Posts

Showing posts from February, 2012

ಒಲವಿನ ನದಿಯ ಪಾತ್ರ

ನಿನ್ನ ಒಲವಿನ ನದಿಯ ಪಾತ್ರ
ಸ್ನೇಹಮಯ ಜೀವನ ಸೂತ್ರ
ಪ್ರೇಮಲ ಭಾವದಿ ನೀ ಹಾಡಿರಲು
ಹೊಳೆದಿಹುದು ಮಂಜಿನಲಿ ಬೆಳಕ ಕೋಲು

ತುಂಬು ಮಮತೆಯ ವಾಹಿನಿ
ಸದಾ ನನ್ನ ಧೃತಿ ಸಂಜೀವಿನಿ
ನಿದ್ರಿಸಲು ನಿನ್ನ ಮಡಿಲೊಳು
ನೀನಾಗಿಹೆ ಕನಸಿನ ಯಾಮಿನಿ

ನಮ್ಮ ಬಾಳ ನಾವೆಯಿದೆ
ನಿನ್ನ ನೇಹ ಸರೋವರದಿ
ಹುಟ್ಟಿಹುದು ನಿನ್ನ ಗಾನದಿ
ಇಂಚರದ ರಸಪಾಕ

ನಿನ್ನ ಸ್ವರಗಳು ಹನಿಗೂಡಿ
ಒಡಲಲಿ ಅಲೆಗಳ ಶರಧಿ
ಸಾಗರದ ನಾದದೊಳು
ಮೈಮರೆತಿಹೆ ನಿನ್ನ ಧ್ಯಾನದಿ

ಬಿಟಿಎಂ ಲೇಔಟ್

ಅರೆ ನಿದ್ದೆಯ ಕಣ್ಣುರಿ ತುಂಬಿ
ಸಂತೆಯ ಸಂದಣಿಯಲ್ಲಿ ದೂಡಿ
ಕಿವಿಯಲ್ಲಿ ಉಸುರುತ್ತದೆ
"ಓಡು ಮಗುವೆ
ಬಸ್ಸಿನ ಛಾವಣಿಯ ಕಂಬಿಗೆ
ಜೋತು ಬಿದ್ದು ನಿದ್ದೆಯ ದಣಿವಾರಿಸಿಕೊ
ಮನೆಯ ಖಾಲಿ ಬಿಟ್ಟು ದಿನವೆಲ್ಲ
ಒಂದಿಷ್ಟು ಬೆವರು ಸುರಿಸಿಕೊ
ಮನೆಯಿರುವುದು ರಾತ್ರಿ ಉಂಡು ಮಲಗಲಷ್ಟೆ
ಓಡಿನ್ನು ಬೇಗ
ಗಿರಗಿರನೆ ತಿರುಗುವ ಚಕ್ರಗಳ ಮೇಲಿನ
ಯಂತ್ರದ ರಥಗಳಿಂದ ಕಿಕ್ಕಿರಿದ ರಸ್ತೆಯನೊಮ್ಮೆ ನೋಡು
ಜೊಂಪು ನಿದ್ದೆಗೂ ಬಿಡುವಿಲ್ಲ ಅದಕೆ
ಹೋಗುತ್ತಲೇ ಕರಗಿಬಿಡು ಸಂತೆಯೊಳಗೆ
ಹೋಗಿ ತೀರಿಸಿ ಬಾ ದಿನಕರನಂತೆ
ದಿನಕ್ಕೆ ಕೊಡಬೇಕಿರುವ ನಿನ್ನ ಬಾಬ್ತು
ಒಂದಿಷ್ಟು ಬೆಂದು ಒಂದಿಷ್ಟು ಉರಿದು
ನಿನ್ನನೇ ನೀನು ತೀಡಿಕೊಂಡು
ಒಂದಿಷ್ಟು ಹೊಳೆಯಬಲ್ಲೆಯೇನೋ ನೋಡು"
ಸಂಜೆ ಸುರಿದ ಮೇಲೆ ಇರುಳ ಚಪ್ಪರ ಕಟ್ಟುತ್ತಲೇ
ಬರ ಮಾಡಿಕೊಳ್ಳುತ್ತದೆ
ಬಣ್ಣದಾಗಸ ನೋಡಲಾಗದ್ದಕ್ಕೆ
ಮೈದಡವಿ ಸಂತೈಸುತ್ತದೆ
ದುಡಿಮೆಯ ಕೀಲಿ ಕೊಡಿಸಿಕೊಂಡ ಬೊಂಬೆಗಳ
ಹಣೆ ನೀವುತ್ತದೆ
ಹೋಟೆಲಿನ ಮೇಜು ಒರೆಸುವ ಪೋರನ
ಗುನುಗು ಗೀತೆಯಾಗುತ್ತದೆ
ಮನೆ ಮುಟ್ಟಿಸಲು ಬಂದ ಕ್ಯಾಬ್ ಚಾಲಕನ
ಇಷ್ಟದ ತಿರುವಾಗುತ್ತದೆ
ಠೀವಿಯಾಗುತ್ತದೆ ಲಲನೆಯರ ನಡಿಗೆಯಲ್ಲಿ
ತುಳುಕಾಡುತ್ತದೆ ಮೈದಾನದ ಮಕ್ಕಳ ಕೇಕೆಯಲ್ಲಿ
ಉಡುಪಿ ಗಾರ್ಡನ್‌ನಿಂದ ಮಡಿವಾಳ ಕೆರೆ
ಜಯದೇವದಿಂದ ತಾವರೆಕೆರೆ
ಎಡಬಿಡದೆ ಎಲ್ಲರನಲೆಸಿ
ಸಂತೆಯ ಲೀಲೆಯಲ್ಲಿ ಸಂಭ್ರಮಿಸುತ್ತದೆ
ವಾಹನ ಸರಮಾಲೆ ಧರಿಸಿ ನರ್ತಿಸುತ್ತದೆ
ಸಲಹುತ್ತದೆ ಉಬ್ಬುತ್ತದೆ ಬಿಕ್ಕುತ್ತದೆ
ಉನ್ಮತ್ತಗೊಂಡು…

ಗಟ್ಟಿಮೇಳ

ಮದುವೆ ಮನೆಯಲ್ಲಿ
ದೇವರೇ ಪ್ರತ್ಯಕ್ಷನಾದಂತೆ
ಎದ್ದು ನಿಲ್ಲುತ್ತಾರೆ ಎಲ್ಲ
ಗಟ್ಟಿ ಮೇಳದ ಅಲೆಗಳು ತೇಲಿಬಂದೊಡನೆ
ಅಕ್ಷತೆ ಹಾಕುತ್ತಾರೆ
ದಿಕ್ಕುಗೆಟ್ಟ ಕುರ್ಚಿಗಳಲಿ ಹರಟುತ್ತಿದ್ದವರೆಲ್ಲ
ಉಕ್ಕುವ ಹಾಲನ್ನು ತಡೆಯಲು ಧಾವಿಸಿದವರಂತೆ
ಅಲ್ಲಿಂದಲೆ ಮುಂದೆ ಓಡಿದಂತೆ
ಎಸೆಯುತ್ತಾರೆ ಅಕ್ಕಿ ಕಾಳು
ಮುಂದೆ ನಿಂತು ಕಣ್ಣು ಹನಿಸುವವರ ಮೇಲೆಯೇ
ಮುಗಿಯಿತಿನ್ನು!
ಹಠಾತ್ ದೊಡ್ಡವರಾಗಿಬಿಟ್ಟರು ವಧು-ವರರು
ಘನ ಗಾಂಭೀರ್ಯದ ಮೂಟೆ ಹೊತ್ತೇ
ಸಪ್ತಪದಿಯಿಡಬೇಕು ಅವರಿನ್ನು
ಅವರ ನಡೆ ನುಡಿ
ಉಸಿರು ನೋಟ ನಗು
ಎಲ್ಲಕ್ಕೂ ಹೊಣೆಯ ಹೊರೆ
ಅವಳು ಕೈ ಜೋಡಿಸಿದಳಷ್ಟೆ
ಬಗ್ಗಿ ನಮಸ್ಕರಿಸಲಿಲ್ಲವಲ್ಲ!
ಅವನಾಗಲೇ ಅವಳ ಸೆರಗ ಹಿಂಬಾಲಿಸುತ್ತಿದ್ದಾನಲ್ಲಾ!
ಪಿಸುಗುಟ್ಟುತ್ತಿದ್ದಾರೆ ಮದುವೆ ಮನೆಯ
ಗಳಗಳ ಮಾತುಗಳ ನಡುವೆ
ಅಗ್ನಿಗೆ ಅರಳು ಹುಯ್ಯಲು ಬಾರದು ಅವಳಿಗೆ
ಆಪೋಷಣೆಗೆ ಅಂಗೈ ಗುಳಿ ಮಾಡಲು ತಿಳಿಯದು ಅವನಿಗೆ
ಇವರೆಂಥ ಸಂಸಾರ ಮಾಡಿಯಾರು!
ಎನ್ನುತ್ತ ಹಪ್ಪಳದ ಪರಿಮಳಕ್ಕೆ ಸೋತು
ಊಟದ ಪಂಕ್ತಿಯೊಳಗೆ ಉಪ್ಪಿನಕಾಯಿಯ ಮೆಚ್ಚಿಕೊಂಡರು
ಎಲೆ ಅಡಿಕೆ ಮೆಲ್ಲುತ್ತ
ನವ ದಂಪತಿಗಳಿಗೆ ಆಶೀರ್ವದಿಸುತ್ತಾರೆ
ಶೀಘ್ರಮೇವ ಸಂತಾನಪ್ರಾಪ್ತಿರಸ್ತು
ಹುಡುಗಾಟಿಕೆ ಸಲ್ಲದು ಮುಂದೆ
ಎಲ್ಲೂ ತಪ್ಪದೆ ಎಲ್ಲ ನಿಭಾಯಿಸಬೇಕೆಂದು
ಚಿತಾವಣೆ ಕೊಡುತ್ತಾರೆ
ಮದು"ಮಕ್ಕಳೇ", ಭೂಮದೂಟಕ್ಕೇಳಿ
ಯಾರೋ ಕೂಗುತ್ತಾರೆ
ಯಾವ ಮಕ್ಕಳೆಂದು ತಬ್ಬಿಬ್ಬಿನಲ್ಲಿ
ಇಬ್ಬರೂ ಮುಖ ನೊಡಿಕೊಂಡು
ನಾವೇ ಹೌದೆಂದು
ಜೀರಿಗೆ ಬೆಲ್ಲದ…

ನಿಶ್ಚಿತಾರ್ಥ

ಯಾವ ದೇವತೆಯ ಸಾಕ್ಷಿಯನ್ನೂ ಬೇಡದೇ
ಇನ್ನಾವ ನಕ್ಷತ್ರದ ಕೃಪೆ ಯಾಚಿಸದೇ
ನನ್ನೊಳು ನೀನು
ನಿನ್ನೊಳು ನಾನು
ಕಂಡುಕೊಂಡ ಸಖರು ಅಭಿಸಾರಗೊಂಡರು
ಗೃಹಸ್ಥದ ಹೊಸ್ತಿಲೆಡೆದೆ ಹೆಜ್ಜೆಯಿಟ್ಟರು
ಭಾವಿ ಪತಿ ಪತ್ನಿಯರೆಂದು
ಬೆರಳುಗಳಲಿ ಬೆರಳುಗಳ ಹೆಣೆದರು

ತಾರುಣ್ಯದ ಬಳ್ಳಿಯಲೊಂದು
ಆತ್ಮಸಖ್ಯದ ಎಳೆಮೊಗ್ಗು
ಬಾಳಕಡಲಲ್ಲಿ ಪುಟ್ಟ ನಾವೆಯ
ಜೋಡಿಹುಟ್ಟು
ಕಣ್ಣುಗಳ ಬೋಗುಣಿಗಳಲ್ಲಿ ಸ್ವಪ್ನಸಲಿಲ
ನಿಶ್ಚಿತ ದಿನ ಜಾಗ
ಅರ್ಥಗಳ ಹುಡುಕಾಟಕ್ಕೆ
ಜೀವಗಳು ಜೊತೆಯಾಗಲು
ಸಲಹಿದವರ ಗದ್ಗದಿತ ಕೊರಳುಗಳು ಉಲಿದವು
"ನಿಶ್ಚಿತಾರ್ಥ!"