Posts

ಅಪಭ್ರಂಶ

ಮಧ್ಯಾಹ್ನ ಆವರಿಸಲು ಇನ್ನೇನು ಒಂದೇ ತಾಸು ಬಾಕಿಯಿದ್ದರೂ ಮಾಗಿಯ ಚಳಿ ಮಾತ್ರ ಗಾಳಿಯಲ್ಲಿ ಹಾಗೆಯೇ ಅಡಗಿತ್ತು. ಫ಼ುಟ್ಪಾತಿನ ಮೇಲೆ ನಡೆಯುವಾಗ ಬಿಸಿಲಿನಿಂದ ನೆರಳೊಳಗೆ ನುಸುಳಿದಂತೆಲ್ಲ ಅರ್ಧ ಅಂಗಿ ತೊಟ್ಟ ಶ್ಯಾಮನ ಕೈ ಮೇಲಿನ ಒಡೆದ ಚರ್ಮ ಹಿಗ್ಗಿದಂತಾಗಿ ಸಣ್ಣಗೆ ಚಿಟಿ ಚಿಟಿ ಉರಿದು ಅಹಿತವುಂಟು ಮಾಡುತ್ತಿತ್ತು. ಬಸ್ ಸ್ಟಾಪ್ ಇನ್ನು ೧೦ ನಿಮಿಷಗಳ ಕಾಲ್ನಡಿಗೆಯಷ್ಟು ದೂರ. ಯಾವಾಗಲೂ ಆಫೀಸು ಮುಗಿಸಿಕೊಂಡು ಶುಕ್ರವಾರ ರಾತ್ರಿಯೇ ಬಸ್ಸು ಹತ್ತಿ ಮಧ್ಯರಾತ್ರಿಯಲ್ಲಿ ದುರ್ಗ ಸೇರಿಬಿಡುತ್ತಿದ್ದ ಶ್ಯಾಮ ಈ ಬಾರಿ ಮಾತ್ರ ಊರಿಗೆ ಹೋಗುವುದೋ ಬೇಡವೋ ಎಂಬ ದ್ವಂದ್ವದಲ್ಲೇ ಹಿಂದಿನ ಮಧ್ಯರಾತ್ರಿಯವರೆಗೂ ಒದ್ದಾಡಿ ಹಾಗೆಯೇ ನಿದ್ದೆ ಹೋಗಿದ್ದ. ಬೆಳಿಗ್ಗೆ ತಡವಾಗಿ ಎದ್ದು ಹಾಸಿಗೆಯ ಮೇಲೆ ಕೂತವನೇ ಒಂದು ದೀರ್ಘವಾದ ಉಸಿರು ತೆಗೆದುಕೊಳ್ಳುತ್ತಾ ಹೊರಟೇಬಿಡುವುದೆಂದುಕೊಂಡವನು ಸ್ನಾನ ಮುಗಿಸಿ, ತಿಂಡಿಯ ಬಗ್ಗೆ ತಲೆ ಕೆಡಿಸಿಕೊಳ್ಳದೆ ತನ್ನ ಹೆಗಲಚೀಲವನ್ನೇರಿಸಿಕೊಂಡು ಹೊರಬಿದ್ದಿದ್ದ. ಪ್ರತಿ ಬಾರಿಯೂ ದುರ್ಗಕ್ಕೆ ಹೊರಡುವಾಗ, ಶಹರದ ಧೂಳು, ಹೊಗೆ, ಒತ್ತಡಗಳ ಜಂಜಡಗಳಿಂದ ತುಸು ಕಾಲ ಬಿಡುಗಡೆ ಹೊಂದುವ ತಹತಹದಲ್ಲಿ ಹೊರಟು, ಮತ್ತೆ ಮನೆಯವರನ್ನೆಲ್ಲ ಕಂಡ ಹುರುಪಿನೊಂದಿಗೆ ನವೀಕರಣಗೊಂಡ ಯಂತ್ರದಂತಾಗಿ ಹಿಂತಿರುಗಿ ಬರುತ್ತಿದ್ದ ಶ್ಯಾಮ. ಈ ಬಾರಿ ಯಾಕೋ ಬೆಂಗಳೂರಿನ ಯಾಂತ್ರಿಕ ಬದುಕಿನೆದುರು ಅಲ್ಲಿಗೆ ಹೋಗಿ ಬರುವುದೇ ಸಪ್ಪೆಯೆನಿಸತೊಡಗಿತ್ತು ಅವನಿಗೆ. ಅಪ್ಪನಿಗೆ ವಾದಿ ಮ...

ಹೈಟೆಕ್ ಕಾರ್ಮಿಕರು

ಭಾರತವನ್ನೂ ಒಳಗೊಂಡು ಪ್ರಪಂಚದ ಸುಮಾರು ೮೦ ದೇಶಗಳಲ್ಲಿ ಮೇ ೧ ರಂದು ಕಾರ್ಮಿಕರ ದಿನಾಚರಣೆ ಆಚರಿಸಲಾಗುತ್ತದೆ. ಅಂದು ಆ ಎಲ್ಲಾ ದೇಶಗಳಲ್ಲಿ ರಾಷ್ಟ್ರೀಯ ರಜಾ ದಿನ. ಕಾರ್ಮಿಕರ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವುದು ವಿಶ್ವ ಕಾರ್ಮಿಕರ ದಿನಾಚರಣೆಯ ಮೂಲ ಧ್ಯೇಯಗಳಲ್ಲಿ ಒಂದು. ವಿವಿಧ ಕಾರ್ಮಿಕ ಪರ ಸಂಘ ಸಂಸ್ಥೆಗಳು ಈ ದಿನದಂದು ಸಮಾವೇಶ, ವಿಚಾರ ಸಂಕಿರಣಗಳನ್ನು ಹಮ್ಮಿಕೊಂಡು ಕಾರ್ಮಿಕರ ಬದುಕು-ಬವಣೆ, ಹಕ್ಕುಗಳ ಕುರಿತು ಚಿಂತಿಸುವುದು ಇದರ ವಿಶೇಷ. ಐಟಿ ಉದ್ದಿಮೆಯ ಸಂದರ್ಭದಲ್ಲಿ ಕಾರ್ಮಿಕರ ದಿನಾಚರಣೆಯು ಬಹಳಷ್ಟು ಐಟಿ ಉದ್ಯೋಗಿಗಳಿಗೆ ಬೇರೆ ಎಲ್ಲ ರಜಾದಿನಗಳಂತೆ ಮತ್ತೊಂದು ರಜೆಯಷ್ಟೆ. ಖಾಸಗಿ ವಲಯದ ಇತರೆ ಉದ್ದಿಮೆಗಳಲ್ಲಿರುವ ಕಾರ್ಮಿಕರಿಗೆ ಹೋಲಿಸಿದರೆ, ಐಟಿ ಕಾರ್ಮಿಕರಲ್ಲಿ ಕಾರ್ಮಿಕರ ದಿನಾಚರಣೆ ಹಾಗೂ ಹಕ್ಕುಗಳ ಮಹತ್ವದ ಬಗೆಗಿನ ಜಾಗೃತಿ ನಿರಾಸೆ ಮೂಡಿಸುವಷ್ಟು ಕಡಿಮೆಯಿದೆ. ಕೆಲ ಐಟಿ ಕಂಪನಿಗಳಲ್ಲಿ ಈ ದಿನವನ್ನು ಐಚ್ಛಿಕ ರಜೆಯನ್ನಾಗಿಸಿರುವುದು ಈ ದಿನದ ಬಗೆಗೆ ಐಟಿ ಕಂಪನಿಗಳು ತಳೆದಿರುವ ನಿಲುವನ್ನು ಎತ್ತಿ ಹಿಡಿಯುತ್ತದೆ. ಐಟಿ ಮಂದಿ ತಮ್ಮನ್ನು ತಾವು ಕಾರ್ಮಿಕರೆಂದು ಗುರುತಿಸಿಕೊಳ್ಳುವುದರಲ್ಲೇ ತುಸು ಹಿಂದುಳಿದಿದ್ದಾರೆಂದರೆ ತಪ್ಪಾಗಲಾರದು. ಹಾಗೇನಾದರೂ ಗುರುತಿಸಿಕೊಂಡರೂ ತಾವು ಮೇಲ್ವರ್ಗದ ಕಾರ್ಮಿಕರೆಂಬ ಭಾವನೆ ಇಲ್ಲಿನ ಉದ್ಯೋಗಿಗಳದ್ದು. ಇವರೆಲ್ಲ ಕಾರ್ಮಿಕ ವರ್ಗಕ್ಕೆ ಸೇರಿದರೂ "ಟೆಕ್ಕಿ" ಎಂಬ ಸಂಭಾವಿತ ಗುಂಪಿಗೆ ಪ...

ಒಲವಿನ ನದಿಯ ಪಾತ್ರ

ನಿನ್ನ ಒಲವಿನ ನದಿಯ ಪಾತ್ರ ಸ್ನೇಹಮಯ ಜೀವನ ಸೂತ್ರ ಪ್ರೇಮಲ ಭಾವದಿ ನೀ ಹಾಡಿರಲು ಹೊಳೆದಿಹುದು ಮಂಜಿನಲಿ ಬೆಳಕ ಕೋಲು ತುಂಬು ಮಮತೆಯ ವಾಹಿನಿ ಸದಾ ನನ್ನ ಧೃತಿ ಸಂಜೀವಿನಿ ನಿದ್ರಿಸಲು ನಿನ್ನ ಮಡಿಲೊಳು ನೀನಾಗಿಹೆ ಕನಸಿನ ಯಾಮಿನಿ ನಮ್ಮ ಬಾಳ ನಾವೆಯಿದೆ ನಿನ್ನ ನೇಹ ಸರೋವರದಿ ಹುಟ್ಟಿಹುದು ನಿನ್ನ ಗಾನದಿ ಇಂಚರದ ರಸಪಾಕ ನಿನ್ನ ಸ್ವರಗಳು ಹನಿಗೂಡಿ ಒಡಲಲಿ ಅಲೆಗಳ ಶರಧಿ ಸಾಗರದ ನಾದದೊಳು ಮೈಮರೆತಿಹೆ ನಿನ್ನ ಧ್ಯಾನದಿ

ಬಿಟಿಎಂ ಲೇಔಟ್

ಅರೆ ನಿದ್ದೆಯ ಕಣ್ಣುರಿ ತುಂಬಿ ಸಂತೆಯ ಸಂದಣಿಯಲ್ಲಿ ದೂಡಿ ಕಿವಿಯಲ್ಲಿ ಉಸುರುತ್ತದೆ "ಓಡು ಮಗುವೆ ಬಸ್ಸಿನ ಛಾವಣಿಯ ಕಂಬಿಗೆ ಜೋತು ಬಿದ್ದು ನಿದ್ದೆಯ ದಣಿವಾರಿಸಿಕೊ ಮನೆಯ ಖಾಲಿ ಬಿಟ್ಟು ದಿನವೆಲ್ಲ ಒಂದಿಷ್ಟು ಬೆವರು ಸುರಿಸಿಕೊ ಮನೆಯಿರುವುದು ರಾತ್ರಿ ಉಂಡು ಮಲಗಲಷ್ಟೆ ಓಡಿನ್ನು ಬೇಗ ಗಿರಗಿರನೆ ತಿರುಗುವ ಚಕ್ರಗಳ ಮೇಲಿನ ಯಂತ್ರದ ರಥಗಳಿಂದ ಕಿಕ್ಕಿರಿದ ರಸ್ತೆಯನೊಮ್ಮೆ ನೋಡು ಜೊಂಪು ನಿದ್ದೆಗೂ ಬಿಡುವಿಲ್ಲ ಅದಕೆ ಹೋಗುತ್ತಲೇ ಕರಗಿಬಿಡು ಸಂತೆಯೊಳಗೆ ಹೋಗಿ ತೀರಿಸಿ ಬಾ ದಿನಕರನಂತೆ ದಿನಕ್ಕೆ ಕೊಡಬೇಕಿರುವ ನಿನ್ನ ಬಾಬ್ತು ಒಂದಿಷ್ಟು ಬೆಂದು ಒಂದಿಷ್ಟು ಉರಿದು ನಿನ್ನನೇ ನೀನು ತೀಡಿಕೊಂಡು ಒಂದಿಷ್ಟು ಹೊಳೆಯಬಲ್ಲೆಯೇನೋ ನೋಡು" ಸಂಜೆ ಸುರಿದ ಮೇಲೆ ಇರುಳ ಚಪ್ಪರ ಕಟ್ಟುತ್ತಲೇ ಬರ ಮಾಡಿಕೊಳ್ಳುತ್ತದೆ ಬಣ್ಣದಾಗಸ ನೋಡಲಾಗದ್ದಕ್ಕೆ ಮೈದಡವಿ ಸಂತೈಸುತ್ತದೆ ದುಡಿಮೆಯ ಕೀಲಿ ಕೊಡಿಸಿಕೊಂಡ ಬೊಂಬೆಗಳ ಹಣೆ ನೀವುತ್ತದೆ ಹೋಟೆಲಿನ ಮೇಜು ಒರೆಸುವ ಪೋರನ ಗುನುಗು ಗೀತೆಯಾಗುತ್ತದೆ ಮನೆ ಮುಟ್ಟಿಸಲು ಬಂದ ಕ್ಯಾಬ್ ಚಾಲಕನ ಇಷ್ಟದ ತಿರುವಾಗುತ್ತದೆ ಠೀವಿಯಾಗುತ್ತದೆ ಲಲನೆಯರ ನಡಿಗೆಯಲ್ಲಿ ತುಳುಕಾಡುತ್ತದೆ ಮೈದಾನದ ಮಕ್ಕಳ ಕೇಕೆಯಲ್ಲಿ ಉಡುಪಿ ಗಾರ್ಡನ್‌ನಿಂದ ಮಡಿವಾಳ ಕೆರೆ ಜಯದೇವದಿಂದ ತಾವರೆಕೆರೆ ಎಡಬಿಡದೆ ಎಲ್ಲರನಲೆಸಿ ಸಂತೆಯ ಲೀಲೆಯಲ್ಲಿ ಸಂಭ್ರಮಿಸುತ್ತದೆ ವಾಹನ ಸರಮಾಲೆ ಧರಿಸಿ ನರ್ತಿಸುತ್ತದೆ ಸಲಹುತ್ತದೆ...

ಗಟ್ಟಿಮೇಳ

ಮದುವೆ ಮನೆಯಲ್ಲಿ ದೇವರೇ ಪ್ರತ್ಯಕ್ಷನಾದಂತೆ ಎದ್ದು ನಿಲ್ಲುತ್ತಾರೆ ಎಲ್ಲ ಗಟ್ಟಿ ಮೇಳದ ಅಲೆಗಳು ತೇಲಿಬಂದೊಡನೆ ಅಕ್ಷತೆ ಹಾಕುತ್ತಾರೆ ದಿಕ್ಕುಗೆಟ್ಟ ಕುರ್ಚಿಗಳಲಿ ಹರಟುತ್ತಿದ್ದವರೆಲ್ಲ ಉಕ್ಕುವ ಹಾಲನ್ನು ತಡೆಯಲು ಧಾವಿಸಿದವರಂತೆ ಅಲ್ಲಿಂದಲೆ ಮುಂದೆ ಓಡಿದಂತೆ ಎಸೆಯುತ್ತಾರೆ ಅಕ್ಕಿ ಕಾಳು ಮುಂದೆ ನಿಂತು ಕಣ್ಣು ಹನಿಸುವವರ ಮೇಲೆಯೇ ಮುಗಿಯಿತಿನ್ನು! ಹಠಾತ್ ದೊಡ್ಡವರಾಗಿಬಿಟ್ಟರು ವಧು-ವರರು ಘನ ಗಾಂಭೀರ್ಯದ ಮೂಟೆ ಹೊತ್ತೇ ಸಪ್ತಪದಿಯಿಡಬೇಕು ಅವರಿನ್ನು ಅವರ ನಡೆ ನುಡಿ ಉಸಿರು ನೋಟ ನಗು ಎಲ್ಲಕ್ಕೂ ಹೊಣೆಯ ಹೊರೆ ಅವಳು ಕೈ ಜೋಡಿಸಿದಳಷ್ಟೆ ಬಗ್ಗಿ ನಮಸ್ಕರಿಸಲಿಲ್ಲವಲ್ಲ! ಅವನಾಗಲೇ ಅವಳ ಸೆರಗ ಹಿಂಬಾಲಿಸುತ್ತಿದ್ದಾನಲ್ಲಾ! ಪಿಸುಗುಟ್ಟುತ್ತಿದ್ದಾರೆ ಮದುವೆ ಮನೆಯ ಗಳಗಳ ಮಾತುಗಳ ನಡುವೆ ಅಗ್ನಿಗೆ ಅರಳು ಹುಯ್ಯಲು ಬಾರದು ಅವಳಿಗೆ ಆಪೋಷಣೆಗೆ ಅಂಗೈ ಗುಳಿ ಮಾಡಲು ತಿಳಿಯದು ಅವನಿಗೆ ಇವರೆಂಥ ಸಂಸಾರ ಮಾಡಿಯಾರು! ಎನ್ನುತ್ತ ಹಪ್ಪಳದ ಪರಿಮಳಕ್ಕೆ ಸೋತು ಊಟದ ಪಂಕ್ತಿಯೊಳಗೆ ಉಪ್ಪಿನಕಾಯಿಯ ಮೆಚ್ಚಿಕೊಂಡರು ಎಲೆ ಅಡಿಕೆ ಮೆಲ್ಲುತ್ತ ನವ ದಂಪತಿಗಳಿಗೆ ಆಶೀರ್ವದಿಸುತ್ತಾರೆ ಶೀಘ್ರಮೇವ ಸಂತಾನಪ್ರಾಪ್ತಿರಸ್ತು ಹುಡುಗಾಟಿಕೆ ಸಲ್ಲದು ಮುಂದೆ ಎಲ್ಲೂ ತಪ್ಪದೆ ಎಲ್ಲ ನಿಭಾಯಿಸಬೇಕೆಂದು ಚಿತಾವಣೆ ಕೊಡುತ್ತಾರೆ ಮದು"ಮಕ್ಕಳೇ", ಭೂಮದೂಟಕ್ಕೇಳಿ ಯಾರೋ ಕೂಗುತ್ತಾರೆ ಯಾವ ಮಕ್ಕಳೆಂದು ತಬ್ಬಿಬ್ಬಿನಲ್ಲಿ ಇಬ್ಬರೂ ಮುಖ ...

ನಿಶ್ಚಿತಾರ್ಥ

ಯಾವ ದೇವತೆಯ ಸಾಕ್ಷಿಯನ್ನೂ ಬೇಡದೇ ಇನ್ನಾವ ನಕ್ಷತ್ರದ ಕೃಪೆ ಯಾಚಿಸದೇ ನನ್ನೊಳು ನೀನು ನಿನ್ನೊಳು ನಾನು ಕಂಡುಕೊಂಡ ಸಖರು ಅಭಿಸಾರಗೊಂಡರು ಗೃಹಸ್ಥದ ಹೊಸ್ತಿಲೆಡೆದೆ ಹೆಜ್ಜೆಯಿಟ್ಟರು ಭಾವಿ ಪತಿ ಪತ್ನಿಯರೆಂದು ಬೆರಳುಗಳಲಿ ಬೆರಳುಗಳ ಹೆಣೆದರು ತಾರುಣ್ಯದ ಬಳ್ಳಿಯಲೊಂದು ಆತ್ಮಸಖ್ಯದ ಎಳೆಮೊಗ್ಗು ಬಾಳಕಡಲಲ್ಲಿ ಪುಟ್ಟ ನಾವೆಯ ಜೋಡಿಹುಟ್ಟು ಕಣ್ಣುಗಳ ಬೋಗುಣಿಗಳಲ್ಲಿ ಸ್ವಪ್ನಸಲಿಲ ನಿಶ್ಚಿತ ದಿನ ಜಾಗ ಅರ್ಥಗಳ ಹುಡುಕಾಟಕ್ಕೆ ಜೀವಗಳು ಜೊತೆಯಾಗಲು ಸಲಹಿದವರ ಗದ್ಗದಿತ ಕೊರಳುಗಳು ಉಲಿದವು "ನಿಶ್ಚಿತಾರ್ಥ!"

ಧಾವಂತ

ಅರ್ಧಮರ್ಧ ಮುಗಿದ ಮೇಲುಸೇತುವೆ ಭೂಸ್ಪರ್ಶ ಕಾಣದ ಆ ಎರಡು ತುದಿಗಳು ಪಾಳು ಬಿದ್ದ ಕಟ್ಟಡದ ಕಳೆ ಹೊತ್ತು ಆಗಸವ ದಿಟ್ಟಿಸುತ ಚಾಚಿಕೊಳ್ಳುತಿವೆ ಒಂದರ ಪಕ್ಕ ಒಂದರಂತೆ ಕಾಂಕ್ರೀಟು ಬಂಡೆಗಳು ತುತ್ತ ತುದಿಯಲಿ ನಿಂತಿರುವ ಟೋಪಿಧಾರಿ ಕಿವಿಗೊತ್ತಿಕೊಂಡು ಮೊಬೈಲು ಮುಂದದಾವುದೋ ಒಂದು ದಿನ ಟಾರು, ಬಿಳಿಯ ಬಿರುಕು-ರೇಖೆ ಬಳಿಸಿಕೊಂಡು ಚತುಷ್ಪಥ ಹೆದ್ದಾರಿಯೆಂದು ಸಂಭಾವಿತಗೊಳ್ಳುವ ಆ ಮೇಲುಸೇತುವೆಯ ಮೇಲೆ ಮನಬಂದಲ್ಲಿ ಓಡಾಡಲು ಯಾರ ಅಪ್ಪಣೆಯೂ ಬೇಕಿಲ್ಲ ಅವನಿಗೆ ಮಳೆ ಹೊಯ್ದು ಕಿಕ್ಕಿರಿದ ಕೆಳರಸ್ತೆಯಲಿ ಕೊಸರಾಡುತ್ತಿರುವ ವಾಹನಗಳಿಗೆ ಅವನ ಕುರಿತು ಹೊಟ್ಟೆಯುರಿದುಕೊಳ್ಳಲೂ ವೇಳೆಯಿಲ್ಲ! -೫ ಆಗಸ್ಟ್ ೨೦೧೧