Posts

Showing posts from April, 2010

ಹೋಗೋಣವೆ ಕನಸಿನೂರಿಗೆ...

ಇಂಚರದ ಹಕ್ಕಿಯಾಗಿ ನೀ ಭುವಿಗೆ ಬಂದ ದಿನವಿದು ಹೊಳೆವ ಕಣ್ಣುಗಳ ಜಗಕೆ ತೋರಿದ ದಿನವಿದು ಅಮ್ಮನ ಮಡಿಲನು ತುಂಬಿ ಬಾಳ ಬೆಳಕಾದ ದಿನವಿದು ಕೈ ಹಿಡಿದ ಪ್ರಾಣಸಖಿ ನಿನ್ನ ಜನುಮ ದಿನವಿದು ಹೇಳು ಗೆಳತಿ ತೆರಳೋಣವೆ ಸಂಭ್ರಮಿಸಲು ಅಂದು ಕನಸಿನಲಿ ನಾ ಕಂಡ ಊರಿಗೆ ಹೇಗೆ ಬಣ್ಣಿಸಲಿ ಅಲ್ಲೇನಿದೆಯೆಂದು ಯಾರೂ ಕಂಡಿರದ ಮೋಹಕ ತಾಣವದು ಕಡಲ ಅಲೆಯಂತೆ ಉಕ್ಕಿ ಉಕ್ಕಿ ನಾನಲ್ಲಿ ಬಂದಂತೆ ಅಪ್ಪಿ ಅಪ್ಪಿ ಕಳಿಸಲು ಕಿನಾರೆಯಾಗಿ ನೀನೇ ನಿಂತಂತೆ ನಿನ್ನನರಸಿ ಬರುವ ನಾನಲ್ಲಿ ದುಂಬಿಯಂತೆ ಮಲ್ಲಿಗೆಯಾಗಿ ಘಮ್ಮೆಂದು ನೀನೇ ಅರಳಿದಂತೆ ನೀನಲ್ಲಿ ಮುಗಿಲನೇ ದಿಟ್ಟಿಸುತ ಶಿಲೆಯಾಗಿ ನಿಂತಂತೆ ಮಳೆಯಾಗಿ ಸುರಿದು ನಾ ನಿನ್ನ ಆವರಿಸಿದಂತೆ ಕಾನನದಿ ಮೌನಿಯಾಗಿ ನಾನಲ್ಲಿ ಅಲೆದಂತೆ ಕುಹು ಗಾನದ ಕೋಗಿಲೆಯಾಗಿ ನೀ ಬಂದು ಕೂಗಿದಂತೆ ಅಗಲಿಸುವರಿಲ್ಲ ನಲ್ಲೆ ನಮ್ಮನಲ್ಲಿ ತೆಕ್ಕೆಯೊಳು ಸೇರಿದರೆ ಸಮಯವೇ ನಿಂತಂತೆ ನಾ ನನ್ನನು ನೀ ನಿನ್ನನು ಮರೆತಂತೆ ಇರಲಾರದು ನಮಗಲ್ಲಿ ಇನ್ನಾವ ಚಿಂತೆ ಕನಸು ಕೈ ಜಾರುವ ಮೊದಲು ಕನಸೊಳು ಜಾರೋಣ ಕಾಣಲಾರೆಯ ಆಕಾಶದಿ ಕದವೊಂದು ತೆರೆದಿದೆ ನಿನ್ನ ಹುಟ್ಟು ಹಬ್ಬದ ಸಡಗರಕಾಗಿ ಆ ಮಾಯಾನಗರಿಗೆ ಹಾರೋಣ ಜೊತೆಯಾಗಿ

ಸಲಹಿ ಹೋದವಳ ಕುರಿತು

ತಾರೆಗಳ ತೋರಿಸಿ ಮಿನುಗುವಾಸೆ ಬೆಳೆಸಿದೆ ಹೂಬನವ ಹಬ್ಬಿಸಿ ಪ್ರೀತಿಯ ಅರಳಿಸಿದೆ ಗೀಚುವ ಬೆರಳಲ್ಲಿ ಸುಂದರ ಕಲೆ ತುಂಬಿದೆ ನಿನ್ನ ಕೂಸು ನಾ ನಿನಗೆ ನೆನಪಾಗದೆ ಹೋದೆ ನಿನ್ನ ಕನಸುಗಳನೆಲ್ಲ ಬಲಿ ಕೊಟ್ಟು ಆಕಾಶದಾಚೆಗಿನ ಕರೆಗೆ ಓಗೊಟ್ಟು ಎಲ್ಲ ಚಿಂತೆಗಳ ಮರೆತಂತೆ ಮೈಕೊಡವಿ ಹೊರಟು ನಿಂತೆ ಹಿಂತಿರುಗಿ ನೋಡಬಾರದಿತ್ತೇನು? ದುಗುಡಗೊಂಡ ಪುಟ್ಟ ಹೃದಯ ನಿನ್ನೆಡೆಗೆ ಕೈಚಾಚಿ ನಿಂತಿತ್ತು ಎಲ್ಲ ತಿಳಿದ ವಯಸೇನಲ್ಲ ಅದು ಮನಸು ಭಾರವಿದ್ದರೇನು, ನಾನಿರಲಿಲ್ಲವೇನು ಬದುಕು ದುಸ್ತರವಿದ್ದರೇನು, ನನ್ನ ಹೆಗಲಿರಲಿಲ್ಲವೇನು ಕಣ್ಣಿಗೆ ದೂರವಾಗಿ ನೀನೆಲ್ಲಿದ್ದರೇನು ನನ್ನೊಳಗಿನ ನಿನಗೆ ಈ ಮೊರೆ ಕೇಳಿಸದಿರುವುದೇನು?!