ತ್ಯಾಜ್ಯದಿಂದ ವಿದ್ಯುತ್ - ತ್ಯಾಜ್ಯ ನಿರ್ವಹಣೆಯ ಸಮಸ್ಯೆಗೆ ಶಾಶ್ವತ ಪರಿಹಾರ?

ಕಸದಿಂದ ರಸ ತೆಗೆಯುವ ಅನೇಕ ವಿಧಾನಗಳು ನಮಗೆ ಪರಿಚಿತ. ಆದರೆ ಕಸದಿಂದ ವಿದ್ಯುತ್ ಕೂಡ ತಯಾರಿಸಬಹುದೆಂದು ನಮ್ಮಲ್ಲಿ ಬಹುತೇಕರಿಗೆ ಗೊತ್ತಿರಲಾರದು. ಇಲ್ಲಿ ಕಸ ಎಂದರೆ ಯಾವುದೋ ಒಂದು ಬಗೆಯ ಕಸ ಮಾತ್ರವಲ್ಲ. ಬೆಂಗಳೂರಿನ ಸದ್ಯದ ಕಸ ವಿಲೇವಾರಿ ಸಮಸ್ಯೆಯಿಂದ ಅಲ್ಲಲ್ಲಿ ತಿಪ್ಪೆಗಳಾಗಿ ರಾಶಿ ರಾಶಿಯಾಗಿ ಕಾಣಸಿಗುವ ಒಣ ಮತ್ತು ಹಸಿ ಮಿಶ್ರಿತ ತ್ಯಾಜ್ಯ, ಕೈಗಾರಿಕಾ ಕಸ, ಜೈವಿಕ ತ್ಯಾಜ್ಯ, ಪ್ಲಾಸ್ಟಿಕ್ ಇನ್ನೂ ಹಲವು ಬಗೆಯ ತ್ಯಾಜ್ಯ - ಇವೆಲ್ಲವುಗಳನ್ನು ಬಳಸಿ ವಿದ್ಯುತ್ ಉತ್ಪಾದಿಸುವ "ಅನಿಲೀಕರಣ" ತಂತ್ರಜ್ಞಾನ ಲಭ್ಯವಿದೆ. ತ್ಯಾಜ್ಯ ವಿಲೇವಾರಿ ಸಮಸ್ಯೆಯನ್ನೇ ದೊಡ್ಡದಾಗಿಸಿಕೊಂಡು ಬೆಂಗಳೂರಿನ ಬಿ.ಬಿ.ಎಂ.ಪಿ ಒದ್ದಾಡುತ್ತಿರುವಾಗ, ಪುಣೆಯಲ್ಲಿ ತ್ಯಾಜ್ಯದ ಅನಿಲೀಕರಣದಿಂದ ವಿದ್ಯುತ್ ಉತ್ಪಾದಿಸುವ ಘಟಕ ಸ್ಥಾಪಿತಗೊಂಡು ಅದರಿಂದ ವಿದ್ಯುತ್ ಸರಬರಾಜಾಗುತ್ತಿದೆ. ತ್ಯಾಜ್ಯ ವಿಂಗಡನೆ, ವಿಸರ್ಜನೆಗಳ ಸುತ್ತ ಎದ್ದಿರುವ ಸಮಸ್ಯೆಗಳ ಭರಾಟೆಯಲ್ಲಿ, ಇದಕ್ಕೆ ಸರಿಯಾದ ಪ್ರಚಾರವಿಲ್ಲದೆ, ಸರ್ಕಾರವೂ ಈ ನಿಟ್ಟಿನಲ್ಲಿ ಚಿಂತಿಸದೇ ಇದು ಬೆಳಕಿಗೆ ಬರದಿರುವುದು ವಿಪರ್ಯಾಸದ ಸಂಗತಿ. ಈ ತಂತ್ರಜ್ಞಾನವನ್ನು ಅವಲೋಕಿಸುವ ಮುನ್ನ ತ್ಯಾಜ್ಯ ನಿರ್ವಹಣೆಗೆ ಈಗ ಬಿ.ಬಿ.ಎಂ.ಪಿ ಅನುಸರಿಸುತ್ತಿರುವ ವಿಧಾನದಲ್ಲಿರುವ ಸಮಸ್ಯೆ, ಕೊರತೆ ಹಾಗೂ ಸವಾಲುಗಳನ್ನು ಗಮನಿಸೋಣ.

ತ್ಯಾಜ್ಯ ನಿರ್ವಹಣೆಗಾಗಿ ಸದ್ಯ ಬಳಕೆಯಲ್ಲಿರುವ ಪ್ರಕ್ರಿಯೆ ಹೀಗಿದೆ:

1. ಪ್ರತಿ ವಾರ್ಡ್‍ನ ಪ್ರತಿ ಮನೆಯಿಂದ ತ್ಯಾಜ್ಯ ಸಂಗ್ರಹ
2. ಆಯಾ ವಾರ್ಡ್‍ನಲ್ಲಿ ಸಂಗ್ರಹಗೊಂಡ ಕಸವನ್ನು ಒಂದೆಡೆ ಸೇರಿಸಿ ಲಾರಿಗಳಿಗೆ ತುಂಬುವುದು
3. ಈ ಎಲ್ಲ ಲಾರಿಗಳು ತುಂಬಿಸಿಕೊಂಡ ಕಸವನ್ನು ಊರಾಚೆಗಿರುವ ತ್ಯಾಜ್ಯ ವಿಸರ್ಜನಾ ಮೈದಾನಗಳಿಗೆ ಕೊಂಡೊಯ್ದು ಅಲ್ಲಿ ಸುರಿಯುವುದು.

ಈಗ್ಗೆ ಕೆಲವು ವಾರಗಳ ಕೆಳಗೆ ಬಿ.ಬಿ.ಎಂ.ಪಿ ತ್ಯಾಜ್ಯ ಮರುಬಳಕೆಯನ್ನು ಅನುಷ್ಠಾನಗೊಳಿಸುವ ಉದ್ದೇಶದಿಂದ ಮೂಲದಲ್ಲಿ (ಅಂದರೆ ತ್ಯಾಜ್ಯ ಉತ್ಪತ್ತಿಯಾಗುವ ಮೂಲ. ಉದಾ: ಮನೆ, ಅಂಗಡಿ, ಕಾರ್ಖಾನೆ ಇತ್ಯಾದಿ) ತ್ಯಾಜ್ಯವನ್ನು ಒಣ ಹಾಗೂ ಹಸಿ ತ್ಯಾಜ್ಯವನ್ನಾಗಿ ಬೇರ್ಪಡಿಸಿ ಪೌರಕಾರ್ಮಿಕರಿಗೆ ಹಸ್ತಾಂತರಿಸುವ ಹೊಸ ಕ್ರಮವನ್ನು ಜಾರಿಗೆ ತಂದಿತು. ಜನಸಾಂದ್ರತೆ ಜಾಸ್ತಿಯಿರುವ ಬೆಂಗಳೂರಿನಲ್ಲಿ, ಇದರ ಕುರಿತಾಗಿ ಎಲ್ಲ ಜನರಲ್ಲಿ ತಿಳುವಳಿಕೆ ಮೂಡಿಸುಲು ಪ್ರಚಾರ ಸಮರ್ಪಕವಾಗಿ ನಡೆಯಲಿಲ್ಲ. ಜನಜಾಗೃತಿಯ ಕೊರತೆಯ ಕಾರಣದಿಂದ ಈ ಯೋಜನೆ ಸದ್ಯಕ್ಕೆ ವಿಫಲಗೊಂಡಿದೆ. ಒಂದು ವೇಳೆ ಈ ಯೋಜನೆ ಯಶಸ್ವಿಯಾದರೂ ಸಹ, ಸಂಗ್ರಹಗೊಳ್ಳುವ ಅಷ್ಟೂ ತ್ಯಾಜ್ಯ ಮರುಬಳಕೆಗೆ ಯೋಗ್ಯವಾಗಿರುವುದಿಲ್ಲ. ಉದಾಹರಣೆಗೆ ಪ್ಲಾಸ್ಟಿಕ್. ಕಸದ ಹೆಚ್ಚಿನ ಪಾಲು ಅವೇ ಮೈದಾನಗಳಲ್ಲಿ ಭರ್ತಿಗೊಳ್ಳುತ್ತವೆ. ಮರುಬಳಕೆಗೆ ಬರುವ ಕಸದಿಂದ ಕಾಂಪೋಸ್ಟ್ ಗೊಬ್ಬರವನ್ನು ಉತ್ಪಾದಿಸಬಹುದಾದರೂ, ಇದನ್ನು ಬೆಳೆಗಳಿಗೆ ಬಳಸಿದಾಗ ವಿಷಯುಕ್ತ ಅಂಶಗಳು ಆಹಾರದಲ್ಲಿ ಸೇರಿಕೊಳ್ಳುವ ಅಪಾಯವಿದೆ. ಅಲ್ಲದೆ, ಇದು ಪರಸರಕ್ಕೆ ಹಾನಿಕಾರಕ ಕೂಡ. ಇವಿಷ್ಟೇ ಅಲ್ಲದೆ ಇನ್ನೂ ಹಲವಾರು ಸಮಸ್ಯೆಗಳಿವೆ


1. ವಿಸರ್ಜನಾ ಮೈದಾನಗಳು ತುಂಬಿಹೋದ ನಂತರ ಹೊಸ ಮೈದಾನಗಳನ್ನು ಗುರುತಿಸಬೇಕಾಗುತ್ತದೆ. ಎಕರೆಗಟ್ಟಲೆ ಭೂಮಿಯನ್ನು ಪಡೆಯಬೇಕಾಗುತ್ತದೆ. ಬೆಂಗಳೂರು ದಿನೇ ದಿನೇ ಬೆಳೆಯುತ್ತಿರುವಾಗ ಮುಂದಿನ ದಿನಗಳಲ್ಲಿ ಅಷ್ಟು ವಿಶಾಲವಾದ ಮೈದಾನಗಳು ದೊರಕುವುದು ದುಸ್ಸಾಧ್ಯ. ಈಗಾಗಲೆ ನಗರೀಕರಣದಿಂದ ಕಳೆದುಹೋಗುತ್ತಿರುವ ಕೃಷಿ ಭೂಮಿ ಇನ್ನಷ್ಟು ಕ್ಷೀಣಿಸುತ್ತದೆ.

2. ಇಂತಹ ಮೈದಾನಗಳಲ್ಲಿ ಬೃಹತ್ ಪ್ರಮಾಣದಲ್ಲಿ ತ್ಯಾಜ್ಯ ವಿಸರ್ಜಿತಗೊಳ್ಳುವುದರಿಂದ ಅದರ ಸುತ್ತಮುತ್ತಲಿನ ಹಳ್ಳಿಗಳ ನಿವಾಸಿಗಳಿಗೆ ಇದರಿಂದ ತೊಂದರೆಗಳಿವೆ. ದುರ್ನಾತ, ಸೋಂಕು, ಅಂತರ್ಜಲದಲ್ಲಿ ವಿಷಯುಕ್ತ ಕಣಗಳ ಬೆರಕೆ ಇತ್ಯಾದಿ.
3. ಒಂದು ಅಂದಾಜಿನ ಪ್ರಕಾರ, 5 ವರ್ಷಗಳಲ್ಲಿ ಉತ್ಪಾದಿತಗೊಳ್ಳುವ ಕಸದಿಂದ ಕಾಂಪೋಸ್ಟ್ ಅಥವಾ ಬಯೋಗ್ಯಾಸ್ ತಯಾರಿಸಲು ಸುಮಾರು 2೦೦೦ ಎಕರೆಗಳ ಜಾಗ ಬೇಕಾಗುತ್ತದೆ. ಕಾಂಪೋಸ್ಟ್ ತಯಾರಿಕೆ ಏನಿದ್ದರೂ ಗೃಹಬಳಕೆಯ ಮಟ್ಟದಲ್ಲಿ ಸಣ್ಣ ಪ್ರಮಾಣದಲ್ಲಿ ನಡೆಸಲಷ್ಟೆ ಸೂಕ್ತ. ಮೇಲಾಗಿ, ಈ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸುವ ಸವಾಲಿದೆ.

ಹೀಗಿರುವಾಗ, ತ್ಯಾಜ್ಯ ನಿರ್ವಹಣೆಯ ಪ್ರಚಲಿತ ಪ್ರಕ್ರಿಯೆ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಲಾರದು. ತ್ಯಾಜ್ಯದಿಂದ ವಿದ್ಯುತ್ ತಯಾರಿಸಬಹುದಾದ "ಅನಿಲೀಕರಣ" ತಂತ್ರಜ್ಞಾನ ಈ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರವಾಗಬಲ್ಲದು.


ಏನಿದು ಅನಿಲೀಕರಣ ತಂತ್ರಜ್ಞಾನ?

ಎಲ್ಲ ಬಗೆಯ ಕಸವನ್ನೂ (ಪ್ಲಾಸ್ಟಿಕ್ಕನ್ನೂ ಒಳಗೊಂಡಂತೆ) ಒಂದು ಬೃಹತ್ ಕುಲುಮೆಯಲ್ಲಿ ಸುಮಾರು 4000-5000 ಡಿಗ್ರಿ ಸೆಲ್ಷಿಯಸ್ ತಾಪಮಾನದಲ್ಲಿ ಕಾಯಿಸಲಾಗುತ್ತದೆ. ಆಧುನಿಕ ಅನಿಲೀಕರಣ ಕುಲುಮೆಗಳನ್ನು ಬಳಸಿದರೆ, ಪ್ಲಾಸ್ಟಿಕ್ ನಿಂದ ವಿಷಯುಕ್ತ ಡೈಯಾಕ್ಸಿನ್ ಮತ್ತು ಫ಼್ಯುರಾನ್ ಅನಿಲಗಳು ಹೊರಬರುವ ಚಿಂತೆಯಿರುವುದಿಲ್ಲ. ಅಗಾಧ ಉಷ್ಣತೆಯಲ್ಲಿ ಹೀಗೆ ಕಾಯಿಸುವುದರಿಂದ ತ್ಯಾಜ್ಯ ಬಿಸಿ ಅನಿಲವಾಗಿ ರೂಪಾಂತರಗೊಳ್ಳುತ್ತದೆ. ಈ ಅನಿಲದಲ್ಲಿ ಬೆರೆತ ಹಾರು ಬೂದಿಯ ಕಣಗಳನ್ನು ಬೇರ್ಪಡಿಸಿದರೆ, ಅದು ವಿದ್ಯುತ್ ಉತ್ಪಾದನೆಗೆ ಯೋಗ್ಯ. ಬೇರ್ಪಡಿಸಿದ ಹಾರು ಬೂದಿಯೂ ಉಪಯುಕ್ತವೇ. ಅದರಿಂದ ಇಟ್ಟಿಗೆಗಳನ್ನು ತಯಾರಿಸಬಹುದು. ಅಲ್ಲದೆ, ಸೀಸ, ಪಾದರಸ ಮತ್ತು ಇತರ ಲೋಹ ಮಿಶ್ರಿತ ಘನ ತ್ಯಾಜ್ಯವನ್ನು ಈ ಪ್ರಕ್ರಿಯೆಯಲ್ಲಿ ಪ್ರತ್ಯೇಕಿಸಬಹುದು. ಅನಿಲೀಕರಣಕ್ಕೆ ಬೇಕಾದ ತಾಪಮಾನ ನೀಡಲು, ಉಗಿ(ನೀರಿನ ಹಬೆ), ಬಿಸಿ ಗಾಳಿ, ಪ್ಲಾಸ್ಮ ಮೊದಲಾಗಿ ಹಲವಾರು ವಿಧಾನಗಳಿವೆ. ಇದರಲ್ಲಿ ಪ್ಲಾಸ್ಮ ಬಳಕೆಯ ವಿಧಾನ ಉತ್ಕೃಷ್ಟ ಫಲಿತಾಂಶ ನೀಡಬಲ್ಲದು. ಬೆಂಗಳೂರಿನ ಸದ್ಯದ ಸಮಸ್ಯೆಗಳಿಗೆ ಇವುಗಳಲ್ಲಿ ಯಾವ ವಿಧಾನವಾದರೂ ಆಗಬಹುದು. ಪ್ರಾಯೋಗಿಕವಾಗಿ ಇದನ್ನು ಅನುಷ್ಠಾನಗೊಳಿಸಿದ ಮೇಲೆ ಸುಧಾರಿತ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬಹುದು. ಪ್ಲಾಸ್ಟಿಕ್, ಕಾಗದ, ಜೈವಿಕ ಕಸ, ಅಂಗಡಿ-ಉಪಾಹಾರ ಮಂದಿರಗಳ ಕಸ, ಚರಂಡಿ-ಮೋರಿಗಳ ಕಸ ಮಿಶ್ರಿತ ದ್ರವ, ವಾಹನಗಳಿಂದ ಹೊರಬರುವ ಘನ ಹಾಗೂ ಜಿಡ್ಡಿನ ತ್ಯಾಜ್ಯ, ಕೃಷಿ ತ್ಯಾಜ್ಯ - ಹೀಗೆ ಇನ್ನೂ ಹಲವಾರು ಬಗೆಯ ತ್ಯಾಜ್ಯಗಳು ಅನಿಲೀಕರಣಕ್ಕೆ ಸೂಕ್ತವೆನಿಸಿವೆ.

ಅನಿಲೀಕರಣದ ಒಂದು ಘಟಕಕ್ಕೆ ಸುಮಾರು 2 ರಿಂದ 3 ಎಕರೆಗಳ ಭೂಪ್ರದೇಶ ಬೇಕಾಗುತ್ತದೆ. ಇಂತಹ ಘಟಕ ದಿನಕ್ಕೆ ಸುಮಾರು 750 ಮೆಗಾಟನ್‍ಗಳಷ್ಟು ತ್ಯಾಜ್ಯವನ್ನು ನಿರ್ವಹಿಸಬಲ್ಲದು. ಪ್ರಾರಂಭಿಕ ಹಂತದಲ್ಲಿ ಮಾತ್ರ ಇದಕ್ಕೆ ವಿದ್ಯುತ್ ಒದಗಿಸಿದರೆ ಸಾಕು. ಇದು ಸಕ್ರಿಯಗೊಂಡ ನಂತರ ಅಲ್ಲೇ ವಿದ್ಯುತ್ ಉತ್ಪಾದನೆಯಾಗುವುದರಿಂದ ಈ ಘಟಕ ಸ್ವಾವಲಂಬಿಯಾಗಿ ಕಾರ್ಯನಿರ್ವಹಿಸಬಹುದು. ಹೊರಗಿನಿಂದ ವಿದ್ಯುತ್ ಪೂರೈಸುವ ಅವಶ್ಯಕತೆಯೇ ಇರುವುದಿಲ್ಲ. ಅನಿಲೀಕರಣ ಘಟಕವನ್ನು ಸ್ಥಾಪಿಸಿ ಅದನ್ನು ಚಾಲನೆಗೆ ತರುವುದಕ್ಕೆ 6 ರಿಂದ 9 ತಿಂಗಳುಗಳ ಅವಧಿ ಸಾಕು.


ಪುಣೆ ಮತ್ತು ತಿರುವನಂತಪುರಗಳಲ್ಲಿ ಅನಿಲೀಕರಣದ ಬಳಕೆ :

ನೆರೆರಾಜ್ಯಗಳಾದ ಮಹಾರಾಷ್ಟ್ರ ಮತ್ತು ಕೇರಳದ ನಗರಗಳು - ಪುಣೆ ಮತ್ತು ತಿರುವನಂತಪುರಗಳಲ್ಲಿ ಅನಿಲೀಕರಣ ಘಟಕಗಳು ಈಗಾಗಲೆ ಸ್ಥಾಪಿತಗೊಂಡು ವಿದ್ಯುತ್ ಉತ್ಪಾದನೆಯನ್ನು ಕೂಡ ಯಶಸ್ವಿಯಾಗಿ ಮಾಡುತ್ತಿವೆ. ಹುಬ್ಬಳ್ಳಿ-ಧಾರವಾಡದ ನಗರ ಪಾಲಿಕೆಯ ಕೆಲ ಅಧಿಕಾರಿಗಳು ಪುಣೆಯ ರಾಮ್‍ತೇಕಡಿ ಕೈಗಾರಿಕಾ ಪ್ರದೇಶದಲ್ಲಿರುವ ಘಟಕಕ್ಕೆ ಭೇಟಿ ನೀಡಿ ಅಲ್ಲಿನ ಕಾರ್ಯವೈಖರಿಯನ್ನು ವೀಕ್ಷಿಸಿದ್ದಾರೆ. ದಿನಕ್ಕೆ 650 ಮೆಗಾಟನ್ ಪ್ರಮಾಣದ ವಿಂಗಡನೆಗೊಳ್ಳದ ಕಸವನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿರುವ ಈ ಘಟಕ 2.5 ಎಕರೆ ಪ್ರದೇಶದಲ್ಲಿ ಹಬ್ಬಿದೆ. "ಕಾನ್ಕಾರ್ಡ್ ಬ್ಲೂ ಎನರ್ಜಿ" ಎಂಬ ಖಾಸಗಿ ಸಂಸ್ಥೆ ಈ ಘಟಕವನ್ನು ಸ್ಥಾಪಿಸಿ ಅದರ ನಿರ್ವಹಣೆಯನ್ನೂ ನಡೆಸುತ್ತಿದೆ. 1 ಮೆಗಾವ್ಯಾಟ್ ವಿದ್ಯುತ್‍ಗೆ ಸರಿಸುಮಾರು 3 ಮೆಗಾಟನ್ ತ್ಯಾಜ್ಯ ಬೇಕಾಗುತ್ತದೆ. ಪುಣೆಯ ಘಟಕ ದಿನವೊಂದಕ್ಕೆ 220 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿದೆ. ಪುಣೆ ನಗರ ಪಾಲಿಕೆ ಪ್ರತಿ ಮೆಗಾಟನ್‍ಗೆ 300 ರೂ.ಗಳ ಶುಲ್ಕವನ್ನು ಈ ಸಂಸ್ಥೆಗೆ ನೀಡುತ್ತಿದೆ. ಅನಿಲೀಕರಣದಿಂದ ಸಿಗುವ ವಿದ್ಯುತ್ತನ್ನು ಈ ಖಾಸಗಿ ಸಂಸ್ಥೆಯಿಂದ ಸರ್ಕಾರ ಅಥವಾ ಇನ್ನಾವುದೇ ಸಂಸ್ಥೆ ಕೊಳ್ಳಬಹುದು. ಪುಣೆ ಘಟಕಕ್ಕೆ ತಗುಲಿರುವ ಒಟ್ಟು ಖರ್ಚು 180 ಕೋಟಿ ರೂ. ಇದರ ವಾರ್ಷಿಕ ಆದಾಯ 48 ಕೋಟಿ ರೂ. ಹಾಗಾಗಿ ಇದಕ್ಕಾಗಿ ಹೂಡಿದ ಬಂಡವಾಳ 4 ವರ್ಷಗಳಲ್ಲಿ ಇದರ ಆದಾಯದಿಂದ ಹಿಂತಿರುಗುವ ನಿರೀಕ್ಷೆಯಿದೆ. ಪುಣೆ ನಗರ ಪಾಲಿಕೆ ಮತ್ತು ಕಾನ್ಕಾರ್ಡ್ ಸಂಸ್ಥೆಯ ನಡುವೆಯಿರುವ 25 ವರ್ಷಗಳ ಒಡಂಬಡಿಕೆಯ ಪ್ರಕಾರ, ಪ್ರತಿ ದಿನ ಘಟಕಕ್ಕೆ ಕಸವನ್ನು ಸಾಗಿಸುವ ಜವಾಬ್ದಾರಿ ಪಾಲಿಕೆಯದು. ಘಟಕಕ್ಕೆ ಬೇಕಿರುವ ಎಲ್ಲ ಸಂಪನ್ಮೂಲಗಳು ಹಾಗೂ ಆರ್ಥಿಕ ಬೇಡಿಕೆಗಳನ್ನು ಪೂರೈಸುವುದು ಸಂಸ್ಥೆಯ ಜವಾಬ್ದಾರಿ.

ತಿರುವನಂತಪುರದಲ್ಲಿ ಮಾದರಿ ರೂಪದಲ್ಲಿ ಶುರುವಾದ ಘಟಕ ದಿನಕ್ಕೆ 35 ಮೆಗಾಟನ್ ಕಸ ನಿರ್ವಹಿಸುತ್ತಿದೆ. ಇದರ ಸಾಮರ್ಥ್ಯವನ್ನು 100 ಮೆಗಾಟನ್‍ಗಳಿಗೆ ಏರಿಸುವ ಯೋಜನೆಯಿದೆ. ಲೋರೋ ಎನ್ವಿರೋ ಪವರ್ ಎಂಬ ಸಂಸ್ಥೆ ಇದರ ಮಾಲೀಕತ್ವ ಹಾಗೂ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಲಿದೆ. ಒಂದು ಮೆಗಾಟನ್ ತ್ಯಾಜ್ಯದಿಂದ ಸುಮಾರು 0.77 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಅಂದಾಜಿದೆ. ಇದು ಪುಣೆಯ ಘಟಕದ ಸಾಮರ್ಥ್ಯಕ್ಕಿಂತ ಹೆಚ್ಚಿನದು. ಕೊಚ್ಚಿಯಲ್ಲೂ ಕೂಡ ಘಟಕ ತೆರೆಯುವ ಚಿಂತನೆಯಿದ್ದು, ಅಲ್ಲೂ ಸಹ ಲೋರೋ ಎನ್ವಿರೋ ಸಂಸ್ಥೆ ಅದನ್ನು ನಿರ್ವಹಿಸಲಿದೆ.


ಈ ತಂತ್ರಜ್ಞಾನದ ವಿಶಿಷ್ಟ ಹೆಗ್ಗಳಿಕೆಯೆಂದರೆ ಇದು Environmental Protection Agency(EPA)ಯ ವಿಧಿ-ನಿಯಮಗಳಿಗೆ ಅನುಗುಣವಾಗಿರುವುದಷ್ಟೇ ಅಲ್ಲದೆ, ಹೊಗೆಹೊರಚೆಲ್ಲುವಿಕೆಗಿರುವ ಐರೋಪ್ಯ ಮಾನದಂಡಗಳಿಗೂ ಹೊಂದುತ್ತದೆ.


ಕರ್ನಾಟಕ ಸರ್ಕಾರ/ಬಿ.ಬಿ.ಎಂ.ಪಿ ಏನು ಮಾಡಬಹುದು?

1. ತ್ಯಾಜ್ಯ ಅನಿಲೀಕರಣ ಘಟಕಗಳನ್ನು ಸ್ಥಾಪಿಸಲು ಖಾಸಗಿ ಸಂಸ್ಥೆಗಳಿಗೆ ಟೆಂಡರ್ ಗಳ ಮೂಲಕ ಅರ್ಜಿ ಸಲ್ಲಿಸಲು ಮಾಧ್ಯಮಗಳಲ್ಲಿ ಕರೆ ನೀಡುವುದು. ಬೆಂಗಳೂರಿಗೆ ೪ ಘಟಕಗಳ ಅವಶ್ಯಕತೆ ಇದೆ. ಪ್ರತಿ ಘಟಕ 750 ಮೆಗಾಟನ್ ನಷ್ಟು ತ್ಯಾಜ್ಯವನ್ನು ಪರಿಷ್ಕರಿಸುವ ಸಾಮರ್ಥ್ಯ ಹೊಂದಿರತಕ್ಕದ್ದು.
2.  ಕೆಲವು ಧುರೀಣರನ್ನೊಳಗೊಳ್ಳುವಂತೆ ಒಂದು ಸಮಿತಿಯನ್ನು ರಚಿಸುವುದು. ಈ ಸಮಿತಿಯು ಖಾಸಗಿ ಸಂಸ್ಥೆಗಳನ್ನು ಈ ಉದ್ದೇಶದೆಡೆಗೆ ಆಕರ್ಷಿಸಿ ಯೋಜನೆಯ ಸಾಧ್ಯಾಸಾಧ್ಯತೆಗಳ ಕುರಿತು ವಿವರವಾಗಿ ಅವರೊಡನೆ ಚರ್ಚಿಸುವುದು. ಮುಂದೆ ರಾಜ್ಯದ ಇತರ ದೊಡ್ಡ ನಗರಗಳಲ್ಲಿ ಈ ಯೋಜನೆಯನ್ನು ಜಾರಿಗೆ ತರುವ ಸಲುವಾಗಿಯೂ ಈ ಸಮಿತಿ ಕೆಲಸ ಮಾಡಬಹುದು.
3. ಈ ಯೋಜನೆಯ ಕಾರ್ಯನಿರ್ವಹಣೆಗೆಂದು ಪ್ರಾರಂಭಿಕವಾಗಿ ಖಾಸಗಿ ಸಂಸ್ಥೆಗಳಿಗೆ ಸರ್ಕಾರದ ವತಿಯಿಂದ ಆಕರ್ಷಕ ಶುಲ್ಕವನ್ನು ನಿಗದಿ ಮಾಡಬಹುದು.
4. ಘಟಕಗಳಲ್ಲಿ ಉತ್ಪಾದನೆಯಾಗುವ ವಿದ್ಯುತ್ತನ್ನು ಸರ್ಕಾರವೇ ಮಾರುಕಟ್ಟೆಯ ಪ್ರಚಲಿತ ದರದಲ್ಲಿ ಕೊಳ್ಳಬಹುದು.
5. ಘಟಕಗಳನ್ನು ಸ್ಥಾಪಿಸಲು ಸರ್ಕಾರವೇ ಭೂಮಿಯನ್ನು ಖಾಸಗಿ ಸಂಸ್ಥೆಗಳಿಗೆ ನೀಡುವುದು. ಹಾಗೂ ಇದರ ಅನುಷ್ಠಾನಕ್ಕೆ ಅವಶ್ಯಕವಾಗಿರುವ ಎಲ್ಲ ಪ್ರಕ್ರಿಯೆಗಳು ಮತ್ತು ಅವುಗಳಿಗೆ ಸರ್ಕಾರದ ಕಡೆಯಿಂದ ಬೇಕಿರುವ ಅನುಮೋದನೆಗಳು ತ್ವರಿತ ಗತಿಯಲ್ಲಿ ಪೂರ್ತಿಯಾಗುವಂತೆ ಸರ್ಕಾರ ಪಾಲ್ಗೊಳ್ಳುವುದು.

ಹೊಸ ಹೊಸ ವಿಸರ್ಜನಾ ಮೈದಾನಗಳನ್ನು ಹುಡುಕುತ್ತಾ, ಕೇವಲ ತಾತ್ಕಾಲಿಕ ಪರಿಹಾರಗಳಿಗೆ ಮೊರೆಹೋಗುವುದಕ್ಕಿಂತ, ಪರಿಸರ ಹಾನಿ ಅತ್ಯಂತ ಕಡಿಮೆಯಿರುವ, ತ್ಯಾಜ್ಯದ ಸಮರ್ಪಕ ಮರುಬಳಕೆಗೆ ಅನುವು ಮಾಡಿಕೊಡುವ ಈ ಅನಿಲೀಕರಣ ಯೋಜನೆಯ ಅನುಷ್ಠಾನ ನಿಜಕ್ಕೂ ಯುಕ್ತ. ಇದಕ್ಕೆ ಸರ್ಕಾರ/ಬಿ.ಬಿ.ಎಂ.ಪಿ ಯ ಇಚ್ಛಾಶಕ್ತಿ ಮತ್ತು ಆರ್ಥಿಕ ಬೆಂಬಲ ಅತ್ಯವಶ್ಯಕ. ಪುಣೆಯಲ್ಲಿ ಈ ಯೋಜನೆ ಕಂಡಿರುವ ಯಶಸ್ಸನ್ನು ತಿಳಿದ ಮೇಲೂ ಇದರ ಕುರಿತು ಆಲೋಚಿಸದಿದ್ದರೆ ತ್ಯಾಜ್ಯ ನಿರ್ವಹಣೆಯ ಸಮಸ್ಯೆ ಮತ್ತಷ್ಟು ಕ್ಲಿಷ್ಟವಾದ ರೂಪ ಪಡೆದುಕೊಳ್ಳುವುದು ಖಂಡಿತ. ಸಂಬಂಧಿಸಿದವರು ಕೂಡಲೆ ಇದರತ್ತ ಗಮನ ಹರಿಸಲಿ.


ಅಕ್ಟೋಬರ್ ೩೧ರ ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟಿತ ಲೇಖನ

Comments

Popular posts from this blog

ಮಾತು-ಮೌನ-ಮನಸ್ಸು

ಬೀದಿ ಬದಿಯ ಬಾಣಸಿಗ

ಗೆಳೆಯನ ಬೀಳ್ಕೊಡುಗೆಗೆ ಎರಡು ಕವಿತೆಗಳು