Posts

ಕನಸಿನ ಕೊಡೆ

ಗುಂಡಿಯೊತ್ತಿದರೆ ಸಾಕು ಛಕ್ಕನೆ ತೆರೆದುಕೊಳ್ಳುತ್ತಿ ಬರಿ ಅಷ್ಟೇ ಅಲ್ಲ! ನನ್ನ ಪಾಲಿನ ಪುಟ್ಟದೊಂದು ಆಗಸ ತೆರೆದಿಡುತ್ತಿ ಮಳೆ ಹುಯ್ದರಂತೂ ನಿನ್ನ ಮೈ ತುಂಬಾ ಹಿತವಾದ ಚಿಟಪಟ ಸದ್ದು ನಿನ್ನ-ಹನಿಗಳ ನಡುವೆ ಶುರುವಾಗುವುದು ಮುದ್ದು ಮಾತುಗಳ ಸಲ್ಲಾಪ ಸುತ್ತಣ ಜಗವೆಲ್ಲ ಮಸುಕಾಗುವುದು ಹೌದು ನೋಡು. ನೀನೆ ಒಂದು ಆಕಾಶ ಚಂದಿರನಿಲ್ಲ ತಾರೆಗಳಿಲ್ಲವಾದರೂ ನನ್ನ ಕನಸುಗಳಿವೆಯಲ್ಲ ಒಂದೊಂದಾಗಿ ಪೇರಿಸಿಡುವೆ ಅಲ್ಲಲ್ಲಿ ಮತ್ತೆ ಸುಮ್ಮನಾಗಿ ನೋಡಿದರೆ ಫಳಫಳನೆ ಹೊಳೆವುವು ಹಾಗೇ ಮಡಸಿಟ್ಟರೆ ನನ್ನ ಕನಸುಗಳೆಲ್ಲವೂ ನಿನ್ನ ಮಡಿಲಲ್ಲಿ ಜೋಪಾನ ಮೋಡ ಹನಿದರೆ ಬಿಸಿಲು ಉರಿದರೆ ಮಾತ್ರ ನಿನ್ನ ತೆರೆಯಬೇಕೆನ್ನುವರು ಎಲ್ಲ ಪಾಪ! ಅವರೇನು ಕಂಡಾರು ನಿನ್ನೊಳು ನಾ ಬಚ್ಚಿಟ್ಟಿರುವ ಅಷ್ಟೂ ಕನಸುಗಳನ್ನ!!

ಹೋಗೋಣವೆ ಕನಸಿನೂರಿಗೆ...

ಇಂಚರದ ಹಕ್ಕಿಯಾಗಿ ನೀ ಭುವಿಗೆ ಬಂದ ದಿನವಿದು ಹೊಳೆವ ಕಣ್ಣುಗಳ ಜಗಕೆ ತೋರಿದ ದಿನವಿದು ಅಮ್ಮನ ಮಡಿಲನು ತುಂಬಿ ಬಾಳ ಬೆಳಕಾದ ದಿನವಿದು ಕೈ ಹಿಡಿದ ಪ್ರಾಣಸಖಿ ನಿನ್ನ ಜನುಮ ದಿನವಿದು ಹೇಳು ಗೆಳತಿ ತೆರಳೋಣವೆ ಸಂಭ್ರಮಿಸಲು ಅಂದು ಕನಸಿನಲಿ ನಾ ಕಂಡ ಊರಿಗೆ ಹೇಗೆ ಬಣ್ಣಿಸಲಿ ಅಲ್ಲೇನಿದೆಯೆಂದು ಯಾರೂ ಕಂಡಿರದ ಮೋಹಕ ತಾಣವದು ಕಡಲ ಅಲೆಯಂತೆ ಉಕ್ಕಿ ಉಕ್ಕಿ ನಾನಲ್ಲಿ ಬಂದಂತೆ ಅಪ್ಪಿ ಅಪ್ಪಿ ಕಳಿಸಲು ಕಿನಾರೆಯಾಗಿ ನೀನೇ ನಿಂತಂತೆ ನಿನ್ನನರಸಿ ಬರುವ ನಾನಲ್ಲಿ ದುಂಬಿಯಂತೆ ಮಲ್ಲಿಗೆಯಾಗಿ ಘಮ್ಮೆಂದು ನೀನೇ ಅರಳಿದಂತೆ ನೀನಲ್ಲಿ ಮುಗಿಲನೇ ದಿಟ್ಟಿಸುತ ಶಿಲೆಯಾಗಿ ನಿಂತಂತೆ ಮಳೆಯಾಗಿ ಸುರಿದು ನಾ ನಿನ್ನ ಆವರಿಸಿದಂತೆ ಕಾನನದಿ ಮೌನಿಯಾಗಿ ನಾನಲ್ಲಿ ಅಲೆದಂತೆ ಕುಹು ಗಾನದ ಕೋಗಿಲೆಯಾಗಿ ನೀ ಬಂದು ಕೂಗಿದಂತೆ ಅಗಲಿಸುವರಿಲ್ಲ ನಲ್ಲೆ ನಮ್ಮನಲ್ಲಿ ತೆಕ್ಕೆಯೊಳು ಸೇರಿದರೆ ಸಮಯವೇ ನಿಂತಂತೆ ನಾ ನನ್ನನು ನೀ ನಿನ್ನನು ಮರೆತಂತೆ ಇರಲಾರದು ನಮಗಲ್ಲಿ ಇನ್ನಾವ ಚಿಂತೆ ಕನಸು ಕೈ ಜಾರುವ ಮೊದಲು ಕನಸೊಳು ಜಾರೋಣ ಕಾಣಲಾರೆಯ ಆಕಾಶದಿ ಕದವೊಂದು ತೆರೆದಿದೆ ನಿನ್ನ ಹುಟ್ಟು ಹಬ್ಬದ ಸಡಗರಕಾಗಿ ಆ ಮಾಯಾನಗರಿಗೆ ಹಾರೋಣ ಜೊತೆಯಾಗಿ

ಸಲಹಿ ಹೋದವಳ ಕುರಿತು

ತಾರೆಗಳ ತೋರಿಸಿ ಮಿನುಗುವಾಸೆ ಬೆಳೆಸಿದೆ ಹೂಬನವ ಹಬ್ಬಿಸಿ ಪ್ರೀತಿಯ ಅರಳಿಸಿದೆ ಗೀಚುವ ಬೆರಳಲ್ಲಿ ಸುಂದರ ಕಲೆ ತುಂಬಿದೆ ನಿನ್ನ ಕೂಸು ನಾ ನಿನಗೆ ನೆನಪಾಗದೆ ಹೋದೆ ನಿನ್ನ ಕನಸುಗಳನೆಲ್ಲ ಬಲಿ ಕೊಟ್ಟು ಆಕಾಶದಾಚೆಗಿನ ಕರೆಗೆ ಓಗೊಟ್ಟು ಎಲ್ಲ ಚಿಂತೆಗಳ ಮರೆತಂತೆ ಮೈಕೊಡವಿ ಹೊರಟು ನಿಂತೆ ಹಿಂತಿರುಗಿ ನೋಡಬಾರದಿತ್ತೇನು? ದುಗುಡಗೊಂಡ ಪುಟ್ಟ ಹೃದಯ ನಿನ್ನೆಡೆಗೆ ಕೈಚಾಚಿ ನಿಂತಿತ್ತು ಎಲ್ಲ ತಿಳಿದ ವಯಸೇನಲ್ಲ ಅದು ಮನಸು ಭಾರವಿದ್ದರೇನು, ನಾನಿರಲಿಲ್ಲವೇನು ಬದುಕು ದುಸ್ತರವಿದ್ದರೇನು, ನನ್ನ ಹೆಗಲಿರಲಿಲ್ಲವೇನು ಕಣ್ಣಿಗೆ ದೂರವಾಗಿ ನೀನೆಲ್ಲಿದ್ದರೇನು ನನ್ನೊಳಗಿನ ನಿನಗೆ ಈ ಮೊರೆ ಕೇಳಿಸದಿರುವುದೇನು?!

ನಿನಗೆಂದೇ...

ನಿನಗೆಂದೇ, ಜೀವವೊಂದು ಕುಣಿದಾಡಿ ಕಾದು ನಿಂತಿದೆ ನಿನ್ನದೇ ನಗೆಯ ಹೊನಲಿಗೆ ಕಣ್ಣರಳಿಸಿ ನಿನ್ನದೇ ಕೊರಳ ಗಾನಕ್ಕೆ ಕಿವಿಗೊಟ್ಟು ನಿನ್ನ ಕೈ ಹಿಡಿದು ಜೊತೆ ಸಾಗಲು ಕಾದು ನಿಂತಿದೆ ನಿನಗೆಂದೇ... ನಿನಗೆಂದೇ, ಸಣ್ಣ ಮಾತೊಂದು ಅಡಗಿ ಕೂತಿದೆ ಉಸಿರ ಬಿಗಿ ಹಿಡಿದು ನೀ ನಸುನಾಚುವೆಯೆಂದು ನೀ ಓರೆ ನೋಟವ ಬೀರುವೆಯೆಂದು ಅಡಗಿ ಕೂತಿದೆ ನಿನಗೆಂದೇ... ನಿನಗೆಂದೇ, ಕಾಗದವೊಂದು ನವಿರಾಗಿದೆ ಒಲವಿನ ಓಲೆಯಾಗಲು ನಿನ್ನ ಕೈ ಸೇರಿ ಭಾವಲೋಕವ ತೆರೆದಿಡಲು ಪದಗಳಲ್ಲಿನ ಸ್ವರಗಳ ನುಡಿಸಲು ಮತ್ತೆಲ್ಲವನ್ನೂ ಮರೆಸಿ ಪರವಶಳಾಗಿಸಲು ನವಿರಾಗಿದೆ ನಿನಗೆಂದೇ.... ನಿನಗೆಂದೇ, ಹೃದಯವೊಂದು ತಲ್ಲಣಿಸಿದೆ ನಿನ್ನದೇ ಹೂಬಾಣಗಳ ದಾಳಿಗೆ ಸಿಲುಕಿ ಸಿಹಿನೋವಿನ ಗುಂಗಿನಲಿ ನಿನಗಷ್ಟೆ ಕೇಳುವಂತೆ ಸಿಹಿ ಮಾತೊಂದನು ಉಲಿಯುತ ತಲ್ಲಣಿಸಿದೆ ನಿನಗೆಂದೇ....

ಬುಗುರಿಯಾಟ

ತೋಳ್ಬಲವು ಚಾವಟಿಯಲಿ ಹರಿದಾಡಿ ತಿರುತಿರುಗುವ ನರ್ತನಕೆ ನೂಕಿದೆ ಬುಗುರಿಯನು ಭವದ ದುಃಖದ ವರ್ತುಲಗಳ ದಾಟಿ ನೆಮ್ಮದಿಯ ಬಿಂದುವನರಸಿದಂತಿದೆ ಎಂದೋ ತಪ್ಪಿದ್ದ ನಿಯಂತ್ರಣ ಮರುಕಳಿಸಿದಂತಿದೆ ಗಿರಗಿರನೆ ತಿರುಗುತ ಪಡೆದಿದೆ ಆವೇಗ ಯಾರ ಹಂಗೂ ಬೇಡವಾಗಿ ಮರೆತಂತಿದೆ ಮೈಮನ ನಿಲುವು ಸ್ವತಂತ್ರ, ಸ್ಥಿತಿ ನಿರ್ಭಾರ ಬೇಕಿಲ್ಲ ಇನ್ನಾವ ಆಧಾರ ಜಗಕೆಲ್ಲ ತಾನೇ ಕೇಂದ್ರ ತಗ್ಗುತಿರಲು ವೇಗ ಮೂಡಿದೆ ತಲ್ಲಣಗಳ ಕಂಪನ ಗುರುತ್ವದ ಸೆಳೆತಕೆ ತಲೆದೂಗುತ ಓಲಾಡಿದೆ ತನುವೆಲ್ಲ ಭ್ರಮಣೆಯ ಭ್ರಮೆ ಕಳೆದು ಭಾರವಾಗಿದೆ ತಲೆಯೆಲ್ಲ ಸೋತು ನೆಲಕ್ಕುರುಳಿದೆ ಬುಗುರಿ ಉಳಿದಿದೆ ಹಂಬಲ ತೀರದೆ ಚಾವಟಿಯ ಸಂಗವ ಕಟ್ಟಲು ಮತ್ತದೇ ಉನ್ಮತ್ತ ಆವರ್ತನೆಗೆ ಜಾರಲು!

ಗುಂಗು ಹಿಡಿಸುವ ಮಧುರಾನುಭವ

ಇತ್ತೀಚೆಗೆ ಬಿಡುಗಡೆಯಾದ ಸೋನು ನಿಗಮ್ ಹಾಡಿರುವ ಕನ್ನಡದ ಪ್ರಪ್ರಥಮ ಗೀತಗುಚ್ಛ (Music album) "ನೀನೇ ಬರೀ ನೀನೇ" - ಇದರಲ್ಲಿನ ಎಲ್ಲ ಹಾಡುಗಳೂ ಜಯಂತ್ ಕಾಯ್ಕಿಣಿಯವರ ಕಾವ್ಯಕುಂಚದಲ್ಲಿ ಮೂಡಿಬಂದಿರುವ ವರ್ಣಚಿತ್ರಗಳಂತಿವೆ. ಈ ಹಾಡುಗಳ ಸಾಲುಗಳು ಹಿಡಿಸುವ ಗುಂಗು ಮಧುರಾನುಭವಕ್ಕೆ ತಿರುಗುವುದು ಮನೋಮೂರ್ತಿಯವರ ಸಂಗೀತದಿಂದ. ಮೇಲುನೋಟಕ್ಕೆ ಪ್ರೇಮಗೀತೆಗಳೆನಿಸುವ ಈ ಹಾಡುಗಳು, ಕೇಳುತ್ತಾಹೋದಂತೆ ಘಜ಼ಲ್ ಗಳಲ್ಲಿರುವ ಭಾವತೀವ್ರತೆ, ಸುಗಮ ಸಂಗೀತದಲ್ಲಿ ಸಿಗುವ ಸರಳತೆ, ಕವಿತೆಗಳಲ್ಲಿನ ಮುಗ್ಧತೆ ಈ ಎಲ್ಲವನ್ನು ಒಟ್ಟಿಗೇ ನೀಡುತ್ತವೆ. ಎಲ್ಲ ಹಾಡುಗಳಿಗೂ ಸೋನು ನಿಗಮ್ ಏಕಮೇವ ಗಾಯಕ. ತನ್ನ ಪ್ರೇಯಸಿಯ ನೆನಪಿನಲ್ಲಿ ಹಾಡುವ, ಅಲೆದಾಡುವ ಯುವಕನೊಬ್ಬನ ಆರ್ತದನಿ ಈ ಗೀತೆಗಳಲ್ಲಿ ಕೇಳಿಬರುತ್ತದೆ. ಈ ಹಾಡುಗಳಿಗೆ ಯಾವುದೇ ನಾಯಕ ನಟ/ನಟಿಯ ಹಂಗಿಲ್ಲ, ಚಿತ್ರಕಥೆಯ ಕಟ್ಟುಪಾಡಿಲ್ಲ. ಹಾಡುಗಳಲ್ಲಿ ಬರುವ ಪ್ರೇಮಿಗಳು ಕಲ್ಪನೆಯಲ್ಲೆ ಕೇಳುಗರನ್ನು ಕಾಡುತ್ತಾರೆ. ಸರಳ ಸುಂದರ ಮನೋಲಹರಿಯೇ ಮಂಜುಳ ಗಾನವಾಗಿ ಹೊರಹೊಮ್ಮಿದಂತಿದೆ. ಕಾಯ್ಕಿಣಿಯವರ ಈ ಹಿಂದಿನ ಚಿತ್ರಗೀತೆಗಳಿಗೆ ಹೋಲಿಸಿದರೆ ಇವು ಸಿನೆಮಾ ಪರಿಭಾಷೆಯ ಚೌಕಟ್ಟಿನಿಂದ ಹೊರಸರಿದು ಕವಿತೆಗಳ ಛಾಯೆಯನ್ನು ಇನ್ನಷ್ಟು ಢಾಳಾಗಿ ಪಡೆದಿವೆಯೆನಿಸುತ್ತದೆ. ಪ್ರೀತಿ-ಪ್ರೇಮದ ವಿಷಯವಸ್ತುಗಳುಳ್ಳ ಕವಿತೆಗಳಲ್ಲಿ ಸಾಮನ್ಯವಾಗಿ ಕಾಣಸಿಗುವ ಸಿದ್ಧ ಪ್ರತಿಮೆಗಳನ್ನು ಮೀರಿ ಬಲು ವಿಭಿನ್ನವಾದ ಚಿತ್ರಣಗಳನ್ನು ತುಂಬಿ...

ಚಿತ್ರಶಾಲೆ

ಜಿನುಗುತ ಮಿನುಗುತ ಸವಿಗಾನವ ಗುನುಗುತ ಧರೆಗೆ ಲಗ್ಗೆ ಇಟ್ಟಿದೆ ಮುಂಗಾರು ಕನಸುಗಳ ಕಟ್ಟುತ ಕಂಗಳ ಕೋರೈಸುತ ಬಿತ್ತರಗೊಂಡಿವೆ ಬಣ್ಣಗಳು ನೂರಾರು ಕಪ್ಪು-ಬಿಳುಪಿನ ಮುಗಿಲ ಪರದೆಗಳಲಿ ಮುದ್ದಾಗಿ ಮೂಡಿದೆ ನೆನಪಿನ ಚಿತ್ರಾವಳಿ ಜಡಿಮಳೆಯ ಹಸಿಬಣ್ಣಗಳನು ಎರಚಿದೆ ತಂಗಾಳಿ ಆರ್ದ್ರವಾಗಿದೆ ಮನವು ಓಕುಳಿಯಲಿ ತರು-ಲತೆಗಳ ಬೇರಿನಡಿಯಲಿ ಮನಬಿಚ್ಚಿ ಅರಳಿದೆ ಮಣ್ಣಿನ ಕೆಂಬಣ್ಣ ನೇಗಿಲ ಹೊತ್ತು ನಿದ್ದೆಯ ಮರೆತ ಕೃಷಿಕನ ಕಣ್ತುಂಬಿದೆ ಆಶಾಕಿರಣದ ಹೊಂಬಣ್ಣ ಸುಮಗಳ ಸೊಬಗು ಭ್ರಮರಕೆ ಸಮ್ಮೋಹದ ಗುಂಗು ಮಕರಂದವ ಜೇನಾಗಿಸಿದೆ ಅನುರಾಗದ ರಂಗು ಅವಿನಾಭಾವ ಬಂಧಗಳ ಬೆಸೆಯಲು ಸಾಕೇನು ಏಳೇ ಬಣ್ಣ? ಚಿಟ್ಟೆಯ ರೆಕ್ಕೆಗೆ ಚಿತ್ತಾರದ ಮೊಹರು ಸೋನೆಯ ಸಿಂಚನಕೆ ಜಗವೆಲ್ಲ ಹಸಿರು ರಂಗೇ ಇರದ ಜಲವು ಅವನಿಯ ರಂಗೇರಿಸುವುದೆಂತು? ಋತುಗಳ ಲೀಲೆಯೋ ಪ್ರಕೃತಿಯ ಬಗೆಯೋ!