Posts

ಸೋನೆಯಲಿ ಕಳೆದುಹೋದ ಪದ್ಯ

ಅರ್ಧ ಗೀಚಿದ ಪದ್ಯ ಮನೆಯಲ್ಲಿ ಮುಗಿಸಿದರಾಯಿತೆಂದು ಕಿಸೆಯಲ್ಲೇ ತುರುಕಿಕೊಂಡು ನಿಲ್ದಾಣ ಬಂದೊಡನೆ ಹೊರಬಿದ್ದೆ ಬಸ್ಸಿನಿಂದ ಮನೆಯ ದಾರಿ ಹಿಡಿದು ಹೆಜ್ಜೆಯಿಕ್ಕುತ ಸಾಗಿರಲು ಕಂಡುಬಿಡಬೇಕೇ ಇವೆಲ್ಲ ಫಕ್ಕನೆ ಜಲಪಾತದ ಎರಚಲಿನಂಥ ಮಳೆಯಲಿ ಮುಗಿಲ ಬಿಂದುಗಳು ಅನಾಥವಾಗಿವೆ ನೆಲಕಪ್ಪಳಿಸಿ ಕಾರು ಬೈಕುಗಳ ಚೀರಾಟದಲಿ ನಡುಗಿ ಮಲಗಿದೆ ರಸ್ತೆ ಅಮ್ಮನ ಸೀರೆಗೆ ಬಿದ್ದಿದೆ ಕಂಕುಳಿಗಡರಿದ ಕಂದನ ಪಾದಕಂಟಿದ ಕೆಸರಿನ ಮೊಹರು ಗತ್ತು ತೊರೆದು ಕೂತಿದೆ ಕೊಡೆಯೊಂದು ಹೆಗಲಲಿ ಮೈದಾನ ಕೂಗಿದೆ ಮಕ್ಕಳನು ರಚ್ಚೆ ಹಿಡಿದ ಸೋನೆಗಂಜಿ ರಿಕ್ಷಾದೊಳಗಿನ ಸೀಟು ಹಪಹಪಿಸಿದೆ ಪಯಣಿಗನ ಬಿಸಿಯೊಡಲಿಗೆ ಖಿನ್ನನಾಗಿದ್ದಾನೆ ಫರ್ನೀಚರಿನಂಗಡಿಯವ ತೇವ ಕುಡಿದ ಮರದ ಮೇಜಿನ ಮುಂದೆ ಪುಳಕದಲಿ ನಗುತಿರುವನು ಬಜ್ಜಿಯಂಗಡಿಯವ ಜಾಲರಿ ಸೌಟಿನಲಿ ಹೆಕ್ಕಿದ ಚಿನ್ನದದಿರ ಕಂಡು ಎಚ್ಚರಗೊಂಡದ್ದು ನಾನು ಮನೆ ಸಮೀಪಿಸಿದಾಗಲೆ ಪದ್ಯದ ಉಳಿದರ್ಧ ಗೀಚಲು ಚೀಟಿ ಹೊರಗೆಳೆದರೆ ಅಕ್ಷರಗಳೆಲ್ಲ ಮಾಸಲು ಕವಿಯಾಗುವ ಹುಂಬತನ ಮರೆತು ಶೂ ಕಳಚಿಡಲು ಉಸಿರಾಡುವುದು ಶುಷ್ಕ ಪಾದ ನೆತ್ತಿಯಿಂದ ಜಾರಿದ ಹನಿ ನುಡಿಸುವುದು ಮಳೆಯ ನಿನಾದ! ಇದನ್ನು ಕೆಂಡಸಂಪಿಗೆಯಲ್ಲಿ ಓದಲು...

ಒಡೆದ ಹಾಲು

ಅಸುನೀಗಿವೆ ಸಿಹಿಯ ಕಣಗಳು ಒಣಗಿ ತೇಲಿದೆ ಕೆನೆಯ ಬನಿ ಮೈಯ್ಯ ತುಂಬಾ ತರಚು ಗಾಯಗಳು ಬಿಸಿಯ ನೀಡ ಹೋದದ್ದೇ ಶುರು ಕೊತಕೊತನೆ ಪಾತ್ರೆಯನೆ ನಡುಗಿಸುವ ಕಂಪನ! ಒಡೆದ ಹಾಲು ನೊಂದು ರೋದಿಸುತಲಿದೆ ಇನ್ನಿಲ್ಲವಾದ ಸವಿಯ ನೆನೆದು ದುಃಖತಪ್ತವಾಗಿದೆ ಉಬ್ಬಿ ಬಂದ ಹರುಷವ ಎತ್ತೆಸೆದು ಕೆನೆಯ ತೆಕ್ಕೆಯಲಿ ತೊನೆದು ಮತ್ತೆ ಮಡಿಲ ತುಂಬಿಸಿಕೊಳ್ಳುವ ಸಂಭ್ರಮಕಿಲ್ಲ ಎಡೆ ಇನ್ನೆಲ್ಲಿದೆ ಮಮತೆಯ ಕಾವು! ಬಿಗಿದಪ್ಪಿದ ಪಾತ್ರೆಗಿನ್ನು ಜಿಗುಪ್ಸೆ ಆವಿಯಾಗುತಲಿದೆ ಹಾಲಿನ ಕೊನೆಯುಸಿರು ಎದೆಬಡಿತ ನಿಂತು ಹುಳಿಯ ಕಳೆಯೊಂದು ಚಿಗುರೊಡೆದು ನಂಜಾಗಿಸಿದೆ ಮೈಯನು ಇದನ್ನು ಕೆಂಡಸಂಪಿಗೆಯಲ್ಲಿ ಓದಲು...

ಹಿಂತಿರುಗದಿರಿ ವಾಸ್ತವಕೆ

Image
ಮಲಗಿಬಿಡಿ ಬಾಲೆಯರೆ ಇರುಳ ಚಾದರವ ಪೂರ್ತಿ ಹೊದ್ದು ಅದ ನೇಯ್ದ ಮಾಂತ್ರಿಕನ ನೆನೆದು ದುಗುಡ ಭೀತಿಗಳ ತೊರೆದು ಕಣ್ಣಾಲಿಗಳ ತೆರೆಯದಿರಿ ನಿಶೆಯ ಹೆರಳು ಹರಡಿರಲು ಅರಳಿವೆ ಬಣ್ಣಗಳ ಹೊಮ್ಮಿಸಿ ಹೂಗಳು ಪರಿವೆಯ ಅರಿವೆ ಕಿತ್ತೆಸೆದು ಮರೆತು ಮಲಗಿರಿ ಎಚ್ಚರಗೊಂಡಿರೆ ಸ್ವಪ್ನದ ನಸುಕು ಒಡೆದು ಇಹದ ಕತ್ತಲೆ ಕವಿದೀತು ಮಿಸುಕಾಡಿ ಎಬ್ಬಿಸಿಕೊಳ್ಳದಿರಿ ಎದುರಿಸಬೇಕಾದೀತು ಮಿಥ್ಯ ಲೋಕದ ಘೋರ ಸತ್ಯಗಳ ಕಂಡೀರಿ ಗೋಮುಖಗಳ ಕಾಣಲಾರಿರಿ ಹಿಂದಿರುವ ವ್ಯಾಘ್ರಗಳ! ಹಿಂತಿರುಗದಿರಿ ವಾಸ್ತವಕೆ ಮರಳಿ ಕೊರಗಿ ಸೊರಗದಿರಿ ತಲ್ಲಣಿಸದಿರಿ ಎಚ್ಚರಗೊಂಡು ಆಗಿಹೋದೀರಿ ಮದಿರೆಯ ಶೀಶೆಯ ಮೇಲಿನ ಅರೆನಗ್ನ ಚಿತ್ರವಾಗಿ ಭೋಗದ ಸಂಕೋಲೆಯು ಅರಸಿ ಬಂದೀತು ನೀಡದಿರಿ ಕೊರಳು ಮಾಯೆಯ ನಶೆ ಬೀರಿ ಸೆಳೆದೀತು ಮೋಹ ಪಾಶ ಆಗದಿರಿ ಮರುಳು ಜಾರಿಬಿಡಿ ಕೋಮಲೆಯರೆ ಸವಿನಿದ್ದೆಯೊಳು ಬೇರುಗಳು ಭುವಿಯೊಡಲ ತಬ್ಬಿದಂತೆ ಆಲಿಂಗಿಸಿ ನಿದ್ದೆಯನು ಹಾರಿ ಬರಲಿದೆ ಸವಿಗನಸ ಹಕ್ಕಿಯೊಂದು ತೇಲುತ ಸಾಗಿ ದೂರಕೆ ರೆಕ್ಕೆಗಳ ತೆಕ್ಕೆಯೊಳು ಬಂಧಿಯಾಗಿ ಸಡಿಲಿಸದಿರಿ ಕನಸಿನ ಲಂಗರುಗಳ ಇಳಿಸಿರಿ ಇನ್ನಷ್ಟು ಆಳಕೆ ನಿದಿರೆಯ ಕಡಲ ಒಳಗೆ ಸೇರಿಬಿಡಿ ಇರುಳು ಕರಗುವ ಮೊದಲು ನಿದಿರಾದೇವಿಯ ಮಡಿಲು ಚಿತ್ರಕೃಪೆ: ಮಯೂರ ಮಾಸ ಪತ್ರಿಕೆ

ನಿರಂತರ

Image
ಅದೆಷ್ಟು ವಸಂತಗಳು ಅಸಂಖ್ಯ ಚಿಗುರುಗಳು ಗೋಡೆಯ ಬಿರುಕಿನ ಮರವು ಗೋಡೆಗೆ ಬೆಂಬಲವೋ ಹೊರೆಯೋ ಬಲ್ಲವರಾರು? ಬೇರಿನ ಕಣ್ಣಿಗೆ ಕಾಣದು ಟಿಸಿಲೊಡೆಯುವ ತುದಿಗಳು ಚಿವುಟಿಸಿಕೊಂಡ ಕುಡಿಗಳು ಪೊರೆಗಟ್ಟದ ಅವ್ವನ ಕಣ್ಣೆದುರು ಸುಳಿದಾಡಿ ಮಬ್ಬುಗಟ್ಟಿಸುತಿದೆ ಸವೆಸಿದ ಹಾದಿಯ ನೆನಪು ತುಳಿದ ಮುಳ್ಳುಗಳು ಮುಡಿದ ಹೂಗಳು ಹಿಂಬಾಲಿಸುತ್ತಿವೆ ಹೆಜ್ಜೆಯ ಭಾರವ ಮರೆಸಲು "ಇನ್ನೇನು ತಲುಪಿದೆನಪ್ಪ" ಎಂದು ಅವ್ವ ಎದುರು ನೋಡುತಿರುವ ಗುರಿಯಾವುದು? ಉರುಳಬಹುದು ಕಾಂಡ ಕುಸಿಯಬಹುದು ಗೋಡೆ ಬಿಡಿಸಲಾಗದು ಮಣ್ಣು-ಬೇರಿನ ನಂಟು ಹಾದಿ ಮುಗಿದು ಪಯಣ ನಿಂತರೂ ಕೊನೆಗಾಣದು ಅವ್ವನ ಅದಮ್ಯ ಪ್ರೀತಿ ಅಗಾಧ ವಾತ್ಸಲ್ಯ..!! ಚಿತ್ರಕೃಪೆ: ಮಯೂರ ಮಾಸ ಪತ್ರಿಕೆ

ಮರೆತು ಹೋಗಿದ್ದ ಮಳೆರಾಯನ ನೆನೆದು

ಧೋ ಎಂದು ಸುರಿದ ಮಳೆ ಒಮ್ಮೆಲೆ ನಿಲ್ಲಲಿಲ್ಲ. ಮೊದಲಿಗೆ ಶಾಂತವಾಗಿ, ನಂತರ ತುಂತುರು ಹನಿಗಳಾಗಿ, ತದನಂತರ ತುಂತುರು ಹನಿಗಳನ್ನೂ ಇಡಿ ಇಡಿಯಾಗಿ ಒಡೆದು ಹರವಿ ಸಿಂಪಡಿಸಿದಂತೆ. ಸೂರ್ಯ ಪಡುವಣಕ್ಕೆ ಮತ್ತಷ್ಟು ಹತ್ತಿರವಾಗುತ್ತಿದ್ದ, ಮಳೆ ಪೂರ್ತಿ ನಿಂತ ಮೇಲೆ ಒಗ್ಗಟಿನಲ್ಲಿದ್ದಂತೆ ಕಂಡ ಮೊಡಗಳೆಲ್ಲ ಆಟ ಮುಗಿಸಿ ಹೋಮ್ ವರ್ಕ್ ಚಿಂತೆಯಲ್ಲಿ ಮನೆಗೆ ಮರಳುವ ಮಕ್ಕಳಂತೆ ಚದುರುತ್ತಿದ್ದವು. ಗಾಳಿಯಂತೂ ಸುಯ್ ಎಂದು ಬೀಸುತ್ತ ಮಳೆಯಲ್ಲಿ ಮಿಂದು ತೊಯ್ದ ನೆಲದ ಪರಿವೀಕ್ಷಣೆಗೆ ಬಂದಂತೆ. ಮಳೆಯ ಪರಿಮಳ ಎಲ್ಲೆಲ್ಲಿಗೆ ತಲುಪಿಲ್ಲ ಎಂದು ಅವಲೋಕಿಸಿದ ಹಾಗೆಯೂ ಆಗಬೇಕು. ಸದಾ ಪಕ್ಕದ ರಸ್ತೆಯಲ್ಲಿ ಕರ್ಕಶ ಹಾರ್ನ್ ಮೊಳಗಿಸುತ್ತ ಹೊಗೆಯುಗುಳುತ್ತಾ ಸಾಗುವ ವಾಹನಗಳನ್ನು ನೋಡಿ ಬೇಸರಗೊಂಡು ಕಹಿಯಾಗಿದ್ದ ಹುಣಸೇ ಮರದ ಮುಖದಲ್ಲಿ ಕಂಡರಿಯದ ಲವಲವಿಕೆ! ಅಡಿಯಿಂದ ಮುಡಿಯವರೆಗೆ ಎಲ್ಲವೂ ಒದ್ದೊದ್ದೆ. ಆ ಅಸಂಖ್ಯ ಟಿಸಿಲುಗಳ ತುದಿಯಲ್ಲಿ ಫಳ ಫಳನೆ ಹೊಳೆಯುತ್ತಿವೆ ಮಳೆಯ ಹನಿಗಳು... ಅಲ್ಲ ಅಲ್ಲ! ಮುತ್ತಿನ ಮಣಿಗಳು. ಆ ಮರದ ಹಿಂಬದಿಯಲ್ಲಿ ಮೋಡದ ಮರೆಯಲ್ಲಿ ಇಣುಕುತ್ತಿರುವ ನೇಸರನ ಎಳೆ ಬಿಸಿಲ ಹಿನ್ನೆಲೆಯಲ್ಲಿ ಹುಣಸೆ ಮರಕ್ಕೆ ದೀಪಾಲಂಕಾರದ ಮೆರುಗು ಮೂಡಿತ್ತು. ಚೈತ್ರದಲ್ಲಿ ಕೆಂದಳಿರ ಗರಿಗಳ ಮುಡಿದು ನಳನಳಿಸುವ ಹುಣಸೇ ಮರಕ್ಕೆ, ಗ್ರೀಷ್ಮ ಋತು ಬರುತ್ತಿದ್ದಂತೆಯೆ ಈ ಮತ್ತೊಂದು ಬಗೆಯ ವಿಶಿಷ್ಟ ಅಲಂಕಾರ ಯೋಗ. ಅರೆ! ಹೀಗೆಲ್ಲ ಯೋಚನೆಗಳು ಮೂಡಿ ಅದೆಷ್ಟು ಕಾಲವಾಗಿತ್ತು! ಪ್ರೇಮಿಗ...

ಆರದ ದಣಿವು

ಬಿಡುವಿಲ್ಲದೆ ಬೆಳಕ ಸುರಿದು ಕಿರಣಗಳೆಲ್ಲ ಸೊರಗಿವೆ ನೇಸರನಂತೂ ಬೆವರಿ ದಣಿದು ನಿನ್ನೆ ಮುಳುಗಿದ್ದ ಜಾಗವನ್ನೇ ಮರೆತು ಹೇಗೋ ಕಟ್ಟಡಗಳ ನಡುವೆ ನುಸುಳಿ ವಿಶ್ರಾಂತಿಗೆಂದು ಜಾರಿದ ಅತ್ತ ನಸುಕಿನ ಹಾಹಾಕಾರದಲಿದ್ದ ಇನ್ನೊಂದು ಲೋಕವ ಕಂಡ ಇವನಿಗೆ ಇನ್ನೆಲ್ಲಿ ವಿರಾಮ!! ಮತ್ತದೇ ಉದಯ ಮತ್ತೊಂದು ಬೆಳಗು

ನಿರ್ಲಕ್ಷ್ಯ

ಒಡಲಾಳದಲ್ಲಿನ ಅಪರಿಚಿತ ಆರ್ತ ಕೂಗು ಕೇಳಿ ಏನಿರಬಹುದೆಂದು ತಡಕಿ ನೋಡಿದೆ ಮನದ ಸುಳಿಗೆ ಸಿಲುಕಿ ಕವಿತೆಯೊಂದು ಕೈಕಾಲು ಬಡಿಯುತ್ತ ಉಸಿರಿಗಾಗಿ ಕೊಸರಾಡುತ್ತಿತ್ತು ಸತ್ತರೆ ಸಾಯಲೆಂದು ಸುಮ್ಮನಾಗಿ ಮುಷ್ಠಿ ಸಡಿಲಿಸಿದೆ