Posts

Showing posts from July, 2008

ಪರಮಪದ

Image
ಮೆದುಹತ್ತಿಯ ಹಾಸುಗಳಂತೆ ತೇಲುತಲಿರಲು ಮುಗಿಲ ಸಾಲು ಝಗಮಗಿಸುತ್ತ ಸರಸರನೆ ಹರಿದಿರಲು ಕೋಲ್ಮಿಂಚು ನೇಪಥ್ಯಕೆ ಸರಿದ ಉದಯರವಿ ಕಾದು ಕುಳಿತನಲ್ಲಿ ಹನಿಮುತ್ತುಗಳ ಭೂಚುಂಬನ ನೋಡುವ ತವಕದಲ್ಲಿ ಮೋಡಗಳೊಡಲಿನಿಂದ ಜಾರಿತು ಹನಿಯೊಂದು ಧರೆಯಂಗಳದಿ ಏನಿದೆಯೆಂದು ತಿಳಿಯಲೆಂದು ಹನಿಯ ಮನವ ಕಾಡುವ ಜಿಜ್ಞಾಸೆ ಭೂರಮೆಗೇಕಿಷ್ಟು ನೀರಿನಾಸೆ?!!! ಮೆಲುವಾಗಿ ಸವರಿದ ತಂಗಾಳಿಯ ಸೊಂಪು ಹನಿಯ ಮೈ ಸೋಕಿ ಕಣಕಣವೂ ತಂಪು ಪಾವನಗೊಂಡ ಪವನ, ಧನ್ಯ ನಮನ ತುಂಬಿ ಬಂತು ಹನಿ ಮನ ಅಚ್ಚರಿಯಲೇ ಕೆಳ ಸಾಗಿರಲು ಹನಿ ಭೂಲೋಕವೊಂದು ಹಸಿರ ಖನಿ ಗಿರಿಯಂಚಲಿ ಗರಿಗೆದರಿ ನಲಿವ ಮಯೂರ ಸಿಹಿಗನಸೊಂದರ ಸುಂದರ ಸಾಕಾರ ಮೈ ಮುರಿದು ಅರಳಲು ಸಜ್ಜಾದ ಮೊಗ್ಗೊಂದು ಭೂಸ್ಪರ್ಶಕೆ ಅಣಿಗೊಂಡ ಹನಿಯ ಹೊಳಹು ಕಂಡು ಸುತ್ತ ನೆರೆದ ಜೀವರಾಶಿಗೆ ಸಾರಿತು ಸವಿದುಂದುಭಿ ಸಡಗರದ ಸೌರಭ, ಹನಿಗೆ ಭುವಿಯ ಭವ್ಯಾದರ ಮುಗಿಲುಗಳು ದೂರಾಗಿ ಹಸಿರಿನ ಪಲ್ಲಕ್ಕಿ ಸನ್ನಿಹಿತವಾಗಲು ಮಣ್ಣಿನ ಬಣ್ಣವು ಸೆಳೆದು ನಗೆಯ ಬೀರಿರಲು ಇಳೆಯ ಕೋಮಲ ಕೈಗಳು ಆಲಿಂಗನಕೆ ಹಂಬಲಿಸಿರಲು ಹನಿಯ ಕಣ್ಣಲಿ ಆನಂದಬಾಷ್ಪದ ಮಿನುಗು ಅಪ್ಪುಗೆಯ ಆ ಕ್ಷಣ, ಒಲುಮೆಯ ಮಿಡಿತ ಎಳೆ ಮೈಯ ಮುದ್ದಾದ ಕುಡಿಯ ಮೊಳೆತ ಅಲೆಯೆದ್ದು ಹೊರಟ ಮಣ್ಣಿನ ಸೌಗಂಧ ಪ್ರಾಣಹನಿಯ ಭೂಪಯಣವೇ ಅದಕೆ ಪರಮಪದ!