ಅಲೆದಾಟದ ಜೊತೆಗಾರನಿಗೊಂದು ಪತ್ರ
ಗೆಳೆಯ, ಎಲ್ಲಿಂದ ಪ್ರಾರಂಭಿಸಬೇಕೊ ತಿಳಿಯುತ್ತಿಲ್ಲ. ಮೊನ್ನೆ ಜಯನಗರದ ೩ನೇ ಬ್ಲಾಕ್ ನ ಟ್ರಾಫಿಕ್ಕ್ ಸಿಗ್ನಲ್ಲಿನಲ್ಲಿ ನೀನು ಯಾವುದೋ ಯೋಚನೆಯಲ್ಲಿ ಕಳೆದು ಹೋಗಿ ಒಬ್ಬೊಬ್ಬನೆ ನಗುತ್ತಾ ಬರುವುದನ್ನು ನಾನು ದೂರದಿಂದಲೇ ನೋಡಿದ ಕ್ಷಣದಿಂದಲೋ ಅಥವಾ ೩ ವರ್ಷಗಳ ಹಿಂದೆ ವಿಪ್ರೋ ಸಂಸ್ಥೆ ಸೇರಿದ ಹೊಸತರಲ್ಲಿ ತರಬೇತಿಯ ತರಗತಿಗಳಲ್ಲಿ ನಾವಿಬ್ಬರೂ ಎದುರಾಗಿ ಪರಿಚಯಗೊಂಡ ಕ್ಷಣದಿಂದಲೋ. ನಾವು ಭೇಟಿಯಾದಾಗ ನನ್ನ-ನಿನ್ನ ಸ್ನೇಹದ ಸೇತುವಾಗಿದ್ದು ಬರಿ ಮೇಲ್ಮೇಲಿನ ಪರಿಚಯವಷ್ಟೆ. ಈಗ ಆ ಸೇತುವೆಗೆ ಒಡನಾಟ, ಪುಸ್ತಕಗಳು, ಸಾಹಿತ್ಯ, ನಾಟಕ, ಭೈರಪ್ಪನವರ ವೈಚಾರಿಕತೆ ಎಂಬ ಅಮೂರ್ತ ಸ್ತಂಭಗಳು ಹುಟ್ಟಿಕೊಂಡಂತೆ ತೋರುತ್ತಿದೆ. ಜೀವನವನ್ನು ನಾವು ಕೆಲವೊಮ್ಮೆ ಖುಷಿಯಿಂದ ಕಳೆದಿರುತ್ತೇವೆ, ಹಾಗೆಯೇ ದುಃಖದಲ್ಲಿ ಬೆಂದೂ ಇರುತ್ತೇವೆ. ನಗು, ಅಳು, ಮೌನ, ಅಸಮಾಧಾನ ಇತ್ಯದಿ ವಿವಿಧ ಭಾವನೆಗಳ ಅಲೆಗಳು ಅಪ್ಪಳಿಸಿರುತ್ತವೆ. ಹೀಗೆ ಗತಿಸಿದ ಕ್ಷಣಗಳು ನೆನಪುಗಳಾಗಿ ಆಗೊಮ್ಮೆ ಈಗೊಮ್ಮೆ ಬದುಕೆಂಬ ಪಯಣದ ಹೆದ್ದಾರಿಯಲ್ಲಿ ತಂಗುದಾಣಗಳಂತೆ ಕಾಣುತ್ತವೆ. ನಮ್ಮ ಮುಂದೆ ಸರಿಯುತ್ತಿರುವ ಕಾಲ ಮತ್ತು ನಮ್ಮನ್ನೂ ಒಳಗೊಂಡು ನಾಟಕವಲ್ಲದ ನಾಟಕದಂತೆ ನಡೆಯುವ ಘಟನಾವಳಿಗಳು ಒಂದು ರೀತಿಯಲ್ಲಿ ವಿಶಿಷ್ಟವೆನಿಸಿ "ಇದು ನನ್ನ ಬಾಳಿನಲ್ಲಿ ಮರೆಯಲಾಗದ ನೆನಪಾಗಿ ಉಳಿಯುತ್ತದೆ" ಎಂದು ನಮಗೆ ಆ ಕ್ಷಣವೇ ಅನಿಸತೊಡಗುವುದು ಸೋಜಿಗವೆನಿಸುತ್ತದೆ. ಮೊನ್ನೆ ಶನಿವಾರ ನಾವಿಬ್ಬರೂ ಇಂಡಿಯನ್ ಇನ್ಸ...