Posts

Showing posts from 2011

ಧಾವಂತ

ಅರ್ಧಮರ್ಧ ಮುಗಿದ ಮೇಲುಸೇತುವೆ
ಭೂಸ್ಪರ್ಶ ಕಾಣದ ಆ ಎರಡು ತುದಿಗಳು
ಪಾಳು ಬಿದ್ದ ಕಟ್ಟಡದ ಕಳೆ ಹೊತ್ತು
ಆಗಸವ ದಿಟ್ಟಿಸುತ ಚಾಚಿಕೊಳ್ಳುತಿವೆ
ಒಂದರ ಪಕ್ಕ ಒಂದರಂತೆ ಕಾಂಕ್ರೀಟು ಬಂಡೆಗಳು
ತುತ್ತ ತುದಿಯಲಿ ನಿಂತಿರುವ ಟೋಪಿಧಾರಿ
ಕಿವಿಗೊತ್ತಿಕೊಂಡು ಮೊಬೈಲು
ಮುಂದದಾವುದೋ ಒಂದು ದಿನ
ಟಾರು, ಬಿಳಿಯ ಬಿರುಕು-ರೇಖೆ ಬಳಿಸಿಕೊಂಡು
ಚತುಷ್ಪಥ ಹೆದ್ದಾರಿಯೆಂದು ಸಂಭಾವಿತಗೊಳ್ಳುವ
ಆ ಮೇಲುಸೇತುವೆಯ ಮೇಲೆ ಮನಬಂದಲ್ಲಿ ಓಡಾಡಲು
ಯಾರ ಅಪ್ಪಣೆಯೂ ಬೇಕಿಲ್ಲ ಅವನಿಗೆ
ಮಳೆ ಹೊಯ್ದು ಕಿಕ್ಕಿರಿದ ಕೆಳರಸ್ತೆಯಲಿ
ಕೊಸರಾಡುತ್ತಿರುವ ವಾಹನಗಳಿಗೆ
ಅವನ ಕುರಿತು ಹೊಟ್ಟೆಯುರಿದುಕೊಳ್ಳಲೂ ವೇಳೆಯಿಲ್ಲ!

-೫ ಆಗಸ್ಟ್ ೨೦೧೧

ಗೆಳೆಯನ ಬೀಳ್ಕೊಡುಗೆಗೆ ಎರಡು ಕವಿತೆಗಳು

ಇದು ವಿದಾಯವಲ್ಲ

ನೆನಪಿನ ಹೂಗುಚ್ಛದ ಕಟ್ಟು ಬಿಚ್ಚಿಟ್ಟು ಕೂತಿರುವೆ
ಯಾವ ಹೂವು ಮೊದಲು ಯಾವುದು ಕೊನೆಯದು?
ಮೊದಲು ತಿಳಿದಿಲ್ಲ ಕೊನೆಯದಿದೆಂದು ಹೇಳಲು ಮನಸಿಲ್ಲ
ಮೊದಲು ಕೊನೆಗಳ ಹಂಗು ಈಗೇಕೆ?

ಯಾವ ದಳದೊಳಿತ್ತು ಸ್ನೇಹದ ಎಳೆ?
ಯಾವ ಬಣ್ಣದೊಳಿತ್ತು ವಿಶ್ವಾಸದ ಸೆಲೆ?
ದಳಗಳ ನವಿರು, ಬಣ್ಣಗಳ ಹೊಳಹು
ಹುಡುಕಾಟದ ತಳಮಳ ಇಂದೇ ಮೂಡಬೇಕೆ!

ನಾಳೆ ಭೇಟಿಯಾಗದ ಮಾತ್ರಕೆ
ಮಾತುಕತೆಗಳಿರದ ಮಾತ್ರಕೆ
ಹೆಜ್ಜೆ ಭಾರವಾಗಲೇಬೇಕೆ?
ಇಂದು ವಿದಾಯ ಹೇಳಲೇಬೇಕೆ?

ಇಲ್ಲ, ನಾ ಭಾವುಕನಾಗಲಾರೆ
ಅಗಲಿಕೆಯನೊಪ್ಪಿ ಸೋತರಲ್ಲವೆ ವಿದಾಯದ ಮಾತು!
ಮಾತಿಗಿಳಿದಿರುವೆನು ದಳಗಳೊಡನೆ
ಜೋಡಿಸುತಿರುವೆ ನೆನಪಿನ ಹೂಗಳ

ಸರಿದ ಘಳಿಗೆಗಳೆಲ್ಲ ಕೈಜಾರಿದರೂ
ನೆನಪುಗಳೆಲ್ಲ ಈ ಹೂಗಳಲ್ಲಿ ಹುದುಗಿವೆಯಲ್ಲ
ಒಡನಾಟಗಳು ಇಲ್ಲವೆಂದರೂ
ಈ ಸ್ನೇಹ ಮುಗಿಯದಲ್ಲ

ನಗುವ ಹೂಗಳ ನೋಡಿಯಾದರೂ
ಪುನರ್ಮಿಲನದ ಕನಸುಗಳನ್ನು ಕೈಬಿಡಲಾರೆ
ಎಲ್ಲ ವಿದಾಯಗಳಂತಲ್ಲ ಇದು
ಅಷ್ಟರಲ್ಲೆ ಮರೆತೆ, ಇದು ವಿದಾಯವೇ ಅಲ್ಲ!


ಹೊರಳು ಹಾದಿ ಹಿಡಿದು ನಿಂತ ಗೆಳೆಯ

ಹೊರಳು ಹಾದಿ ಹಿಡಿದು ನಿಂತ ಗೆಳೆಯ,
ಪಯಣವಿದು ಮುಗಿದಂತಲ್ಲ
ಬದುಕಿನ ಬಿಡಾರ ಬದಲಾಗುತಿದೆಯಷ್ಟೆ
ನಮ್ಮೀ ಅಗಲಿಕೆ
ಇರುಳು ತಾರೆಗಳ ಬೀಳ್ಕೊಟ್ಟಂತೆ
ಚೈತ್ರವು ಚಿಗುರುಗಳ ತೊರೆದಂತೆ
ನದಿಯು ದ್ವೀಪದಲಿ ಕವಲೊಡೆದಂತೆಯೇ
ಮತ್ತೆ ಸೇರುವ ಮತ್ತೆ ಕೂಡುವ
ಕನಸುಗಳನು ಪೊರೆಯುವಂತಾಗಲಿ
ಮನಸುಗಳನು ಭಾರವಾಗಿಸದಿರಲಿ

ಹೊಟ್ಟೆ ಹೊರೆಯುವಾಟ

Image
ನೀನಾ ವಾನರನ ಧಣಿಯೋ
ಜೀವದ ಗೆಳತಿಯೋ
ಇಲ್ಲ ಸಲಹುವ ದೈವವೋ
ಮತ್ತಿನ್ನಾವ ಬಂಧುವೋ!
ಅಂತೂ ಹಂಚಿಕೊಳ್ಳುವಿರಲ್ಲ
ಅಲೆದಾಟ - ದಣಿವು - ದಾಹ - ಹಸಿವು
ದುಡಿದು ಗಳಿಸಿದ ರೊಟ್ಟಿ
ಗಂಟಲಿಗಿಳಿವ ಗಂಜಿ ಅಂಬಲಿ ಮೃಷ್ಟಾನ್ನ
ಅಂಗಾತ ಒರಟು ನೆಲವೇ ಮೃದು ಪಲ್ಲಂಗ
ಅದಾವ ಕಂಬಳಿಯ ಮೊರೆ ಹೋಗಿ
ಕೊರೆವ ಚಳಿಯ ರಾತ್ರಿಗಳ ದಾಟುವಿರೋ!
ಕುಣಿಕೆ ದಾರ ಬೀದಿಯಲೊಂದಿಷ್ಟು ಜಾಗ
ಇಷ್ಟೇ ಬಂಡವಾಳ!
ನಡೆವುದು ಹೊಟ್ಟೆ ಹೊರೆಯುವಾಟ
ಬದುಕ ಬಿಳಿಯ ಕಾಗದದ ಮೇಲೆ
ಬಣ್ಣದ ಗೆರೆಗಳೆಳೆಯುವಾಟ
ಹಗಲೆಲ್ಲಾ ಕಣ್ಣ ಕೋರೈಸುವಾಟವಾಡಿ
ಇರುಳಾವರಿಸಿದೊಡನೆ ಅದೆಲ್ಲಿ ಮಾಯವಾಗುವಿರೋ!
ನಿಮಗೂ ಇದೆಯೇ
ತುತ್ತು ಅನ್ನ - ಸುಖ ನಿದ್ದೆ - ತುಂಡು ಅರಿವೆ
ಇವೆಲ್ಲವನು ಮೀರಿದ ಕನಸುಗಳು?

ಚಿತ್ರ ಋಣ: ಮಯೂರ ಮಾಸ ಪತ್ರಿಕೆ

ಬೆಳಕೇ

ಬೆಳಕೇ,
ಹಾಸಿರುತ್ತೀಯಲ್ಲವೇ ನಿನ್ನ ಹೊದಿಕೆಯ
ಸೂರು ಸೋರುವ ಗುಡಿಸಲುಗಳ ಮೇಲೆಲ್ಲಾ
ಪಾತ್ರೆ ಹಾಸಿಗೆ ತೊಟ್ಟಿಲು ನೆನೆದು
ನಡುಗುವ ದೇಹಗಳ ಸುತ್ತುಗಟ್ಟಿರುತ್ತೀಯ
ಹೊತ್ತಾಗಲು ಇಲ್ಲವಾಗಿ ಬುಡ್ಡಿಯ ಎಣ್ಣೆಗಲೆಸುತ್ತೀಯ

ಬೆಳಕೇ,
ಇಳೆ ಬಿಟ್ಟಿರುತ್ತೀಯಲ್ಲವೇ ನಿನ್ನ ಕೋಲನು
ಹೆಂಚುಗಳ ಸಂದಿಯೊಳಿಂದ ನುಸುಳಿ
ಹೊರಗಿನ ಕಾವನೆಲ್ಲ ಸುರುಳಿ ಸುತ್ತಿ
ನೆಲವ ತಬ್ಬಿ ಹೊಳೆವ ಬಿಲ್ಲೆಯಾಗಿರುತ್ತೀಯ
ಒಲೆಯ ಮುಂದೆ ಬೇಯುವ ಜೀವದ ಬವಣೆ ಕಾಣುತ್ತಿರುತ್ತೀಯ

ಬೆಳಕೇ,
ಝಗಮಗಿಸುತ್ತಿರುತ್ತೀಯ ಮಹಲು ಭವನಗಳಲಿ
ಹಾಯುತ್ತಿರುತ್ತೀಯ ಇರುಳ ರಸ್ತೆಗಳಲಿ ವಾಹನಗಳನೇರಿ
ಹೊಳೆಯುತ್ತಿರುತ್ತೀಯ ಚಿಂದಿಯುಡುಗೆ ತೊಟ್ಟ ಚಿಣ್ಣರ ಕಣ್ಣೊಳು
ಹುಟ್ಟು ಹಬ್ಬಗಳ ಮೋಂಬತ್ತಿಯ ತುದಿಯಲಿ
ಹೋದ ಜೀವದ ಒಂಟಿ ಹಣತೆಯಲಿ

ಇರದ ಜಾಗವಿಲ್ಲವೆಂಬ ಗರ್ವವಿರಬಹುದೇ ನಿನಗೆ?
ಹಿಡಿಯಲಾಗದೆಂಬ ಠೇ೦ಕಿದ್ದರೂ ಸರಿಯೇ
ಬಂದು ಹೋಗುತ್ತಿರಬೇಕು ನೀನು ಬೊಗಸೆಯಿಂದ ಬೊಗಸೆಗೆ
ಹಗಲುಗಳ ಕಣ್ಣು ತಪ್ಪಿಸಿ ಜಾರಿ ಹೋಗುತ್ತಿರಬೇಕು ಕತ್ತಲೆಡೆಗೆ
ಹಾದು ಹೋಗುತ್ತಿರಬೇಕು ಕಣ್ಣಿಂದ ಕಣ್ಣಿಗೆ
ಹೌದು, ಹಾಗೆಯೇ...
ಆದರೂ ಒಂದು ಸಣ್ಣ ಹೊಳಹಾಗಿ ಉಳಿದಿರಬೇಕು ಮನಸ ಒಳಗೆ

ಕುಸುಮ ಲಹರಿ

ತುಂಬು ಕಂಗಳ ಬೆಡಗಿ,
ಎದೆಯಲೆದ್ದ ಅಲೆಯೊಂದು ಮಿಡುಕಾಡಿ
ನಿನ್ನ ದನಿಗಾಗಿ ತಳಮಳಿಸಿ
ಕೂಡುವ ದಾರಿಯನರಸಿದೆ

ಈ ಸುಮದ ದಳಗಳಲಿ
ನಿನ್ನ ಕೆನ್ನೆಯ ರಂಗುಂಟು
ನಿನ್ನ ಬೆರಳುಗಳ ಸ್ಪರ್ಶವೂ
ಮನದ ಸೊಬಗು, ನಗುವಿನ ಬೆಡಗೂ!

ಕೈಗಿತ್ತು ಸುಮ್ಮನಾಗಲಾರೆ
ಬಿರಿದ ಹೂವ ಘಮಲು ನಿನ್ನಾವರಿಸಿ
ಮಂದಹಾಸದ ಹೊನಲು ಹಬ್ಬುವ ತನಕ
ನಿನ್ನಲೇ ನೋಟ ನೆಡುವೆ

ಧೋಬಿ ಘಾಟ್ - ಓಟ ಹುಡುಕಾಟಗಳ ಸ್ತಬ್ಧಚಿತ್ರಗಳು

Image
ಮಾನವೀಯ ಕೊಂಡಿಗಳ ಹುಡುಕಾಟವನ್ನೇ ಕಥೆಯ ಜೀವಾಳವಾಗಿಸಿಕೊಂಡಿರುವ "ಧೋಬಿ ಘಾಟ್" ಚಿತ್ರ ಭಾರತೀಯ ಚಲನಚಿತ್ರದ ಸಂದರ್ಭದಲ್ಲಿ ಗಮನಾರ್ಹ ಪ್ರಯತ್ನ. ಸ್ಪಷ್ಟ ಪ್ರಾರಂಭ ಯಾ ಅಂತ್ಯ ಎರಡೂ ಇಲ್ಲದ ಈ ಚಿತ್ರ, ಎಡಬಿಡದ ದುಡಿಮೆಯಲ್ಲೇ ಬದುಕು ಕಟ್ಟಿಕೊಳ್ಳುವ ಮುಂಬೈ ಎಂಬ ವಿರಾಟ್ ನಗರದ ಜನರ ಜೀವನದ ಪರಿಚ್ಛೇದವೊಂದನ್ನು ಕಾಣಿಸುತ್ತದೆ. ನಾಲ್ಕು ವಿಭಿನ್ನ ಹಿನ್ನೆಲೆಯುಳ್ಳ ವಿಭಿನ್ನ ವರ್ಗಗಳಿಗೆ ಸಂಬಂಧಿಸಿದ ವ್ಯಕ್ತಿಗಳು ಈ ಚಿತ್ರದ ಪ್ರಮುಖ ಪಾತ್ರಗಳು. ಸಂಬಂಧವೇ ಇರದ ನಾಲ್ಕು ವ್ಯಕ್ತಿಗಳು ಪರಸ್ಪರರ ಬದುಕುಗಳನ್ನು ಪ್ರಭಾವಿಸುವ ಸೂಕ್ಷ್ಮ ದರ್ಶನ ಚಿತ್ರಕಥೆಯಲ್ಲಿ ಉದ್ಬೋಧಗೊಳ್ಳುತ್ತದೆ. ನಾಟಕೀಯತೆ, ಅತಿ ಅನಿಸಿಬಿಡುವ ಭಾವುಕತೆ ಹಾಗೂ ಸಿನೆಮಾದ ಸಿದ್ಧ ವ್ಯಾಕರಣದ ಕಟ್ಟಳೆಗಳನ್ನು ಬದಿಗಿಟ್ಟು ದೃಶ್ಯಕಥನದಲ್ಲಿ ಒಂದು ವಿಶಿಷ್ಟ ಪ್ರಯೋಗವಾಗಿ ಧೋಬಿ ಘಾಟ್ ಹೊರಹೊಮ್ಮಿದೆ.

ನಾಲ್ಕು ಪಾತ್ರಗಳಲ್ಲಿ ಯಾಸ್ಮಿನ್(ಕೃತಿ ಮಲ್ಹೋತ್ರ) ಪಾತ್ರದ ನೇರ ಪರಿಚಯವೇ ಇಲ್ಲ. ಸ್ವತಃ ಯಾಸ್ಮಿನ್ ಳೇ ದಾಖಲಿಸಿಟ್ಟ ದೃಶ್ಯಮುದ್ರಿಕೆಗಳಿಂದ (Video Cassettes) ಆಕೆಯ ಮತ್ತು ಆಕೆಯ ಬದುಕಿನ ಪರಿಚಯವಾಗುತ್ತದೆ. ಪ್ರಾಯಶಃ ಇನ್ನುಳಿದ ಪಾತ್ರಗಳಿಂದ ಯಾಸ್ಮಿನ್ ಳನ್ನು ಬೇರ್ಪಡಿಸಿ ನೋಡುವ ಉದ್ದೇಶ ಇರಬಹುದು. ಅವಳ ಬದುಕಿನ ವಿವರಗಳನ್ನು ನಿರೂಪಿಸಲು ಯಕಃಶ್ಚಿತ್ ಅವಳ ವೀಡಿಯೋ ಕ್ಯಾಮೆರಾದ ದೃಶ್ಯತುಣುಕುಗಳನ್ನೇ ತೋರಿಸಲಾಗಿದೆ. ಸಣ್ಣದೊಂದು ಊರಿನಿಂದ ಮುಂಬೈಗೆ ತನ್ನ ಪತಿಯ ಜೊತೆ…

ಹೊಳೆಯ ಹಾದಿ ಹಿಡಿದು

ಏನು ಎತ್ತ ಎಂದು ಕೇಳದೆ
ಸುಮ್ಮನೆ ಹೊರಟು ಬಿಡೋಣ
ಹುಣ್ಣಿಮೆಯ ಬೆಳದಿಂಗಳಿಗೋ, ಕಂಪು ಹೊತ್ತ ತಂಗಾಳಿಗೋ
ಕಾಯುವುದು ಬೇಡ ಇನ್ನು

ಹಿಡಿಯುವ ಆ ಹೊಳೆಯ
ಕಾಲು ದಾರಿಯ ಜಾಡು
ಬಿಟ್ಟು ಚಂದಿರನಿಗೆ
ಅವನ ಪಾಡು

ಹನಿವ ಮಳೆಗೆರಡು ಬೊಗಸೆ
ಸುಡುವ ಬಿಸಿಲಿಗೆ ನಾಲ್ಕು ಒಲವ ಮಾತು
ಕೊರೆವ ಚಳಿಗೆ ತೋಳ ಬಳಸು
ತುಸು ದೂರದ ನಡಿಗೆಯಷ್ಟೇ

ಬೆಸೆದಿರಲಿ ಕೈಯೊಳು ಕೈ
ನಿಂತಿರಲಿ ಬಾಯ ತುದಿಯಲಿ
ಹೇಳಬೇಕೆಂದ ಸವಿ ನುಡಿ

ಕಣ್ಣಂಚಿನ ಮಿನುಗು
ಮರೆಮಾಚುವುದು ನೋಡು
ಆ ತುಂಟ ನಗೆಯನು

ಹೊಳೆಯ ದಂಡೆಯಲಿ
ಎದೆಗಾತು ಕೂತಿರೆ ನೀನು
ತೆರೆಗಳ ಗುಂಜನದೊಳು
ರೆಪ್ಪೆ ಮುಚ್ಚಲು ನಾನು
ನೆನಪಾಗಿ ಥಟ್ಟನೆ
ನೀನಂದು ಮೈಮರೆಸಿದ ಹಾಡು

ಕೈಯ ಹಣೆಮುಟ್ಟಿಸಿ
ನೋಟದಲ್ಲೇ ಅಹವಾಲು ಇಡುವೆನು
ಅದೇ ಹಾಡನು ಆ ಮೋಹಕ ನಾದವನು
ಒಲವ ಸುಧೆಯೊಳದ್ದಿ ಹರಿಯಬಿಡೆಂದು
ಅವೇ ಪದಗಳಿಗೊಮ್ಮೆ ನಿನ್ನ ದನಿಯ
ಜೇನು ಪೂಸಿಬಿಡೆಂದು

ಗೊತ್ತಿಲ್ಲದೇನಿಲ್ಲ ನಿನಗೆ
ನಿನ್ನಾ ಹಾಡಿಗೆ ಎದೆ ಹನಿವುದು ಇನ್ನಿಲ್ಲದಂತೆ
ಕಂಠ ಬಿಗಿವುದು ಮಾತು ಹೊರಡದಂತೆ

ಬೇಕಿಲ್ಲ ಅಲ್ಲವೆ
ಇನ್ಯಾವ ರಸಘಳಿಗೆಯ ನಿರೀಕ್ಷೆ?
ನಿನ್ನ ಹಾಡು ನನ್ನ ಮೈಮರೆವು
ಕೊರಳ ಇಂಪು ಕವಿತೆಯ ಕಂಪು
ಅರಳಿ ನಗುವ ಮಲ್ಲಿಗೆ ಮುಗಿಲು
ಬಯಲ ತುಂಬಾ ಪ್ರೀತಿ ಹೊನಲು
ಸಾಕಲ್ಲವೆ ಇಷ್ಟು
ಕನಸಿನ ಜೋಳಿಗೆ ತುಂಬಿಸಲು?

ಹೊರಡೋಣ ನಡಿ ಇನ್ನು
ಬಿಟ್ಟರಾಯಿತು ಕರಗುವ ಸಮಯವ
ಋತುಗಳ ಪಾಲಿಗೆ
ಹಂಚಿದರಾಯಿತು ಕಿರುನಗೆಯ
ಹೂಗಳ ಸಾಲಿಗೆ