Posts

Showing posts from May, 2012

ಶುಕ್ರ ಸಂಕ್ರಮಣ

ಜೂನ್ ೬, ೨೦೧೨ ರಂದು ಒಂದು ಅಪರೂಪದ ವಿದ್ಯಮಾನ ಅಂತರಿಕ್ಷದಲ್ಲಿ ಸಂಭವಿಸಲಿದೆ. ಅದನ್ನು ನೇರವಾಗಿ ವೀಕ್ಷಿಸುವ ಅವಕಾಶ ಹೊಂದಿರುವ ನಾವೆಲ್ಲ ಅದೃಷ್ಟವಂತರೇ ಸರಿ! ವಿಜ್ಞಾನಿಗಳು, ಖಗೋಳಶಾಸ್ತ್ರಜ್ಞರು, ಹವ್ಯಾಸಿಗಳು, ವೃತ್ತಿಪರರು, ವಿಜ್ಞಾನಾಸಕ್ತರು ಮತ್ತು ಸಾಮಾನ್ಯ ಜನತೆ ಕೂಡ ಅಂತರಿಕ್ಷದಲ್ಲಿ ನಡೆಯಲಿರುವ ಈ ದೃಶ್ಯ ಚಮತ್ಕಾರದ ವೀಕ್ಷಣೆಯ ಪ್ರತಿಕ್ಷಣವನ್ನೂ ಆನಂದಿಸಲು ಅಣಿಯಾಗುತ್ತಿದ್ದಾರೆ. ಅದುವೆ "ಶುಕ್ರ ಗ್ರಹದ ಸಂಕ್ರಮಣ"! ಶುಕ್ರ ಗ್ರಹವು ಕಪ್ಪು ಚುಕ್ಕಿಯಂತೆ ಸೂರ್ಯನ ಮೇಲೆ ಮಂದವಾಗಿ ಹಾದುಹೋಗಲಿದೆ ಮತ್ತು ಈ ಚಲನೆಯ ದೃಶ್ಯ ಸೂರ್ಯೋದಯದಿಂದ ಬೆಳಿಗ್ಗೆ ೧೦.೩೦ರ ವರೆಗೆ ಗೋಚರಿಸಲಿದೆ.
ಈ ವಿದ್ಯಮಾನ ಯಾಕೆ ಅಪರೂಪ ಮತ್ತು ನಾವೇಕೆ ಇದನ್ನು ವೀಕ್ಷಿಸಬಹುದಾದ ಭಾಗ್ಯಶಾಲಿಗಳು? ಜೂನ್ ೬, ೨೦೧೨ ರಂದು ಇದರ ವೀಕ್ಷಣೆ ತಪ್ಪಿಸಿಕೊಂಡಲ್ಲಿ ನಾವಿದನ್ನು ನಮ್ಮ ಜೀವಮಾನದುದ್ದಕ್ಕೂ ನೋಡಲಾರೆವು. ಕಾರಣ ಇದು ಮತ್ತೆ ಸಂಭವಿಸಲಿರುವುದು ೧೧ ಡಿಸೆಂಬರ್, ೨೧೧೭ಕ್ಕೆ. ಈ ಹಿಂದೆ ಇದೇ ರೀತಿಯ ಘಟನೆ ನಡೆದದ್ದು ಜೂನ್ ೮, ೨೦೦೪ರಲ್ಲಿ. 
ಇದು ಲೆಕ್ಕಾಚಾರ ಅಥವಾ ಇನ್ನಾವುದೇ ಅಳತೆಗೆ ಸಿಗದ ಯಾದೃಚ್ಛಿಕ ವಿದ್ಯಮಾನವಲ್ಲ. ಇದಕ್ಕೊಂದು ಕ್ರಮವಿದೆ. ಶುಕ್ರ ಸಂಕ್ರಮಣವು ೮ ವರ್ಷಗಳ ಅಂತರವಿರುವ ಜೋಡಿ ಇಸವಿಗಳಲ್ಲಿ ಸಂಭವಿಸುತ್ತದೆ. ಮಾತ್ರವಲ್ಲದೆ ಈ ಜೋಡಿ ಇಸವಿಗಳ ನಡುವಿನ ಅಂತರ ೧೨೧.೫ ಮತ್ತು ೧೦೫.೫ ವರ್ಷಗಳಂತೆ ಅದಲು ಬದಲಾಗುತ್ತಿರುತ್ತದೆ. ಈ ಕೆಳಗಿನ ಕ…

ಅಪಭ್ರಂಶ

ಮಧ್ಯಾಹ್ನ ಆವರಿಸಲು ಇನ್ನೇನು ಒಂದೇ ತಾಸು ಬಾಕಿಯಿದ್ದರೂ ಮಾಗಿಯ ಚಳಿ ಮಾತ್ರ ಗಾಳಿಯಲ್ಲಿ ಹಾಗೆಯೇ ಅಡಗಿತ್ತು. ಫ಼ುಟ್ಪಾತಿನ ಮೇಲೆ ನಡೆಯುವಾಗ ಬಿಸಿಲಿನಿಂದ ನೆರಳೊಳಗೆ ನುಸುಳಿದಂತೆಲ್ಲ ಅರ್ಧ ಅಂಗಿ ತೊಟ್ಟ ಶ್ಯಾಮನ ಕೈ ಮೇಲಿನ ಒಡೆದ ಚರ್ಮ ಹಿಗ್ಗಿದಂತಾಗಿ ಸಣ್ಣಗೆ ಚಿಟಿ ಚಿಟಿ ಉರಿದು ಅಹಿತವುಂಟು ಮಾಡುತ್ತಿತ್ತು. ಬಸ್ ಸ್ಟಾಪ್ ಇನ್ನು ೧೦ ನಿಮಿಷಗಳ ಕಾಲ್ನಡಿಗೆಯಷ್ಟು ದೂರ. ಯಾವಾಗಲೂ ಆಫೀಸು ಮುಗಿಸಿಕೊಂಡು ಶುಕ್ರವಾರ ರಾತ್ರಿಯೇ ಬಸ್ಸು ಹತ್ತಿ ಮಧ್ಯರಾತ್ರಿಯಲ್ಲಿ ದುರ್ಗ ಸೇರಿಬಿಡುತ್ತಿದ್ದ ಶ್ಯಾಮ ಈ ಬಾರಿ ಮಾತ್ರ ಊರಿಗೆ ಹೋಗುವುದೋ ಬೇಡವೋ ಎಂಬ ದ್ವಂದ್ವದಲ್ಲೇ ಹಿಂದಿನ ಮಧ್ಯರಾತ್ರಿಯವರೆಗೂ ಒದ್ದಾಡಿ ಹಾಗೆಯೇ ನಿದ್ದೆ ಹೋಗಿದ್ದ. ಬೆಳಿಗ್ಗೆ ತಡವಾಗಿ ಎದ್ದು ಹಾಸಿಗೆಯ ಮೇಲೆ ಕೂತವನೇ ಒಂದು ದೀರ್ಘವಾದ ಉಸಿರು ತೆಗೆದುಕೊಳ್ಳುತ್ತಾ ಹೊರಟೇಬಿಡುವುದೆಂದುಕೊಂಡವನು ಸ್ನಾನ ಮುಗಿಸಿ, ತಿಂಡಿಯ ಬಗ್ಗೆ ತಲೆ ಕೆಡಿಸಿಕೊಳ್ಳದೆ ತನ್ನ ಹೆಗಲಚೀಲವನ್ನೇರಿಸಿಕೊಂಡು ಹೊರಬಿದ್ದಿದ್ದ. ಪ್ರತಿ ಬಾರಿಯೂ ದುರ್ಗಕ್ಕೆ ಹೊರಡುವಾಗ, ಶಹರದ ಧೂಳು, ಹೊಗೆ, ಒತ್ತಡಗಳ ಜಂಜಡಗಳಿಂದ ತುಸು ಕಾಲ ಬಿಡುಗಡೆ ಹೊಂದುವ ತಹತಹದಲ್ಲಿ ಹೊರಟು, ಮತ್ತೆ ಮನೆಯವರನ್ನೆಲ್ಲ ಕಂಡ ಹುರುಪಿನೊಂದಿಗೆ ನವೀಕರಣಗೊಂಡ ಯಂತ್ರದಂತಾಗಿ ಹಿಂತಿರುಗಿ ಬರುತ್ತಿದ್ದ ಶ್ಯಾಮ. ಈ ಬಾರಿ ಯಾಕೋ ಬೆಂಗಳೂರಿನ ಯಾಂತ್ರಿಕ ಬದುಕಿನೆದುರು ಅಲ್ಲಿಗೆ ಹೋಗಿ ಬರುವುದೇ ಸಪ್ಪೆಯೆನಿಸತೊಡಗಿತ್ತು ಅವನಿಗೆ. ಅಪ್ಪನಿಗೆ ವಾದಿ …

ಹೈಟೆಕ್ ಕಾರ್ಮಿಕರು

ಭಾರತವನ್ನೂ ಒಳಗೊಂಡು ಪ್ರಪಂಚದ ಸುಮಾರು ೮೦ ದೇಶಗಳಲ್ಲಿ ಮೇ ೧ ರಂದು ಕಾರ್ಮಿಕರ ದಿನಾಚರಣೆ ಆಚರಿಸಲಾಗುತ್ತದೆ. ಅಂದು ಆ ಎಲ್ಲಾ ದೇಶಗಳಲ್ಲಿ ರಾಷ್ಟ್ರೀಯ ರಜಾ ದಿನ. ಕಾರ್ಮಿಕರ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವುದು ವಿಶ್ವ ಕಾರ್ಮಿಕರ ದಿನಾಚರಣೆಯ ಮೂಲ ಧ್ಯೇಯಗಳಲ್ಲಿ ಒಂದು. ವಿವಿಧ ಕಾರ್ಮಿಕ ಪರ ಸಂಘ ಸಂಸ್ಥೆಗಳು ಈ ದಿನದಂದು ಸಮಾವೇಶ, ವಿಚಾರ ಸಂಕಿರಣಗಳನ್ನು ಹಮ್ಮಿಕೊಂಡು ಕಾರ್ಮಿಕರ ಬದುಕು-ಬವಣೆ, ಹಕ್ಕುಗಳ ಕುರಿತು ಚಿಂತಿಸುವುದು ಇದರ ವಿಶೇಷ. ಐಟಿ ಉದ್ದಿಮೆಯ ಸಂದರ್ಭದಲ್ಲಿ ಕಾರ್ಮಿಕರ ದಿನಾಚರಣೆಯು ಬಹಳಷ್ಟು ಐಟಿ ಉದ್ಯೋಗಿಗಳಿಗೆ ಬೇರೆ ಎಲ್ಲ ರಜಾದಿನಗಳಂತೆ ಮತ್ತೊಂದು ರಜೆಯಷ್ಟೆ. ಖಾಸಗಿ ವಲಯದ ಇತರೆ ಉದ್ದಿಮೆಗಳಲ್ಲಿರುವ ಕಾರ್ಮಿಕರಿಗೆ ಹೋಲಿಸಿದರೆ, ಐಟಿ ಕಾರ್ಮಿಕರಲ್ಲಿ ಕಾರ್ಮಿಕರ ದಿನಾಚರಣೆ ಹಾಗೂ ಹಕ್ಕುಗಳ ಮಹತ್ವದ ಬಗೆಗಿನ ಜಾಗೃತಿ ನಿರಾಸೆ ಮೂಡಿಸುವಷ್ಟು ಕಡಿಮೆಯಿದೆ. ಕೆಲ ಐಟಿ ಕಂಪನಿಗಳಲ್ಲಿ ಈ ದಿನವನ್ನು ಐಚ್ಛಿಕ ರಜೆಯನ್ನಾಗಿಸಿರುವುದು ಈ ದಿನದ ಬಗೆಗೆ ಐಟಿ ಕಂಪನಿಗಳು ತಳೆದಿರುವ ನಿಲುವನ್ನು ಎತ್ತಿ ಹಿಡಿಯುತ್ತದೆ. ಐಟಿ ಮಂದಿ ತಮ್ಮನ್ನು ತಾವು ಕಾರ್ಮಿಕರೆಂದು ಗುರುತಿಸಿಕೊಳ್ಳುವುದರಲ್ಲೇ ತುಸು ಹಿಂದುಳಿದಿದ್ದಾರೆಂದರೆ ತಪ್ಪಾಗಲಾರದು. ಹಾಗೇನಾದರೂ ಗುರುತಿಸಿಕೊಂಡರೂ ತಾವು ಮೇಲ್ವರ್ಗದ ಕಾರ್ಮಿಕರೆಂಬ ಭಾವನೆ ಇಲ್ಲಿನ ಉದ್ಯೋಗಿಗಳದ್ದು. ಇವರೆಲ್ಲ ಕಾರ್ಮಿಕ ವರ್ಗಕ್ಕೆ ಸೇರಿದರೂ "ಟೆಕ್ಕಿ" ಎಂಬ ಸಂಭಾವಿತ ಗುಂಪಿಗೆ ಪ್ರ…