ಬರ್ಫಿ - ಮುಗ್ಧ ಪ್ರೇಮದ ಹಲವು ಮುಖಗಳು


ದೈಹಿಕ/ಮಾನಸಿಕ ದೌರ್ಬಲ್ಯಗಳುಳ್ಳ ಪಾತ್ರಗಳನ್ನೇ ಕೇಂದ್ರವಾಗಿರಿಸಿಕೊಂಡು ಬಾಲಿವುಡ್‍ನಲ್ಲಿ ಸಾಕಷ್ಟು ಚಿತ್ರಗಳು ಬಂದಿದ್ದರೂ, ಅವುಗಳಲ್ಲಿ ಪರಿಣಾಮಕಾರಿ ಕಥನ ಮತ್ತು ನಿರೂಪಣೆಯುಳ್ಳ ಚಿತ್ರಗಳು ಬೆರಳೆಣಿಕೆಯಷ್ಟು."ಸದ್ಮಾ" ಚಿತ್ರದಲ್ಲಿನ ಶ್ರೀದೇವಿ ಮತ್ತು ಕಮಲ್ ಹಾಸನ್ ರ ಅಭಿನಯವನ್ನು ಜನರು ಇಂದಿಗೂ ಮೆಚ್ಚುಗೆಯಿಂದ ನೆನೆಸಿಕೊಳ್ಳುತ್ತಾರೆ. "ಪಾ", "ಮೈ ನೇಮ್ ಈಸ್ ಖಾನ್"‍ನಂಥ ಚಿತ್ರಗಳು ಬಂದಿವೆಯಾದರೂ ಅವುಗಳಲ್ಲಿನ "ದೌರ್ಬಲ್ಯ ಪೀಡಿತ" ಪಾತ್ರಗಳು ಆಪ್ತವಾಗಿ ಉಳಿಯಲಿಲ್ಲ. "ಘಜಿನಿ" ಚಿತ್ರದಲ್ಲಿ ನೆನಪು-ಮರೆವುಗಳ ನಡುವೆ ಸಿಲುಕಿ ತಲ್ಲಣಿಸುವ ಪಾತ್ರವಿದ್ದರೂ, ಪ್ರೇಯಸಿಯ ಸಾವಿನ ಸೇಡಿನ ವೈಭವೀಕರಣ ಪಾತ್ರದ ಬೇರೆ ವೈಶಿಷ್ಟ್ಯಗಳನ್ನು ಮಾಸಲುಗೊಳಿಸಿತ್ತು. ಆದರೂ ಇತ್ತೀಚಿನ "ತಾರೆ ಝಮೀನ್ ಪರ್" ಮತ್ತು ಸುಮಾರು ಒಂದು ದಶಕದ ಹಿಂದೆ ತೆರೆಕಂಡಿದ್ದ "ಬ್ಲಾಕ್" ಚಿತ್ರಗಳು ಈ ನಿಟ್ಟಿನಲ್ಲಿ ಪ್ರಶಂಸೆ ಹಾಗೂ ಮೆಚ್ಚುಗೆ ಪಡೆದ ಚಿತ್ರಗಳು. ಮಾರುಕಟ್ಟೆಯ ಸೂತ್ರಗಳಿಗೆ ತಕ್ಕ ರಂಜಕ ಗುಣಗಳ ಮೇಲೆಯೇ ಪ್ರಾಶಸ್ತ್ಯ ನೀಡುವುದರಿಂದಲೋ ಅಥವಾ ಥಳುಕು-ಬಳುಕು, ತಾರಾ ವರ್ಚಸ್ಸು, ನಾಟಕೀಯತೆ, ವೈಭವೀಕರಣಗಳ ವಿಪರೀತ ವ್ಯಾಮೋಹದಿಂದಲೋ ಬಹುತೇಕ ನಿರ್ದೇಶಕರು ಸಿನೆಮಾದ ಸಿದ್ಧ ಮಾದರಿಗಳಿಗೆ ಶರಣಾಗಿರುವುದಂತೂ ಸುಳ್ಳಲ್ಲ. ಎರಡು ವಾರಗಳ ಕೆಳಗೆ ಬಿಡುಗಡೆಗೊಂಡಿರುವ "ಬರ್ಫಿ" ಚಿತ್ರ ಬಾಲಿವುಡ್‍ನ ಹಲವು ಅಪಸವ್ಯಗಳ ನೆರಳಿನಿಂದ ಪಾರಾಗಿ ನಿಲ್ಲುವ ವಿಶಿಷ್ಟ ಪ್ರಯತ್ನ.



ಅವನೊಬ್ಬ ಹುಟ್ಟು ಕಿವುಡ, ಮೂಕ. ಆದರೂ ಎಲ್ಲರಂತೆ ಬದುಕುವ ಹಂಬಲವಿರುವ ಉತ್ಸಾಹಿ ತರುಣ. ಅಪ್ಪನ ಅಭಿಮಾನದ "ಮರ್ಫಿ" ರೇಡಿಯೋದ ಹೆಸರನ್ನೇ ಇವನಿಗಿಟ್ಟಿದ್ದರೂ ಅದೊಂದನ್ನು ಮಾತ್ರ ನುಡಿಯಲು ಪ್ರಯತ್ನಿಸುವ ಇವನಲ್ಲಿ "ಬರ್ಫಿ" ಎಂಬ ಮುದ್ದಾದ ಅಪಭ್ರಂಶವಾಗುತ್ತದೆ. ತನ್ನ ಹೆಸರನ್ನು ಹೇಳುವಷ್ಟಕ್ಕೆ ಮಾತ್ರ ಇವನ ಮಾತುಗಾರಿಕೆ ಸೀಮಿತ. ಹೆಸರಿಗೆ ಅನ್ವರ್ಥವೆನ್ನುವಂಥ ಮುಗ್ಧ ವ್ಯಕ್ತಿತ್ವದ ಇವನನ್ನು ಇಡೀ ಊರು ಕರೆಯುವುದು ಅದೇ ಹೆಸರಿನಿಂದಲೇ. ಅವನಲ್ಲಿ ಪೆದ್ದುತನವಿದೆ, ತುಂಟತನವಿದೆ, ಸಹಾನುಭೂತಿಯಿದೆ, ತನ್ನ ದೌರ್ಬಲ್ಯವನ್ನೂ ಮೀರಿ ಬದುಕುವ ಜೀವನೋತ್ಸಾಹವಿದೆ. ಚಿತ್ರದ ಮೊದಲರ್ಧ ಮುಗಿಯುವುದರಲ್ಲೇ ಇವೆಲ್ಲ ಗುಣಗಳಿಂದ ಈ ಪಾತ್ರ ಪ್ರೇಕ್ಷಕನ ಮನಸ್ಸನ್ನು ಗೆಲ್ಲುತ್ತದೆ. ರಣಬೀರ್ ಕಪೂರ್ ನಿರ್ವಹಿಸಿರುವ ಕಿವುಡ-ಮೂಕನ ಪಾತ್ರ ನಿಜಕ್ಕೂ ಸವಾಲಿನದು. ನಟನೆಯಲ್ಲಿ ರಣಬೀರ್ನ ಅಲ್ಪಾನುಭವವನ್ನು ಮರೆಸುವಂಥ ಅಭಿನಯ ಈ ಚಿತ್ರದಲ್ಲಿದೆ. ಬರ್ಫಿ ನಗಿಸಲೂ ಬಲ್ಲ, ಕಂಠ ಬಿಗಿಗೊಳಿಸಲೂ ಬಲ್ಲ. ಬರ್ಫಿಯ ತುಂಟತನ, ಪೆದ್ದುತನ ತುಂಬಿರುವ ಕೆಲ ಸನ್ನಿವೇಶಗಳಲ್ಲಿ ಚಾರ್ಲೀ ಚಾಪ್ಲಿನ್ ತನ್ನನ್ನೇ ಗೇಲಿ ಮಾಡಿಕೊಂಡು ಸೃಜಿಸುತ್ತಿದ್ದ ಹಾಸ್ಯ ದೃಶ್ಯಗಳು ಅಲ್ಲಲ್ಲಿ ನೆನಪಾಗುತ್ತವೆಯಾದರೂ, ಅನುಕರಣೆ ಎನಿಸುವುದಿಲ್ಲ. ಮೂತ್ರಕೋಶ ತೊಂದರೆಯಿಂದ ಸಾವು ಬದುಕಿನ ಮಧ್ಯೆ ಹೋರಾಡುವ ತನ್ನ ತಂದೆಯ ಶಸ್ತ್ರ ಚಿಕಿತ್ಸೆಗೆ ಹಣ ಹೊಂದಿಸಲು ಪರದಾಡುವಾಗ, ಬರ್ಫಿಯ ಅಸಹಾಯಕತೆ ನಗಿಸುವುದರ ಜೊತೆಗೆ ಅವನ ಒಳಗಿನ ನೋವನ್ನೂ ತೆರೆದಿಡುತ್ತದೆ. ನಲಿವುಗಳ ಸಿಹಿಹೂರಣದೊಳಗೆ ನೋವಿನ ಕಹಿ ಬೇವನ್ನು ಹುದುಗಿಸಿಕೊಂಡಿರುವ ಬದುಕಿನ ವಿಲಕ್ಷಣತೆಯನ್ನು ಈ ದೃಶ್ಯಗಳು ಚಿತ್ರಿಸಿವೆ.

ಚಿತ್ರದಲ್ಲಿರುವ ಮತ್ತೊಂದು ಪ್ರಮುಖ ಪಾತ್ರ "ಝಿಲ್‍ಮಿಲ್". ಬುದ್ಧಿಮಾಂದ್ಯ ಹುಡುಗಿ. ಸಮಾಜ ಅವಳನ್ನು ಒಪ್ಪದಿರಬಹುದೆಂಬ ಭಯದಿಂದ, ಹೆತ್ತ ತಾಯಿಯಿಂದಲೇ ತಿರಸ್ಕೃತಗೊಂಡವಳು. ತನ್ನ ಅಜ್ಜ, ಮನೆಕೆಲಸದಾಕೆ ಮತ್ತು ತನ್ನನ್ನು ಸಾಕುತ್ತಿರುವ ಆಶ್ರಮದ ದಾದೂ - ಇವರಿಷ್ಟು ಜನರೊಡನೆ ಮಾತ್ರ ಅವಳ ಆತ್ಮೀಯತೆ. ಈ ಪಾತ್ರದಲ್ಲಿ ಅಭಿನಯಿಸಿರುವ ಪ್ರಿಯಾಂಕಾ ಚೋಪ್ರಾಳದ್ದು ಗಮನಾರ್ಹ ಅಭಿನಯ. ಬುದ್ಧಿಮಾಂದ್ಯ ಹುಡುಗಿಯ ಹಾವ-ಭಾವಗಳು ಎಲ್ಲೂ ಅತಿರೇಕವೆನಿಸದೆ ಸಹ್ಯವೆನಿಸುತ್ತವೆ. ಅದಕ್ಕೆ ಬೇಕಿರುವ ಮುಗ್ಧತೆಯ ವಿವಿಧ ಭಾವವಿನ್ಯಾಸಗಳನ್ನು ತನ್ನ ಅಭಿನಯದಲ್ಲಿ ಅಳವಡಿಸಿಕೊಳ್ಳಲು ಪ್ರಿಯಾಂಕ ಯತ್ನಿಸಿರುವುದು ಶ್ಲಾಘನೀಯ. ತಾನು ಮೈಮರೆತು ಹಾಡುವಾಗ ತನ್ನದೇ ಕುಟುಂಬದ ಜನರು ಗೇಲಿಮಾಡಿದಾಗ ಅವಳಿಗುಂಟಾಗುವ ಹತಾಶೆಯ ದೃಶ್ಯ ಪ್ರೇಕ್ಷಕರನ್ನು ಭಾವುಕಗೊಳಿಸುವುದು ಸುಳ್ಳಲ್ಲ. ಹೀಗಿರುವ ಹುಡುಗಿಗೆ, ತಂದೆಯನ್ನು ಕಳೆದುಕೊಂಡು ಅನಾಥವಾಗುವ ಬರ್ಫಿ ಜೊತೆಯಾಗಿ, ಆಸರೆಯಾಗುವುದೇ ಇಡೀ ಚಿತ್ರದ ಜೀವಾಳ. ಮುಗ್ಧ ಜೋಡಿಯ ನಿಷ್ಕಾರಣ ಪ್ರೇಮ ಕಥನದಲ್ಲಿ ಝಿಲ್‍ಮಿಲ್‍ಳ ಅಪಹರಣ, ಅವಳಿಗಾಗಿ ನಡೆಯುವ ಹುಡುಕಾಟ, ಬರ್ಫಿಯ ಮೇಲೆ ಬರುವ ಅಪವಾದಗಳು ಒಂದಕ್ಕೊಂದು ಪೂರಕವಾಗುತ್ತ ಚಿತ್ರ ಸಾಗುತ್ತದೆ. ಬರ್ಫಿಯ ಮೊದಲ ಪ್ರೇಯಸಿ "ಶೃತಿ"ಯ ಪಾತ್ರದಲ್ಲಿ ನಟಿಸಿರುವ ಇಲೆಯಾನ ಕೂಡ ಪ್ರಶಂಸಾರ್ಹಳು. ದಕ್ಷಿಣ ಭಾರತದ ಚಿತ್ರಗಳಲ್ಲಿ ಗ್ಲಾಮರ್ ಭರಿತ ನಾಯಕಿಯ ಪಾತ್ರಗಳಿಗಷ್ಟೆ ಸೀಮಿತಳಾಗಿದ್ದ ಈಕೆಗೆ ಇದು ಗಂಭೀರ ಪೋಷಕ ಪಾತ್ರ. ಮೌನದಲ್ಲೇ ಹಲವು ಭಾವಗಳನ್ನು ಹೊಮ್ಮಿಸುವ ಈ ಪಾತ್ರದ ಆಳಕ್ಕಿಳಿಯಿಲು ಯತ್ನಸಿರುವುದು ಅವಳೊಳಗಿನ ಪ್ರತಿಭೆಯನ್ನು ದುಡಿಸಿಕೊಂಡಿರುವುದಕ್ಕೆ ಸಾಕ್ಷಿ.



ಬೇರೆ ಬೇರೆ ಕಾಲಘಟ್ಟಗಳಲ್ಲಿ ಸನ್ನಿವೇಶಗಳನ್ನು ಹಿಂದು ಮುಂದು ಮಾಡುತ್ತಾ, ಕಥೆಯನ್ನು ನಿರೂಪಿಸಿರುವ ತಂತ್ರ ತೀರಾ ಹೊಸದೇನಲ್ಲದಿದ್ದರೂ ಭಿನ್ನ ಅನುಭವ ನೀಡುವುದಂತೂ ನಿಜ. ಹಾಗೆಯೇ, ಕಥೆಯ ಬಹುತೇಕ ಭಾಗ ೭೦ರ ದಶಕದಲ್ಲಿ ನಡೆಯುವಂಥದ್ದು. ಅಪಹರಣ, ಹುಡುಕಾಟಗಳ ಸಂದರ್ಭಗಳಲ್ಲಿ ಮೊಬೈಲ್, ಟಿ.ವಿ ಇತ್ಯಾದಿ ದಿನಬಳಕೆಯ ತಂತ್ರಜ್ಞಾನಗಳ ಹಂಗು ಇರದೆ, ಚಿತ್ರಕಥೆಯನ್ನು ಆದಷ್ಟೂ ಸಹಜ, ವಾಸ್ತವಿಕ ಮತ್ತು ಮಾನವೀಯಗೊಳಿಸುವ ಯತ್ನ ನಿರ್ದೇಶಕರದ್ದು. ಡಾರ್ಜೀಲಿಂಗ್‍ನ ಪ್ರಕೃತಿ ಸೊಬಗು, ಉಗಿ ಬಂಡಿ ಮತ್ತು ಕೋಲ್ಕತ್ತಾದ ಹಳೆಯ ಗಲ್ಲಿ, ಚೌಕಿಗಳನ್ನು ಚೀತ್ರಿಕರಣಕ್ಕೆ ಆಯ್ಕೆ ಮಾಡಿರುವುದರ ಹಿಂದೆಯೂ ಇದೇ ಉದ್ದೇಶ ಇರಬಹುದು. ದಶಕಗಳ ನಂತರ ಹಿಂದಿ ಸಿನೆಮಾವೊಂದರಲ್ಲಿ ಕೋಲ್ಕತಾದ ಹೌರಾ ಸೇತುವೆ ಮತ್ತೆ ಕಾಣಸಿಗುವುದು ಸಂತಸದ ಸಂಗತಿ.

ಚಿತ್ರದ ಅನನ್ಯತೆ ಕಾಣಿಸುವುದು ಅದರ ಮೂಕಿ ಗುಣದಲ್ಲಿ. ಹಲವಾರು ಸನ್ನಿವೇಶಗಳಲ್ಲಿ ಮೌನಕ್ಕೇ ಪ್ರಾಧಾನ್ಯ. ಅದಕ್ಕೆ ಮೆರುಗು ನೀಡಿರುವುದು ಛಾಯಾಗ್ರಹಣ ಮತ್ತು ಸಂಕಲನ. ಮೌನದ ಸನ್ನಿವೇಶಗಳಿಗೆ ಹೇಳಿ ಮಾಡಿಸಿದ ಬೆಳಕು-ನೆರಳುಗಳ ಬಳಕೆ, ತಂತ್ರಗಾರಿಕೆಯಲ್ಲಿ ಚಿತ್ರ ಸಾಧಿಸಿರುವ ಔನ್ನತ್ಯವನ್ನು ಬಿಂಬಿಸುತ್ತದೆ. ಅಲ್ಲಲ್ಲಿ ಬಂದು ಹೋಗುವ ೬ ಹಾಡುಗಳಿಗಿಂತ ಹಿನ್ನೆಲೆ ಸಂಗೀತ ಮನಸ್ಸಿಗೆ ತಟ್ಟುವಂತಿದೆ. ಬರ್ಫಿ ಹಾಗೂ ಝಿಲ್‍ಮಿಲ್‍ರ ಮೂಕ ಸಂವಾದಗಳಲ್ಲಿ ಹಿನ್ನೆಲೆ ಸಂಗೀತವೂ ಒಂದು ಪಾತ್ರದಂತಿದೆ. ತಂತ್ರಜ್ಞರನ್ನು ಹಾಗೂ ನಟರನ್ನು ಸಮರ್ಥವಾಗಿ ಬಳಸಿಕೊಂಡು ದೃಶ್ಯಗಳಲ್ಲೆ ಕಥೆ ಕಟ್ಟುತ್ತಾ ಅದನ್ನು ಬೆಳೆಸುವ ನಿರ್ದೇಶಕ ಅನುರಾಗ್ ಬಸು ಅಭಿನಂದನಾರ್ಹರು. ಚಿತ್ರದಲ್ಲಿ ಕೆಲ ಓರೆಕೋರೆಗಳೂ ಉಂಟು. ಬರ್ಫಿ ತನ್ನ ಹಳೆಯ ಪ್ರೇಯಸಿಯ ಜೊತೆ ಒಡನಾಡುವುದು ಹಾಗೂ ಆಪ್ತವಾಗಿರುವುದನ್ನು ನೋಡಿ ಬುದ್ಧಿಮಾಂದ್ಯ ಝಿಲ್‍ಮಿಲ್‍ಳಲ್ಲಿ ಹುಟ್ಟುವ ಈರ್ಷ್ಯೆ ಅಷ್ಟು ಪರಿಣಾಮಕಾರಿಯಾಗಿ ಮೂಡಿಬಂದಿಲ್ಲ. ಚಿತ್ರದ ಕಡೆಯಲ್ಲಿ ಬರುವ ಬರ್ಫಿ-ಝಿಲ್‍ಮಿಲ್‍ರ ಮದುವೆ ಹಾಗೂ ಇಳಿವಯಸ್ಸಿನ ದಂಪತಿಗಳಾಗಿರುವ ಸನ್ನಿವೇಶಗಳಲ್ಲಿ ನಾಟಕೀಯತೆ ತುಂಬಿದಂತೆನಿಸುತ್ತದೆ.

ಬರ್ಫಿ ನೋಡುವಂಥ ಸಿನೆಮಾ ಆಗಿ ಗೆಲ್ಲುವುದು, ನಿರ್ದೇಶಕರ ಲವಲವಿಕೆಯ ನಿರೂಪಣೆಯಿಂದ, ನಟ-ನಟಿಯರ ಹದ ಮೀರದ ಅಭಿನಯಗಳಿಂದ. ಬರ್ಫಿ ಹಾಸ್ಯದಿಂದಲೇ ಮನಸ್ಸನ್ನು ಆರ್ದ್ರ‍‍ಗೊಳಿಸುತ್ತದೆ. ದುಃಖ-ನೋವುಗಳಿಂದಲೇ ನಗಿಸುತ್ತದೆ. ಮೌನದ ಧ್ವನಿಯನ್ನೇ ಮಾತಾಗಿಸುತ್ತದೆ. ಎಲ್ಲಕ್ಕೂ ಮಿಗಿಲಾಗಿ ಮುಗ್ಧ ಪ್ರೇಮದ ಹಲವು ಮುಖಗಳನ್ನು ಅನಾವರಣಗೊಳಿಸುತ್ತದೆ.

ಚಿತ್ರ ಕೃಪೆ : ಐಬಿಏನ್ ಲೈವ್ , ಸೆವೆಂಟಿ ಎಂಎಂ

Comments

Popular posts from this blog

ಮಾತು-ಮೌನ-ಮನಸ್ಸು

ಗುಂಗು ಹಿಡಿಸುವ ಮಧುರಾನುಭವ

ನಿರೀಕ್ಷೆ