Thursday, February 21, 2013

ತ್ಯಾಜ್ಯದಿಂದ ವಿದ್ಯುತ್ - ತ್ಯಾಜ್ಯ ನಿರ್ವಹಣೆಯ ಸಮಸ್ಯೆಗೆ ಶಾಶ್ವತ ಪರಿಹಾರ?

ಕಸದಿಂದ ರಸ ತೆಗೆಯುವ ಅನೇಕ ವಿಧಾನಗಳು ನಮಗೆ ಪರಿಚಿತ. ಆದರೆ ಕಸದಿಂದ ವಿದ್ಯುತ್ ಕೂಡ ತಯಾರಿಸಬಹುದೆಂದು ನಮ್ಮಲ್ಲಿ ಬಹುತೇಕರಿಗೆ ಗೊತ್ತಿರಲಾರದು. ಇಲ್ಲಿ ಕಸ ಎಂದರೆ ಯಾವುದೋ ಒಂದು ಬಗೆಯ ಕಸ ಮಾತ್ರವಲ್ಲ. ಬೆಂಗಳೂರಿನ ಸದ್ಯದ ಕಸ ವಿಲೇವಾರಿ ಸಮಸ್ಯೆಯಿಂದ ಅಲ್ಲಲ್ಲಿ ತಿಪ್ಪೆಗಳಾಗಿ ರಾಶಿ ರಾಶಿಯಾಗಿ ಕಾಣಸಿಗುವ ಒಣ ಮತ್ತು ಹಸಿ ಮಿಶ್ರಿತ ತ್ಯಾಜ್ಯ, ಕೈಗಾರಿಕಾ ಕಸ, ಜೈವಿಕ ತ್ಯಾಜ್ಯ, ಪ್ಲಾಸ್ಟಿಕ್ ಇನ್ನೂ ಹಲವು ಬಗೆಯ ತ್ಯಾಜ್ಯ - ಇವೆಲ್ಲವುಗಳನ್ನು ಬಳಸಿ ವಿದ್ಯುತ್ ಉತ್ಪಾದಿಸುವ "ಅನಿಲೀಕರಣ" ತಂತ್ರಜ್ಞಾನ ಲಭ್ಯವಿದೆ. ತ್ಯಾಜ್ಯ ವಿಲೇವಾರಿ ಸಮಸ್ಯೆಯನ್ನೇ ದೊಡ್ಡದಾಗಿಸಿಕೊಂಡು ಬೆಂಗಳೂರಿನ ಬಿ.ಬಿ.ಎಂ.ಪಿ ಒದ್ದಾಡುತ್ತಿರುವಾಗ, ಪುಣೆಯಲ್ಲಿ ತ್ಯಾಜ್ಯದ ಅನಿಲೀಕರಣದಿಂದ ವಿದ್ಯುತ್ ಉತ್ಪಾದಿಸುವ ಘಟಕ ಸ್ಥಾಪಿತಗೊಂಡು ಅದರಿಂದ ವಿದ್ಯುತ್ ಸರಬರಾಜಾಗುತ್ತಿದೆ. ತ್ಯಾಜ್ಯ ವಿಂಗಡನೆ, ವಿಸರ್ಜನೆಗಳ ಸುತ್ತ ಎದ್ದಿರುವ ಸಮಸ್ಯೆಗಳ ಭರಾಟೆಯಲ್ಲಿ, ಇದಕ್ಕೆ ಸರಿಯಾದ ಪ್ರಚಾರವಿಲ್ಲದೆ, ಸರ್ಕಾರವೂ ಈ ನಿಟ್ಟಿನಲ್ಲಿ ಚಿಂತಿಸದೇ ಇದು ಬೆಳಕಿಗೆ ಬರದಿರುವುದು ವಿಪರ್ಯಾಸದ ಸಂಗತಿ. ಈ ತಂತ್ರಜ್ಞಾನವನ್ನು ಅವಲೋಕಿಸುವ ಮುನ್ನ ತ್ಯಾಜ್ಯ ನಿರ್ವಹಣೆಗೆ ಈಗ ಬಿ.ಬಿ.ಎಂ.ಪಿ ಅನುಸರಿಸುತ್ತಿರುವ ವಿಧಾನದಲ್ಲಿರುವ ಸಮಸ್ಯೆ, ಕೊರತೆ ಹಾಗೂ ಸವಾಲುಗಳನ್ನು ಗಮನಿಸೋಣ.

ತ್ಯಾಜ್ಯ ನಿರ್ವಹಣೆಗಾಗಿ ಸದ್ಯ ಬಳಕೆಯಲ್ಲಿರುವ ಪ್ರಕ್ರಿಯೆ ಹೀಗಿದೆ:

1. ಪ್ರತಿ ವಾರ್ಡ್‍ನ ಪ್ರತಿ ಮನೆಯಿಂದ ತ್ಯಾಜ್ಯ ಸಂಗ್ರಹ
2. ಆಯಾ ವಾರ್ಡ್‍ನಲ್ಲಿ ಸಂಗ್ರಹಗೊಂಡ ಕಸವನ್ನು ಒಂದೆಡೆ ಸೇರಿಸಿ ಲಾರಿಗಳಿಗೆ ತುಂಬುವುದು
3. ಈ ಎಲ್ಲ ಲಾರಿಗಳು ತುಂಬಿಸಿಕೊಂಡ ಕಸವನ್ನು ಊರಾಚೆಗಿರುವ ತ್ಯಾಜ್ಯ ವಿಸರ್ಜನಾ ಮೈದಾನಗಳಿಗೆ ಕೊಂಡೊಯ್ದು ಅಲ್ಲಿ ಸುರಿಯುವುದು.

ಈಗ್ಗೆ ಕೆಲವು ವಾರಗಳ ಕೆಳಗೆ ಬಿ.ಬಿ.ಎಂ.ಪಿ ತ್ಯಾಜ್ಯ ಮರುಬಳಕೆಯನ್ನು ಅನುಷ್ಠಾನಗೊಳಿಸುವ ಉದ್ದೇಶದಿಂದ ಮೂಲದಲ್ಲಿ (ಅಂದರೆ ತ್ಯಾಜ್ಯ ಉತ್ಪತ್ತಿಯಾಗುವ ಮೂಲ. ಉದಾ: ಮನೆ, ಅಂಗಡಿ, ಕಾರ್ಖಾನೆ ಇತ್ಯಾದಿ) ತ್ಯಾಜ್ಯವನ್ನು ಒಣ ಹಾಗೂ ಹಸಿ ತ್ಯಾಜ್ಯವನ್ನಾಗಿ ಬೇರ್ಪಡಿಸಿ ಪೌರಕಾರ್ಮಿಕರಿಗೆ ಹಸ್ತಾಂತರಿಸುವ ಹೊಸ ಕ್ರಮವನ್ನು ಜಾರಿಗೆ ತಂದಿತು. ಜನಸಾಂದ್ರತೆ ಜಾಸ್ತಿಯಿರುವ ಬೆಂಗಳೂರಿನಲ್ಲಿ, ಇದರ ಕುರಿತಾಗಿ ಎಲ್ಲ ಜನರಲ್ಲಿ ತಿಳುವಳಿಕೆ ಮೂಡಿಸುಲು ಪ್ರಚಾರ ಸಮರ್ಪಕವಾಗಿ ನಡೆಯಲಿಲ್ಲ. ಜನಜಾಗೃತಿಯ ಕೊರತೆಯ ಕಾರಣದಿಂದ ಈ ಯೋಜನೆ ಸದ್ಯಕ್ಕೆ ವಿಫಲಗೊಂಡಿದೆ. ಒಂದು ವೇಳೆ ಈ ಯೋಜನೆ ಯಶಸ್ವಿಯಾದರೂ ಸಹ, ಸಂಗ್ರಹಗೊಳ್ಳುವ ಅಷ್ಟೂ ತ್ಯಾಜ್ಯ ಮರುಬಳಕೆಗೆ ಯೋಗ್ಯವಾಗಿರುವುದಿಲ್ಲ. ಉದಾಹರಣೆಗೆ ಪ್ಲಾಸ್ಟಿಕ್. ಕಸದ ಹೆಚ್ಚಿನ ಪಾಲು ಅವೇ ಮೈದಾನಗಳಲ್ಲಿ ಭರ್ತಿಗೊಳ್ಳುತ್ತವೆ. ಮರುಬಳಕೆಗೆ ಬರುವ ಕಸದಿಂದ ಕಾಂಪೋಸ್ಟ್ ಗೊಬ್ಬರವನ್ನು ಉತ್ಪಾದಿಸಬಹುದಾದರೂ, ಇದನ್ನು ಬೆಳೆಗಳಿಗೆ ಬಳಸಿದಾಗ ವಿಷಯುಕ್ತ ಅಂಶಗಳು ಆಹಾರದಲ್ಲಿ ಸೇರಿಕೊಳ್ಳುವ ಅಪಾಯವಿದೆ. ಅಲ್ಲದೆ, ಇದು ಪರಸರಕ್ಕೆ ಹಾನಿಕಾರಕ ಕೂಡ. ಇವಿಷ್ಟೇ ಅಲ್ಲದೆ ಇನ್ನೂ ಹಲವಾರು ಸಮಸ್ಯೆಗಳಿವೆ


1. ವಿಸರ್ಜನಾ ಮೈದಾನಗಳು ತುಂಬಿಹೋದ ನಂತರ ಹೊಸ ಮೈದಾನಗಳನ್ನು ಗುರುತಿಸಬೇಕಾಗುತ್ತದೆ. ಎಕರೆಗಟ್ಟಲೆ ಭೂಮಿಯನ್ನು ಪಡೆಯಬೇಕಾಗುತ್ತದೆ. ಬೆಂಗಳೂರು ದಿನೇ ದಿನೇ ಬೆಳೆಯುತ್ತಿರುವಾಗ ಮುಂದಿನ ದಿನಗಳಲ್ಲಿ ಅಷ್ಟು ವಿಶಾಲವಾದ ಮೈದಾನಗಳು ದೊರಕುವುದು ದುಸ್ಸಾಧ್ಯ. ಈಗಾಗಲೆ ನಗರೀಕರಣದಿಂದ ಕಳೆದುಹೋಗುತ್ತಿರುವ ಕೃಷಿ ಭೂಮಿ ಇನ್ನಷ್ಟು ಕ್ಷೀಣಿಸುತ್ತದೆ.

2. ಇಂತಹ ಮೈದಾನಗಳಲ್ಲಿ ಬೃಹತ್ ಪ್ರಮಾಣದಲ್ಲಿ ತ್ಯಾಜ್ಯ ವಿಸರ್ಜಿತಗೊಳ್ಳುವುದರಿಂದ ಅದರ ಸುತ್ತಮುತ್ತಲಿನ ಹಳ್ಳಿಗಳ ನಿವಾಸಿಗಳಿಗೆ ಇದರಿಂದ ತೊಂದರೆಗಳಿವೆ. ದುರ್ನಾತ, ಸೋಂಕು, ಅಂತರ್ಜಲದಲ್ಲಿ ವಿಷಯುಕ್ತ ಕಣಗಳ ಬೆರಕೆ ಇತ್ಯಾದಿ.
3. ಒಂದು ಅಂದಾಜಿನ ಪ್ರಕಾರ, 5 ವರ್ಷಗಳಲ್ಲಿ ಉತ್ಪಾದಿತಗೊಳ್ಳುವ ಕಸದಿಂದ ಕಾಂಪೋಸ್ಟ್ ಅಥವಾ ಬಯೋಗ್ಯಾಸ್ ತಯಾರಿಸಲು ಸುಮಾರು 2೦೦೦ ಎಕರೆಗಳ ಜಾಗ ಬೇಕಾಗುತ್ತದೆ. ಕಾಂಪೋಸ್ಟ್ ತಯಾರಿಕೆ ಏನಿದ್ದರೂ ಗೃಹಬಳಕೆಯ ಮಟ್ಟದಲ್ಲಿ ಸಣ್ಣ ಪ್ರಮಾಣದಲ್ಲಿ ನಡೆಸಲಷ್ಟೆ ಸೂಕ್ತ. ಮೇಲಾಗಿ, ಈ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸುವ ಸವಾಲಿದೆ.

ಹೀಗಿರುವಾಗ, ತ್ಯಾಜ್ಯ ನಿರ್ವಹಣೆಯ ಪ್ರಚಲಿತ ಪ್ರಕ್ರಿಯೆ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಲಾರದು. ತ್ಯಾಜ್ಯದಿಂದ ವಿದ್ಯುತ್ ತಯಾರಿಸಬಹುದಾದ "ಅನಿಲೀಕರಣ" ತಂತ್ರಜ್ಞಾನ ಈ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರವಾಗಬಲ್ಲದು.


ಏನಿದು ಅನಿಲೀಕರಣ ತಂತ್ರಜ್ಞಾನ?

ಎಲ್ಲ ಬಗೆಯ ಕಸವನ್ನೂ (ಪ್ಲಾಸ್ಟಿಕ್ಕನ್ನೂ ಒಳಗೊಂಡಂತೆ) ಒಂದು ಬೃಹತ್ ಕುಲುಮೆಯಲ್ಲಿ ಸುಮಾರು 4000-5000 ಡಿಗ್ರಿ ಸೆಲ್ಷಿಯಸ್ ತಾಪಮಾನದಲ್ಲಿ ಕಾಯಿಸಲಾಗುತ್ತದೆ. ಆಧುನಿಕ ಅನಿಲೀಕರಣ ಕುಲುಮೆಗಳನ್ನು ಬಳಸಿದರೆ, ಪ್ಲಾಸ್ಟಿಕ್ ನಿಂದ ವಿಷಯುಕ್ತ ಡೈಯಾಕ್ಸಿನ್ ಮತ್ತು ಫ಼್ಯುರಾನ್ ಅನಿಲಗಳು ಹೊರಬರುವ ಚಿಂತೆಯಿರುವುದಿಲ್ಲ. ಅಗಾಧ ಉಷ್ಣತೆಯಲ್ಲಿ ಹೀಗೆ ಕಾಯಿಸುವುದರಿಂದ ತ್ಯಾಜ್ಯ ಬಿಸಿ ಅನಿಲವಾಗಿ ರೂಪಾಂತರಗೊಳ್ಳುತ್ತದೆ. ಈ ಅನಿಲದಲ್ಲಿ ಬೆರೆತ ಹಾರು ಬೂದಿಯ ಕಣಗಳನ್ನು ಬೇರ್ಪಡಿಸಿದರೆ, ಅದು ವಿದ್ಯುತ್ ಉತ್ಪಾದನೆಗೆ ಯೋಗ್ಯ. ಬೇರ್ಪಡಿಸಿದ ಹಾರು ಬೂದಿಯೂ ಉಪಯುಕ್ತವೇ. ಅದರಿಂದ ಇಟ್ಟಿಗೆಗಳನ್ನು ತಯಾರಿಸಬಹುದು. ಅಲ್ಲದೆ, ಸೀಸ, ಪಾದರಸ ಮತ್ತು ಇತರ ಲೋಹ ಮಿಶ್ರಿತ ಘನ ತ್ಯಾಜ್ಯವನ್ನು ಈ ಪ್ರಕ್ರಿಯೆಯಲ್ಲಿ ಪ್ರತ್ಯೇಕಿಸಬಹುದು. ಅನಿಲೀಕರಣಕ್ಕೆ ಬೇಕಾದ ತಾಪಮಾನ ನೀಡಲು, ಉಗಿ(ನೀರಿನ ಹಬೆ), ಬಿಸಿ ಗಾಳಿ, ಪ್ಲಾಸ್ಮ ಮೊದಲಾಗಿ ಹಲವಾರು ವಿಧಾನಗಳಿವೆ. ಇದರಲ್ಲಿ ಪ್ಲಾಸ್ಮ ಬಳಕೆಯ ವಿಧಾನ ಉತ್ಕೃಷ್ಟ ಫಲಿತಾಂಶ ನೀಡಬಲ್ಲದು. ಬೆಂಗಳೂರಿನ ಸದ್ಯದ ಸಮಸ್ಯೆಗಳಿಗೆ ಇವುಗಳಲ್ಲಿ ಯಾವ ವಿಧಾನವಾದರೂ ಆಗಬಹುದು. ಪ್ರಾಯೋಗಿಕವಾಗಿ ಇದನ್ನು ಅನುಷ್ಠಾನಗೊಳಿಸಿದ ಮೇಲೆ ಸುಧಾರಿತ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬಹುದು. ಪ್ಲಾಸ್ಟಿಕ್, ಕಾಗದ, ಜೈವಿಕ ಕಸ, ಅಂಗಡಿ-ಉಪಾಹಾರ ಮಂದಿರಗಳ ಕಸ, ಚರಂಡಿ-ಮೋರಿಗಳ ಕಸ ಮಿಶ್ರಿತ ದ್ರವ, ವಾಹನಗಳಿಂದ ಹೊರಬರುವ ಘನ ಹಾಗೂ ಜಿಡ್ಡಿನ ತ್ಯಾಜ್ಯ, ಕೃಷಿ ತ್ಯಾಜ್ಯ - ಹೀಗೆ ಇನ್ನೂ ಹಲವಾರು ಬಗೆಯ ತ್ಯಾಜ್ಯಗಳು ಅನಿಲೀಕರಣಕ್ಕೆ ಸೂಕ್ತವೆನಿಸಿವೆ.

ಅನಿಲೀಕರಣದ ಒಂದು ಘಟಕಕ್ಕೆ ಸುಮಾರು 2 ರಿಂದ 3 ಎಕರೆಗಳ ಭೂಪ್ರದೇಶ ಬೇಕಾಗುತ್ತದೆ. ಇಂತಹ ಘಟಕ ದಿನಕ್ಕೆ ಸುಮಾರು 750 ಮೆಗಾಟನ್‍ಗಳಷ್ಟು ತ್ಯಾಜ್ಯವನ್ನು ನಿರ್ವಹಿಸಬಲ್ಲದು. ಪ್ರಾರಂಭಿಕ ಹಂತದಲ್ಲಿ ಮಾತ್ರ ಇದಕ್ಕೆ ವಿದ್ಯುತ್ ಒದಗಿಸಿದರೆ ಸಾಕು. ಇದು ಸಕ್ರಿಯಗೊಂಡ ನಂತರ ಅಲ್ಲೇ ವಿದ್ಯುತ್ ಉತ್ಪಾದನೆಯಾಗುವುದರಿಂದ ಈ ಘಟಕ ಸ್ವಾವಲಂಬಿಯಾಗಿ ಕಾರ್ಯನಿರ್ವಹಿಸಬಹುದು. ಹೊರಗಿನಿಂದ ವಿದ್ಯುತ್ ಪೂರೈಸುವ ಅವಶ್ಯಕತೆಯೇ ಇರುವುದಿಲ್ಲ. ಅನಿಲೀಕರಣ ಘಟಕವನ್ನು ಸ್ಥಾಪಿಸಿ ಅದನ್ನು ಚಾಲನೆಗೆ ತರುವುದಕ್ಕೆ 6 ರಿಂದ 9 ತಿಂಗಳುಗಳ ಅವಧಿ ಸಾಕು.


ಪುಣೆ ಮತ್ತು ತಿರುವನಂತಪುರಗಳಲ್ಲಿ ಅನಿಲೀಕರಣದ ಬಳಕೆ :

ನೆರೆರಾಜ್ಯಗಳಾದ ಮಹಾರಾಷ್ಟ್ರ ಮತ್ತು ಕೇರಳದ ನಗರಗಳು - ಪುಣೆ ಮತ್ತು ತಿರುವನಂತಪುರಗಳಲ್ಲಿ ಅನಿಲೀಕರಣ ಘಟಕಗಳು ಈಗಾಗಲೆ ಸ್ಥಾಪಿತಗೊಂಡು ವಿದ್ಯುತ್ ಉತ್ಪಾದನೆಯನ್ನು ಕೂಡ ಯಶಸ್ವಿಯಾಗಿ ಮಾಡುತ್ತಿವೆ. ಹುಬ್ಬಳ್ಳಿ-ಧಾರವಾಡದ ನಗರ ಪಾಲಿಕೆಯ ಕೆಲ ಅಧಿಕಾರಿಗಳು ಪುಣೆಯ ರಾಮ್‍ತೇಕಡಿ ಕೈಗಾರಿಕಾ ಪ್ರದೇಶದಲ್ಲಿರುವ ಘಟಕಕ್ಕೆ ಭೇಟಿ ನೀಡಿ ಅಲ್ಲಿನ ಕಾರ್ಯವೈಖರಿಯನ್ನು ವೀಕ್ಷಿಸಿದ್ದಾರೆ. ದಿನಕ್ಕೆ 650 ಮೆಗಾಟನ್ ಪ್ರಮಾಣದ ವಿಂಗಡನೆಗೊಳ್ಳದ ಕಸವನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿರುವ ಈ ಘಟಕ 2.5 ಎಕರೆ ಪ್ರದೇಶದಲ್ಲಿ ಹಬ್ಬಿದೆ. "ಕಾನ್ಕಾರ್ಡ್ ಬ್ಲೂ ಎನರ್ಜಿ" ಎಂಬ ಖಾಸಗಿ ಸಂಸ್ಥೆ ಈ ಘಟಕವನ್ನು ಸ್ಥಾಪಿಸಿ ಅದರ ನಿರ್ವಹಣೆಯನ್ನೂ ನಡೆಸುತ್ತಿದೆ. 1 ಮೆಗಾವ್ಯಾಟ್ ವಿದ್ಯುತ್‍ಗೆ ಸರಿಸುಮಾರು 3 ಮೆಗಾಟನ್ ತ್ಯಾಜ್ಯ ಬೇಕಾಗುತ್ತದೆ. ಪುಣೆಯ ಘಟಕ ದಿನವೊಂದಕ್ಕೆ 220 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿದೆ. ಪುಣೆ ನಗರ ಪಾಲಿಕೆ ಪ್ರತಿ ಮೆಗಾಟನ್‍ಗೆ 300 ರೂ.ಗಳ ಶುಲ್ಕವನ್ನು ಈ ಸಂಸ್ಥೆಗೆ ನೀಡುತ್ತಿದೆ. ಅನಿಲೀಕರಣದಿಂದ ಸಿಗುವ ವಿದ್ಯುತ್ತನ್ನು ಈ ಖಾಸಗಿ ಸಂಸ್ಥೆಯಿಂದ ಸರ್ಕಾರ ಅಥವಾ ಇನ್ನಾವುದೇ ಸಂಸ್ಥೆ ಕೊಳ್ಳಬಹುದು. ಪುಣೆ ಘಟಕಕ್ಕೆ ತಗುಲಿರುವ ಒಟ್ಟು ಖರ್ಚು 180 ಕೋಟಿ ರೂ. ಇದರ ವಾರ್ಷಿಕ ಆದಾಯ 48 ಕೋಟಿ ರೂ. ಹಾಗಾಗಿ ಇದಕ್ಕಾಗಿ ಹೂಡಿದ ಬಂಡವಾಳ 4 ವರ್ಷಗಳಲ್ಲಿ ಇದರ ಆದಾಯದಿಂದ ಹಿಂತಿರುಗುವ ನಿರೀಕ್ಷೆಯಿದೆ. ಪುಣೆ ನಗರ ಪಾಲಿಕೆ ಮತ್ತು ಕಾನ್ಕಾರ್ಡ್ ಸಂಸ್ಥೆಯ ನಡುವೆಯಿರುವ 25 ವರ್ಷಗಳ ಒಡಂಬಡಿಕೆಯ ಪ್ರಕಾರ, ಪ್ರತಿ ದಿನ ಘಟಕಕ್ಕೆ ಕಸವನ್ನು ಸಾಗಿಸುವ ಜವಾಬ್ದಾರಿ ಪಾಲಿಕೆಯದು. ಘಟಕಕ್ಕೆ ಬೇಕಿರುವ ಎಲ್ಲ ಸಂಪನ್ಮೂಲಗಳು ಹಾಗೂ ಆರ್ಥಿಕ ಬೇಡಿಕೆಗಳನ್ನು ಪೂರೈಸುವುದು ಸಂಸ್ಥೆಯ ಜವಾಬ್ದಾರಿ.

ತಿರುವನಂತಪುರದಲ್ಲಿ ಮಾದರಿ ರೂಪದಲ್ಲಿ ಶುರುವಾದ ಘಟಕ ದಿನಕ್ಕೆ 35 ಮೆಗಾಟನ್ ಕಸ ನಿರ್ವಹಿಸುತ್ತಿದೆ. ಇದರ ಸಾಮರ್ಥ್ಯವನ್ನು 100 ಮೆಗಾಟನ್‍ಗಳಿಗೆ ಏರಿಸುವ ಯೋಜನೆಯಿದೆ. ಲೋರೋ ಎನ್ವಿರೋ ಪವರ್ ಎಂಬ ಸಂಸ್ಥೆ ಇದರ ಮಾಲೀಕತ್ವ ಹಾಗೂ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಲಿದೆ. ಒಂದು ಮೆಗಾಟನ್ ತ್ಯಾಜ್ಯದಿಂದ ಸುಮಾರು 0.77 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಅಂದಾಜಿದೆ. ಇದು ಪುಣೆಯ ಘಟಕದ ಸಾಮರ್ಥ್ಯಕ್ಕಿಂತ ಹೆಚ್ಚಿನದು. ಕೊಚ್ಚಿಯಲ್ಲೂ ಕೂಡ ಘಟಕ ತೆರೆಯುವ ಚಿಂತನೆಯಿದ್ದು, ಅಲ್ಲೂ ಸಹ ಲೋರೋ ಎನ್ವಿರೋ ಸಂಸ್ಥೆ ಅದನ್ನು ನಿರ್ವಹಿಸಲಿದೆ.


ಈ ತಂತ್ರಜ್ಞಾನದ ವಿಶಿಷ್ಟ ಹೆಗ್ಗಳಿಕೆಯೆಂದರೆ ಇದು Environmental Protection Agency(EPA)ಯ ವಿಧಿ-ನಿಯಮಗಳಿಗೆ ಅನುಗುಣವಾಗಿರುವುದಷ್ಟೇ ಅಲ್ಲದೆ, ಹೊಗೆಹೊರಚೆಲ್ಲುವಿಕೆಗಿರುವ ಐರೋಪ್ಯ ಮಾನದಂಡಗಳಿಗೂ ಹೊಂದುತ್ತದೆ.


ಕರ್ನಾಟಕ ಸರ್ಕಾರ/ಬಿ.ಬಿ.ಎಂ.ಪಿ ಏನು ಮಾಡಬಹುದು?

1. ತ್ಯಾಜ್ಯ ಅನಿಲೀಕರಣ ಘಟಕಗಳನ್ನು ಸ್ಥಾಪಿಸಲು ಖಾಸಗಿ ಸಂಸ್ಥೆಗಳಿಗೆ ಟೆಂಡರ್ ಗಳ ಮೂಲಕ ಅರ್ಜಿ ಸಲ್ಲಿಸಲು ಮಾಧ್ಯಮಗಳಲ್ಲಿ ಕರೆ ನೀಡುವುದು. ಬೆಂಗಳೂರಿಗೆ ೪ ಘಟಕಗಳ ಅವಶ್ಯಕತೆ ಇದೆ. ಪ್ರತಿ ಘಟಕ 750 ಮೆಗಾಟನ್ ನಷ್ಟು ತ್ಯಾಜ್ಯವನ್ನು ಪರಿಷ್ಕರಿಸುವ ಸಾಮರ್ಥ್ಯ ಹೊಂದಿರತಕ್ಕದ್ದು.
2.  ಕೆಲವು ಧುರೀಣರನ್ನೊಳಗೊಳ್ಳುವಂತೆ ಒಂದು ಸಮಿತಿಯನ್ನು ರಚಿಸುವುದು. ಈ ಸಮಿತಿಯು ಖಾಸಗಿ ಸಂಸ್ಥೆಗಳನ್ನು ಈ ಉದ್ದೇಶದೆಡೆಗೆ ಆಕರ್ಷಿಸಿ ಯೋಜನೆಯ ಸಾಧ್ಯಾಸಾಧ್ಯತೆಗಳ ಕುರಿತು ವಿವರವಾಗಿ ಅವರೊಡನೆ ಚರ್ಚಿಸುವುದು. ಮುಂದೆ ರಾಜ್ಯದ ಇತರ ದೊಡ್ಡ ನಗರಗಳಲ್ಲಿ ಈ ಯೋಜನೆಯನ್ನು ಜಾರಿಗೆ ತರುವ ಸಲುವಾಗಿಯೂ ಈ ಸಮಿತಿ ಕೆಲಸ ಮಾಡಬಹುದು.
3. ಈ ಯೋಜನೆಯ ಕಾರ್ಯನಿರ್ವಹಣೆಗೆಂದು ಪ್ರಾರಂಭಿಕವಾಗಿ ಖಾಸಗಿ ಸಂಸ್ಥೆಗಳಿಗೆ ಸರ್ಕಾರದ ವತಿಯಿಂದ ಆಕರ್ಷಕ ಶುಲ್ಕವನ್ನು ನಿಗದಿ ಮಾಡಬಹುದು.
4. ಘಟಕಗಳಲ್ಲಿ ಉತ್ಪಾದನೆಯಾಗುವ ವಿದ್ಯುತ್ತನ್ನು ಸರ್ಕಾರವೇ ಮಾರುಕಟ್ಟೆಯ ಪ್ರಚಲಿತ ದರದಲ್ಲಿ ಕೊಳ್ಳಬಹುದು.
5. ಘಟಕಗಳನ್ನು ಸ್ಥಾಪಿಸಲು ಸರ್ಕಾರವೇ ಭೂಮಿಯನ್ನು ಖಾಸಗಿ ಸಂಸ್ಥೆಗಳಿಗೆ ನೀಡುವುದು. ಹಾಗೂ ಇದರ ಅನುಷ್ಠಾನಕ್ಕೆ ಅವಶ್ಯಕವಾಗಿರುವ ಎಲ್ಲ ಪ್ರಕ್ರಿಯೆಗಳು ಮತ್ತು ಅವುಗಳಿಗೆ ಸರ್ಕಾರದ ಕಡೆಯಿಂದ ಬೇಕಿರುವ ಅನುಮೋದನೆಗಳು ತ್ವರಿತ ಗತಿಯಲ್ಲಿ ಪೂರ್ತಿಯಾಗುವಂತೆ ಸರ್ಕಾರ ಪಾಲ್ಗೊಳ್ಳುವುದು.

ಹೊಸ ಹೊಸ ವಿಸರ್ಜನಾ ಮೈದಾನಗಳನ್ನು ಹುಡುಕುತ್ತಾ, ಕೇವಲ ತಾತ್ಕಾಲಿಕ ಪರಿಹಾರಗಳಿಗೆ ಮೊರೆಹೋಗುವುದಕ್ಕಿಂತ, ಪರಿಸರ ಹಾನಿ ಅತ್ಯಂತ ಕಡಿಮೆಯಿರುವ, ತ್ಯಾಜ್ಯದ ಸಮರ್ಪಕ ಮರುಬಳಕೆಗೆ ಅನುವು ಮಾಡಿಕೊಡುವ ಈ ಅನಿಲೀಕರಣ ಯೋಜನೆಯ ಅನುಷ್ಠಾನ ನಿಜಕ್ಕೂ ಯುಕ್ತ. ಇದಕ್ಕೆ ಸರ್ಕಾರ/ಬಿ.ಬಿ.ಎಂ.ಪಿ ಯ ಇಚ್ಛಾಶಕ್ತಿ ಮತ್ತು ಆರ್ಥಿಕ ಬೆಂಬಲ ಅತ್ಯವಶ್ಯಕ. ಪುಣೆಯಲ್ಲಿ ಈ ಯೋಜನೆ ಕಂಡಿರುವ ಯಶಸ್ಸನ್ನು ತಿಳಿದ ಮೇಲೂ ಇದರ ಕುರಿತು ಆಲೋಚಿಸದಿದ್ದರೆ ತ್ಯಾಜ್ಯ ನಿರ್ವಹಣೆಯ ಸಮಸ್ಯೆ ಮತ್ತಷ್ಟು ಕ್ಲಿಷ್ಟವಾದ ರೂಪ ಪಡೆದುಕೊಳ್ಳುವುದು ಖಂಡಿತ. ಸಂಬಂಧಿಸಿದವರು ಕೂಡಲೆ ಇದರತ್ತ ಗಮನ ಹರಿಸಲಿ.


ಅಕ್ಟೋಬರ್ ೩೧ರ ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟಿತ ಲೇಖನ

ನಿರೀಕ್ಷೆ


ಮೂಡಬೇಕಿದೆ ಒಡಮೂಡಬೇಕಿದೆಯಿನ್ನು
ನನ್ನ ನಿನ್ನ ಸಹಯಾನದ ಹಾಡಿನಲಿ
ಎದೆಯ ತುಂಬಿಸುವ ನವಪಲ್ಲವ
ಬೇಗೆ ತಣಿಸುವ ಮಾರ್ದವ

ಹಾಯಬೇಕಿದೆ ಒಳಹಾಯಬೇಕಿದೆಯಿನ್ನು
ನನ್ನ ನಿನ್ನ ಅಂತರಂಗದಂಗಳದಲಿ
ಹೊನ್ನ ಲೇಪದ ನಲ್ಬೆಳಕು
ದುಗುಡ ಕರಗಿಸುವ ತಿಳಿಬೆಳಕು

ಬರಬೇಕಿದೆ ತೇಲಿಬರಬೇಕಿದೆಯಿನ್ನು
ನನ್ನ ನಿನ್ನ ಕಣ್ಣ ಕೊಳದಲಿ
ಮುದ್ದು ಬಳುಕಿನ ಹಣತೆ ಸಾಲು
ಎಲ್ಲ ಕನಸುಗಳ ಹೊಳಹಿನ ಪಾಲು

ಆ ಮೊದಲ ಉಳಿ ಪೆಟ್ಟುಎದುರಾಗಿದ್ದಾರೆ ಒಬ್ಬರಿಗೊಬ್ಬರು
ಸುರಿವ ಬಿಸಿಲಲಿ ತೊಯ್ದ ಕಲ್ಲಿನ ಗಟ್ಟಿ
ಉಳಿಯಲಿ ಕಲ್ಲನುಲಿಸುವ ಸಂಕಲ್ಪದಲಿ ಶಿಲ್ಪಿ
ದಿಟ್ಟಿಸುತ್ತಿದ್ದಾನೆ ಕಲ್ಲನು ಶಾಂತವಾಗಿ
ಉಲಿಯುತ್ತಿದ್ದಾನೆ ಏನೋ
ನಿವೇದನೆಯ ತೆರದಿ

ಕಲ್ಲೂ ಆಲಿಸುತ್ತಿದೆ
ಮಾಂತ್ರಿಕ ಸ್ಪರ್ಶದ ಮಾತು ದೂರ
ಅವನ ಸಮಕ್ಷಮವೇ ಸಾಕು!
ನಿರ್ಜೀವ ಕಲ್ಲಲೂ ಹುಟ್ಟಿದೆ
ಒಪ್ಪಗೊಂಡು ಭಾವ ಭಂಗಿಗಳ
ಅವತಾರವೆತ್ತುವ ಬಯಕೆ

ಶಿಲ್ಪಿಯ ಹಣೆ ಬೆವರುತಿದೆ
ಕಲ್ಲು ಕಂಪಿಸುತಿದೆ
ಉಸಿರು ಹಿಡಿದು ಒಮ್ಮೆಗೆ
ನೇವರಿಸಿದ್ದಾನೆ ಕಲ್ಲನು
ನಡುವೆ ಗಾಳಿ ಹಾಯಲು ಅವನೆದೆಗೆ ತಾಕಿದೆ
ಸುಡುಗಲ್ಲಿನ ಅಂತರಂಗದ ತಂಪು

ಕಲ್ಲಿಗಿನ್ನಾವ ಗಮ್ಯವಿಲ್ಲ
ಶರಣಾಗಿದೆ ಶಿಲ್ಪಿಗೆ
ನೋವುಣಿಸುವವನೂ ಅವನೆ
ಒಡಲಲಿ ಹೂವರಳಿಸುವವನೂ ಅವನೆ
ನಂಬುಗೆಯಲಿ ಕಣ್ಮುಚ್ಚಿ
ಮೈಯ್ಯೊಡ್ಡಿದೆ

ಹೇಗೆ ಅರಿತನೋ ಶಿಲ್ಪಿ!
ಆ ಮೊದಲ ಉಳಿಯ ಪೆಟ್ಟಿಗೆ
ಕಲ್ಲ ಒಡಲ ಜೀವೋನ್ಮೀಲಿತಗೊಳಿಸುವ
ರಸಬಿಂದು ಯಾವುದೆಂದು!
ಚಿಮ್ಮಿದೆ ಚಕ್ಕಳದ ಚೂರು
ನೋವಿನ ನಲಿವಲಿ ಶಿಲ್ಪವಾಗುತಿದೆ ಕಲ್ಲು

Thursday, September 27, 2012

ಬರ್ಫಿ - ಮುಗ್ಧ ಪ್ರೇಮದ ಹಲವು ಮುಖಗಳು


ದೈಹಿಕ/ಮಾನಸಿಕ ದೌರ್ಬಲ್ಯಗಳುಳ್ಳ ಪಾತ್ರಗಳನ್ನೇ ಕೇಂದ್ರವಾಗಿರಿಸಿಕೊಂಡು ಬಾಲಿವುಡ್‍ನಲ್ಲಿ ಸಾಕಷ್ಟು ಚಿತ್ರಗಳು ಬಂದಿದ್ದರೂ, ಅವುಗಳಲ್ಲಿ ಪರಿಣಾಮಕಾರಿ ಕಥನ ಮತ್ತು ನಿರೂಪಣೆಯುಳ್ಳ ಚಿತ್ರಗಳು ಬೆರಳೆಣಿಕೆಯಷ್ಟು."ಸದ್ಮಾ" ಚಿತ್ರದಲ್ಲಿನ ಶ್ರೀದೇವಿ ಮತ್ತು ಕಮಲ್ ಹಾಸನ್ ರ ಅಭಿನಯವನ್ನು ಜನರು ಇಂದಿಗೂ ಮೆಚ್ಚುಗೆಯಿಂದ ನೆನೆಸಿಕೊಳ್ಳುತ್ತಾರೆ. "ಪಾ", "ಮೈ ನೇಮ್ ಈಸ್ ಖಾನ್"‍ನಂಥ ಚಿತ್ರಗಳು ಬಂದಿವೆಯಾದರೂ ಅವುಗಳಲ್ಲಿನ "ದೌರ್ಬಲ್ಯ ಪೀಡಿತ" ಪಾತ್ರಗಳು ಆಪ್ತವಾಗಿ ಉಳಿಯಲಿಲ್ಲ. "ಘಜಿನಿ" ಚಿತ್ರದಲ್ಲಿ ನೆನಪು-ಮರೆವುಗಳ ನಡುವೆ ಸಿಲುಕಿ ತಲ್ಲಣಿಸುವ ಪಾತ್ರವಿದ್ದರೂ, ಪ್ರೇಯಸಿಯ ಸಾವಿನ ಸೇಡಿನ ವೈಭವೀಕರಣ ಪಾತ್ರದ ಬೇರೆ ವೈಶಿಷ್ಟ್ಯಗಳನ್ನು ಮಾಸಲುಗೊಳಿಸಿತ್ತು. ಆದರೂ ಇತ್ತೀಚಿನ "ತಾರೆ ಝಮೀನ್ ಪರ್" ಮತ್ತು ಸುಮಾರು ಒಂದು ದಶಕದ ಹಿಂದೆ ತೆರೆಕಂಡಿದ್ದ "ಬ್ಲಾಕ್" ಚಿತ್ರಗಳು ಈ ನಿಟ್ಟಿನಲ್ಲಿ ಪ್ರಶಂಸೆ ಹಾಗೂ ಮೆಚ್ಚುಗೆ ಪಡೆದ ಚಿತ್ರಗಳು. ಮಾರುಕಟ್ಟೆಯ ಸೂತ್ರಗಳಿಗೆ ತಕ್ಕ ರಂಜಕ ಗುಣಗಳ ಮೇಲೆಯೇ ಪ್ರಾಶಸ್ತ್ಯ ನೀಡುವುದರಿಂದಲೋ ಅಥವಾ ಥಳುಕು-ಬಳುಕು, ತಾರಾ ವರ್ಚಸ್ಸು, ನಾಟಕೀಯತೆ, ವೈಭವೀಕರಣಗಳ ವಿಪರೀತ ವ್ಯಾಮೋಹದಿಂದಲೋ ಬಹುತೇಕ ನಿರ್ದೇಶಕರು ಸಿನೆಮಾದ ಸಿದ್ಧ ಮಾದರಿಗಳಿಗೆ ಶರಣಾಗಿರುವುದಂತೂ ಸುಳ್ಳಲ್ಲ. ಎರಡು ವಾರಗಳ ಕೆಳಗೆ ಬಿಡುಗಡೆಗೊಂಡಿರುವ "ಬರ್ಫಿ" ಚಿತ್ರ ಬಾಲಿವುಡ್‍ನ ಹಲವು ಅಪಸವ್ಯಗಳ ನೆರಳಿನಿಂದ ಪಾರಾಗಿ ನಿಲ್ಲುವ ವಿಶಿಷ್ಟ ಪ್ರಯತ್ನ.ಅವನೊಬ್ಬ ಹುಟ್ಟು ಕಿವುಡ, ಮೂಕ. ಆದರೂ ಎಲ್ಲರಂತೆ ಬದುಕುವ ಹಂಬಲವಿರುವ ಉತ್ಸಾಹಿ ತರುಣ. ಅಪ್ಪನ ಅಭಿಮಾನದ "ಮರ್ಫಿ" ರೇಡಿಯೋದ ಹೆಸರನ್ನೇ ಇವನಿಗಿಟ್ಟಿದ್ದರೂ ಅದೊಂದನ್ನು ಮಾತ್ರ ನುಡಿಯಲು ಪ್ರಯತ್ನಿಸುವ ಇವನಲ್ಲಿ "ಬರ್ಫಿ" ಎಂಬ ಮುದ್ದಾದ ಅಪಭ್ರಂಶವಾಗುತ್ತದೆ. ತನ್ನ ಹೆಸರನ್ನು ಹೇಳುವಷ್ಟಕ್ಕೆ ಮಾತ್ರ ಇವನ ಮಾತುಗಾರಿಕೆ ಸೀಮಿತ. ಹೆಸರಿಗೆ ಅನ್ವರ್ಥವೆನ್ನುವಂಥ ಮುಗ್ಧ ವ್ಯಕ್ತಿತ್ವದ ಇವನನ್ನು ಇಡೀ ಊರು ಕರೆಯುವುದು ಅದೇ ಹೆಸರಿನಿಂದಲೇ. ಅವನಲ್ಲಿ ಪೆದ್ದುತನವಿದೆ, ತುಂಟತನವಿದೆ, ಸಹಾನುಭೂತಿಯಿದೆ, ತನ್ನ ದೌರ್ಬಲ್ಯವನ್ನೂ ಮೀರಿ ಬದುಕುವ ಜೀವನೋತ್ಸಾಹವಿದೆ. ಚಿತ್ರದ ಮೊದಲರ್ಧ ಮುಗಿಯುವುದರಲ್ಲೇ ಇವೆಲ್ಲ ಗುಣಗಳಿಂದ ಈ ಪಾತ್ರ ಪ್ರೇಕ್ಷಕನ ಮನಸ್ಸನ್ನು ಗೆಲ್ಲುತ್ತದೆ. ರಣಬೀರ್ ಕಪೂರ್ ನಿರ್ವಹಿಸಿರುವ ಕಿವುಡ-ಮೂಕನ ಪಾತ್ರ ನಿಜಕ್ಕೂ ಸವಾಲಿನದು. ನಟನೆಯಲ್ಲಿ ರಣಬೀರ್ನ ಅಲ್ಪಾನುಭವವನ್ನು ಮರೆಸುವಂಥ ಅಭಿನಯ ಈ ಚಿತ್ರದಲ್ಲಿದೆ. ಬರ್ಫಿ ನಗಿಸಲೂ ಬಲ್ಲ, ಕಂಠ ಬಿಗಿಗೊಳಿಸಲೂ ಬಲ್ಲ. ಬರ್ಫಿಯ ತುಂಟತನ, ಪೆದ್ದುತನ ತುಂಬಿರುವ ಕೆಲ ಸನ್ನಿವೇಶಗಳಲ್ಲಿ ಚಾರ್ಲೀ ಚಾಪ್ಲಿನ್ ತನ್ನನ್ನೇ ಗೇಲಿ ಮಾಡಿಕೊಂಡು ಸೃಜಿಸುತ್ತಿದ್ದ ಹಾಸ್ಯ ದೃಶ್ಯಗಳು ಅಲ್ಲಲ್ಲಿ ನೆನಪಾಗುತ್ತವೆಯಾದರೂ, ಅನುಕರಣೆ ಎನಿಸುವುದಿಲ್ಲ. ಮೂತ್ರಕೋಶ ತೊಂದರೆಯಿಂದ ಸಾವು ಬದುಕಿನ ಮಧ್ಯೆ ಹೋರಾಡುವ ತನ್ನ ತಂದೆಯ ಶಸ್ತ್ರ ಚಿಕಿತ್ಸೆಗೆ ಹಣ ಹೊಂದಿಸಲು ಪರದಾಡುವಾಗ, ಬರ್ಫಿಯ ಅಸಹಾಯಕತೆ ನಗಿಸುವುದರ ಜೊತೆಗೆ ಅವನ ಒಳಗಿನ ನೋವನ್ನೂ ತೆರೆದಿಡುತ್ತದೆ. ನಲಿವುಗಳ ಸಿಹಿಹೂರಣದೊಳಗೆ ನೋವಿನ ಕಹಿ ಬೇವನ್ನು ಹುದುಗಿಸಿಕೊಂಡಿರುವ ಬದುಕಿನ ವಿಲಕ್ಷಣತೆಯನ್ನು ಈ ದೃಶ್ಯಗಳು ಚಿತ್ರಿಸಿವೆ.

ಚಿತ್ರದಲ್ಲಿರುವ ಮತ್ತೊಂದು ಪ್ರಮುಖ ಪಾತ್ರ "ಝಿಲ್‍ಮಿಲ್". ಬುದ್ಧಿಮಾಂದ್ಯ ಹುಡುಗಿ. ಸಮಾಜ ಅವಳನ್ನು ಒಪ್ಪದಿರಬಹುದೆಂಬ ಭಯದಿಂದ, ಹೆತ್ತ ತಾಯಿಯಿಂದಲೇ ತಿರಸ್ಕೃತಗೊಂಡವಳು. ತನ್ನ ಅಜ್ಜ, ಮನೆಕೆಲಸದಾಕೆ ಮತ್ತು ತನ್ನನ್ನು ಸಾಕುತ್ತಿರುವ ಆಶ್ರಮದ ದಾದೂ - ಇವರಿಷ್ಟು ಜನರೊಡನೆ ಮಾತ್ರ ಅವಳ ಆತ್ಮೀಯತೆ. ಈ ಪಾತ್ರದಲ್ಲಿ ಅಭಿನಯಿಸಿರುವ ಪ್ರಿಯಾಂಕಾ ಚೋಪ್ರಾಳದ್ದು ಗಮನಾರ್ಹ ಅಭಿನಯ. ಬುದ್ಧಿಮಾಂದ್ಯ ಹುಡುಗಿಯ ಹಾವ-ಭಾವಗಳು ಎಲ್ಲೂ ಅತಿರೇಕವೆನಿಸದೆ ಸಹ್ಯವೆನಿಸುತ್ತವೆ. ಅದಕ್ಕೆ ಬೇಕಿರುವ ಮುಗ್ಧತೆಯ ವಿವಿಧ ಭಾವವಿನ್ಯಾಸಗಳನ್ನು ತನ್ನ ಅಭಿನಯದಲ್ಲಿ ಅಳವಡಿಸಿಕೊಳ್ಳಲು ಪ್ರಿಯಾಂಕ ಯತ್ನಿಸಿರುವುದು ಶ್ಲಾಘನೀಯ. ತಾನು ಮೈಮರೆತು ಹಾಡುವಾಗ ತನ್ನದೇ ಕುಟುಂಬದ ಜನರು ಗೇಲಿಮಾಡಿದಾಗ ಅವಳಿಗುಂಟಾಗುವ ಹತಾಶೆಯ ದೃಶ್ಯ ಪ್ರೇಕ್ಷಕರನ್ನು ಭಾವುಕಗೊಳಿಸುವುದು ಸುಳ್ಳಲ್ಲ. ಹೀಗಿರುವ ಹುಡುಗಿಗೆ, ತಂದೆಯನ್ನು ಕಳೆದುಕೊಂಡು ಅನಾಥವಾಗುವ ಬರ್ಫಿ ಜೊತೆಯಾಗಿ, ಆಸರೆಯಾಗುವುದೇ ಇಡೀ ಚಿತ್ರದ ಜೀವಾಳ. ಮುಗ್ಧ ಜೋಡಿಯ ನಿಷ್ಕಾರಣ ಪ್ರೇಮ ಕಥನದಲ್ಲಿ ಝಿಲ್‍ಮಿಲ್‍ಳ ಅಪಹರಣ, ಅವಳಿಗಾಗಿ ನಡೆಯುವ ಹುಡುಕಾಟ, ಬರ್ಫಿಯ ಮೇಲೆ ಬರುವ ಅಪವಾದಗಳು ಒಂದಕ್ಕೊಂದು ಪೂರಕವಾಗುತ್ತ ಚಿತ್ರ ಸಾಗುತ್ತದೆ. ಬರ್ಫಿಯ ಮೊದಲ ಪ್ರೇಯಸಿ "ಶೃತಿ"ಯ ಪಾತ್ರದಲ್ಲಿ ನಟಿಸಿರುವ ಇಲೆಯಾನ ಕೂಡ ಪ್ರಶಂಸಾರ್ಹಳು. ದಕ್ಷಿಣ ಭಾರತದ ಚಿತ್ರಗಳಲ್ಲಿ ಗ್ಲಾಮರ್ ಭರಿತ ನಾಯಕಿಯ ಪಾತ್ರಗಳಿಗಷ್ಟೆ ಸೀಮಿತಳಾಗಿದ್ದ ಈಕೆಗೆ ಇದು ಗಂಭೀರ ಪೋಷಕ ಪಾತ್ರ. ಮೌನದಲ್ಲೇ ಹಲವು ಭಾವಗಳನ್ನು ಹೊಮ್ಮಿಸುವ ಈ ಪಾತ್ರದ ಆಳಕ್ಕಿಳಿಯಿಲು ಯತ್ನಸಿರುವುದು ಅವಳೊಳಗಿನ ಪ್ರತಿಭೆಯನ್ನು ದುಡಿಸಿಕೊಂಡಿರುವುದಕ್ಕೆ ಸಾಕ್ಷಿ.ಬೇರೆ ಬೇರೆ ಕಾಲಘಟ್ಟಗಳಲ್ಲಿ ಸನ್ನಿವೇಶಗಳನ್ನು ಹಿಂದು ಮುಂದು ಮಾಡುತ್ತಾ, ಕಥೆಯನ್ನು ನಿರೂಪಿಸಿರುವ ತಂತ್ರ ತೀರಾ ಹೊಸದೇನಲ್ಲದಿದ್ದರೂ ಭಿನ್ನ ಅನುಭವ ನೀಡುವುದಂತೂ ನಿಜ. ಹಾಗೆಯೇ, ಕಥೆಯ ಬಹುತೇಕ ಭಾಗ ೭೦ರ ದಶಕದಲ್ಲಿ ನಡೆಯುವಂಥದ್ದು. ಅಪಹರಣ, ಹುಡುಕಾಟಗಳ ಸಂದರ್ಭಗಳಲ್ಲಿ ಮೊಬೈಲ್, ಟಿ.ವಿ ಇತ್ಯಾದಿ ದಿನಬಳಕೆಯ ತಂತ್ರಜ್ಞಾನಗಳ ಹಂಗು ಇರದೆ, ಚಿತ್ರಕಥೆಯನ್ನು ಆದಷ್ಟೂ ಸಹಜ, ವಾಸ್ತವಿಕ ಮತ್ತು ಮಾನವೀಯಗೊಳಿಸುವ ಯತ್ನ ನಿರ್ದೇಶಕರದ್ದು. ಡಾರ್ಜೀಲಿಂಗ್‍ನ ಪ್ರಕೃತಿ ಸೊಬಗು, ಉಗಿ ಬಂಡಿ ಮತ್ತು ಕೋಲ್ಕತ್ತಾದ ಹಳೆಯ ಗಲ್ಲಿ, ಚೌಕಿಗಳನ್ನು ಚೀತ್ರಿಕರಣಕ್ಕೆ ಆಯ್ಕೆ ಮಾಡಿರುವುದರ ಹಿಂದೆಯೂ ಇದೇ ಉದ್ದೇಶ ಇರಬಹುದು. ದಶಕಗಳ ನಂತರ ಹಿಂದಿ ಸಿನೆಮಾವೊಂದರಲ್ಲಿ ಕೋಲ್ಕತಾದ ಹೌರಾ ಸೇತುವೆ ಮತ್ತೆ ಕಾಣಸಿಗುವುದು ಸಂತಸದ ಸಂಗತಿ.

ಚಿತ್ರದ ಅನನ್ಯತೆ ಕಾಣಿಸುವುದು ಅದರ ಮೂಕಿ ಗುಣದಲ್ಲಿ. ಹಲವಾರು ಸನ್ನಿವೇಶಗಳಲ್ಲಿ ಮೌನಕ್ಕೇ ಪ್ರಾಧಾನ್ಯ. ಅದಕ್ಕೆ ಮೆರುಗು ನೀಡಿರುವುದು ಛಾಯಾಗ್ರಹಣ ಮತ್ತು ಸಂಕಲನ. ಮೌನದ ಸನ್ನಿವೇಶಗಳಿಗೆ ಹೇಳಿ ಮಾಡಿಸಿದ ಬೆಳಕು-ನೆರಳುಗಳ ಬಳಕೆ, ತಂತ್ರಗಾರಿಕೆಯಲ್ಲಿ ಚಿತ್ರ ಸಾಧಿಸಿರುವ ಔನ್ನತ್ಯವನ್ನು ಬಿಂಬಿಸುತ್ತದೆ. ಅಲ್ಲಲ್ಲಿ ಬಂದು ಹೋಗುವ ೬ ಹಾಡುಗಳಿಗಿಂತ ಹಿನ್ನೆಲೆ ಸಂಗೀತ ಮನಸ್ಸಿಗೆ ತಟ್ಟುವಂತಿದೆ. ಬರ್ಫಿ ಹಾಗೂ ಝಿಲ್‍ಮಿಲ್‍ರ ಮೂಕ ಸಂವಾದಗಳಲ್ಲಿ ಹಿನ್ನೆಲೆ ಸಂಗೀತವೂ ಒಂದು ಪಾತ್ರದಂತಿದೆ. ತಂತ್ರಜ್ಞರನ್ನು ಹಾಗೂ ನಟರನ್ನು ಸಮರ್ಥವಾಗಿ ಬಳಸಿಕೊಂಡು ದೃಶ್ಯಗಳಲ್ಲೆ ಕಥೆ ಕಟ್ಟುತ್ತಾ ಅದನ್ನು ಬೆಳೆಸುವ ನಿರ್ದೇಶಕ ಅನುರಾಗ್ ಬಸು ಅಭಿನಂದನಾರ್ಹರು. ಚಿತ್ರದಲ್ಲಿ ಕೆಲ ಓರೆಕೋರೆಗಳೂ ಉಂಟು. ಬರ್ಫಿ ತನ್ನ ಹಳೆಯ ಪ್ರೇಯಸಿಯ ಜೊತೆ ಒಡನಾಡುವುದು ಹಾಗೂ ಆಪ್ತವಾಗಿರುವುದನ್ನು ನೋಡಿ ಬುದ್ಧಿಮಾಂದ್ಯ ಝಿಲ್‍ಮಿಲ್‍ಳಲ್ಲಿ ಹುಟ್ಟುವ ಈರ್ಷ್ಯೆ ಅಷ್ಟು ಪರಿಣಾಮಕಾರಿಯಾಗಿ ಮೂಡಿಬಂದಿಲ್ಲ. ಚಿತ್ರದ ಕಡೆಯಲ್ಲಿ ಬರುವ ಬರ್ಫಿ-ಝಿಲ್‍ಮಿಲ್‍ರ ಮದುವೆ ಹಾಗೂ ಇಳಿವಯಸ್ಸಿನ ದಂಪತಿಗಳಾಗಿರುವ ಸನ್ನಿವೇಶಗಳಲ್ಲಿ ನಾಟಕೀಯತೆ ತುಂಬಿದಂತೆನಿಸುತ್ತದೆ.

ಬರ್ಫಿ ನೋಡುವಂಥ ಸಿನೆಮಾ ಆಗಿ ಗೆಲ್ಲುವುದು, ನಿರ್ದೇಶಕರ ಲವಲವಿಕೆಯ ನಿರೂಪಣೆಯಿಂದ, ನಟ-ನಟಿಯರ ಹದ ಮೀರದ ಅಭಿನಯಗಳಿಂದ. ಬರ್ಫಿ ಹಾಸ್ಯದಿಂದಲೇ ಮನಸ್ಸನ್ನು ಆರ್ದ್ರ‍‍ಗೊಳಿಸುತ್ತದೆ. ದುಃಖ-ನೋವುಗಳಿಂದಲೇ ನಗಿಸುತ್ತದೆ. ಮೌನದ ಧ್ವನಿಯನ್ನೇ ಮಾತಾಗಿಸುತ್ತದೆ. ಎಲ್ಲಕ್ಕೂ ಮಿಗಿಲಾಗಿ ಮುಗ್ಧ ಪ್ರೇಮದ ಹಲವು ಮುಖಗಳನ್ನು ಅನಾವರಣಗೊಳಿಸುತ್ತದೆ.

ಚಿತ್ರ ಕೃಪೆ : ಐಬಿಏನ್ ಲೈವ್ , ಸೆವೆಂಟಿ ಎಂಎಂ

Friday, September 21, 2012

ಮಾತು-ಮೌನ-ಮನಸ್ಸು


ಮಾತು ಮಾತುಗಳ ನಡುವೆ
ಅದೆಲ್ಲಿಂದ ಬಂದು ಕೂರುವುದೊ
ಕ್ರೂರ ಮೌನದ ಪದರ!?
ಯಾವ ಮುಲಾಜೂ ಇಲ್ಲ
ಯಾವ ದನಿಯೂ ಬೇಕಿಲ್ಲ ಅದಕೆ!

ನಲ್ಮೆಯ ಮಾತು, ಕೋಪದ ಮಾತು
ಸವಿ ನುಡಿ ಕಹಿ ನುಡಿ
ಹೇಳಲೇ ಬೇಕೆಂದಿದ್ದ ಬಾಯಿ,
ಆಲಿಸಲೆಂದೇ ಕಾದಿದ್ದ ಕಿವಿಗಳು
ಎಲ್ಲವನೂ ಹೆಡೆಮುರಿಕಟ್ಟಿ ಹೊಸಕಿ ನಿಲ್ಲುತ್ತದೆ!
ಮೌನಕೂ ಇರಬೇಕಿತ್ತು ಅಂತಃಕರಣ!

ಕಾರಿರುಳ ಕತ್ತಲೆಯ ಬೆಂಬಲಕೆ ನಿಂತ
ದುರುಳ ಗಾಳಿ
ಹಚ್ಚಲು ಹೊರಟ ಹಣತೆಯ ಬಲಿತೆಗೆದುಕೊಳ್ಳುವುದು
ಇಲ್ಲೂ,
ಚೀತ್ಕಾರವೆಲ್ಲ ಆಕಾಶದೊಳು ಲೀನವಾಗುತಿರಲು
ದೈನ್ಯದಲೆ ಬೇಡಲು ಹೊರಟ ಮಾತಿನ
ಪ್ರಾಣಪಕ್ಷಿ ಹಾರಿಸಲು
ಮೌನಕೆ ಬಿಗುಮಾನ ಜೊತೆಯಾಗಿದೆ

ಆಕಾಶದ ವಿಸ್ತಾರಕೆ
ಮೋಡಗಳು ಹೆದರುವುದುಂಟೆ!
ಎಲ್ಲೆಲ್ಲಿಂದಲೋ ಒಟ್ಟುಗೂಡಿ
ತಮ್ಮ ಪಾಡಿಗೆ ತಾವು ಹೆಪ್ಪುಗಟ್ಟಿ
ಭಾರ ತಾಳಲಾರದೇ ಮಳೆಯಾಗಿ
ಇಳೆಯ ಮಡಿಲು ಸೇರುವುವುವಲ್ಲವೆ!

ಮೌನಕೂ ಮಾತಿಗೂ
ಮನಸ್ಸಿನದೇ ಹಂಗು
ನಿಜ ನಾಟಕದ ಮಧ್ಯದಲಿ
ಸೂತ್ರಧಾರನ ಕಪಟ ನಾಟಕ
ಮುಂದಡಿಯಿಡುವುದೇ ಮನಸ್ಸು
ಮಾತುಗಳನು ಪ್ರಚಂಡ ಪ್ರವಾಹವಾಗಿಸಲು!
ಮೌನದ ಅಣೆಕಟ್ಟನು ಸಿಡಿಸಿ ಚೂರಾಗಿಸಲು!?

Thursday, July 12, 2012

ಬೀದಿ ಬದಿಯ ಬಾಣಸಿಗ


ಕಾದು ಹಬೆಯಾಡುವ ಕಾವಲಿ
ಅತ್ತಿಂದಿತ್ತ ಪುಟು ಪುಟು ಹೆಜ್ಜೆಯಿಡುವ
ಮಾಣಿಗಳ ನಡುವೆ
ಬಂದ ಬಂದವರ ಹಸಿವು ನೀಗಿಸಲು
ನಿಂತಿಹನು ಬಾಣಸಿಗ

ನಿಗಿ ನಿಗಿ ಕಾವಲಿಯ ಶಾಖದಲಿ
ಬೆಚ್ಚಗಿರಿಸಿಟ್ಟಿರುತ್ತಾನೆ ತನ್ನ ಕನಸುಗಳ
ಅದಾವ ಬೇಸರ ಮೂಡುವುದೋ
ಅವೇ ಕನಸುಗಳು ಸಾಕೆನಿಸಿ
ಬೊಗಸೆ ತುಂಬ ನೀರು ಚಿಮುಕಿಸುವನು
ಧುಸ್‌ಸ್‌ಸ್‌ಸ್!!!! ಅಷ್ಟೆ!
ಪೊರಕೆಯ ಬೀಸಿನಲಿ ಎಲ್ಲವನು ಬದಿಗೊತ್ತಿ
ಹೊಸ ಕನಸುಗಳ ಹುದುಗಿಸಿಡುವನು

ಕಯ್ಯೊಳರಳುವ ಬಗೆ ಬಗೆ ಪಾಕ
ಇಳಿವ ಗಂಟಲಾವುದೊ?
ಆರಿಸುವ ಕ್ಷುದಾಗ್ನಿ ಯಾರದೊ?
ಮತ್ತೆ ಉಸಿರು ಪಡೆವ ಜೀವ ಯಾವುದೊ?!
ಹೆಸರು, ಗುರುತು, ನಂಟುಗಳ
ಬಾಹಿಗೆಯಲಿ ಸಾಗುವ ಕೈಂಕರ್ಯ!

ತಿನಿಸನರಸಿ ಬರುವ ಹೊಸ ಹೊಸ ಮುಖಗಳು
ಮಾತು, ಮುಗುಳ್ನಗು
ವಿನಿಮಯಗೊಳ್ಳವು ಸುಲಭಕೆ
ತಟ್ಟೆ ಇವನ ಕೈಗಳ ದಾಟಿ
ಅವರ ಕೈಸೇರಿದೊಡನೆ
ಅವರು ತೆತ್ತ ದುಡ್ಡು
ಇವನ ಋಣ ತೀರಿಸಿಬಿಡುವುದಂತೆ!!!

Thursday, May 31, 2012

ಶುಕ್ರ ಸಂಕ್ರಮಣ

ಜೂನ್ ೬, ೨೦೧೨ ರಂದು ಒಂದು ಅಪರೂಪದ ವಿದ್ಯಮಾನ ಅಂತರಿಕ್ಷದಲ್ಲಿ ಸಂಭವಿಸಲಿದೆ. ಅದನ್ನು ನೇರವಾಗಿ ವೀಕ್ಷಿಸುವ ಅವಕಾಶ ಹೊಂದಿರುವ ನಾವೆಲ್ಲ ಅದೃಷ್ಟವಂತರೇ ಸರಿ! ವಿಜ್ಞಾನಿಗಳು, ಖಗೋಳಶಾಸ್ತ್ರಜ್ಞರು, ಹವ್ಯಾಸಿಗಳು, ವೃತ್ತಿಪರರು, ವಿಜ್ಞಾನಾಸಕ್ತರು ಮತ್ತು ಸಾಮಾನ್ಯ ಜನತೆ ಕೂಡ ಅಂತರಿಕ್ಷದಲ್ಲಿ ನಡೆಯಲಿರುವ ಈ ದೃಶ್ಯ ಚಮತ್ಕಾರದ ವೀಕ್ಷಣೆಯ ಪ್ರತಿಕ್ಷಣವನ್ನೂ ಆನಂದಿಸಲು ಅಣಿಯಾಗುತ್ತಿದ್ದಾರೆ. ಅದುವೆ "ಶುಕ್ರ ಗ್ರಹದ ಸಂಕ್ರಮಣ"! ಶುಕ್ರ ಗ್ರಹವು ಕಪ್ಪು ಚುಕ್ಕಿಯಂತೆ ಸೂರ್ಯನ ಮೇಲೆ ಮಂದವಾಗಿ ಹಾದುಹೋಗಲಿದೆ ಮತ್ತು ಈ ಚಲನೆಯ ದೃಶ್ಯ ಸೂರ್ಯೋದಯದಿಂದ ಬೆಳಿಗ್ಗೆ ೧೦.೩೦ರ ವರೆಗೆ ಗೋಚರಿಸಲಿದೆ.

ಈ ವಿದ್ಯಮಾನ ಯಾಕೆ ಅಪರೂಪ ಮತ್ತು ನಾವೇಕೆ ಇದನ್ನು ವೀಕ್ಷಿಸಬಹುದಾದ ಭಾಗ್ಯಶಾಲಿಗಳು? ಜೂನ್ ೬, ೨೦೧೨ ರಂದು ಇದರ ವೀಕ್ಷಣೆ ತಪ್ಪಿಸಿಕೊಂಡಲ್ಲಿ ನಾವಿದನ್ನು ನಮ್ಮ ಜೀವಮಾನದುದ್ದಕ್ಕೂ ನೋಡಲಾರೆವು. ಕಾರಣ ಇದು ಮತ್ತೆ ಸಂಭವಿಸಲಿರುವುದು ೧೧ ಡಿಸೆಂಬರ್, ೨೧೧೭ಕ್ಕೆ. ಈ ಹಿಂದೆ ಇದೇ ರೀತಿಯ ಘಟನೆ ನಡೆದದ್ದು ಜೂನ್ ೮, ೨೦೦೪ರಲ್ಲಿ. 

ಇದು ಲೆಕ್ಕಾಚಾರ ಅಥವಾ ಇನ್ನಾವುದೇ ಅಳತೆಗೆ ಸಿಗದ ಯಾದೃಚ್ಛಿಕ ವಿದ್ಯಮಾನವಲ್ಲ. ಇದಕ್ಕೊಂದು ಕ್ರಮವಿದೆ. ಶುಕ್ರ ಸಂಕ್ರಮಣವು ೮ ವರ್ಷಗಳ ಅಂತರವಿರುವ ಜೋಡಿ ಇಸವಿಗಳಲ್ಲಿ ಸಂಭವಿಸುತ್ತದೆ. ಮಾತ್ರವಲ್ಲದೆ ಈ ಜೋಡಿ ಇಸವಿಗಳ ನಡುವಿನ ಅಂತರ ೧೨೧.೫ ಮತ್ತು ೧೦೫.೫ ವರ್ಷಗಳಂತೆ ಅದಲು ಬದಲಾಗುತ್ತಿರುತ್ತದೆ. ಈ ಕೆಳಗಿನ ಕೋಷ್ಠಕವನ್ನು ಗಮನಿಸಿ.


ಡಿಸೆಂಬರ್ ೧೬೩೧ - ಡಿಸೆಂಬರ್ ೧೬೩೯
ಶುಕ್ರ ಸಂಕ್ರಮಣದ  ೮ ವರ್ಷ ಅಂತರದ ಜೋಡಿ ಇಸವಿಗಳು 
ಜೂನ್ ೧೭೬೧ ಜೂನ್ ೧೭೬೯
ಈ ಜೋಡಿಯು  ಮೇಲಿನ ಜೋಡಿಯಿಂದ  ೧೨೧.೫  ವರ್ಷಗಳ ಅಂತರದಲ್ಲಿದೆ
ಡಿಸೆಂಬರ್ ೧೮೭೪ –  ಡಿಸೆಂಬರ್  ೧೮೮೨
ಈ ಜೋಡಿಯು  ಮೇಲಿನ ಜೋಡಿಯಿಂದ  ೧೦೫.೫  ವರ್ಷಗಳ ಅಂತರದಲ್ಲಿದೆ
ಜೂನ್ ೨೦೦೪ –  ಜೂನ್  ೨೦೧೨
ಈ ಜೋಡಿಯು  ಮೇಲಿನ ಜೋಡಿಯಿಂದ  ೧೨೧.೫  ವರ್ಷಗಳ ಅಂತರದಲ್ಲಿದೆ
ಡಿಸೆಂಬರ್ ೨೧೧೭ –  ಡಿಸೆಂಬರ್ ೨೧೨೫
ಈ ಜೋಡಿಯು  ಮೇಲಿನ ಜೋಡಿಯಿಂದ  ೧೦೫.೫  ವರ್ಷಗಳ ಅಂತರದಲ್ಲಿದೆ


ಶುಕ್ರಗ್ರಹ ಸಂಕ್ರಮಣ ಯಾಕೆ ಮುಖ್ಯ? 
ಶುಕ್ರಗ್ರಹ ಸಂಕ್ರಮಣ ವಿಜ್ಞಾನದ ದೃಷ್ಟಿಯಿಂದ ಅಪಾರ ಮಹತ್ವ ಪಡೆದುಕೊಂಡಿದೆ, ಅದು ಸೂರ್ಯನಿಂದ ಭೂಮಿ ಮತ್ತಿತರ ಗ್ರಹಗಳ ದೂರವನ್ನು ಅಳೆಯಲು ಬಹಳಷ್ಟು ಸಹಾಯಕಾರಿಯೆನಿಸಿದೆ. ಅದನ್ನು ಅರ್ಥ ಮಾಡಿಕೊಳ್ಳಲು ಶುಕ್ರಸಂಕ್ರಮಣದ ಇತಿಹಾಸವನ್ನು ಗಮನಿಸಬೇಕಿದೆ. ಸುಮಾರು ೧೫೦೦ ವರ್ಷಗಳವರೆಗೂ ಮನುಷ್ಯನು ಭೂಮಿಯು ಸೌರಮಂಡಲ ಮಾತ್ರವಲ್ಲದೆ ಇಡೀ ವಿಶ್ವದ ಕೇಂದ್ರ ಎಂದು ಭಾವಿಸಿದ್ದ. ಭೂಕೇಂದ್ರಿತ ವ್ಯವಸ್ಥೆ ಎಂದು ಕರೆಯಲ್ಪಡುವ ಈ ಪರಿಕಲ್ಪನೆಯನ್ನು ಅಂದಿನ ಚರ್ಚ್ ಕೂಡ ಬೆಂಬಲಿಸಿತ್ತು. ಅದಕ್ಕೆ ವೈಜ್ಞಾನಿಕ ವಾದಸರಣಿಯನ್ನು ಅಂದಿನ ಮೇರು ಖಗೋಳಶಾಸ್ತ್ರಜ್ಞ ಟಾಲೆಮಿ ಮಂಡಿಸಿದ್ದನಾದರೂ ಅದು ರಾತ್ರಿಯ ಆಕಾಶದಲ್ಲಿ ಇತರೆ ಗ್ರಹಗಳ ಚಲನೆಗಳನ್ನು ವಿವರಿಸುವಲ್ಲಿ ಅಸಮರ್ಪಕವಾಗಿತ್ತು, ೧೫ನೇ ಶತಮಾನದ ಯೂರೋಪ್ ನ ಪುನರುಜ್ಜೀವನ ಕಾಲದಲ್ಲಿ, ಗ್ರಹಗಳ ವಿಶಿಷ್ಟ ಚಲನೆಗಳನ್ನು ವಿವರಸಲು ಸಾಧ್ಯವಾಗುವುದು ಭೂಮಿಯನ್ನೂ ಒಳಗೊಂಡಂತೆ ಎಲ್ಲ ಗ್ರಹಗಳೂ ಸೂರ್ಯನ ಸುತ್ತ ಸುತ್ತುತ್ತಿವೆಯೆಂದು ಭಾವಿಸಿದರೆ ಮಾತ್ರ ಎಂದು ನಿಕೊಲಸ್ ಕೋಪರ್ನಿಕಸ್ ವಾದಿಸಿದ. ಈ ರೀತಿಯಾಗಿ ಸೂರ್ಯಕೇಂದ್ರಿತ ಮಾದರಿ (ಅಂದರೆ ಸೂರ್ಯನು ಸೌರಮಂಡಲದ ಕೇಂದ್ರವಾಗಿರುವುದು) ಜನ್ಮ ತಾಳಿತು. ಕೋಪರ್ನಿಕಸ್ ನ ಈ ವಾದ ಒಳಗೊಂಡ ಪುಸ್ತಕ ಬಿಡುಗಡೆಯಾಗುತ್ತಿದ್ದಂತೆಯೇ ಈ ದೃಷ್ಟಿಕೋನ ಸಾಂಪ್ರದಾಯಿಕ ನಂಬಿಕೆಗಳಿಗೆ ವಿರುದ್ಧವಾಗಿದ್ದ ಕಾರಣಕ್ಕೆ ನಿಷೇಧಕ್ಕೊಳಪಟ್ಟಿತು. 

ಗಯಾರ್ದಾನೊ ಬ್ರೂನೊ ಎಂಬ ಇಟಲಿಯ ಓರ್ವ ಯುವ ಸನ್ಯಾಸಿ ಗ್ರಂಥಾಲಯವೊಂದರಲ್ಲಿ ಸಿಕ್ಕ ಈ ಪುಸ್ತಕವನ್ನು ಓದಿ, ಅದರಲ್ಲಿರುವ ವಾದ ಒಪ್ಪಿಗೆಯಾಗಿ ಅದನ್ನು ಇಡೀ ಪ್ರಪಂಚಕ್ಕೆ ಸಾರಲು ನಿರ್ಧರಿಸಿದ. ೧೬೦೦ನೇ ಇಸವಿಯಲ್ಲಿ ಆ "ಅಪರಾಧ"ವನ್ನೆಸಗಿದ್ದಕ್ಕೆ ಅವನನ್ನು ಸಜೀವ ದಹಿಸಿ ಅವನು ತನ್ನ ಜೀವವನ್ನೇ ದಂಡ ತೆರುವಂತಾಯಿತು. ಅದೇ ಸಮಯಕ್ಕೆ ಇಟಲಿಯ ಪದುವಾ ವಿಶ್ವವಿದ್ಯಾಲಯದಲ್ಲಿ ಗೆಲಿಲಿಯೊ ಗೆಲಿಲಿ (೧೫೬೪-೧೬೪೨) ಅಧ್ಯಾಪನ ವೃತ್ತಿಯಲ್ಲಿದ್ದ. ಅವನು ಪ್ರಪಂಚದ ಮೊದಲ ದೂರದರ್ಶಕವನ್ನು ತಯಾರಿಸಿದ್ದ. ಚಂದ್ರನ ಮೇಲಿನ ಪರ್ವತಗಳು, ಶುಕ್ರನ ಚಲನೆಯ ವಿವಿಧ ಮಜಲುಗಳು, ಗುರುಗ್ರಹದ ಉಪಗ್ರಹಗಳು ಹೀಗೆ ಭೂಕೇಂದ್ರಿತ ವ್ಯವಸ್ಥೆಯ ಪರಿಕಲ್ಪನೆಯನ್ನು ಅಲ್ಲಗಳೆಯುವಂತಹ ಹಲವಾರು ಸಂಗತಿಗಳನ್ನು ಗುರುತಿಸಿ ಮನಗಂಡಿದ್ದ. ಅವನೂ ಸಹ ಇದನ್ನು ಪ್ರಪಂಚಕ್ಕೆ ತಿಳಿಸಲು ನಿರ್ಣಯಿಸಿದ. ಚರ್ಚ್ ಅದಕ್ಕೆ ಕ್ಷಿಪ್ರವಾಗಿ ಪ್ರತಿಕ್ರಿಯಿಸಿತು. ಅವನನ್ನು ಅಧ್ಯಾಪಕ ಹುದ್ದೆಯಿಂದ ಕೆಳಗಿಳಿಸಿ, ಗೃಹ ಬಂಧನದಲ್ಲಿಡಲಾಯಿತು. ಇಳಿವಯಸ್ಸಿನಲ್ಲಿ ಗೆಲಿಲಿಯೊ ಕಷ್ಟಕರ ಬದುಕು ನಡೆಸುವಂತಾಯಿತು. ಹೀಗಿದ್ದರು, ಸತ್ಯವನ್ನು ಸ್ಥಾಪಿಸಿ ಅದನ್ನು ಪ್ರಚುರಪಡಿಸಲು ತಮ್ಮ ಜೀವಗಳನ್ನೇ ಪಣಕ್ಕೊಡ್ಡಿಕೊಂಡ ಅಂದಿನ ಕಾಲದ ಸಾಹಸಿಗರು. ಕಡೆಗೆ ಸೂರ್ಯಕೇಂದ್ರಿತ ವ್ಯವಸ್ಥೆ ಪರಿಕಲ್ಪನೆಯೇ ಈ ಸಮರ ಗೆದ್ದು, ಸತ್ಯದ ಕೈ ಮೇಲಾಯಿತು.

ತದನಂತರ ಉದ್ಭವಗೊಂಡ ಪ್ರಮುಖ ಪ್ರಶ್ನೆಯೆಂದರೆ, "ಸೂರ್ಯ ಹಾಗೂ ಭೂಮಿಯ ನಡುವಿನ ದೂರ ಎಷ್ಟು?" ಎಂಬುದು. ೧೭೧೬ನೇ ಇಸವಿಯಲ್ಲಿ ಈ ಪ್ರಶ್ನೆಗೆ ಉತ್ತರ ಹುಡುಕುವ ಯತ್ನದಲ್ಲಿ ನ್ಯೂಟನ್ ನ ಗೆಳೆಯ ಎಡ್ಮಂಡ್ ಹ್ಯಾಲಿ ವಿನೂತನ ಉಪಾಯವೊಂದನ್ನು ರೂಪಿಸಿದ. ಇದಕ್ಕಾಗಿ ಅನೇಕ ಖಗೋಳಶಾಸ್ತ್ರಜ್ಞರ ಸಹಭಾಗಿತ್ವದಲ್ಲಿ, ದೂರದೂರದ ಜಾಗಗಳಿಗೆ ಅಸಾಧಾರಣ ಪ್ರತಿಕೂಲಗಳನ್ನೊಳಗೊಂಡ ಶೋಧಯಾನಗಳನ್ನು ಕೈಗೊಳ್ಳುವ ಅಗತ್ಯ ಒದಗಿ ಬಂತು. ಸೌರಮಂಡಲದ ಕುರಿತಾದ ಮಾನವನ ಗ್ರಹಿಕೆ ಈ ಯೋಜನೆಯ ಮೇಲೆ ಅವಲಂಬಿತವಾಗಿತ್ತು.

೧೭೬೧ರಲ್ಲಿ ಸಂಭವಿಸಲಿದ್ದ ಶುಕ್ರಸಂಕ್ರಮಣವನ್ನು ಭುವಿಯ ಬೇರೆ ಬೇರೆ ಭಾಗಗಳಿಂದ ಗಮನಿಸಿ, ಅದರ ಮಾಹಿತಿ ಒಟ್ಟುಗೂಡಿಸಿ, ಸೂರ್ಯ ಮತ್ತ್ತು ಭೂಮಿಯ ನಡುವಿನ ದೂರದ ಅಳತೆಯನ್ನು ಲೆಕ್ಕ ಹಾಕಲು, ಖಗೋಳಶಾಸ್ತ್ರಜ್ಞರಿಗೆ ಹ್ಯಾಲಿ ಕರೆ ನೀಡಿದ. ಆದರೆ ಅದನ್ನು ವೀಕ್ಷಿಸಲು ಸ್ವತಃ ತಾನೇ ಇರುವುದಿಲ್ಲ ಎಂಬುದು ಅವನಿಗೆ ತಿಳಿದಿತ್ತು! ಶುಕ್ರಸಂಕ್ರಮಣದ ಸಮಯ ಬಂದಾಗ ಎಲ್ಲ ವಿಜ್ಞಾನಿಗಳು ಮತ್ತು ಖಗೋಳಶಾಸ್ತ್ರಜ್ಞರು ಅತ್ಯಂತ ಶ್ರದ್ಧೆಯಿಂದ, ಬ್ರಿಟನ್ ಮತ್ತು ಫ಼್ರಾನ್ಸ್ ನಡುವಿನ ಯುದ್ಧದ ಪ್ರತಿಕೂಲಗಳನ್ನೂ ಎದುರಿಸಿ ಹ್ಯಾಲಿ ವಹಿಸಿದ ಕೆಲಸ ನಿರ್ವಹಿಸಿದರು. ಯುದ್ಧ ಪೀಡಿತ ಸಮುದ್ರ ಪ್ರದೇಶಗಳಲ್ಲಿ ನೌಕಾಯಾನ ನಡೆಸುವುದು ಪ್ರಾಣಕಂಟಕದ ವಿಚಾರವಾಗಿದ್ದರೂ ಸಹ ಆ ಧೈರ್ಯಶಾಲಿಗಳು ಅಗಾಧ ದೂರದ ಮಾರ್ಗಗಳನ್ನು ಕ್ರಮಿಸಿ ಮಾನವ ಸಂಕುಲಕ್ಕೆ ಸಮಸ್ಯೆಯಾಗಿರುವ ಆ ಪ್ರಶ್ನೆಗೆ ಉತ್ತರ ಹುಡುಕಲು ಅಲೆದಾಡಿದ್ದರು. ಇದು ವಿಜ್ಞಾನ ಪ್ರಪಂಚದಲ್ಲಿ ಮೊಟ್ಟ ಮೊದಲ ಅಂತಾರಾಷ್ಟ್ರೀಯ ಮಟ್ಟದ ಸಹಯೋಗ ಎನಿಸಿಕೊಂಡಿತ್ತು!

೧೭೬೯ರಲ್ಲಿ ಜರುಗಿದ ಶುಕ್ರಸಂಕ್ರಮಣವನ್ನು ಪ್ರಪಂಚದಾದ್ಯಂತ ೭೫ಕ್ಕೂ ಹೆಚ್ಚು ವೀಕ್ಷಣಾ ಘಟಕಗಳಿಂದ ನಡೆಸಿದ ಅವಲೋಕನ, ಸೂರ್ಯ ಮತ್ತು ಭೂಮಿಯ ನಡುವಿನ ಅಂತರ ೧೪.೯೭ ಕೋಟಿ ಕಿ.ಮೀ ಎಂದು ಜಗತ್ತಿಗೆ ತಿಳಿಯಪಡಿಸಿತು. ಇಂದಿನ ಆಧುನಿಕ ಕೌಶಲಗಳಿಂದ ಲಭ್ಯವಾಗಿರುವ ನಿಖರ ಮಾಪನಕ್ಕೆ ಇದು ತೀರಾ ಹತ್ತಿರದ ಅಳತೆಯೆನಿಸಿಕೊಂಡಿದೆ. 

ಇಂದು, ಕೆಪ್ಲರ್ ಆಕಾಶನೌಕೆಯು ಭೂಮಿಯಂತಿರುವ ಇತರೆ ಗ್ರಹಗಳನ್ನು ಪತ್ತೆ ಹಚ್ಚಲು, ವಿಶ್ವದ ಬೇರೆ ಬೇರೆ ನಕ್ಷತ್ರಗಳ ಸುತ್ತ ಪರಿಭ್ರಮಿಸುತ್ತಿರುವ ಗ್ರಹಗಳ ಸಂಕ್ರಮಣಗಳನ್ನು ಸೆರೆ ಹಿಡಿಯುತ್ತಿದೆ. ತನ್ನ ಉಡ್ಡಯನ ಮೊದಲುಗೊಂಡ ಮಾರ್ಚ್ ೨೦೦೯ ರಿಂದ ಇಲ್ಲಿಯವರೆಗೆ, ನೀರಿನ ಅಸ್ತಿತ್ವ ಇರಬಹುದಾದ, ತಮ್ಮ ತಮ್ಮ ಸೂರ್ಯರಿಂದ (ಆ ಗ್ರಹಗಳು ಸುತ್ತುಹಾಕುವ ನಕ್ಷತ್ರಗಳಿಂದ) ಸುರಕ್ಷಿತ ಅಂತರದಲ್ಲಿ ಇರುವ ೫೦ಕ್ಕೂ ಹೆಚ್ಚು ಗ್ರಹಗಳನ್ನು ಬೆಳಕಿಗೆ ತಂದಿದೆ. ಹಾಗೆಯೇ, ಜೀವರಾಶಿಯ ಇರುವಿಗಾಗಿ ನೀರು ಅತ್ಯವಶ್ಯಕ ಎಂಬುದು ನಮಗೆ ತಿಳಿದಿದೆಯಷ್ಟೆ. ಈ ಪ್ರಕಾರವಾಗಿ ಆಕಾಶಕಾಯಗಳ ಸಂಕ್ರಮಣಗಳು ಸೌರಮಂಡಲದಾಚೆ ಇರಬಹುದಾದ ಜೀವಿಗಳ ಅನ್ವೇಷಣೆಗೆ ಸಹಾಯಕಾರಿಯಾಗಿವೆ. 

ಈ ವಿದ್ಯಮಾನವನ್ನು ವೀಕ್ಷಿಸುವುದು ಹೇಗೆ? 
ಇಲ್ಲಿ ಸೂರ್ಯನ ದೀರ್ಘಾವಧಿಗಳ ವೀಕ್ಷಣೆಯಿರುವುದರಿಂದ, ಮುನ್ನೆಚ್ಚರಿಕೆವಹಿಸುವುದು ಅವಶ್ಯಕ. ಸೂರ್ಯನ ಪ್ರಕಾಶಮಾನ ಕಿರಣಗಳು ಅಕ್ಷಿಪಟಲವನ್ನು ಸುಟ್ಟು ಶಾಶ್ವತ ದೃಷ್ಟಿ ಹಾನಿಯುಂಟಾಗಬಹುದಾದ್ದರಿಂದ ಸೂರ್ಯನನ್ನು ನೇರವಾಗಿ ನೋಡಲಾಗದು. ಮಸಿಹಿಡಿದ ಗಾಜು, ಕ್ಷ-ಕಿರಣದ ಹಾಳೆಗಳು ಇತ್ಯಾದಿಗಳಾವುದನ್ನೂ ಉಪಯೋಗಿಸಬಾರದು. ಕಾರಣ, ಅವು ಸೂರ್ಯನ ಬೆಳಕಿನ ಪ್ರಖರತೆಯನ್ನು ಸಮಾನ ಪ್ರಮಾಣಗಳಲ್ಲಿ ತಗ್ಗಿಸುವುದಿಲ್ಲ. ಅಷ್ಟಲ್ಲದೆ, ಅವುಗಳ ಅಸಮಾನ ದಟ್ಟಣೆಯಿಂದಾಗಿ ಪ್ರಖರ ಕಿರಣಗಳು ನುಸುಳಿ ಅಕ್ಷಿಪಟಲದ ಸಣ್ಣ ಸೂಕ್ಷ್ಮ ಭಾಗಗಳನ್ನು ಹಾನಿಗೊಳಪಡಿಸಬಹುದಾಗಿದೆ.

ಕಪ್ಪು ಪಾಲಿಮರ್ ಪದರಗಳಿಂದ ಮಾಡಲ್ಪಟ್ಟ, ಕಿರಣಗಳ ಪ್ರಖರತೆಯನ್ನು ೧ ಲಕ್ಷ ಪಟ್ಟು ತಗ್ಗಿಸುವ ಸೋಸು ಕನ್ನಡಕಗಳನ್ನು ಬ್ರೇಕ್ ಥ್ರೂ ಸೈನ್ಸ್ ಸೊಸೈಟಿ ತಯಾರಿಸಿದೆ. ಹೀಗಾಗಿ ಅವು ಈ ನಿಟ್ಟಿನಲ್ಲಿ ಸುರಕ್ಷಿತ. ಮೊದಲನೆಯದಾಗಿ, ಇಂತಹ ಪದರಗಳಲ್ಲಿ ದಪ್ಪ ಮತ್ತು ದಟ್ಟಣೆಯಲ್ಲಿ ಅತ್ಯುನ್ನತ ಮಟ್ಟದ ಸಮಾನತೆಯನ್ನು ಕಾಯ್ದುಕೊಂಡಿರಲಾಗುತ್ತದೆ. ಎರಡನೆಯದಾಗಿ, ಸೂರ್ಯನ ಹಾನಿಕಾರಕ ಕಿರಣಗಳನ್ನು ಹೀರಿಕೊಳ್ಳುವ ವಸ್ತುವು ಎರಡು ಪದರಗಳ ನಡುವೆ ರಕ್ಷಿಸಲ್ಪಟ್ಟಿರುತ್ತದೆ. ಬೆಳಕಿನ ಪ್ರಖರತೆಯನ್ನು ೧ ಲಕ್ಷ ಪಟ್ಟು ತಗ್ಗಿಸುವ ಸೋಸು ಕನ್ನಡಕದ ಕ್ಷಮತೆಯನ್ನು ಪರೀಕ್ಷಿಸಲು, ೧೦೦ ವ್ಯಾಟ್ ತಾಪ ಜ್ವಲನದ ದೀಪ (Incandescent bulb)ವೊಂದನ್ನು ಕನ್ನಡಕ ಹಿಡಿದು ವೀಕ್ಷಿಸಿ. ಆ ದೀಪದ ಒಳತಂತಿ ಮಾತ್ರ ಮಬ್ಬಾಗಿ ಕಾಣುತ್ತಿರಬೇಕು. ಈ ವಿಶಿಷ್ಟ ವಿದ್ಯಮಾನದ ಸಮೂಹ ವೀಕ್ಷಣೆಗೆ ಇರುವ ಇತರೆ ಮಾರ್ಗಗಳೆಂದರೆ, ಸೂಕ್ಷ್ಮ ರಂಧ್ರ ಬಿಂಬ ಗ್ರಾಹಕ (pin-hole camera) ಇಲ್ಲವಾದಲ್ಲಿ ದೂರದರ್ಶಕದ ಮೂಲಕ ಸೂರ್ಯನ ಬಿಂಬವನ್ನು ಗೋಡೆ ಅಥವಾ ಬಿಳಿಯ ಪರದೆಯ ಮೇಲೆ ಹಾಯಿಸುವುದು.

ಸಾರ್ವಜನಿಕ ಸಂಕ್ರಮಣ ವೀಕ್ಷಣಾ ಕಾರ್ಯಕ್ರಮಗಳನ್ನು ಬ್ರೇಕ್ ಥ್ರೂ ಸೈನ್ಸ್ ಸೊಸೈಟಿ ದೇಶದಾದ್ಯಂತ ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ, ಉದ್ಯಾನವನಗಳಲ್ಲಿ ಮತ್ತು ಮೈದಾನಗಳಲ್ಲಿ ಜೂನ್ ೬ರಂದು ಆಯೋಜಿಸಿದೆ.

ಶುಕ್ರಸಂಕ್ರಮಣ ಮತ್ತು ಜ್ಯೋತಿಷ್ಯ: 
ನಮ್ಮೆಲ್ಲರ ಬದುಕುಗಳ ಮೇಲೆ ಶುಕ್ರಸಂಕ್ರಮಣದ ಪರಿಣಾಮದ ಭವಿಷ್ಯಕಥನಗಳು ಈಗಾಗಲೆ ಹೊರಬಿದ್ದಿವೆ. ಈ ಸಂಕ್ರಮಣವು ಯಾವಾಗಲೂ ಜೂನ್ ಅಥವಾ ಡಿಸೆಂಬರ್ ತಿಂಗಳುಗಳಲ್ಲಿ ನಡೆಯುವುದರಿಂದ ಬಹಳಷ್ಟು ಜ್ಯೋತಿಷಿಗಳು ಮಿಥುನ ಮತ್ತು ಕುಂಭ ರಾಶಿಗಳನ್ನು ಬಳಸಿ ಶುಕ್ರಸಂಕ್ರಮಣದ ಪರಿಣಾಮಗಳ ಭವಿಷ್ಯವನ್ನು ನುಡಿಯುತ್ತಿದ್ದಾರೆ. ಯಾರಾದರೊಬ್ಬ ಜ್ಯೋತಿಷಿ ಜನರಿಗೆ ತಮ್ಮ ತಮ್ಮ ನಿವಾಸಗಳಿಂದ ಸಂಕ್ರಮಣದ ಸಮಯದಲ್ಲಿ ಹೊರಬರದಿರಲು ಸಲಹೆ ನೀಡಿದರೆ ಅದರಲ್ಲಿ ಆಶ್ಚರ್ಯವೇನಿಲ್ಲ. ಆದರೆ ಒಂದು ವಿಷಯವನ್ನು ಮನದಟ್ಟು ಮಾಡಿಕೊಳ್ಳೋಣ. ಜ್ಯೋತಿಷ್ಯವು ಯಾವುದೇ ವೈಜ್ಞಾನಿಕ ಊಹೆಗಳನ್ನು ಮಾಡಲು ಅಸಮರ್ಥವಾಗಿದೆ. ಅದು ಯಾವುದೇ ರೀತಿಯ ವಿಜ್ಞಾನವಲ್ಲ ಮತ್ತು ಕಟ್ಟುನಿಟ್ಟಿನ ವೈಜ್ಞಾನಿಕ ರೀತಿ-ನೀತಿಗಳಿಂದ ಸಂಪಾದಿಸಿದ ಯಾವ ಜ್ಞಾನವನ್ನೂ ಅದು ಒಳಗೊಂಡಿಲ್ಲ. ಆದ್ದರಿಂದ, ಬನ್ನಿ, ಸಂಕ್ರಮಣದ ನಯನ ಮನೋಹರ ದೃಶ್ಯವನ್ನು ನೋಡಿ ಆನಂದಿಸಿ. ಈ ಪ್ರಕ್ರಿಯೆಯಲ್ಲಿ ಮೂಢನಂಬಿಕೆಯ ಮೇಲೆ ವಿಜ್ಞಾನ ಸಾಧಿಸುವ ವಿಜಯಕ್ಕೆ ಸಾಕ್ಷಿಯಾಗಿ! 

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9535246513, 9986033579

(ಬ್ರೇಕ್ ಥ್ರೂ ಸೈನ್ಸ್ ಸೊಸೈಟಿಯ ಆಂಗ್ಲ ಕರಪತ್ರದ ಕನ್ನಡಾನುವಾದ)


ಸಂಯುಕ್ತ ಕರ್ನಾಟಕದಲ್ಲಿ ಈ ಲೇಖನ