Posts

ಧೋಬಿ ಘಾಟ್ - ಓಟ ಹುಡುಕಾಟಗಳ ಸ್ತಬ್ಧಚಿತ್ರಗಳು

Image
ಮಾನವೀಯ ಕೊಂಡಿಗಳ ಹುಡುಕಾಟವನ್ನೇ ಕಥೆಯ ಜೀವಾಳವಾಗಿಸಿಕೊಂಡಿರುವ "ಧೋಬಿ ಘಾಟ್" ಚಿತ್ರ ಭಾರತೀಯ ಚಲನಚಿತ್ರದ ಸಂದರ್ಭದಲ್ಲಿ ಗಮನಾರ್ಹ ಪ್ರಯತ್ನ. ಸ್ಪಷ್ಟ ಪ್ರಾರಂಭ ಯಾ ಅಂತ್ಯ ಎರಡೂ ಇಲ್ಲದ ಈ ಚಿತ್ರ, ಎಡಬಿಡದ ದುಡಿಮೆಯಲ್ಲೇ ಬದುಕು ಕಟ್ಟಿಕೊಳ್ಳುವ ಮುಂಬೈ ಎಂಬ ವಿರಾಟ್ ನಗರದ ಜನರ ಜೀವನದ ಪರಿಚ್ಛೇದವೊಂದನ್ನು ಕಾಣಿಸುತ್ತದೆ. ನಾಲ್ಕು ವಿಭಿನ್ನ ಹಿನ್ನೆಲೆಯುಳ್ಳ ವಿಭಿನ್ನ ವರ್ಗಗಳಿಗೆ ಸಂಬಂಧಿಸಿದ ವ್ಯಕ್ತಿಗಳು ಈ ಚಿತ್ರದ ಪ್ರಮುಖ ಪಾತ್ರಗಳು. ಸಂಬಂಧವೇ ಇರದ ನಾಲ್ಕು ವ್ಯಕ್ತಿಗಳು ಪರಸ್ಪರರ ಬದುಕುಗಳನ್ನು ಪ್ರಭಾವಿಸುವ ಸೂಕ್ಷ್ಮ ದರ್ಶನ ಚಿತ್ರಕಥೆಯಲ್ಲಿ ಉದ್ಬೋಧಗೊಳ್ಳುತ್ತದೆ. ನಾಟಕೀಯತೆ, ಅತಿ ಅನಿಸಿಬಿಡುವ ಭಾವುಕತೆ ಹಾಗೂ ಸಿನೆಮಾದ ಸಿದ್ಧ ವ್ಯಾಕರಣದ ಕಟ್ಟಳೆಗಳನ್ನು ಬದಿಗಿಟ್ಟು ದೃಶ್ಯಕಥನದಲ್ಲಿ ಒಂದು ವಿಶಿಷ್ಟ ಪ್ರಯೋಗವಾಗಿ ಧೋಬಿ ಘಾಟ್ ಹೊರಹೊಮ್ಮಿದೆ. ನಾಲ್ಕು ಪಾತ್ರಗಳಲ್ಲಿ ಯಾಸ್ಮಿನ್(ಕೃತಿ ಮಲ್ಹೋತ್ರ) ಪಾತ್ರದ ನೇರ ಪರಿಚಯವೇ ಇಲ್ಲ. ಸ್ವತಃ ಯಾಸ್ಮಿನ್ ಳೇ ದಾಖಲಿಸಿಟ್ಟ ದೃಶ್ಯಮುದ್ರಿಕೆಗಳಿಂದ (Video Cassettes) ಆಕೆಯ ಮತ್ತು ಆಕೆಯ ಬದುಕಿನ ಪರಿಚಯವಾಗುತ್ತದೆ. ಪ್ರಾಯಶಃ ಇನ್ನುಳಿದ ಪಾತ್ರಗಳಿಂದ ಯಾಸ್ಮಿನ್ ಳನ್ನು ಬೇರ್ಪಡಿಸಿ ನೋಡುವ ಉದ್ದೇಶ ಇರಬಹುದು. ಅವಳ ಬದುಕಿನ ವಿವರಗಳನ್ನು ನಿರೂಪಿಸಲು ಯಕಃಶ್ಚಿತ್ ಅವಳ ವೀಡಿಯೋ ಕ್ಯಾಮೆರಾದ ದೃಶ್ಯತುಣುಕುಗಳನ್ನೇ ತೋರಿಸಲಾಗಿದೆ. ಸಣ್ಣದೊಂದು ಊರಿನಿಂದ ಮುಂಬೈಗೆ ತನ್ನ ಪತಿಯ ಜೊತೆ...

ಹೊಳೆಯ ಹಾದಿ ಹಿಡಿದು

ಏನು ಎತ್ತ ಎಂದು ಕೇಳದೆ ಸುಮ್ಮನೆ ಹೊರಟು ಬಿಡೋಣ ಹುಣ್ಣಿಮೆಯ ಬೆಳದಿಂಗಳಿಗೋ, ಕಂಪು ಹೊತ್ತ ತಂಗಾಳಿಗೋ ಕಾಯುವುದು ಬೇಡ ಇನ್ನು ಹಿಡಿಯುವ ಆ ಹೊಳೆಯ ಕಾಲು ದಾರಿಯ ಜಾಡು ಬಿಟ್ಟು ಚಂದಿರನಿಗೆ ಅವನ ಪಾಡು ಹನಿವ ಮಳೆಗೆರಡು ಬೊಗಸೆ ಸುಡುವ ಬಿಸಿಲಿಗೆ ನಾಲ್ಕು ಒಲವ ಮಾತು ಕೊರೆವ ಚಳಿಗೆ ತೋಳ ಬಳಸು ತುಸು ದೂರದ ನಡಿಗೆಯಷ್ಟೇ ಬೆಸೆದಿರಲಿ ಕೈಯೊಳು ಕೈ ನಿಂತಿರಲಿ ಬಾಯ ತುದಿಯಲಿ ಹೇಳಬೇಕೆಂದ ಸವಿ ನುಡಿ ಕಣ್ಣಂಚಿನ ಮಿನುಗು ಮರೆಮಾಚುವುದು ನೋಡು ಆ ತುಂಟ ನಗೆಯನು ಹೊಳೆಯ ದಂಡೆಯಲಿ ಎದೆಗಾತು ಕೂತಿರೆ ನೀನು ತೆರೆಗಳ ಗುಂಜನದೊಳು ರೆಪ್ಪೆ ಮುಚ್ಚಲು ನಾನು ನೆನಪಾಗಿ ಥಟ್ಟನೆ ನೀನಂದು ಮೈಮರೆಸಿದ ಹಾಡು ಕೈಯ ಹಣೆಮುಟ್ಟಿಸಿ ನೋಟದಲ್ಲೇ ಅಹವಾಲು ಇಡುವೆನು ಅದೇ ಹಾಡನು ಆ ಮೋಹಕ ನಾದವನು ಒಲವ ಸುಧೆಯೊಳದ್ದಿ ಹರಿಯಬಿಡೆಂದು ಅವೇ ಪದಗಳಿಗೊಮ್ಮೆ ನಿನ್ನ ದನಿಯ ಜೇನು ಪೂಸಿಬಿಡೆಂದು ಗೊತ್ತಿಲ್ಲದೇನಿಲ್ಲ ನಿನಗೆ ನಿನ್ನಾ ಹಾಡಿಗೆ ಎದೆ ಹನಿವುದು ಇನ್ನಿಲ್ಲದಂತೆ ಕಂಠ ಬಿಗಿವುದು ಮಾತು ಹೊರಡದಂತೆ ಬೇಕಿಲ್ಲ ಅಲ್ಲವೆ ಇನ್ಯಾವ ರಸಘಳಿಗೆಯ ನಿರೀಕ್ಷೆ? ನಿನ್ನ ಹಾಡು ನನ್ನ ಮೈಮರೆವು ಕೊರಳ ಇಂಪು ಕವಿತೆಯ ಕಂಪು ಅರಳಿ ನಗುವ ಮಲ್ಲಿಗೆ ಮುಗಿಲು ಬಯಲ ತುಂಬಾ ಪ್ರೀತಿ ಹೊನಲು ಸಾಕಲ್ಲವೆ ಇಷ್ಟು ಕನಸಿನ ಜೋಳಿಗೆ ತುಂಬಿಸಲು? ಹೊರಡೋಣ ನಡಿ ಇನ್ನು ಬಿಟ್ಟರಾಯಿತು ಕರಗುವ ಸಮಯವ ಋತುಗಳ ಪಾಲಿಗೆ ಹಂಚಿದರಾಯಿತು ಕಿರುನಗೆಯ ಹೂಗಳ ಸಾಲಿಗೆ

ವರ್ಣಚಿತ್ರ

ಕನಸು ಹಾಲುಗಲ್ಲದ ಬೊಚ್ಚುಬಾಯಿಯ ಪುಟ್ಟ ಬೆರಳಲಿ ಚಂದಿರನ ತೋರುವ ಹಸುಗೂಸು ವಾಸ್ತವ ಕಾಲದ ಮೊನಚು ಖಡ್ಗವ ಬೀಸಿ ಎಳೆಗನಸ ಕೊಲೆಗಯ್ಯುವ ಅಂತಕ ನೆನಪು ಕನಸಿಗೂ ವಾಸ್ತವಕೂ ಕೊಂಡಿ ಹಾಕುವ ವಾಸ್ತವದ ಆರ್ಭಟಕೆ ಬೆದರಿ ಹಾರುವ ಹಕ್ಕಿ ಬದುಕು ಕನಸೊಳು ವಾಸ್ತವ ವಾಸ್ತವದೊಳು ಕನಸ ಹುದುಗಿಸಿ ಎಲ್ಲವನು ಚೌಕಟ್ಟಿನೊಳು ಸಂಭಾಳಿಸಿಟ್ಟುಕೊಳ್ಳುವ ವರ್ಣಚಿತ್ರ

"ಗಳು ಗಳು" ಪಂಚರಂಗಿ ಅನಿಸಿಕೆ"ಗಳು"

ಕ್ರಿಯಾಪದವೇ ಇರದ "ಗಳು ಗಳು" ಎಂಬ ಉದ್ದುದ್ದ ಕವಿತೆಯ ವಿಸ್ತೃತ ರೂಪಗಳು, ಪಂಚರಂಗಿಯ ಚಿತ್ರಕಥೆಯ ಎಳೆಗಳು, ದಿಗಂತನ ೨ಕಿಲೋ ದೂಧ್ ಪೇಡಾ ನಗೆಗಳು, ನಿಧಿ ಸುಬ್ಬಯ್ಯಳ ನುಲಿದಾಟದ ನಡುವಿನ ಅಭಿನಯಗಳು, ವಿಪರೀತ ಮೊನಚು ಮಾತುಗಳು, ಕೊನೆಯಲ್ಲಿ ಪೂರ್ಣವಿರಾಮದ ಬದಲಿಗೆ ಪಂಚುಗಳು, ಕಥಾನಾಯಕನ ಅಡ್ಡಕಸುಬಿ ವೃತ್ತಿಗಳು, ಎಲ್ಲರ ಕಣ್ಣಿಗೆ ಕಾಲಕಸಗಳು, ಆದರೂ ಬಾಯ ತುಂಬಾ ಸರಳ ತತ್ವಗಳು, ಜಗತ್ತಿಗೊಂದಿಷ್ಟು ಉಡಾಫೆಗಳು ಮತ್ತೊಂದಷ್ಟು ಮೂದಲಿಕೆಗಳು, ಹುಡುಗಿಯರ ಕಾಲೆಳಿಯುವ ಕಿಸಿಕಿಸಿ ವಿಟ್ಟುಗಳು, ಅವರ ಮದುವೆಯ ರಿಕ್ವೈರ್ಮೆಂಟುಗಳು, ತಂದೆ ತಾಯಂದಿರ ಉಗಿತಗಳು, ಹುಡುಗಿಯರ ಎಳಸು ಆಟಗಳು, ನೆಗೆ ನೆಗೆದು ಬರುವ ನಗಿಸಿ ನೆಗೆಸುವ ಗೂಢಾರ್ಥದ ಜೋಕುಗಳು, ಹಿನ್ನೆಲೆಯಲ್ಲಿ ಭಟ್ಟರ ಹ್ಞೂಂ ಕಾರಗಳು, ದಿಗಂತನ ಮುಖದ ಕಿವುಚುಗಳು, ನಿಧಿಯ ಮುರುಕು ಕನ್ನಡ ಪದಗಳು, ಜಯಂತರ ಚೊಚ್ಚಲ ಅಭಿನಯದಲ್ಲಿ ಕಿರುನಗೆಯ ಹೊಳಪುಗಳು, ಸರಿದಾಡಿವೆ ಹಾಡುಗಳಲಿ ನೂತನ ರೂಪಕಗಳು, ಸೀರೆಗಳನು ನೇಯ್ದ ಬೆಳಕುಗಳು, ಕಣ್ಣಲಿ ಗೋಚರಿಸಿದ ಕಾಗುಣಿತಗಳು, ಇಡೀ ಎರಡುವರೆ ತಾಸು ಅಲ್ಲಲ್ಲಿ ಇಣುಕುವುವು ಬದುಕಿನ ಲಿಮಿಟ್ಟುಗಳು, ಪರೀಕ್ಷೆಯ ಫಲಿತಾಂಶದಂಥ ಮಧ್ಯಂತರಗಳು, ಮೈ ಮುರಿಯುವ ಟಾಕೀಸ್ ಸೀಟುಗಳು, ಟೆಲಿಗ್ರಾಮಿನಂತೆ ಎರಗಿಬಿಡುವ ಕಥೆಯ ತಿರುವುಗಳು, ಸಮುದ್ರದ ಅಲೆಗಳು, ತೀರದಲಿ ಮರಳುಗಳು, ಮರಳಿನಲಿ ಗಜಿ ಬಿಜಿ ಮಾತುಗಳು, ಕಿರಿ ಕಿರಿಗಳು, ಕಂಯ ಕಂಯಗಳು, ಖೊ ಖೊ ಖೊಗಳು, ಗುಂಡಿ ತೋಡಿದ ಸಂ...

ಸೋನೆಯಲಿ ಕಳೆದುಹೋದ ಪದ್ಯ

ಅರ್ಧ ಗೀಚಿದ ಪದ್ಯ ಮನೆಯಲ್ಲಿ ಮುಗಿಸಿದರಾಯಿತೆಂದು ಕಿಸೆಯಲ್ಲೇ ತುರುಕಿಕೊಂಡು ನಿಲ್ದಾಣ ಬಂದೊಡನೆ ಹೊರಬಿದ್ದೆ ಬಸ್ಸಿನಿಂದ ಮನೆಯ ದಾರಿ ಹಿಡಿದು ಹೆಜ್ಜೆಯಿಕ್ಕುತ ಸಾಗಿರಲು ಕಂಡುಬಿಡಬೇಕೇ ಇವೆಲ್ಲ ಫಕ್ಕನೆ ಜಲಪಾತದ ಎರಚಲಿನಂಥ ಮಳೆಯಲಿ ಮುಗಿಲ ಬಿಂದುಗಳು ಅನಾಥವಾಗಿವೆ ನೆಲಕಪ್ಪಳಿಸಿ ಕಾರು ಬೈಕುಗಳ ಚೀರಾಟದಲಿ ನಡುಗಿ ಮಲಗಿದೆ ರಸ್ತೆ ಅಮ್ಮನ ಸೀರೆಗೆ ಬಿದ್ದಿದೆ ಕಂಕುಳಿಗಡರಿದ ಕಂದನ ಪಾದಕಂಟಿದ ಕೆಸರಿನ ಮೊಹರು ಗತ್ತು ತೊರೆದು ಕೂತಿದೆ ಕೊಡೆಯೊಂದು ಹೆಗಲಲಿ ಮೈದಾನ ಕೂಗಿದೆ ಮಕ್ಕಳನು ರಚ್ಚೆ ಹಿಡಿದ ಸೋನೆಗಂಜಿ ರಿಕ್ಷಾದೊಳಗಿನ ಸೀಟು ಹಪಹಪಿಸಿದೆ ಪಯಣಿಗನ ಬಿಸಿಯೊಡಲಿಗೆ ಖಿನ್ನನಾಗಿದ್ದಾನೆ ಫರ್ನೀಚರಿನಂಗಡಿಯವ ತೇವ ಕುಡಿದ ಮರದ ಮೇಜಿನ ಮುಂದೆ ಪುಳಕದಲಿ ನಗುತಿರುವನು ಬಜ್ಜಿಯಂಗಡಿಯವ ಜಾಲರಿ ಸೌಟಿನಲಿ ಹೆಕ್ಕಿದ ಚಿನ್ನದದಿರ ಕಂಡು ಎಚ್ಚರಗೊಂಡದ್ದು ನಾನು ಮನೆ ಸಮೀಪಿಸಿದಾಗಲೆ ಪದ್ಯದ ಉಳಿದರ್ಧ ಗೀಚಲು ಚೀಟಿ ಹೊರಗೆಳೆದರೆ ಅಕ್ಷರಗಳೆಲ್ಲ ಮಾಸಲು ಕವಿಯಾಗುವ ಹುಂಬತನ ಮರೆತು ಶೂ ಕಳಚಿಡಲು ಉಸಿರಾಡುವುದು ಶುಷ್ಕ ಪಾದ ನೆತ್ತಿಯಿಂದ ಜಾರಿದ ಹನಿ ನುಡಿಸುವುದು ಮಳೆಯ ನಿನಾದ! ಇದನ್ನು ಕೆಂಡಸಂಪಿಗೆಯಲ್ಲಿ ಓದಲು...

ಒಡೆದ ಹಾಲು

ಅಸುನೀಗಿವೆ ಸಿಹಿಯ ಕಣಗಳು ಒಣಗಿ ತೇಲಿದೆ ಕೆನೆಯ ಬನಿ ಮೈಯ್ಯ ತುಂಬಾ ತರಚು ಗಾಯಗಳು ಬಿಸಿಯ ನೀಡ ಹೋದದ್ದೇ ಶುರು ಕೊತಕೊತನೆ ಪಾತ್ರೆಯನೆ ನಡುಗಿಸುವ ಕಂಪನ! ಒಡೆದ ಹಾಲು ನೊಂದು ರೋದಿಸುತಲಿದೆ ಇನ್ನಿಲ್ಲವಾದ ಸವಿಯ ನೆನೆದು ದುಃಖತಪ್ತವಾಗಿದೆ ಉಬ್ಬಿ ಬಂದ ಹರುಷವ ಎತ್ತೆಸೆದು ಕೆನೆಯ ತೆಕ್ಕೆಯಲಿ ತೊನೆದು ಮತ್ತೆ ಮಡಿಲ ತುಂಬಿಸಿಕೊಳ್ಳುವ ಸಂಭ್ರಮಕಿಲ್ಲ ಎಡೆ ಇನ್ನೆಲ್ಲಿದೆ ಮಮತೆಯ ಕಾವು! ಬಿಗಿದಪ್ಪಿದ ಪಾತ್ರೆಗಿನ್ನು ಜಿಗುಪ್ಸೆ ಆವಿಯಾಗುತಲಿದೆ ಹಾಲಿನ ಕೊನೆಯುಸಿರು ಎದೆಬಡಿತ ನಿಂತು ಹುಳಿಯ ಕಳೆಯೊಂದು ಚಿಗುರೊಡೆದು ನಂಜಾಗಿಸಿದೆ ಮೈಯನು ಇದನ್ನು ಕೆಂಡಸಂಪಿಗೆಯಲ್ಲಿ ಓದಲು...

ಹಿಂತಿರುಗದಿರಿ ವಾಸ್ತವಕೆ

Image
ಮಲಗಿಬಿಡಿ ಬಾಲೆಯರೆ ಇರುಳ ಚಾದರವ ಪೂರ್ತಿ ಹೊದ್ದು ಅದ ನೇಯ್ದ ಮಾಂತ್ರಿಕನ ನೆನೆದು ದುಗುಡ ಭೀತಿಗಳ ತೊರೆದು ಕಣ್ಣಾಲಿಗಳ ತೆರೆಯದಿರಿ ನಿಶೆಯ ಹೆರಳು ಹರಡಿರಲು ಅರಳಿವೆ ಬಣ್ಣಗಳ ಹೊಮ್ಮಿಸಿ ಹೂಗಳು ಪರಿವೆಯ ಅರಿವೆ ಕಿತ್ತೆಸೆದು ಮರೆತು ಮಲಗಿರಿ ಎಚ್ಚರಗೊಂಡಿರೆ ಸ್ವಪ್ನದ ನಸುಕು ಒಡೆದು ಇಹದ ಕತ್ತಲೆ ಕವಿದೀತು ಮಿಸುಕಾಡಿ ಎಬ್ಬಿಸಿಕೊಳ್ಳದಿರಿ ಎದುರಿಸಬೇಕಾದೀತು ಮಿಥ್ಯ ಲೋಕದ ಘೋರ ಸತ್ಯಗಳ ಕಂಡೀರಿ ಗೋಮುಖಗಳ ಕಾಣಲಾರಿರಿ ಹಿಂದಿರುವ ವ್ಯಾಘ್ರಗಳ! ಹಿಂತಿರುಗದಿರಿ ವಾಸ್ತವಕೆ ಮರಳಿ ಕೊರಗಿ ಸೊರಗದಿರಿ ತಲ್ಲಣಿಸದಿರಿ ಎಚ್ಚರಗೊಂಡು ಆಗಿಹೋದೀರಿ ಮದಿರೆಯ ಶೀಶೆಯ ಮೇಲಿನ ಅರೆನಗ್ನ ಚಿತ್ರವಾಗಿ ಭೋಗದ ಸಂಕೋಲೆಯು ಅರಸಿ ಬಂದೀತು ನೀಡದಿರಿ ಕೊರಳು ಮಾಯೆಯ ನಶೆ ಬೀರಿ ಸೆಳೆದೀತು ಮೋಹ ಪಾಶ ಆಗದಿರಿ ಮರುಳು ಜಾರಿಬಿಡಿ ಕೋಮಲೆಯರೆ ಸವಿನಿದ್ದೆಯೊಳು ಬೇರುಗಳು ಭುವಿಯೊಡಲ ತಬ್ಬಿದಂತೆ ಆಲಿಂಗಿಸಿ ನಿದ್ದೆಯನು ಹಾರಿ ಬರಲಿದೆ ಸವಿಗನಸ ಹಕ್ಕಿಯೊಂದು ತೇಲುತ ಸಾಗಿ ದೂರಕೆ ರೆಕ್ಕೆಗಳ ತೆಕ್ಕೆಯೊಳು ಬಂಧಿಯಾಗಿ ಸಡಿಲಿಸದಿರಿ ಕನಸಿನ ಲಂಗರುಗಳ ಇಳಿಸಿರಿ ಇನ್ನಷ್ಟು ಆಳಕೆ ನಿದಿರೆಯ ಕಡಲ ಒಳಗೆ ಸೇರಿಬಿಡಿ ಇರುಳು ಕರಗುವ ಮೊದಲು ನಿದಿರಾದೇವಿಯ ಮಡಿಲು ಚಿತ್ರಕೃಪೆ: ಮಯೂರ ಮಾಸ ಪತ್ರಿಕೆ