Posts

ಚಿತ್ರಶಾಲೆ

ಜಿನುಗುತ ಮಿನುಗುತ ಸವಿಗಾನವ ಗುನುಗುತ ಧರೆಗೆ ಲಗ್ಗೆ ಇಟ್ಟಿದೆ ಮುಂಗಾರು ಕನಸುಗಳ ಕಟ್ಟುತ ಕಂಗಳ ಕೋರೈಸುತ ಬಿತ್ತರಗೊಂಡಿವೆ ಬಣ್ಣಗಳು ನೂರಾರು ಕಪ್ಪು-ಬಿಳುಪಿನ ಮುಗಿಲ ಪರದೆಗಳಲಿ ಮುದ್ದಾಗಿ ಮೂಡಿದೆ ನೆನಪಿನ ಚಿತ್ರಾವಳಿ ಜಡಿಮಳೆಯ ಹಸಿಬಣ್ಣಗಳನು ಎರಚಿದೆ ತಂಗಾಳಿ ಆರ್ದ್ರವಾಗಿದೆ ಮನವು ಓಕುಳಿಯಲಿ ತರು-ಲತೆಗಳ ಬೇರಿನಡಿಯಲಿ ಮನಬಿಚ್ಚಿ ಅರಳಿದೆ ಮಣ್ಣಿನ ಕೆಂಬಣ್ಣ ನೇಗಿಲ ಹೊತ್ತು ನಿದ್ದೆಯ ಮರೆತ ಕೃಷಿಕನ ಕಣ್ತುಂಬಿದೆ ಆಶಾಕಿರಣದ ಹೊಂಬಣ್ಣ ಸುಮಗಳ ಸೊಬಗು ಭ್ರಮರಕೆ ಸಮ್ಮೋಹದ ಗುಂಗು ಮಕರಂದವ ಜೇನಾಗಿಸಿದೆ ಅನುರಾಗದ ರಂಗು ಅವಿನಾಭಾವ ಬಂಧಗಳ ಬೆಸೆಯಲು ಸಾಕೇನು ಏಳೇ ಬಣ್ಣ? ಚಿಟ್ಟೆಯ ರೆಕ್ಕೆಗೆ ಚಿತ್ತಾರದ ಮೊಹರು ಸೋನೆಯ ಸಿಂಚನಕೆ ಜಗವೆಲ್ಲ ಹಸಿರು ರಂಗೇ ಇರದ ಜಲವು ಅವನಿಯ ರಂಗೇರಿಸುವುದೆಂತು? ಋತುಗಳ ಲೀಲೆಯೋ ಪ್ರಕೃತಿಯ ಬಗೆಯೋ!

ಅವಸಾನ

ಇನ್ನೂ ಬದುಕುಳಿದಿರುವೆ, ಅರೆಜೀವಂತಿಕೆಯಲಿ ತಿಳಿದವರಿಗೆ ನಾನೊಂದು ಕಪೋತವಷ್ಟೆ ಲಾಭವೇನು ನನ್ನಿಂದ ಯಾರಿಗೆ? ಹೆಸರು ನನ್ನದು ನೆನಪಿದೆ ಯಾರಿಗೆ? ಹಾಗೂ ಹೀಗೂ ಸವಕಲು ರೆಕ್ಕೆಗಳ ಬಡಿಯುತ್ತ ಮೇಲೇರುವೆ.ಮೊದಲಿನಂತಲ್ಲ. ಹೆಚ್ಚು ಹಾರಲಾರೆ ಆಗಸವೆಲ್ಲ ಕೆಂಪು ಕೆಂಪು ಮುಸ್ಸಂಜೆಯ ನಸುಗೆಂಪಲ್ಲ ಅದು ಸಿಡಿದ ಹಸಿನೆತ್ತರ ಗಾಢ ಕೆಂಪು ಬಾನೆತ್ತರದ ಕನಸುಗಳೆಲ್ಲ ಮಿಂದಿವೆ ಇದೇ ರಕ್ತವರ್ಣದಲ್ಲಿ ಎದೆ ನಡುಗುವುದು ಒಮ್ಮೆಲೆ ಕಿವಿಗಡಚಿಕ್ಕುವ ಅಟ್ಟಹಾಸಕೆ ಅದೆಂಥದ್ದೊ ಬೀಭತ್ಸ ರೂಪ ಗುರುತಿಗೇ ಸಿಗದ ಆಕಾರ ಹಿಂದೊಮ್ಮೆ ಮನುಷ್ಯನಂತಿದ್ದ ತಾ ಹೇಳಿದ್ದೇ ನೀತಿ,ಮುನ್ನುಗ್ಗಿದ್ದೇ ಪ್ರಗತಿ ಆಳದಲ್ಲೆಲ್ಲೋ ದಳ್ಳುರಿಯ ಹೊತ್ತಿಸಿಕೊಂಡು ವಿಷಮಕೊಳದಲ್ಲಿ ಜೀಕುತಿಹನಿಂದು ಇನ್ನು ಹಾರಲಾರನೇನೋ! ಗಾಳಿಯೂ ಕುದಿಯುತಿದೆ ಇನ್ನೆಷ್ಟು ಹಗುರಾಗಲಿ? ಉರಿವ ಕೊಳ್ಳಿಯಾದರೂ ಆರೀತು ಉರಿಸುವ ಕೈಗಳು ತಣ್ಣಗಾದಾವೆ?

ಕಾವ್ಯ ಸಂಭವ

ಪದಗಳ ನಡುವಿನಿಂದ ಬೆಳಕೊಂದು ಹೊರಟಿದೆ ಭಾವ ಸಾಗರವ ಉದ್ದೀಪಿಸುತ ಗಾಳಿಗೆ ಸಿಕ್ಕ ಹೊಗೆಯಂತೆ ಸಾಗಿದೆ ಅಮೂರ್ತ ರೂಪಗಳ ಪಡೆಯುತ ಭಾಷೆ-ಪ್ರಾಸಗಳ ಸಂಕೋಲೆಗಳ ಲೆಕ್ಕಿಸದೆ ಪ್ರಶ್ನೆ-ತರ್ಕಗಳ ಹಿಡಿತಗಳಿಗೆ ನಿಲುಕದೆ ಭಾಸಗಳ ಜಗವ ಹುಟ್ಟು ಹಾಕುತ ಅಗೋಚರ ದಿಕ್ಕುಗಳ ಕವಲುಗಳ ಹೊಳೆಸಿದೆ ಬದುಕಿನ ಸಂದುಗೊಂದುಗಳಲಿ ನುಸುಳುತ ಸಂವೇದನೆಗಳ ಹಾಯ್ದು ಹಂದರದಂತೆ ಹಬ್ಬುತಲಿದೆ ನೆರಳೊಳು ಪ್ರತಿಮೆಯ ಮೂಡಿಸಿ ಎಲ್ಲವನು ವ್ಯಾಪಿಸುತ ಹಿಗ್ಗುತಿದೆ ಅನುಭವಗಳ ಲೋಕದಿಂದ ಅನುಭಾವದ ಕ್ಷಿತಿಜದೆಡೆಗೆ ಮನವ ತೇಲಿಸಿಕೊಂಡು ಕರೆದೊಯ್ಯುತಲಿದೆ ಹಿಂದೆ ಕಾಣದ ಒಳನೋಟವೊಂದು ತೆರೆದುಕೊಳ್ಳುತಿರಲು ಕವಿತೆಯೊಂದು ಜನ್ಮತಾಳಿ ನಿಂತಿದೆ

ನನ್ನ ಪ್ರಶ್ನೆ

ನಾನೇನು ಬಲ್ಲೆನು? ಬಲ್ಲೆನೆಂದು ಹೇಳುವುದ ಬಿಟ್ಟು ಅರೆಪಾವು ವಿದ್ಯೆ, ಚಟಾಕು ತಿಳುವಳಿಕೆ ಆತ್ಮವಿಮರ್ಶೆ, ಅದೇನದು? ನಾನೇನು ಬಲ್ಲೆನು? ಜಾಡಿಸಿ ತೊಳೆದರೂ ಮರುಕಳಿಸುವುದು ಮನದ ಕೋಣೆಯಲ್ಲಿ ಗರ್ವದ ಧೂಳು ಬೆಸೆದುಕೊಂಡಿದೆ ಅಹಮ್ಮಿನ ಬಲೆಯೊಡನೆ ಪರರ ಹೊಗಳಲು ಭುಗಿಲೇಳುವುದು ಮತ್ಸರ ಬಲ್ಲೆನೆಂದು ನಾ ನನಗೇ ಹೇಳಿಕೊಳ್ಳುವ ಸುಳ್ಳು ನುಡಿಯು ಮಾರುದ್ದ ನಡೆಯು ಗೇಣುದ್ದ ನುಡಿಯ ನಡೆಸಬಲ್ಲೆನೆ? ನಾನೇನು ಬಲ್ಲೆನು? ಬೇಕಾಗಿದೆಯೊಂದು ಮಾಯಾದರ್ಪಣ ಮನದ ಮುಖವ ನೋಡಲು ಅದರ ಕೋರೆಗಳ ಕಾಣಲು ವಿಕೃತಿಗಳ ಎತ್ತಿ ತೋರಿಸಲು ಆಗಿಬಿಡಲಿ ಭ್ರಮನಿರಸನ ಹುಚ್ಚು ಮನಸಿನ ರೂಪದರ್ಶನ ಅದೆಲ್ಲಿರುವುದು ದರ್ಪಣ? ನಾನೇನು ಬಲ್ಲೆನು?

ಕಾಯುತಲೇ ಇರುವೆನು...

ಕಾಯುತಲೇ ಇರುವೆನು ನೊಂದು ಕೊನೆಗೊಳಿಸುವೆ ಇದನೆಲ್ಲ ನೀನೆಂದು ಹಿಂದೆ ನೀ ಹೀಗಿರಲಿಲ್ಲ ನನ್ನೊಡಲಿಗೇ ಕೊಡಲಿಯಿಡುತ್ತಲಿರಲಿಲ್ಲ ನಿನ್ನ ಸ್ವಾರ್ಥಕೆ ದುಡುಕಿ ನನ್ನ ಹೂಗಳ ಹೊಸಕಿ ಎಷ್ಟೆತ್ತರದ ಸೌಧವ ಕಟ್ಟುವೆ? ಎಂಥ ಬದುಕು ನಡೆಸುವೆ? ನನ್ನ ಹಣ್ಣು ನಿನಗಿನ್ನು ಬೇಡವೇನು? ನನ್ನ ನೆರಳು ಸುಡುವ ಬಿಸಿಲಾಯಿತೇನು? ಆ ಹಕ್ಕಿಯ ಮರಿಗಳಿಗೆ ಗೂಡಿಲ್ಲ ಗೋವು ಶ್ವಾನಗಳಿಗೆ ಸೂರಿಲ್ಲ ಆರ್ತನಾದಗಳಿಗೆ ಅಭಯವೇ ಇಲ್ಲ ನಿನ್ನ ಸಾಧನೆಯೇ ನಿನಗೆಲ್ಲ ನಿನ್ನ ರೌದ್ರವ ನೀನರಿಯೆ ಹೇಳು,ಇದೆಲ್ಲಾ ನಿನಗೆ ಸರಿಯೆ? ಕಾಯುತಲೇ ಇರುವೆನು ನೊಂದು ನಿನಗೆ ಕರುಣೆ ಮರುಕಳಿಸುವುದೆಂದು ತುಸು ತಾಳ್ಮೆ ಬೆಳೆಯುವುದೆಂದು ನೀನು ನಿಜಕ್ಕೂ ಮಾನವನಾಗುವೆಯೆಂದು

ಅಲೆದಾಟದ ಜೊತೆಗಾರನಿಗೊಂದು ಪತ್ರ

ಗೆಳೆಯ, ಎಲ್ಲಿಂದ ಪ್ರಾರಂಭಿಸಬೇಕೊ ತಿಳಿಯುತ್ತಿಲ್ಲ. ಮೊನ್ನೆ ಜಯನಗರದ ೩ನೇ ಬ್ಲಾಕ್ ನ ಟ್ರಾಫಿಕ್ಕ್ ಸಿಗ್ನಲ್ಲಿನಲ್ಲಿ ನೀನು ಯಾವುದೋ ಯೋಚನೆಯಲ್ಲಿ ಕಳೆದು ಹೋಗಿ ಒಬ್ಬೊಬ್ಬನೆ ನಗುತ್ತಾ ಬರುವುದನ್ನು ನಾನು ದೂರದಿಂದಲೇ ನೋಡಿದ ಕ್ಷಣದಿಂದಲೋ ಅಥವಾ ೩ ವರ್ಷಗಳ ಹಿಂದೆ ವಿಪ್ರೋ ಸಂಸ್ಥೆ ಸೇರಿದ ಹೊಸತರಲ್ಲಿ ತರಬೇತಿಯ ತರಗತಿಗಳಲ್ಲಿ ನಾವಿಬ್ಬರೂ ಎದುರಾಗಿ ಪರಿಚಯಗೊಂಡ ಕ್ಷಣದಿಂದಲೋ. ನಾವು ಭೇಟಿಯಾದಾಗ ನನ್ನ-ನಿನ್ನ ಸ್ನೇಹದ ಸೇತುವಾಗಿದ್ದು ಬರಿ ಮೇಲ್ಮೇಲಿನ ಪರಿಚಯವಷ್ಟೆ. ಈಗ ಆ ಸೇತುವೆಗೆ ಒಡನಾಟ, ಪುಸ್ತಕಗಳು, ಸಾಹಿತ್ಯ, ನಾಟಕ, ಭೈರಪ್ಪನವರ ವೈಚಾರಿಕತೆ ಎಂಬ ಅಮೂರ್ತ ಸ್ತಂಭಗಳು ಹುಟ್ಟಿಕೊಂಡಂತೆ ತೋರುತ್ತಿದೆ. ಜೀವನವನ್ನು ನಾವು ಕೆಲವೊಮ್ಮೆ ಖುಷಿಯಿಂದ ಕಳೆದಿರುತ್ತೇವೆ, ಹಾಗೆಯೇ ದುಃಖದಲ್ಲಿ ಬೆಂದೂ ಇರುತ್ತೇವೆ. ನಗು, ಅಳು, ಮೌನ, ಅಸಮಾಧಾನ ಇತ್ಯದಿ ವಿವಿಧ ಭಾವನೆಗಳ ಅಲೆಗಳು ಅಪ್ಪಳಿಸಿರುತ್ತವೆ. ಹೀಗೆ ಗತಿಸಿದ ಕ್ಷಣಗಳು ನೆನಪುಗಳಾಗಿ ಆಗೊಮ್ಮೆ ಈಗೊಮ್ಮೆ ಬದುಕೆಂಬ ಪಯಣದ ಹೆದ್ದಾರಿಯಲ್ಲಿ ತಂಗುದಾಣಗಳಂತೆ ಕಾಣುತ್ತವೆ. ನಮ್ಮ ಮುಂದೆ ಸರಿಯುತ್ತಿರುವ ಕಾಲ ಮತ್ತು ನಮ್ಮನ್ನೂ ಒಳಗೊಂಡು ನಾಟಕವಲ್ಲದ ನಾಟಕದಂತೆ ನಡೆಯುವ ಘಟನಾವಳಿಗಳು ಒಂದು ರೀತಿಯಲ್ಲಿ ವಿಶಿಷ್ಟವೆನಿಸಿ "ಇದು ನನ್ನ ಬಾಳಿನಲ್ಲಿ ಮರೆಯಲಾಗದ ನೆನಪಾಗಿ ಉಳಿಯುತ್ತದೆ" ಎಂದು ನಮಗೆ ಆ ಕ್ಷಣವೇ ಅನಿಸತೊಡಗುವುದು ಸೋಜಿಗವೆನಿಸುತ್ತದೆ. ಮೊನ್ನೆ ಶನಿವಾರ ನಾವಿಬ್ಬರೂ ಇಂಡಿಯನ್ ಇನ್ಸ...

ಆವರಿಸು ಬಾ ಒಲವೆ!

ಪಿಸುಮಾತುಗಳ ಪಯಣದೊಳೊಂದು ಮೌನದ ನಿಲ್ದಾಣ ನೋಟಗಳು ಹಾಡಿವೆ ನಲ್ಮೆಯ ಸವಿಗಾನ ರೆಪ್ಪೆಗಳ ನಡುವಲುಂಟು ಹೊಸದೊಂದು ಜಗ ಸೋತ ಹೃದಯಗಳಲಿ ಮೂಡಿದೆ ಅನುರಾಗ ಅನುಪಮವೀ ಭಾವವು ನಲಿದಾಡಿದೆ ಜೀವವು ಆವರಿಸು ಬಾ ಒಲವೆ ಬೆಚ್ಚಗಾವರಿಸು ಬಾ ಎದುರಿರಲು ಸಂಗಾತಿ ಹೃದಯದ ಧಾವಂತ ಮನದ ಸುತ್ತಲೂ ಕನಸುಗಳ ದಿಗಂತ ಬಣ್ಣದ ಬಾನಲಿ ಪ್ರೇಮದ ಬಾನುಲಿ ಮಾತೆಲ್ಲ ಮುಗಿದು ಮೌನವೊಂದೇ ಹಾಡಲಿ ದನಿಗೂಡಿಸು ಬಾ ಒಲವೆ ಶೃತಿ ಸೇರಿಸು ಬಾ ||ಪ|| ಕೈಗಳು ಕೂಡಿವೆ ಹೊಸ ಬಂಧನದಲಿ ಮನಗಳು ಬೆರೆತಿವೆ ಆಲಿಂಗನದಲಿ ವಿರಹದ ಗಾಯವು ಮಾಯುವಂತೆ ಮುನಿಸಿನ ಬಿಸಿಯು ತಣಿಯುವಂತೆ ನೇವರಿಸು ಬಾ ಒಲವೆ ಮೈಮರೆಸು ಬಾ ||ಪ|| ( ಇಲ್ಲ ಇಲ್ಲ ನಾನೇನೂ ಪ್ರೇಮ ಪಾಶಕ್ಕೆ ಸಿಲುಕಿಲ್ಲ!! ನನ್ನ ಗೆಳೆಯ ಚರಣನ ಸ್ನೇಹಿತರೊಬ್ಬರು ಕಿರುಚಿತ್ರವೊಂದನ್ನು ನಿರ್ದೇಶಿ ಸು ತ್ತಿದ್ದಾರೆ ಎಂದೂ ಅವರಿಗೆ ಒಂದು ಪ್ರೇಮ ಗೀತೆಯನ್ನು ರಚಿಸಿಕೊಡಬೇಕೆಂದೂ ಚರಣ ಅದೊಂದು ದಿನ ನನಗೆ ದೂರವಾಣಿಯಲ್ಲಿ ಹೇಳಿದ್ದ. ನನಗೂ ಪ್ರಯತ್ನಿಸಲು ಹೇಳಿದ್ದ. ಗೀತೆರಚನೆಯಲ್ಲಿ ನನ್ನ ಮೊದಲ ಪ್ರಯೋಗದ ಫಲ. ಇಷ್ಟಲ್ಲದೆ ಮತ್ತೇನೂ ಅಲ್ಲ!!! )