯ ಫಲಿತಾಂಶದಂಥ ಮಧ್ಯಂತರಗಳು, ಮೈ ಮುರಿಯುವ ಟಾಕೀಸ್ ಸೀಟುಗಳು, ಟೆಲಿಗ್ರಾಮಿನಂತೆ ಎರಗಿಬಿಡುವ ಕಥೆಯ ತಿರುವುಗಳು, ಸಮುದ್ರದ ಅಲೆಗಳು, ತೀರದಲಿ ಮರಳುಗಳು, ಮರಳಿನಲಿ ಗಜಿ ಬಿಜಿ ಮಾತುಗಳು, ಕಿರಿ ಕಿರಿಗಳು, ಕಂಯ ಕಂಯಗಳು, ಖೊ ಖೊ ಖೊಗಳು, ಗುಂಡಿ ತೋಡಿದ ಸ…

ಸೋನೆಯಲಿ ಕಳೆದುಹೋದ ಪದ್ಯ

ಅರ್ಧ ಗೀಚಿದ ಪದ್ಯ
ಮನೆಯಲ್ಲಿ ಮುಗಿಸಿದರಾಯಿತೆಂದು
ಕಿಸೆಯಲ್ಲೇ ತುರುಕಿಕೊಂಡು
ನಿಲ್ದಾಣ ಬಂದೊಡನೆ ಹೊರಬಿದ್ದೆ ಬಸ್ಸಿನಿಂದ
ಮನೆಯ ದಾರಿ ಹಿಡಿದು
ಹೆಜ್ಜೆಯಿಕ್ಕುತ ಸಾಗಿರಲು
ಕಂಡುಬಿಡಬೇಕೇ ಇವೆಲ್ಲ ಫಕ್ಕನೆ

ಜಲಪಾತದ ಎರಚಲಿನಂಥ ಮಳೆಯಲಿ
ಮುಗಿಲ ಬಿಂದುಗಳು
ಅನಾಥವಾಗಿವೆ ನೆಲಕಪ್ಪಳಿಸಿ
ಕಾರು ಬೈಕುಗಳ ಚೀರಾಟದಲಿ
ನಡುಗಿ ಮಲಗಿದೆ ರಸ್ತೆ

ಅಮ್ಮನ ಸೀರೆಗೆ ಬಿದ್ದಿದೆ
ಕಂಕುಳಿಗಡರಿದ ಕಂದನ
ಪಾದಕಂಟಿದ ಕೆಸರಿನ ಮೊಹರು
ಗತ್ತು ತೊರೆದು ಕೂತಿದೆ
ಕೊಡೆಯೊಂದು ಹೆಗಲಲಿ
ಮೈದಾನ ಕೂಗಿದೆ ಮಕ್ಕಳನು
ರಚ್ಚೆ ಹಿಡಿದ ಸೋನೆಗಂಜಿ

ರಿಕ್ಷಾದೊಳಗಿನ ಸೀಟು
ಹಪಹಪಿಸಿದೆ ಪಯಣಿಗನ ಬಿಸಿಯೊಡಲಿಗೆ
ಖಿನ್ನನಾಗಿದ್ದಾನೆ ಫರ್ನೀಚರಿನಂಗಡಿಯವ
ತೇವ ಕುಡಿದ ಮರದ ಮೇಜಿನ ಮುಂದೆ
ಪುಳಕದಲಿ ನಗುತಿರುವನು ಬಜ್ಜಿಯಂಗಡಿಯವ
ಜಾಲರಿ ಸೌಟಿನಲಿ ಹೆಕ್ಕಿದ ಚಿನ್ನದದಿರ ಕಂಡು

ಎಚ್ಚರಗೊಂಡದ್ದು ನಾನು
ಮನೆ ಸಮೀಪಿಸಿದಾಗಲೆ
ಪದ್ಯದ ಉಳಿದರ್ಧ ಗೀಚಲು
ಚೀಟಿ ಹೊರಗೆಳೆದರೆ
ಅಕ್ಷರಗಳೆಲ್ಲ ಮಾಸಲು
ಕವಿಯಾಗುವ ಹುಂಬತನ ಮರೆತು
ಶೂ ಕಳಚಿಡಲು
ಉಸಿರಾಡುವುದು ಶುಷ್ಕ ಪಾದ
ನೆತ್ತಿಯಿಂದ ಜಾರಿದ ಹನಿ
ನುಡಿಸುವುದು ಮಳೆಯ ನಿನಾದ!
ಇದನ್ನು ಕೆಂಡಸಂಪಿಗೆಯಲ್ಲಿ ಓದಲು...

ಒಡೆದ ಹಾಲು

ಅಸುನೀಗಿವೆ ಸಿಹಿಯ ಕಣಗಳು
ಒಣಗಿ ತೇಲಿದೆ ಕೆನೆಯ ಬನಿ
ಮೈಯ್ಯ ತುಂಬಾ ತರಚು ಗಾಯಗಳು
ಬಿಸಿಯ ನೀಡ ಹೋದದ್ದೇ ಶುರು
ಕೊತಕೊತನೆ ಪಾತ್ರೆಯನೆ ನಡುಗಿಸುವ ಕಂಪನ!
ಒಡೆದ ಹಾಲು ನೊಂದು ರೋದಿಸುತಲಿದೆ
ಇನ್ನಿಲ್ಲವಾದ ಸವಿಯ ನೆನೆದು ದುಃಖತಪ್ತವಾಗಿದೆ
ಉಬ್ಬಿ ಬಂದ ಹರುಷವ
ಎತ್ತೆಸೆದು ಕೆನೆಯ ತೆಕ್ಕೆಯಲಿ ತೊನೆದು
ಮತ್ತೆ ಮಡಿಲ ತುಂಬಿಸಿಕೊಳ್ಳುವ
ಸಂಭ್ರಮಕಿಲ್ಲ ಎಡೆ
ಇನ್ನೆಲ್ಲಿದೆ ಮಮತೆಯ ಕಾವು!
ಬಿಗಿದಪ್ಪಿದ ಪಾತ್ರೆಗಿನ್ನು ಜಿಗುಪ್ಸೆ
ಆವಿಯಾಗುತಲಿದೆ ಹಾಲಿನ ಕೊನೆಯುಸಿರು
ಎದೆಬಡಿತ ನಿಂತು ಹುಳಿಯ ಕಳೆಯೊಂದು
ಚಿಗುರೊಡೆದು ನಂಜಾಗಿಸಿದೆ ಮೈಯನು
ಇದನ್ನು ಕೆಂಡಸಂಪಿಗೆಯಲ್ಲಿ ಓದಲು...

ಹಿಂತಿರುಗದಿರಿ ವಾಸ್ತವಕೆ

Image
ಮಲಗಿಬಿಡಿ ಬಾಲೆಯರೆ
ಇರುಳ ಚಾದರವ ಪೂರ್ತಿ ಹೊದ್ದು
ಅದ ನೇಯ್ದ ಮಾಂತ್ರಿಕನ ನೆನೆದು
ದುಗುಡ ಭೀತಿಗಳ ತೊರೆದು
ಕಣ್ಣಾಲಿಗಳ ತೆರೆಯದಿರಿ

ನಿಶೆಯ ಹೆರಳು
ಹರಡಿರಲು
ಅರಳಿವೆ ಬಣ್ಣಗಳ ಹೊಮ್ಮಿಸಿ
ಹೂಗಳು
ಪರಿವೆಯ ಅರಿವೆ
ಕಿತ್ತೆಸೆದು
ಮರೆತು ಮಲಗಿರಿ

ಎಚ್ಚರಗೊಂಡಿರೆ
ಸ್ವಪ್ನದ ನಸುಕು ಒಡೆದು
ಇಹದ ಕತ್ತಲೆ ಕವಿದೀತು
ಮಿಸುಕಾಡಿ ಎಬ್ಬಿಸಿಕೊಳ್ಳದಿರಿ
ಎದುರಿಸಬೇಕಾದೀತು
ಮಿಥ್ಯ ಲೋಕದ ಘೋರ ಸತ್ಯಗಳ

ಕಂಡೀರಿ ಗೋಮುಖಗಳ
ಕಾಣಲಾರಿರಿ ಹಿಂದಿರುವ
ವ್ಯಾಘ್ರಗಳ!
ಹಿಂತಿರುಗದಿರಿ ವಾಸ್ತವಕೆ
ಮರಳಿ ಕೊರಗಿ ಸೊರಗದಿರಿ
ತಲ್ಲಣಿಸದಿರಿ ಎಚ್ಚರಗೊಂಡು
ಆಗಿಹೋದೀರಿ
ಮದಿರೆಯ ಶೀಶೆಯ ಮೇಲಿನ
ಅರೆನಗ್ನ ಚಿತ್ರವಾಗಿ

ಭೋಗದ ಸಂಕೋಲೆಯು
ಅರಸಿ ಬಂದೀತು
ನೀಡದಿರಿ ಕೊರಳು
ಮಾಯೆಯ ನಶೆ ಬೀರಿ
ಸೆಳೆದೀತು
ಮೋಹ ಪಾಶ
ಆಗದಿರಿ ಮರುಳು

ಜಾರಿಬಿಡಿ ಕೋಮಲೆಯರೆ
ಸವಿನಿದ್ದೆಯೊಳು
ಬೇರುಗಳು ಭುವಿಯೊಡಲ ತಬ್ಬಿದಂತೆ
ಆಲಿಂಗಿಸಿ ನಿದ್ದೆಯನು
ಹಾರಿ ಬರಲಿದೆ
ಸವಿಗನಸ ಹಕ್ಕಿಯೊಂದು
ತೇಲುತ ಸಾಗಿ ದೂರಕೆ
ರೆಕ್ಕೆಗಳ ತೆಕ್ಕೆಯೊಳು
ಬಂಧಿಯಾಗಿ

ಸಡಿಲಿಸದಿರಿ ಕನಸಿನ ಲಂಗರುಗಳ
ಇಳಿಸಿರಿ ಇನ್ನಷ್ಟು ಆಳಕೆ
ನಿದಿರೆಯ ಕಡಲ ಒಳಗೆ
ಸೇರಿಬಿಡಿ ಇರುಳು
ಕರಗುವ ಮೊದಲು
ನಿದಿರಾದೇವಿಯ ಮಡಿಲು

ಚಿತ್ರಕೃಪೆ: ಮಯೂರ ಮಾಸ ಪತ್ರಿಕೆ

ನಿರಂತರ

Image
ಅದೆಷ್ಟು ವಸಂತಗಳು ಅಸಂಖ್ಯ ಚಿಗುರುಗಳು
ಗೋಡೆಯ ಬಿರುಕಿನ ಮರವು
ಗೋಡೆಗೆ ಬೆಂಬಲವೋ ಹೊರೆಯೋ
ಬಲ್ಲವರಾರು?
ಬೇರಿನ ಕಣ್ಣಿಗೆ ಕಾಣದು
ಟಿಸಿಲೊಡೆಯುವ ತುದಿಗಳು ಚಿವುಟಿಸಿಕೊಂಡ ಕುಡಿಗಳು
ಪೊರೆಗಟ್ಟದ ಅವ್ವನ ಕಣ್ಣೆದುರು ಸುಳಿದಾಡಿ
ಮಬ್ಬುಗಟ್ಟಿಸುತಿದೆ ಸವೆಸಿದ ಹಾದಿಯ ನೆನಪು
ತುಳಿದ ಮುಳ್ಳುಗಳು ಮುಡಿದ ಹೂಗಳು
ಹಿಂಬಾಲಿಸುತ್ತಿವೆ ಹೆಜ್ಜೆಯ ಭಾರವ ಮರೆಸಲು
"ಇನ್ನೇನು ತಲುಪಿದೆನಪ್ಪ" ಎಂದು
ಅವ್ವ ಎದುರು ನೋಡುತಿರುವ ಗುರಿಯಾವುದು?
ಉರುಳಬಹುದು ಕಾಂಡ ಕುಸಿಯಬಹುದು ಗೋಡೆ
ಬಿಡಿಸಲಾಗದು ಮಣ್ಣು-ಬೇರಿನ ನಂಟು
ಹಾದಿ ಮುಗಿದು ಪಯಣ ನಿಂತರೂ
ಕೊನೆಗಾಣದು ಅವ್ವನ
ಅದಮ್ಯ ಪ್ರೀತಿ ಅಗಾಧ ವಾತ್ಸಲ್ಯ..!!

ಚಿತ್ರಕೃಪೆ: ಮಯೂರ ಮಾಸ ಪತ್ರಿಕೆ

ಮರೆತು ಹೋಗಿದ್ದ ಮಳೆರಾಯನ ನೆನೆದು

ಧೋ ಎಂದು ಸುರಿದ ಮಳೆ ಒಮ್ಮೆಲೆ ನಿಲ್ಲಲಿಲ್ಲ. ಮೊದಲಿಗೆ ಶಾಂತವಾಗಿ, ನಂತರ ತುಂತುರು ಹನಿಗಳಾಗಿ, ತದನಂತರ ತುಂತುರು ಹನಿಗಳನ್ನೂ ಇಡಿ ಇಡಿಯಾಗಿ ಒಡೆದು ಹರವಿ ಸಿಂಪಡಿಸಿದಂತೆ. ಸೂರ್ಯ ಪಡುವಣಕ್ಕೆ ಮತ್ತಷ್ಟು ಹತ್ತಿರವಾಗುತ್ತಿದ್ದ, ಮಳೆ ಪೂರ್ತಿ ನಿಂತ ಮೇಲೆ ಒಗ್ಗಟಿನಲ್ಲಿದ್ದಂತೆ ಕಂಡ ಮೊಡಗಳೆಲ್ಲ ಆಟ ಮುಗಿಸಿ ಹೋಮ್ ವರ್ಕ್ ಚಿಂತೆಯಲ್ಲಿ ಮನೆಗೆ ಮರಳುವ ಮಕ್ಕಳಂತೆ ಚದುರುತ್ತಿದ್ದವು. ಗಾಳಿಯಂತೂ ಸುಯ್ ಎಂದು ಬೀಸುತ್ತ ಮಳೆಯಲ್ಲಿ ಮಿಂದು ತೊಯ್ದ ನೆಲದ ಪರಿವೀಕ್ಷಣೆಗೆ ಬಂದಂತೆ. ಮಳೆಯ ಪರಿಮಳ ಎಲ್ಲೆಲ್ಲಿಗೆ ತಲುಪಿಲ್ಲ ಎಂದು ಅವಲೋಕಿಸಿದ ಹಾಗೆಯೂ ಆಗಬೇಕು. ಸದಾ ಪಕ್ಕದ ರಸ್ತೆಯಲ್ಲಿ ಕರ್ಕಶ ಹಾರ್ನ್ ಮೊಳಗಿಸುತ್ತ ಹೊಗೆಯುಗುಳುತ್ತಾ ಸಾಗುವ ವಾಹನಗಳನ್ನು ನೋಡಿ ಬೇಸರಗೊಂಡು ಕಹಿಯಾಗಿದ್ದ ಹುಣಸೇ ಮರದ ಮುಖದಲ್ಲಿ ಕಂಡರಿಯದ ಲವಲವಿಕೆ! ಅಡಿಯಿಂದ ಮುಡಿಯವರೆಗೆ ಎಲ್ಲವೂ ಒದ್ದೊದ್ದೆ. ಆ ಅಸಂಖ್ಯ ಟಿಸಿಲುಗಳ ತುದಿಯಲ್ಲಿ ಫಳ ಫಳನೆ ಹೊಳೆಯುತ್ತಿವೆ ಮಳೆಯ ಹನಿಗಳು... ಅಲ್ಲ ಅಲ್ಲ! ಮುತ್ತಿನ ಮಣಿಗಳು. ಆ ಮರದ ಹಿಂಬದಿಯಲ್ಲಿ ಮೋಡದ ಮರೆಯಲ್ಲಿ ಇಣುಕುತ್ತಿರುವ ನೇಸರನ ಎಳೆ ಬಿಸಿಲ ಹಿನ್ನೆಲೆಯಲ್ಲಿ ಹುಣಸೆ ಮರಕ್ಕೆ ದೀಪಾಲಂಕಾರದ ಮೆರುಗು ಮೂಡಿತ್ತು. ಚೈತ್ರದಲ್ಲಿ ಕೆಂದಳಿರ ಗರಿಗಳ ಮುಡಿದು ನಳನಳಿಸುವ ಹುಣಸೇ ಮರಕ್ಕೆ, ಗ್ರೀಷ್ಮ ಋತು ಬರುತ್ತಿದ್ದಂತೆಯೆ ಈ ಮತ್ತೊಂದು ಬಗೆಯ ವಿಶಿಷ್ಟ ಅಲಂಕಾರ ಯೋಗ.

ಅರೆ! ಹೀಗೆಲ್ಲ ಯೋಚನೆಗಳು ಮೂಡಿ ಅದೆಷ್ಟು ಕಾಲವಾಗಿತ್ತು! ಪ್ರೇಮಿಗ…

ಆರದ ದಣಿವು

ಬಿಡುವಿಲ್ಲದೆ ಬೆಳಕ ಸುರಿದು
ಕಿರಣಗಳೆಲ್ಲ ಸೊರಗಿವೆ
ನೇಸರನಂತೂ ಬೆವರಿ ದಣಿದು
ನಿನ್ನೆ ಮುಳುಗಿದ್ದ ಜಾಗವನ್ನೇ ಮರೆತು
ಹೇಗೋ
ಕಟ್ಟಡಗಳ ನಡುವೆ ನುಸುಳಿ
ವಿಶ್ರಾಂತಿಗೆಂದು ಜಾರಿದ
ಅತ್ತ ನಸುಕಿನ ಹಾಹಾಕಾರದಲಿದ್ದ
ಇನ್ನೊಂದು ಲೋಕವ ಕಂಡ ಇವನಿಗೆ
ಇನ್ನೆಲ್ಲಿ ವಿರಾಮ!!
ಮತ್ತದೇ ಉದಯ ಮತ್ತೊಂದು ಬೆಳಗು

ನಿರ್ಲಕ್ಷ್ಯ

ಒಡಲಾಳದಲ್ಲಿನ
ಅಪರಿಚಿತ ಆರ್ತ ಕೂಗು ಕೇಳಿ
ಏನಿರಬಹುದೆಂದು ತಡಕಿ ನೋಡಿದೆ
ಮನದ ಸುಳಿಗೆ ಸಿಲುಕಿ
ಕವಿತೆಯೊಂದು ಕೈಕಾಲು ಬಡಿಯುತ್ತ
ಉಸಿರಿಗಾಗಿ ಕೊಸರಾಡುತ್ತಿತ್ತು

ಸತ್ತರೆ ಸಾಯಲೆಂದು
ಸುಮ್ಮನಾಗಿ
ಮುಷ್ಠಿ ಸಡಿಲಿಸಿದೆ

ಕನಸಿನ ಕೊಡೆ

ಗುಂಡಿಯೊತ್ತಿದರೆ ಸಾಕು
ಛಕ್ಕನೆ ತೆರೆದುಕೊಳ್ಳುತ್ತಿ
ಬರಿ ಅಷ್ಟೇ ಅಲ್ಲ!
ನನ್ನ ಪಾಲಿನ ಪುಟ್ಟದೊಂದು ಆಗಸ ತೆರೆದಿಡುತ್ತಿ
ಮಳೆ ಹುಯ್ದರಂತೂ ನಿನ್ನ ಮೈ ತುಂಬಾ
ಹಿತವಾದ ಚಿಟಪಟ ಸದ್ದು
ನಿನ್ನ-ಹನಿಗಳ ನಡುವೆ ಶುರುವಾಗುವುದು
ಮುದ್ದು ಮಾತುಗಳ ಸಲ್ಲಾಪ
ಸುತ್ತಣ ಜಗವೆಲ್ಲ ಮಸುಕಾಗುವುದು
ಹೌದು ನೋಡು. ನೀನೆ ಒಂದು ಆಕಾಶ
ಚಂದಿರನಿಲ್ಲ ತಾರೆಗಳಿಲ್ಲವಾದರೂ
ನನ್ನ ಕನಸುಗಳಿವೆಯಲ್ಲ
ಒಂದೊಂದಾಗಿ ಪೇರಿಸಿಡುವೆ ಅಲ್ಲಲ್ಲಿ
ಮತ್ತೆ ಸುಮ್ಮನಾಗಿ ನೋಡಿದರೆ
ಫಳಫಳನೆ ಹೊಳೆವುವು
ಹಾಗೇ ಮಡಸಿಟ್ಟರೆ
ನನ್ನ ಕನಸುಗಳೆಲ್ಲವೂ ನಿನ್ನ ಮಡಿಲಲ್ಲಿ ಜೋಪಾನ
ಮೋಡ ಹನಿದರೆ ಬಿಸಿಲು ಉರಿದರೆ ಮಾತ್ರ
ನಿನ್ನ ತೆರೆಯಬೇಕೆನ್ನುವರು ಎಲ್ಲ
ಪಾಪ! ಅವರೇನು ಕಂಡಾರು
ನಿನ್ನೊಳು ನಾ ಬಚ್ಚಿಟ್ಟಿರುವ
ಅಷ್ಟೂ ಕನಸುಗಳನ್ನ!!

ಹೋಗೋಣವೆ ಕನಸಿನೂರಿಗೆ...

ಇಂಚರದ ಹಕ್ಕಿಯಾಗಿ ನೀ ಭುವಿಗೆ ಬಂದ ದಿನವಿದು
ಹೊಳೆವ ಕಣ್ಣುಗಳ ಜಗಕೆ ತೋರಿದ ದಿನವಿದು
ಅಮ್ಮನ ಮಡಿಲನು ತುಂಬಿ ಬಾಳ ಬೆಳಕಾದ ದಿನವಿದು
ಕೈ ಹಿಡಿದ ಪ್ರಾಣಸಖಿ ನಿನ್ನ ಜನುಮ ದಿನವಿದು

ಹೇಳು ಗೆಳತಿ ತೆರಳೋಣವೆ ಸಂಭ್ರಮಿಸಲು
ಅಂದು ಕನಸಿನಲಿ ನಾ ಕಂಡ ಊರಿಗೆ
ಹೇಗೆ ಬಣ್ಣಿಸಲಿ ಅಲ್ಲೇನಿದೆಯೆಂದು
ಯಾರೂ ಕಂಡಿರದ ಮೋಹಕ ತಾಣವದು

ಕಡಲ ಅಲೆಯಂತೆ ಉಕ್ಕಿ ಉಕ್ಕಿ ನಾನಲ್ಲಿ ಬಂದಂತೆ
ಅಪ್ಪಿ ಅಪ್ಪಿ ಕಳಿಸಲು ಕಿನಾರೆಯಾಗಿ ನೀನೇ ನಿಂತಂತೆ
ನಿನ್ನನರಸಿ ಬರುವ ನಾನಲ್ಲಿ ದುಂಬಿಯಂತೆ
ಮಲ್ಲಿಗೆಯಾಗಿ ಘಮ್ಮೆಂದು ನೀನೇ ಅರಳಿದಂತೆ

ನೀನಲ್ಲಿ ಮುಗಿಲನೇ ದಿಟ್ಟಿಸುತ ಶಿಲೆಯಾಗಿ ನಿಂತಂತೆ
ಮಳೆಯಾಗಿ ಸುರಿದು ನಾ ನಿನ್ನ ಆವರಿಸಿದಂತೆ
ಕಾನನದಿ ಮೌನಿಯಾಗಿ ನಾನಲ್ಲಿ ಅಲೆದಂತೆ
ಕುಹು ಗಾನದ ಕೋಗಿಲೆಯಾಗಿ ನೀ ಬಂದು ಕೂಗಿದಂತೆ

ಅಗಲಿಸುವರಿಲ್ಲ ನಲ್ಲೆ ನಮ್ಮನಲ್ಲಿ
ತೆಕ್ಕೆಯೊಳು ಸೇರಿದರೆ ಸಮಯವೇ ನಿಂತಂತೆ
ನಾ ನನ್ನನು ನೀ ನಿನ್ನನು ಮರೆತಂತೆ
ಇರಲಾರದು ನಮಗಲ್ಲಿ ಇನ್ನಾವ ಚಿಂತೆ

ಕನಸು ಕೈ ಜಾರುವ ಮೊದಲು ಕನಸೊಳು ಜಾರೋಣ
ಕಾಣಲಾರೆಯ ಆಕಾಶದಿ ಕದವೊಂದು ತೆರೆದಿದೆ
ನಿನ್ನ ಹುಟ್ಟು ಹಬ್ಬದ ಸಡಗರಕಾಗಿ
ಆ ಮಾಯಾನಗರಿಗೆ ಹಾರೋಣ ಜೊತೆಯಾಗಿ

ಸಲಹಿ ಹೋದವಳ ಕುರಿತು

ತಾರೆಗಳ ತೋರಿಸಿ ಮಿನುಗುವಾಸೆ ಬೆಳೆಸಿದೆ
ಹೂಬನವ ಹಬ್ಬಿಸಿ ಪ್ರೀತಿಯ ಅರಳಿಸಿದೆ
ಗೀಚುವ ಬೆರಳಲ್ಲಿ ಸುಂದರ ಕಲೆ ತುಂಬಿದೆ
ನಿನ್ನ ಕೂಸು ನಾ ನಿನಗೆ ನೆನಪಾಗದೆ ಹೋದೆ

ನಿನ್ನ ಕನಸುಗಳನೆಲ್ಲ ಬಲಿ ಕೊಟ್ಟು
ಆಕಾಶದಾಚೆಗಿನ ಕರೆಗೆ ಓಗೊಟ್ಟು
ಎಲ್ಲ ಚಿಂತೆಗಳ ಮರೆತಂತೆ
ಮೈಕೊಡವಿ ಹೊರಟು ನಿಂತೆ

ಹಿಂತಿರುಗಿ ನೋಡಬಾರದಿತ್ತೇನು?
ದುಗುಡಗೊಂಡ ಪುಟ್ಟ ಹೃದಯ
ನಿನ್ನೆಡೆಗೆ ಕೈಚಾಚಿ ನಿಂತಿತ್ತು
ಎಲ್ಲ ತಿಳಿದ ವಯಸೇನಲ್ಲ ಅದು

ಮನಸು ಭಾರವಿದ್ದರೇನು, ನಾನಿರಲಿಲ್ಲವೇನು
ಬದುಕು ದುಸ್ತರವಿದ್ದರೇನು, ನನ್ನ ಹೆಗಲಿರಲಿಲ್ಲವೇನು
ಕಣ್ಣಿಗೆ ದೂರವಾಗಿ ನೀನೆಲ್ಲಿದ್ದರೇನು
ನನ್ನೊಳಗಿನ ನಿನಗೆ ಈ ಮೊರೆ ಕೇಳಿಸದಿರುವುದೇನು?!

ನಿನಗೆಂದೇ...

ನಿನಗೆಂದೇ,
ಜೀವವೊಂದು ಕುಣಿದಾಡಿ ಕಾದು ನಿಂತಿದೆ
ನಿನ್ನದೇ ನಗೆಯ ಹೊನಲಿಗೆ ಕಣ್ಣರಳಿಸಿ
ನಿನ್ನದೇ ಕೊರಳ ಗಾನಕ್ಕೆ ಕಿವಿಗೊಟ್ಟು
ನಿನ್ನ ಕೈ ಹಿಡಿದು ಜೊತೆ ಸಾಗಲು
ಕಾದು ನಿಂತಿದೆ ನಿನಗೆಂದೇ...

ನಿನಗೆಂದೇ,
ಸಣ್ಣ ಮಾತೊಂದು ಅಡಗಿ ಕೂತಿದೆ
ಉಸಿರ ಬಿಗಿ ಹಿಡಿದು
ನೀ ನಸುನಾಚುವೆಯೆಂದು
ನೀ ಓರೆ ನೋಟವ ಬೀರುವೆಯೆಂದು
ಅಡಗಿ ಕೂತಿದೆ ನಿನಗೆಂದೇ...

ನಿನಗೆಂದೇ,
ಕಾಗದವೊಂದು ನವಿರಾಗಿದೆ ಒಲವಿನ ಓಲೆಯಾಗಲು
ನಿನ್ನ ಕೈ ಸೇರಿ ಭಾವಲೋಕವ ತೆರೆದಿಡಲು
ಪದಗಳಲ್ಲಿನ ಸ್ವರಗಳ ನುಡಿಸಲು
ಮತ್ತೆಲ್ಲವನ್ನೂ ಮರೆಸಿ ಪರವಶಳಾಗಿಸಲು
ನವಿರಾಗಿದೆ ನಿನಗೆಂದೇ....

ನಿನಗೆಂದೇ,
ಹೃದಯವೊಂದು ತಲ್ಲಣಿಸಿದೆ
ನಿನ್ನದೇ ಹೂಬಾಣಗಳ ದಾಳಿಗೆ ಸಿಲುಕಿ
ಸಿಹಿನೋವಿನ ಗುಂಗಿನಲಿ
ನಿನಗಷ್ಟೆ ಕೇಳುವಂತೆ ಸಿಹಿ ಮಾತೊಂದನು
ಉಲಿಯುತ ತಲ್ಲಣಿಸಿದೆ ನಿನಗೆಂದೇ....