ಆವರಿಸು ಬಾ ಒಲವೆ!

ಪಿಸುಮಾತುಗಳ ಪಯಣದೊಳೊಂದು ಮೌನದ ನಿಲ್ದಾಣ
ನೋಟಗಳು ಹಾಡಿವೆ ನಲ್ಮೆಯ ಸವಿಗಾನ
ರೆಪ್ಪೆಗಳ ನಡುವಲುಂಟು ಹೊಸದೊಂದು ಜಗ
ಸೋತ ಹೃದಯಗಳಲಿ ಮೂಡಿದೆ ಅನುರಾಗ
ಅನುಪಮವೀ ಭಾವವು ನಲಿದಾಡಿದೆ ಜೀವವು
ಆವರಿಸು ಬಾ ಒಲವೆ ಬೆಚ್ಚಗಾವರಿಸು ಬಾ

ಎದುರಿರಲು ಸಂಗಾತಿ ಹೃದಯದ ಧಾವಂತ
ಮನದ ಸುತ್ತಲೂ ಕನಸುಗಳ ದಿಗಂತ
ಬಣ್ಣದ ಬಾನಲಿ ಪ್ರೇಮದ ಬಾನುಲಿ
ಮಾತೆಲ್ಲ ಮುಗಿದು ಮೌನವೊಂದೇ ಹಾಡಲಿ
ದನಿಗೂಡಿಸು ಬಾ ಒಲವೆ ಶೃತಿ ಸೇರಿಸು ಬಾ ||ಪ||

ಕೈಗಳು ಕೂಡಿವೆ ಹೊಸ ಬಂಧನದಲಿ
ಮನಗಳು ಬೆರೆತಿವೆ ಆಲಿಂಗನದಲಿ
ವಿರಹದ ಗಾಯವು ಮಾಯುವಂತೆ
ಮುನಿಸಿನ ಬಿಸಿಯು ತಣಿಯುವಂತೆ
ನೇವರಿಸು ಬಾ ಒಲವೆ ಮೈಮರೆಸು ಬಾ ||ಪ||

(ಇಲ್ಲ ಇಲ್ಲ ನಾನೇನೂ ಪ್ರೇಮ ಪಾಶಕ್ಕೆ ಸಿಲುಕಿಲ್ಲ!!
ನನ್ನ ಗೆಳೆಯ ಚರಣನ ಸ್ನೇಹಿತರೊಬ್ಬರು ಕಿರುಚಿತ್ರವೊಂದನ್ನು ನಿರ್ದೇಶಿಸುತ್ತಿದ್ದಾರೆ ಎಂದೂ ಅವರಿಗೆ ಒಂದು ಪ್ರೇಮ ಗೀತೆಯನ್ನು ರಚಿಸಿಕೊಡಬೇಕೆಂದೂ ಚರಣ ಅದೊಂದು ದಿನ ನನಗೆ ದೂರವಾಣಿಯಲ್ಲಿ ಹೇಳಿದ್ದ. ನನಗೂ ಪ್ರಯತ್ನಿಸಲು ಹೇಳಿದ್ದ. ಗೀತೆರಚನೆಯಲ್ಲಿ ನನ್ನ ಮೊದಲ ಪ್ರಯೋಗದ ಫಲ. ಇಷ್ಟಲ್ಲದೆ ಮತ್ತೇನೂ ಅಲ್ಲ!!!)

Comments

Popular posts from this blog

ಮಾತು-ಮೌನ-ಮನಸ್ಸು

ಗುಂಗು ಹಿಡಿಸುವ ಮಧುರಾನುಭವ

ನಿರೀಕ್ಷೆ