ಹೊಸ ನೀರಿದ್ದರೂ ಹೊಸ ಬೆಳೆಯಿಲ್ಲ

ಇತ್ತೀಚಿಗೆ ದೇವರಾಯನದುರ್ಗದಲ್ಲಿ ಕನ್ನಡಸಾಹಿತ್ಯ .com ನ ಅಂಗವಾದ ಸಂವಾದ.com ನವರು ನಾಡಿನ ಪ್ರತಿಭಾವಂತ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿಯವರ ಗೌರವಾರ್ಥ ಎರಡು ದಿನಗಳ ಸಿನೆಮಾ ಕುರಿತ ರಸಗ್ರಹಣ ಶಿಬಿರವನ್ನು ಆಯೋಜಿಸಿದ್ದರು. ಅದರ ಪ್ರಯುಕ್ತ "ನನ್ನ ಸಂದರ್ಭದಲ್ಲಿ ಪರ್ಯಾಯ ಸಿನೆಮಾ - ನನಗೆಂಥ ಸಿನೆಮಾ ಬೇಕು" ಎನ್ನುವ ವಿಷಯದ ಮೇಲೆ ಪ್ರಬಂಧ ಸ್ಪರ್ಧೆಯನ್ನು ಇಟ್ಟಿದ್ದರು. ಈ ಸಮಾಚಾರ ತಿಳಿದ ಕೂಡಲೆ ನನ್ನ ಸಾಹಿತ್ಯಾಭಿಮಾನಿ ಗೆಳೆಯ ಚರಣನಿಗೆ ತಿಳಿಸಿದೆ.
ಚರಣ ತುಂಬಾ ಉತ್ಸುಕನಾಗಿ ಪ್ರಬಂಧ ಬರೆದು ಕಳುಹಿಸಿದ. ಮತ್ತೂ ಖುಷಿ ಕೊಟ್ಟ ವಿಚಾರವೆಂದರೆ ಅದಕ್ಕೆ ಪ್ರಥಮ ಬಹುಮಾನವೂ ಬಂತು.
ಕಾಲದ ಪರಿಮಿತಿಯಲ್ಲಿ ನನಗೆ ಬರೆಯುವುದು ಸ್ವಲ್ಪ ಕಷ್ಟವೆನಿಸಿತಾದರೂ ಅದಕ್ಕಿದ್ದ ಕಾಲಾವಕಾಶ ಅಲ್ಪವೇನಿರಲಿಲ್ಲ. ಆಲಸ್ಯವೋ ಏನೋ ನಾನಂತೂ ಪ್ರಬಂಧ ಬರೆಯುವುದರ ಬಗ್ಗೆ ಉದ್ಯುಕ್ತ ನಾಗಲಿಲ್ಲ. ಸ್ಪರ್ಧೆಗೆ ಕಳುಹಿಸಲಾಗದಿದ್ದರೇನಂತೆ ನಿಧಾನವಾಗಿ ಬರೆಯೋಣ ಎಂದುಕೊಂಡೆ. ಕಡೆಗೂ ನನಗೆ ತೋಚಿದ್ದನ್ನು ಬರೆದು ಮುಗಿಸಿದ್ದೇನೆ. ಸ್ಪರ್ಧೆಗೆ ಕಳುಹಿಸದಿದ್ದರೂ ಬರೆದ ಸಂತೃಪ್ತಿ ಇದೆ. ವಿಷಯದ ವ್ಯಾಪ್ತಿ ದೊಡ್ಡದಿದೆ ಹಾಗೂ ಗಂಭೀರವಾಗಿದೆ. ನನಗಿರುವ ಸಿನೆಮಾ ಅಭಿರುಚಿ ಮತ್ತು ಬೆಳ್ಳಿಯ ಪರದೆಯ ಮೇಲಿನ ವ್ಯಾಮೋಹಗಳ ಆಧಾರದ ಮೇಲೆ ಈ ಬರಹವನ್ನು ರೂಪಿಸಿದ್ದೇನೆ. ನನ್ನ ದೃಷ್ಟಿ ಕೋನದಲ್ಲೇನಾದರೂ ಅಭಾಸಗಳು ಅಥವಾ ಸಂಕುಚಿತತೆಯುಳ್ಳ ಅಂಶಗಳು ಇದ್ದಲ್ಲಿ ಮುಕ್ತವಾಗಿ ಪ್ರತಿಕ್ರಿಯಿಸಿ.
*******************************************************************************
ಪೀಠಿಕೆ:
ಸಿನೆಮಾ ಎಂದೊಡನೆ ಅದೊಂದು "ಮಾಯಾಲೋಕ", "ರಂಗು ರಂಗಿನ ಜಗತ್ತು", "ಥಳುಕು ಬಳುಕಿನ ಪ್ರಪಂಚ" ಇವೇ ಮೊದಲಾದ ಅಭಿಪ್ರಾಯಗಳೇ ಮೂಡುತ್ತವೆ. ನಿಜವೆ. ಚಿತ್ರಕಲೆ, ಸಂಗೀತ, ರಂಗಭೂಮಿಗಳಂತೆಯೆ, ಸಿನೆಮಾ ಕೂಡ ಒಂದು ಲಲಿತ ಕಲೆ. ಬಹುಶಃ ಇದನ್ನು ಆಧುನಿಕ ಲಲಿತ ಕಲೆ ಎಂದು ಕರೆದರೂ ತಪ್ಪೆನಿಸಲಾರದು. ಭಾರತದ ಇತಿಹಾಸದಲ್ಲಿ ಚಲನಚಿತ್ರರಂಗ ನಡೆದು ಬಂದ ಹಾದಿ ಬಲು ದೀರ್ಘವಾದುದು. ಅದೆಷ್ಟೋ ಏಳುಬೀಳುಗಳನ್ನು ಕಂಡಿದ್ದರೂ, ಇವತ್ತಿಗೂ ಕೂಡ ಅದರ ಸ್ಥಾನಮಾನ ವಿಶೇಷ ಎನ್ನುವಂಥದ್ದು. ಸಿನೆಮಾದಲ್ಲಿ ನಟಿಸುವುದಾಗಲಿ, ಅದರ ಇತರ ಭಾಗಗಳಲ್ಲಿ ದುಡಿಯುವುದಾಗಲಿ, ಮೊದಲಿನಿಂದಲೂ ಒಂದು ವರ್ಚಸ್ಸಿನ ವಿಷಯವಾಗಿಯೆ ಉಳಿದಿದೆ. ನಟ, ನಟಿಯರ ವಿಷಯದಲ್ಲಿ ಪ್ರೇಕ್ಷಕರಿಗೆ ಕುರುಡು ವ್ಯಾಮೋಹ. ಭಾರೀ ಅಭಿಮಾನ. ಇದರಿಂದ ಒಂದು ವಿಷಯವಂತೂ ಸ್ಪಷ್ಟ. ಸಿನೆಮಾಗೆ ಜನರನ್ನು ಆಕರ್ಷಿಸುವ, ಬರಿಯ ಮಾತುಗಳಿಂದ ವಿವರಿಸಲಾಗದ ಶಕ್ತಿಯೊಂದಿದೆ. ಸಿನೆಮಾಗೆ ಜನರನ್ನು ಆಕರ್ಷಿಸುವ ಇಂಥದ್ದೊಂದು ಶಕ್ತಿ ಇದ್ದರೂ ಇಲ್ಲಿಯವರೆಗೂ ಬಂದಿರುವ ಎಲ್ಲಾ ಚಲನಚಿತ್ರಗಳೂ ಪ್ರೇಕ್ಷಕನ ಮನವನ್ನು ಗೆಲ್ಲಲು ಸಾಧ್ಯವಾಗಿಲ್ಲ. ಭರ್ಜರಿ ಯಶಸ್ಸನ್ನು ಕಂಡ ಚಿತ್ರಗಳ ಸಂಖ್ಯೆ, ಪ್ರೇಕ್ಷಕನಿಂದ ತಿರಸ್ಕೃತಗೊಂಡ ಚಲನಚಿತ್ರಗಳ ಸಂಖ್ಯೆಗೆ ಹೋಲಿಸಿದರೆ, ತೀರ ಕಡಿಮೆ. ಅಂದ ಮೇಲೆ, ಚಲನಚಿತ್ರ ನಿರ್ಮಾಣದಲ್ಲಿ ಪಾಲ್ಗೊಂಡವರು, ಪ್ರೇಕ್ಷಕನ ಬೇಕು-ಬೇಡಗಳನ್ನು ಅರಿಯುವಲ್ಲಿ ಬಹಳಷ್ಟು ಬಾರಿ ವಿಫಲರಾಗಿದ್ದರೆ ಎಂದು ಗೋಚರಿಸುತ್ತದೆ. ಈ ನಿಟ್ಟಿನಲ್ಲಿ ಚಲನಚಿತ್ರರಂಗದವರು ಪ್ರೇಕ್ಷಕರೊಡನೆ ನಡೆಸಿರುವ ಸಂವಾದ, ಚರ್ಚೆಗಳು ವಿರಳಾತಿವಿರಳ. ಪ್ರೇಕ್ಷಕಪ್ರಭುವಿನ ಇಷ್ಟ-ಅನಿಷ್ಟಗಳನ್ನು ಅರಿತುಕೊಂಡು ಚಲನಚಿತ್ರ ತೆಗೆಯಬೇಕು ಎನ್ನುವ ಸತ್ಯ ಎಷ್ಟು ತಿಳಿಯಾಗಿ ಕಂಡರು ಇದನ್ನು ಪಾಲಿಸುವ ಮಂದಿ ಅತಿ ಕಡಿಮೆ. ಅರಿವಿದ್ದರೂ ಅದೇ ತಪ್ಪನ್ನು ಪದೆ ಪದೆ ಮಾಡುತ್ತ ಬಂದಿದ್ದಾರೆ ಎನ್ನುವ ಅಂಶ ಚಲನಚಿತ್ರರಂಗದ ಇನ್ನೊಂದು ಮುಖವನ್ನು ಎತ್ತಿ ಹಿಡಿಯುತ್ತದೆ. ಇದೇ ಉದ್ದೇಶದಿಂದಲೇನೋ, ಸಂವಾದ.ಕಾಂ ನವರು "ಪರ್ಯಾಯ ಸಿನೆಮಾ - ನನಗೆಂಥ ಸಿನೆಮಾ ಬೇಕು?" ಎನ್ನುವ ವಿಷಯದ ಮೇಲೆ ಪ್ರಬಂಧಗಳನ್ನು ಆಹ್ವಾನಿಸಿದ್ದಾರೆ. ಯಾರು ಬೇಕಾದರೂ (ಜನ ಸಾಮಾನ್ಯರು) ಪ್ರಬಂಧಗಳನ್ನು ಮಂಡಿಸಬಹುದು ಎನ್ನುವುದು ಸಿನೆಮಾ ಮಂದಿಯೊಡನೆ ಜನ ಸಾಮನ್ಯರು ನೇರವಾಗಿ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಅವಕಾಶಮಾಡಿಕೊಟ್ಟಿದೆ. ಶ್ಲಾಘನೀಯ ಪ್ರಯತ್ನವೆ ಸರಿ.

"ನನಗೆಂಥ ಸಿನೆಮಾ ಬೇಕು?" ಎನ್ನುವ ಪ್ರಶ್ನೆಗೆ ನೇರವಾಗಿ ಉತ್ತರ ಹುಡುಕುವುದು ಕಷ್ಟವೆನಿಸುತ್ತದೆ. ಚಲನಚಿತ್ರಗಳು ನಮಗೆ ಇಷ್ಟವಾಗಬೇಕೆಂದಲ್ಲಿ ಪರದೆಯ ಹಿಂದೆ ಕೆಲಸ ಮಾಡುವವರ ಶ್ರಮ ಅಪಾರವಿರಬೇಕು. ಅಪರೋಕ್ಷವಾಗಿ, ಚಲನಚಿತ್ರ ಕಲಾವಿದರ ದುಡಿಮೆ ಚಿತ್ರವೊಂದರ ಭವಿಷ್ಯವನ್ನೇ ನಿರ್ಧರಿಸುತ್ತದೆ. ಹೀಗಾಗಿ, ಮೇಲಿನ ಪ್ರಶ್ನೆಗೆ ಉತ್ತರ ಹುಡುಕುವಲ್ಲಿ ಕಲಾವಿದರ/ಕರ್ಮಿಗಳ ಜವಾಬ್ದಾರಿಗಳು ಹಾಗು ಅವುಗಳನ್ನು ನಿಭಾಯಿಸುವ ವೈಖರಿಗಳನ್ನು ಪರಾಮರ್ಶಿಸಿದರೆ, ನಮಗೆಂಥ ಸಿನೆಮಾ ಬೇಕು ಎನ್ನುವ ಪ್ರಶ್ನೆಗೆ ಉತ್ತರ ದೊರೆಯಬಹುದು ಎಂದು ನನ್ನ ಅನಿಸಿಕೆ.

ನಿರ್ಮಾಣ ಮತ್ತು ನಿರ್ಮಾಪಕ:
ಇಂದು ನಮ್ಮ ನಡುವಿರುವ ನಿರ್ಮಾಪಕರಲ್ಲಿ ಭೂವ್ಯವಹಾರದ ದಿಗ್ಗಜರದ್ದೆ ಬಹುಪಾಲು. ಇವರುಗಳು ಸಿನೆಮಾ ಮಾಡುವ ಮೂಲ ಉದ್ದೇಶ, ಅಲ್ಪ ಹಣ ಹೂಡಿ ಅನನುಭವಿ ಜನರ (ಕಲಾವಿದರೆಂದು ಹೇಳಿಕೊಳ್ಳುವ) ಕೈಲಿ ಬೇಕಾಬಿಟ್ಟಿಯಾಗಿ ಚಿತ್ರವನ್ನು ತೆಗೆಸಿ, ಭರ್ಜರಿ ಲಾಭವನ್ನು ಪಡೆಯುವುದು. ತಾಂತ್ರಿಕ ವರ್ಗದ ಬಗ್ಗೆ ಅಥವಾ ನಿರ್ದೇಶನದ ಬಗ್ಗೆ ಅಥವಾ ನಟರ ಬಗ್ಗೆ ಕಿಂಚಿತ್ತೂ ಲೆಕ್ಕಿಸದೆ ರಾತ್ರೋರಾತ್ರಿ ಹಣದ ಹೊಳೆ ಹರಿಸುವ ಯೋಚನೆಯವರು. ಭೀತಿ ಹುಟ್ಟಿಸುವ ಅಂಶವೆಂದರೆ, ಅಷ್ಟಾವಕ್ರರಂತೆ ಕಾಣುವ, ನಟನೆಯ ಗಂಧ-ಗಾಳಿಯೂ ಗೊತ್ತಿರದ ಅವರ ಮಕ್ಕಳನ್ನು ನಾಯಕ-ನಾಯಕಿಯರನ್ನಾಗಿ ಪರಿಚಯಿಸಲು ಈ ನಿರ್ಮಾಪಕರೆನಿಸಿಕೊಳ್ಳುವ ಮಹಾಶಯರು ಮುಂದಾಗಿರುವುದು. ಚಿತ್ರಮಂದಿರ ಮಾಲೀಕರಿಗೆ ದುಡ್ಡು ಕೊಟ್ಟು ೬ ತಿಂಗಳು/ವರ್ಷಗಟ್ಟಲೆ ತಮ್ಮ ಚಿತ್ರಗಳನ್ನು ಖಾಲಿಚಿತ್ರಮಂದಿರಗಳಲ್ಲಿ ಓಡಿಸಿ, "ಸೂಪರ್-ಡೂಪರ್ ಹಿಟ್ಟು" ಎಂದು ಜನರಿಗೆ ಹಿಟ್ಟು ಮುಕ್ಕಿಸುವ ಪುಣ್ಯಾತ್ಮರೂ ಇದ್ದಾರೆ.
ನನ್ನ ಮಟ್ಟಿಗಂತೂ ಸಿನೆಮಾ ನಿರ್ಮಾಣವು ನಿರ್ದೇಶನ, ನಟನೆಗಳಂತೆಯೆ ಒಂದು ವಿಶಿಷ್ಟ ಕಲೆ. ಬರಿ ದುಡ್ಡು ಸುರಿಯುವುದಷ್ಟೆ ನಿರ್ಮಾಪಕನ ಕೆಲಸವಲ್ಲ. ನಿರ್ಮಾಪಕನಿಗೆ ಚಿತ್ರಜಗತ್ತಿನ ಒಳ-ಹೊರಗಿನ ಪರಿಚಯವಿರಬೇಕು. ಕೊಂಚ ಸೃಜನಶೀಲ ಚಿಂತನೆಯೂ ಇರಬೇಕು. ಹತ್ತು-ಹಲವಾರು ಸಿನೆಮಾಗಳನ್ನು ನೋಡಿರಬೇಕು, ಅವುಗಳ ನಿರ್ಮಾಣ, ತಾಂತ್ರಿಕತೆಗಳ ಬಗ್ಗೆ ಸ್ವಲ್ಪವಾದರೂ ಅಧ್ಯಯನ ನಡೆಸಿರಬೇಕು. ತಾನು ಹೂಡುವ ದುಡ್ದಿಗೆ ತಕ್ಕನಾದ ಸಿನೆಮಾ ಮಾಡುವ ಮನಸ್ಸಿರಬೇಕು. ಬಹುಮುಖ್ಯವಾಗಿ ಕಲೆಯಲ್ಲಿ ಒಳ್ಳೆಯ ಅಭಿರುಚಿಯುಳ್ಳವರಾಗಿರಬೇಕು. ನಿರ್ದೇಶಕ, ನಟ-ನಟಿಯರು, ತಾಂತ್ರಿಕ ವರ್ಗದವರು - ಇವರುಗಳ ಸ್ವಾತಂತ್ರ್ಯಕ್ಕೆ ಅಡ್ದಿಬಾರದೆ, ಹಾಗೆಯೆ, ಅವರುಗಳಿಗೆ ನೀಡಿರುವ ಸ್ವಾತಂತ್ರ್ಯ ಎಲ್ಲಿಯೂ ಮಿತಿ ಮೀರದಂತೆ ಎಚ್ಚರ ವಹಿಸುವ ಚಾಕಚಕ್ಯತೆ ಇರಬೇಕು. ಇಷ್ಟೆ ಅಲ್ಲದೆ, ತನ್ನ ಸಿನೆಮಾ ಸಮಾಜದ ಎಲ್ಲ ವರ್ಗದ ಜನರನ್ನೂ ಮುಟ್ಟುವಂತೆ, ಅದಕ್ಕೊಂದು ಉತ್ತಮ ಮಾರುಕಟ್ಟೆ ದೊರೆಯುವಂತೆ ಪ್ರಚಾರತಂತ್ರವನ್ನು ರೂಪಿಸಲು ತಿಳಿದಿರಬೇಕು. ಎಲ್ಲಾ ಉದ್ಯಮಗಳಲ್ಲಿ ಇರುವಂತೆ ಚಲನಚಿತ್ರೋದ್ಯಮದಲ್ಲೂ ಹಣದ ಗಂಡಾಂತರವಿದೆ. ಅದೆಲ್ಲವನ್ನೂ ಮೀರಿ ಉತ್ತಮ ಸಿನೆಮಾಗೆ ಬೇಕಾದ ಸವಲತ್ತುಗಳನ್ನು ಕಲ್ಪಿಸಿಕೊಡುವ ಎದೆಗಾರಿಕೆ, ಛಲ ಇರಬೇಕು.

ನಿರ್ದೇಶನ:
ಸಿನೆಮಾವೊಂದರ ನಿರ್ಮಾಣದಲ್ಲಿ ನಿರ್ದೇಶನ ಅತ್ಯಂತ ಜವಾಬ್ದಾರಿಯುತ ಕೆಲಸ. ನಿರ್ದೇಶನವು ಒಂದು ತಪಸ್ಸಿದ್ದಂತೆ. ಕಥೆಯೆಂಬ ಒಂದು ಸುಂದರ ಕಲ್ಪನೆಯನ್ನು, ನಟನೆಯ ಬಣ್ಣಗಳಿಂದ ಹಾಗೂ ಸೃಜನಶೀಲತೆಯೆಂಬ ಕುಂಚದಿಂದ ಬೆಳ್ಳಿಯ ಪರದೆಯೆಂಬ ಹಾಳೆಯ ಮೇಲೆ ಮೂಡಿಸುವ ಕಲೆ. ಈ ಕಲೆಯನ್ನು ಸಾಧಿಸಲು ಕಠಿಣ ಪರಿಶ್ರಮ ಬೇಕು. ನಿರ್ದೇಶಕನಾದವನಿಗೆ ತನ್ನ ತಂಡದಲ್ಲಿ ಇರುವ ಎಲ್ಲರಿಂದಲೂ ಅತ್ಯುತ್ತಮವಾದ ಕೆಲಸವನ್ನು ಹೊರತೆಗೆಸುವ ಬಲ್ಮೆಯಿರಬೇಕು. ಇಡೀ ಚಿತ್ರದ ಸೂತ್ರ ನಿರ್ದೇಶಕನ ಕೈಯಲ್ಲಿರುತ್ತದೆ. ಚಿತ್ರದ ಸೋಲು-ಗೆಲವು ಎರಡಕ್ಕೂ ನಿರ್ದೇಶಕನ ಕೊಡುಗೆ ಅಪಾರ. ಅದು ನಟರ ಆಯ್ಕೆಯ ವಿಷಯವೇ ಇರಲಿ, ತಾಂತ್ರಿಕ ವರ್ಗವನ್ನು ನಿಭಾಯಿಸುವ ವಿಷಯವೇ ಇರಲಿ, ಸಂಗೀತ ಮತ್ತು ಸಾಹಿತ್ಯದ ಆಯ್ಕೆಯ ವಿಷಯವೇ ಇರಲಿ ಹೀಗೆ ಸಿನೆಮಾದ ಯಾವುದೇ ವಿಭಾಗವಿರಲಿ ಅಲ್ಲಿ ನಿರ್ದೇಶಕನ ಪ್ರಜ್ಞಾವಂತಿಕೆ ಹಾಗೂ ಪ್ರತಿಭೆ ಮಹತ್ತಾರವಾದ ಪಾತ್ರವಹಿಸುತ್ತದೆ. ತಾನು ಕೆಟ್ಟ ಚಿತ್ರವನ್ನು ಕೊಟ್ಟರೆ ಜನ ತನ್ನನ್ನು ಏನಂದಾರು ಎಂಬ ಭಯ ಇರಬೇಕು ನಿರ್ದೇಶಕನೆನಿಸಿಕೊಂಡವನಿಗೆ.

ನಿರ್ದೇಶಕ:
ನಿರ್ದೇಶಕನಾದವನಿಗೆ ಇರಬೇಕಾದ ಬಹುಮುಖ್ಯ ಗುಣಗಳೆಂದರೆ ಪ್ರಯೋಗಶೀಲತೆ ಮತ್ತು ಕ್ರಿಯಾಶೀಲತೆ. ನಿರ್ದೇಶಿಸುವ ಸಿನೆಮಾಗಳು ಒಂದಕ್ಕಿಂತ ಇನ್ನೊಂದು ಯಾವುದಾದರೊಂದು ರೀತಿಯಲ್ಲಿ ಭಿನ್ನವಾಗಿದ್ದರೆ ಒಳ್ಳೆಯದು. ಮುಖ್ಯವಾಗಿ, ವೈವಿಧ್ಯತೆಯನ್ನು ಮೆರೆಯುವುದು ಇಲ್ಲಿ ಅವಶ್ಯ. ಯಾವುದೇ ಕಲಾವಿದ, ತನ್ನ ಕಲೆಯಲ್ಲಿ ವೈವಿಧ್ಯತೆಯನ್ನು ತೋರದಿದ್ದಲ್ಲಿ, ಜನರಿಗೆ ಅವನ ಕಲೆ ಬಹು ಬೇಗ ಸಪ್ಪೆಯೆನಿಸಬಹುದು. ಹೀಗಾಗಿ ವೈವಿಧ್ಯತೆಯನ್ನು ತೋರುವುದಕ್ಕೆ, ಪ್ರಯೋಗಶೀಲತೆ ಪೂರಕವೆನಿಸುತ್ತದೆ. ಪ್ರಯೋಗಶೀಲತೆ ಸಿನೆಮಾದ ಯಾವ ವಿಭಾಗದಲ್ಲಾದರೂ ಆಗಬಹುದು. ಹೊಸತನ್ನು ಮತ್ತು ಹೊಸತನವನ್ನು ಪ್ರೇಕ್ಷಕರು ತೆರೆದ ಕಣ್ಣುಗಳಿಂದ ನೋಡುತ್ತಾರೆ. ಪ್ರಯೋಗಗಳನ್ನು ಮಾಡುವ ಪ್ರವೃತ್ತಿಯ ಜೊತೆ ಜೊತೆಗೆ ಕ್ರಿಯಾಶೀಲತೆಯೂ ಅಷ್ಟೇ ಪ್ರಮುಖವಾದುದು. ಒಂದು ಉತ್ತಮ ಕೃತಿಯನ್ನು ರಚಿಸಿದವನು ಅದರ ಯಶಸ್ಸಿನ ಅಲೆಯಲ್ಲಿ ಕೊಂಚ ಕಾಲ ತೇಲಾಡಿ ನಿಷ್ಕ್ರಿಯನಾಗಿ ಅದೇ ಪರಮಸಾಧನೆಯೆಂಬಂತೆ ಹೊದ್ದುಕೊಂಡು ಬೆಚ್ಚಗೆ ಮಲಗುವುದಲ್ಲ. ಅದೇ ಹಾದಿಯಲ್ಲಿ ಇನ್ನೂ ಉತ್ತಮ ಕೃತಿಗಳನ್ನು ನೀಡುವ ಹೆಚ್ಚುವರಿ ಹೊಣೆ ಆತನ ಮೇಲಿರುತ್ತದೆ. ಮುಂದಿನ ಯೋಜನೆಯನ್ನು ಕುರಿತು ಏನಾದರೊಂದು ಚಟುವಟಿಕೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವುದೆ ನಿಜವಾದ ಕಲಾವಿದನ ಲಕ್ಷಣ. ಗಮನದಲ್ಲಿಟ್ಟುಕೊಳ್ಳಬೇಕಾದ ಇನ್ನೊಂದು ಅಂಶವೆಂದರೆ, ತನ್ನ ಸಿನೆಮಾದ ಮೂಲಕ ತಾನು ಸಮಾಜಕ್ಕೆ ಏನನ್ನು ಹೇಳಲು ಹೊರಟಿರುವೆ ಮತ್ತು ಯಾವ ಮೌಲ್ಯಗಳನ್ನು ಸಾರಲು ಪ್ರಯತ್ನಿಸುತ್ತಿರುವೆ ಎನ್ನುವುದರ ಸ್ಪಷ್ಟ ಚಿತ್ರಣ ನಿರ್ದೇಶಕನಿಗಿರಬೇಕು. ಯಾಕೆಂದರೆ, ಸಿನೆಮಾ ಎನ್ನುವುದು ಒಂದು ಪ್ರಬಲ ಮಾಧ್ಯಮ. ಸಿನೆಮಾದಲ್ಲಿ ತೋರಿಸುವ ವಿಷಯಗಳು ಪ್ರೇಕ್ಷಕರ ಮೇಲೆ ಬಹುಬೇಗ ತಮ್ಮ
ಪರಿಣಾಮವನ್ನು ಬೀರಬಹುದು. ಬಹುದೊಡ್ಡ ಜವಾಬ್ದಾರಿ ಏನೆಂದರೆ, ತಾನು ನಿರ್ದೇಶಿಸುತ್ತಿರುವ ಕಥೆಯ ಮೂಲ ಆಶಯವನ್ನು ಯಾವುದೇ ಗೊಂದಲಗಳಿಲ್ಲದೆ ತಿಳಿಯಾಗಿ ಪ್ರೇಕ್ಷಕನ ಮುಂದೆ ತೆರೆದಿಡುವುದು. ಬಹಳಷ್ಟು ನಿರ್ದೇಶಕರು ಸೋಲುತ್ತಿರುವುದೇ ಇಲ್ಲಿ. ಸಿನೆಮಾ ನಿರ್ದೇಶಿಸುವ ಭರದಲ್ಲಿ ಬೇಡದ ಅಬ್ಬರ ಸಲ್ಲದ ಗೊಂದಲಗಳನ್ನೂ ಪರದೆಯಲ್ಲಿ ಬಲವಂತವಾಗಿ ತುರುಕಿದಂತಿರುತ್ತದೆ.

ಇಂದಿನ ಸಿನೆಮಾಗಳು ಮತ್ತು ನಿರ್ದೇಶಕರು:
ಸಿನೆಮಾ ನೋಡಲು ಬರುವ ಬಹುತೇಕ ಜನರು ತಮ್ಮ ಜೀವನ ಜಂಜಾಟದ ಬೇಸರ ಕಳೆಯಲು ಬಂದಿರುತ್ತಾರೆ. ಮನೊರಂಜನೆಯನ್ನು ಅಪೇಕ್ಷಿಸಿ ದುಡ್ಡು ಕೊಟ್ಟು ಸಿನೆಮಾ ವೀಕ್ಷಿಸಲು ಬರುತ್ತಾರೆ. ಇಂದಿನ ನಿರ್ದೇಶಕರು ಸಿದ್ಧ ಸೂತ್ರಗಳಿಗೆ ಜೋತು ಬಿದ್ದು ತುಕ್ಕು ಹಿಡಿದಂತೆ ಕಾಣುವ ಕಥೆಗಳನ್ನು ಆರಿಸಿಕೊಂಡು ಹಾಡಿದ್ದೇ ಹಾಡು ಕಿಸಬಾಯಿ ದಾಸ ಎನ್ನುವಂತೆ ಒಂದೇ ರೀತಿಯ ಸಿನೆಮಾಗಳನ್ನು ತೆಗೆಯುತ್ತಿದ್ದಾರೆ. ಇಂದು ಬರುತ್ತಿರುವ ಕನ್ನಡ ಸಿನೆಮಾಗಳು ಅದೇ ಅರ್ಥಹೀನ ಮರ ಸುತ್ತುವ ಪ್ರೇಮ ಕಥೆ ಅಥವಾ ಯಾವುದೋ ಮಚ್ಚು-ಲಾಂಗಿನ ಕಥೆ ಅಥವಾ ತಾಯಿ-ತಂಗಿ ಸೆಂಟಿಮೆಂಟಿನ ಕಥೆಗಳು. ಕನ್ನಡದಲ್ಲಿ ಮುಂಗಾರು ಮಳೆ ಚಿತ್ರ ಬರುವುದಕ್ಕೆ ಕೆಲ ವರ್ಷಗಳ ಮುಂಚೆ ತೀರ ಕಳಪೆ ಎನಿಸುವಂಥ ಚಿತ್ರಗಳು ಬರುತ್ತಿದ್ದವು. ಮುಂಗಾರು ಮಳೆ ಭರವಸೆಯ ಮಿಂಚನ್ನೇನೊ ಮೂಡಿಸಿತು ನಿಜ, ಆದರೆ ಉಳಿದ ನಿರ್ದೇಶಕರು ಆ ಚಿತ್ರ ನಿಜಕ್ಕೂ ಯಾಕೆ ಅಷ್ಟೊಂದು ಯಶಸ್ಸನ್ನು ಕಾಣಲು ಸಾಧ್ಯವಾಯಿತು ಎಂದು ಒಂದಿಷ್ಟೂ ವಿಮರ್ಶೆ ನಡೆಸಿದಂತಿಲ್ಲ. ಆ ಚಿತ್ರದ ನಂತರ ನಿರ್ದೇಶಕರ ತಲೆಗಳಲ್ಲಿ ಮನೆ ಮಾಡಿರುವ ಕೆಲವು ತಪ್ಪು ಕಲ್ಪನೆಗಳನ್ನು ಹೇಳುತ್ತೇನೆ:

೧. ಹೊಸಬರ ಚಿತ್ರ ಹೇಗೆ ಮಾಡಿದರೂ ಯಶಸ್ವಿಯಾಗುತ್ತದೆ.
೨. ಮಳೆ, ಪ್ರಕೃತಿ ಇರುವ ಕಥಾವಸ್ತುವುಳ್ಳ ಚಿತ್ರಗಳೇ ಯಶಸ್ವಿಯಾಗುತ್ತವೆ.
೩. ಸೋನು ನಿಗಮ್, ಶ್ರೇಯಾ ಘೋಶಾಲ್ ಅವರಿಂದ ಹಾಡಿಸಿದರೆ ಮಾತ್ರ ಹಾಡುಗಳನ್ನು ಜನರು ಇಷ್ಟಪಡುತ್ತಾರೆ.
೪. ಪ್ರೀತಿ, ಪ್ರಣಯ, ಪ್ರೇಮ ತ್ಯಾಗ ಇರುವಂಥ ಕಥೆಗಳು ಮಾತ್ರ ಚಿತ್ರದ ಯಶಸ್ಸಿಗೆ ಕಾರಣವಾಗುತ್ತದೆ.
೫. ನಾಯಕ ನಟ-ನಟಿಯರು ಹೇಗಿದ್ದರೂ, ಯಾರಾಗಿದ್ದರೂ ಇಂಪಾದ ಸಂಗೀತವೊಂದಿದ್ದರೆ ಜನ ಚಿತ್ರಗಳನ್ನು ನೋಡುತ್ತಾರೆ.

ಮುಂಗಾರು ಮಳೆ ಚಿತ್ರ, ಸೋತುಹೋಗಿದ್ದ ಚಿತ್ರರಂಗದಲ್ಲಿ ಹೊಸ ನೀರನ್ನು ಹರಿಸಿತು. ಹೊಸ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸಿತು. ಕೆಟ್ಟ ಚಿತ್ರಗಳನ್ನು ನೋಡಿ ನೋಡಿ ಬೇಸತ್ತುಹೋಗಿದ್ದ ಕನ್ನಡ ಪ್ರೇಕ್ಷಕನಿಗೆ ಹಿತವಾದ ಅನುಭವವನ್ನು ಕೊಡುವಲ್ಲಿ, ಯಶಸ್ವಿಯಾಯಿತು. ಇಷ್ಟೆಲ್ಲಾ ಮಾಡುವುದಕ್ಕೆ ಅದರ ಕಥೆಯ ತಾಜಾ ನಿರೂಪಣೆ, ನವಿರಾದ ಸಾಹಿತ್ಯ ಮತ್ತು ಇಂಪಾದ ಸಂಗೀತ, ಮನತಣಿಸುವ ಛಾಯಗ್ರಹಣ ಮತ್ತು ಸಂಕಲನ ಪೂರಕವಾದವು. ಆದರೆ, ಅದೇ ಅನುಭವವನ್ನು ಪದೆ ಪದೆ ಪ್ರೇಕ್ಷಕನಿಗೆ ನೀಡುತ್ತಾ ಹೋದರೆ, ಪ್ರೇಕ್ಷಕನಿಗೆ ಸಹಜವಾಗಿಯೇ ಬೇಜಾರು ಬರುತ್ತದೆ. ಈ ಮುಂಚೆ ಹೇಳಿದಂತೆ ವೈವಿಧ್ಯತೆಯನ್ನು ತೋರುವುದು ಇಲ್ಲಿ ಅತ್ಯವಶ್ಯ ಎನಿಸುತ್ತದೆ. ಯಾವುದೋ ಸಿದ್ಧ ಸೂತ್ರಗಳನ್ನು ಪಾಲಿಸಿಕೊಂಡು ಹೋಗುವುದರ ಬದಲು, ತಮ್ಮಲ್ಲಿರುವ ಪ್ರತಿಭೆಯನ್ನು ಓರೆಗೆ ಹಚ್ಚುವಂಥ ಪ್ರಯತ್ನಗಳನ್ನು ಮಾಡುವುದರ ಬಗ್ಗೆ ಒಲವು ತೋರಬೇಕು. ಆಗಲೇ ಪ್ರೇಕ್ಷಕರು, ಸ್ವಂತಿಕೆಯನ್ನೂ, ಪ್ರಾಮಣಿಕತೆಯನ್ನೂ ಮೆಚ್ಚಿ ಸಿನೆಮಾಗೆ ಸಲ್ಲಬೇಕಾದ ಗೌರವವನ್ನು ಸಲ್ಲಿಸುತ್ತಾರೆ.

ಕನ್ನಡ ಚಿತ್ರರಂಗದಲ್ಲಿ ಇರುವ ದೊಡ್ಡ ಸಮಸ್ಯೆಗಳಲ್ಲಿ ಒಂದು - ರೀಮೇಕ್ ಚಿತ್ರಗಳು. ರೀಮೇಕ್ ಮಾಡುವುದು ತಪ್ಪು ಎಂದು ಖಡಾಖಂಡಿತವಾಗಿ ಹೇಳಲಾರೆ. ಆದರೆ, ವರ್ಷಕ್ಕೆ ನೂರು ಚಿತ್ರಗಳು ಬಿಡುಗಡೆಯಾದರೆ, ಅವುಗಳಲ್ಲಿ ೭೫ ಚಿತ್ರಗಳು ರೀಮೇಕ್ ಇದ್ದರೆ, ನಮ್ಮ ನಿರ್ದೇಶಕರ ಬಗ್ಗೆ ನಾಚಿಕೆಯೆನಿಸುತ್ತದೆ. ಪ್ರಸ್ತುತ, ರೀಮೇಕ್ ಮಾಡುವವರಲ್ಲಿ ಎರಡು ವಿಧದ ನಿರ್ದೇಶಕರಿದ್ದಾರೆ. ಒಂದು ಗುಂಪಿನವರು ರಾಜಾರೋಷವಾಗಿ "ನಾವು ಇಂತಹ ಚಿತ್ರದ ರೀಮೇಕ್ ಮಾಡುತ್ತಿದೇವೆ" ಎಂದು ಘೋಷಿಸಿ ಚಿತ್ರಿಸುತ್ತಾರೆ. ಇನ್ನೊಂದು ಗುಂಪಿನವರು, ಪರಭಾಷಾ ಚಿತ್ರಗಳಿಂದ ಕಥೆಯನ್ನು ಕದ್ದು ನಿರ್ಮಾಣದ ಯಾವುದೇ ಹಂತದಲ್ಲೂ ಏನನ್ನೂ ಮಾತನಾಡದೇ, ಅದ್ಧೂರಿ ಪ್ರಚಾರ ಮಾಡಿ ಬಿಡುಗಡೆ ಮಾಡಿಬಿಡುತ್ತಾರೆ. ಕನ್ನಡ ಪ್ರೇಕ್ಷಕರು ಎಲ್ಲ ಭಾಷೆಯ ಚಿತ್ರಗಳನ್ನು ನೋಡುವುದರಿಂದ ಅವರಿಗೆ ಇದೊಂದು ಕದ್ದ ಕಥೆಯ ಚಿತ್ರ ಎಂದು ಗೊತ್ತಾಗುವುದರಲ್ಲಿ ಬಹಳ ಸಮಯ ಹಿಡಿಯುವುದಿಲ್ಲ. ಮೊದಲ ದಿನದ ಮೊದಲ ಪ್ರದರ್ಶನದಲ್ಲಿಯೇ ಅದರ ಹಣೆಬರಹ ತಿಳಿದುಹೋಗುತ್ತದೆ. ಎಸ್. ನಾರಾಯಣ್, ವಿ. ರವಿಚಂದ್ರನ್, ಸಾಯಿಪ್ರಕಾಶ್, ಸುದೀಪ್ ಮುಂತಾದವರು ಮೊದಲನೆ ಗುಂಪಿಗೆ ಸೇರಿದವರಾದರೆ ಇಂದ್ರಜಿತ್ ಲಂಕೇಶ್, ರಮೇಶ್ ಅರವಿಂದ್, ಎಂ.ಡಿ.ಶೀಧರ್, ಡಿ. ರಾಜೇಂದ್ರ ಬಾಬು ಇವರುಗಳು ಎರಡನೆಯ ಗುಂಪಿಗೆ ಸೇರಿದವರು. ಇನ್ನೂ ಖೇದನೀಯ ವಿಷಯವೆಂದರೆ ಒಂದೇ ಚಿತ್ರದಿಂದ ಕಥೆಯನ್ನು ಕದಿಯುವುದಲ್ಲದೆ, ನಾಲ್ಕಾರು ಚಿತ್ರಗಳಿಂದ ಒಂದಷ್ಟು ದೃಶ್ಯಗಳನ್ನು (ಬಹುತೇಕ ಬಾರಿ ಹಾಸ್ಯ ಸನ್ನಿವೇಶಗಳು) ಕದ್ದು ಚಿಂದಿ ಬಟ್ಟೆಗಳ ತುಂಡುಗಳಿಂದ ಒಂದು ಅಂಗಿಯನ್ನು ಹೊಲೆದಂತೆ ಚಿತ್ರ ಮಾಡುತ್ತಾರೆ. ಕನಿಷ್ಟ ಪಕ್ಷ ಬೇರೆ ಚಿತ್ರರಂಗದವರ ಮುಂದೆ ನಮ್ಮ ಚಿತ್ರಗಳು ಹಾಸ್ಯಾಸ್ಪದ ವಸ್ತುಗಳಾಗಬಹುದು ಎನ್ನುವ ಆತಂಕವೂ ಇಲ್ಲ ನಮ್ಮ ಕನ್ನಡದ ಇಂದಿನ ನಿರ್ದೇಶಕರಲ್ಲಿ. ನಿಜಕ್ಕೂ ವಾಕರಿಕೆ ಹುಟ್ಟಿಸುವ ಸಂಗತಿ. ಇಂದ್ರಜಿತ್ ಲಂಕೇಶ ರ "ಐಶ್ವರ್ಯ" ಚಿತ್ರಕ್ಕೆ ಹೋದಾಗ ನನಗೆ ಅತ್ಯಂತ ಕೆಟ್ಟ ಅನುಭವವಾಗಿತ್ತು. ಹೋಗುವ ಮುನ್ನವೇ ಅದು ಒಂದು ತೆಲುಗು ಚಿತ್ರದ ರೀಮೇಕ್ ಎಂದು ತಿಳಿದಿತ್ತು. ಆದರೂ ಚಿತ್ರ ನೋಡಲು ಗೆಳೆಯರೊಂದಿಗೆ ಹೋದೆ. ಚಿತ್ರ ನೋಡಿದ ನಂತರ ನನ್ನ ಗೆಳೆಯನಿಂದ ತಿಳಿಯಿತು. ಇದು ಬರಿ ಒಂದು ತೆಲುಗು ಚಿತ್ರದ ರೀಮೇಕ್ ಅಲ್ಲ. ಮಧ್ಯದಲ್ಲಿ ಒಂದು ದೃಶ್ಯ ಇನ್ಯಾವುದೋ ತೆಲುಗು ಚಿತ್ರದಿಂದ ಎತ್ತಿದ್ದು, ಮತ್ತೊಂದು ದೃಶ್ಯ ಯಾವುದೋ ತಮಿಳು ಚಿತ್ರದಿಂದ ಭಟ್ಟಿ ಇಳಿಸಿದ್ದು ಎಂದು.

ಇನ್ನೂ ಕೆಲವು ನಿರ್ದೇಶಕರಿದ್ದಾರೆ. ಚಿತ್ರದ ಬಿಡುಗಡೆಯ ಮುನ್ನ ತಮ್ಮ ಚಿತ್ರದ ಬಗ್ಗೆ, ಅದರ ಅದ್ಧೂರಿತನದ ಬಗ್ಗೆ ಬಹಳ ದೊಡ್ಡ ದೊಡ್ಡ ಮಾತುಗಳನ್ನಾಡುವುದೇ ಪ್ರಚಾರ ಎಂದು ತಿಳಿದಿರುವ ಹಾಗಿದೆ ಅವರು. "ಪ್ರೀತಿ ಏಕೆ ಭೂಮಿ ಮೇಲಿದೆ?" ಎಂಬ ಅರ್ಥಹೀನ ಚಿತ್ರವನ್ನು ನಿರ್ದೇಶಿಸಿದ ಪ್ರೇಮ್ ಇದಕ್ಕೆ ಒಳ್ಳೆಯ ಉದಾಹರಣೆ. ಚಿತ್ರದ ಕಥೆಯಲ್ಲಿ ಹುರುಳು-ತಿರುಳುಗಳಿಲ್ಲದಿದ್ದರೂ ಈ ಚಿತ್ರವನ್ನು ಈ ದೇಶದಲ್ಲಿ ಚಿತ್ರೀಕರಿಸಲಾಯಿತು, ಇಷ್ಟು ಹಣ ಖರ್ಚು ಮಾಡಲಾಯಿತು, ಇಷ್ಟು ದಿನ ಹಿಡಿಯಿತು ಎಂಬ ಆಡಂಬರದ ಮಾತುಗಳಿಂದಲೇ ಸಿನೆಮಾಗೆ ಪ್ರಚಾರವನ್ನು ನೀಡಲು ಯತ್ನಿಸಿದರು. ಕಡೆಗೆ ಪ್ರೇಕ್ಷಕ ಪ್ರಭುವಿನ
ತೀರ್ಪಿಗೆ ತಲೆಬಾಗಲೇಬೇಕಾಯ್ತು. "ಸೈನೈಡ್" ಎಂಬ ವಿಭಿನ್ನ ಕಥಾವಸ್ತುವುಳ್ಳ ಸಿನೆಮಾ ನೀಡಿದ್ದ ಏ.ಎಮ್.ಆರ್. ರಮೇಶ್ ಅವರದ್ದೂ ಕೂಡ ತಮ್ಮ ಎರಡನೆ ಚಿತ್ರ "ಮಿಂಚಿನ ಓಟ" ದ ಬಿಡುಗಡೆಯ ಮುನ್ನ ಹೆಚ್ಚು ಕಮ್ಮಿ ಇದೇ ಧೋರಣೆ ಇತ್ತು. ಚಿತ್ರದಲ್ಲಿ ಹಾಲಿವುಡ್ ನಲ್ಲಿ ಬಳಸಲಾಗುವ ದೈತ್ಯ ವಾಹನವೊಂದನ್ನು ಮೊಟ್ಟಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ಬಳಸಲಾಗುತ್ತಿದೆ ಎಂದೆಲ್ಲಾ ಕಂಡ ಕಂಡ ದೂರದರ್ಶನ ವಾಹಿನಿಗಳಲ್ಲಿ ಹೇಳಲಾರಂಭಿಸಿದರು. ನನಗೆ ಈ ಮನುಷ್ಯ ಅಷ್ಟು ಒಳ್ಳೆಯ ಚಿತ್ರವನ್ನು ನಿರ್ದೇಶಿಸಿ ಎರಡನೆ ಚಿತ್ರದ ಹೊತ್ತಿಗೆ ಇಷ್ಟು ಕೀಳಾಗಿ ಯಾಕೆ ತನ್ನ ಚಿತ್ರದ ಬಗ್ಗೆ ತಾನೆ ಯಾಕೆ ಕೊಚ್ಚಿಕೊಳ್ಳುತ್ತಿದ್ದಾರೆ ಎನ್ನುವ ಪ್ರಶ್ನೆ ಮೂಡಿತ್ತು. ಚಿತ್ರ ನೋಡಿ ಬಂದ ನನ್ನ ಗೆಳೆಯನೊಬ್ಬ ಬಹಳ ಬೇಜಾರಿನಿಂದ ಚಿತ್ರದ ಬಗ್ಗೆ ಮಾತನಾಡಿದ. ಚಿತ್ರದ ಕೊನೆಯಲ್ಲಿ ವೇಗವಾಗಿ ವಾಹನ ಚಾಲಿಸಿಕೊಂಡು ಹೋಗುವ ದೃಶ್ಯಗಳಿರುವ ಒಂದೇ ಕಾರಣಕ್ಕೆ "ಮಿಂಚಿನ ಓಟ" ಎಂಬ ಶೀರ್ಷಿಕೆ ಇಟ್ಟಿದ್ದಾರೆ ಎಂದು ತಿಳಿಯಿತು. ಚಿತ್ರದ ಬಿಡುಗಡೆಗೆ ಮುನ್ನ ಅದಕ್ಕೆ ಸಿಕ್ಕಿದ್ದ ಮನ್ನಣೆ ಇದು ಯಾವುದೇ ರೀತಿಯಲ್ಲೂ ಅರ್ಹವಲ್ಲ ಎಂಬ ಅಭಿಪ್ರಾಯ ಹೊರಬಂತು. ಒಂದು ಚಿತ್ರ ಬಿಡುಗಡೆಯಾದ ನಂತರ ಅದು ನಿಜವಾಗಲೂ ಒಳ್ಳೆಯ ಚಿತ್ರವಾಗಿದ್ದರೆ ಅದರ ಹಿರಿಮೆಯೇ ಮಾತನಾಡುತ್ತದೆ. ಅದಕ್ಕಿಂತ ಮಿಗಿಲಾದ ಪ್ರಚಾರವಿಲ್ಲ.

ಸದ್ಯ ಕನ್ನಡದಲ್ಲಿ ಬರುತ್ತಿರುವ ಚಿತ್ರಗಳೆಲ್ಲ ರೀಮೇಕ್ ಚಿತ್ರಗಳಾಗಿರುತ್ತವೆ ಇಲ್ಲವೇ ಅವೆ ಹಳೆಯ ಕಥೆಗಳ ಸುತ್ತ ಗಿರಕಿ ಹೊಡುಯುವ ಕಥಾವಸ್ತುವುಳ್ಳ ಚಿತ್ರಗಳಾಗಿರುತ್ತವೆ. ೨೦೦೭ ರಲ್ಲಿ ಭರವಸೆಯ ಮಳೆ ಸುರಿಯಿತಾದರೂ ಅದರ ಹಿಂದೆಯೇ ಪ್ರಯೋಗಶೀಲತೆಯ ಬರಗಾಲ ಎದುರಾಗಿದೆ.

ಕಥೆ,ಚಿತ್ರಕಥೆ ಮತ್ತು ನಿರೂಪಣೆ:
ಚಿತ್ರವೊಂದಕ್ಕೆ ಅದರ ಕಥೆಯೇ ಜೀವಾಳ. ನಟನೆ ಮತ್ತು ತಾಂತ್ರಿಕತೆಗಿಂತ ಮಿಗಿಲಾಗಿ ನಿಲ್ಲುವುದು ಚಿತ್ರದ ಕಥೆ ಮತ್ತದರ ನಿರೂಪಣೆ. ಹತ್ತಿಯ ನೂಲನ್ನು ನೇಯ್ದು ಹೊರತೆಗೆದ ಎಳೆ ಎಷ್ಟು ಬಲಶಾಲಿಯಾಗಿರುತ್ತದೊ ಅದರಿಂದ ತಯಾರಿಸಿದ ಬಟ್ಟೆಯೂ ಅಷ್ಟೇ ಒಳ್ಳೆಯ ಗುಣಮಟ್ಟದ್ದಾಗಿರುತ್ತದೆ. ಒಂದು ಚಿತ್ರ ಮತ್ತು ಅದರ ಕಥೆಯ ನಡುವಿನ ಸಂಬಂಧವೂ ಕೂಡ ಹೆಚ್ಚು-ಕಮ್ಮಿ ಹೀಗೇ ಇರುತ್ತದೆ.
ನಿರ್ದೇಶಕ ಚಿತ್ರೀಕರಣವನ್ನು ಶುರು ಮಾಡುವ ಮೊದಲು, ನಟರನ್ನು ಆಯ್ಕೆ ಮಾಡುವ ಮೊದಲು, ಕಥೆಯ ಬಗ್ಗೆ ಯಾವುದೇ ಪೂರ್ವಾಗ್ರಹಗಳಿಲ್ಲದೇ ಎಲ್ಲಾ ರೀತಿಯಿಂದಲೂ ಚಿಂತನೆ ನಡೆಸಿದರೆ ಉತ್ತಮ. ಕಥೆಯು ಮನುಷ್ಯತ್ವದ ಯಾವ ಮೌಲ್ಯಗಳನ್ನು ಒಳಗೊಂಡಿದೆ, ಸಮಾಜಕ್ಕೆ ಏನನ್ನು ಹೇಳಹೊರಟಿದೆ, ಯಾವ ವರ್ಗದ ಜನರಿಗೆ ಯಾವ ಅರ್ಥ ಹೊರಹೊಮ್ಮಿಸಲಿದೆ ಈ ರೀತಿಯ ಸೂಕ್ಷ್ಮಗಳ ಬಗ್ಗೆ ಗಾಢವಾಗಿ ಆಲೋಚಿಸಬೇಕು. ಕಥೆಯಲ್ಲಿರುವ ಪಾತ್ರಗಳು ಸಮಾಜಮುಖಿಯಾಗಿದ್ದು ಸಮಾಜಕ್ಕೆ ಮಾದರಿಯಂತಿರಬೇಕು. ಇಂದು ದುಡ್ಡು ಮಾಡುವ ಹುಚ್ಚು ಹೊಳೆಯ ಪ್ರವಾಹದಲ್ಲಿ, ನಿರ್ದೇಶಕರೆನಿಸಿಕೊಂಡಿರುವವರಲ್ಲಿ ಈ
ರೀತಿಯಾಗಿ ಆಲೋಚಿಸುವ ಮನೋಧರ್ಮವೇ ಕಂಡು ಬರುತ್ತಿಲ್ಲ. ಮಾತೆತ್ತಿದರೆ ಕನ್ನಡದಲ್ಲಿ ಹೆಚ್ಚು ಕಥೆಗಳೇ ಇಲ್ಲ ಎನ್ನುವ ಕೂಗು ಕೇಳಿಬರುತ್ತದೆ. ೭ ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಕನ್ನಡ ಸಾರಸ್ವತಲೋಕದ ಕಡೆ ಇಣುಕಿದರೆ, ಅದೆಷ್ಟೊ ಒಳ್ಳೊಳ್ಳೆಯ ಕಥೆಗಳು ಸಿಗುತ್ತವೆಂದು ವಿಶೇಷವಾಗಿ ಹೇಳಬೇಕಿಲ್ಲ. ಪರಭಾಷಾ ಚಿತ್ರಕಥೆಗಳನ್ನು ರೀಮೇಕ್ ಮಾಡುವುದು, ಅವುಗಳಿಂದ ಪ್ರೇರಣೆಯನ್ನು ಪಡೆಯುವುದು - ಇದರ ಬದಲು ಕನ್ನಡ ಸಾಹಿತ್ಯಲೋಕದಿಂದ ಪ್ರೇರಣೆಯನ್ನು ಪಡೆಯಲಿ.

ಕಥೆಗೆ ಬೆಂಬಲ ನೀಡುತ್ತಾ ಚಿತ್ರದ ನಿಜವಾದ ನಾಯಕನೆನಿಸಿಕೊಳ್ಳುವುದು ಚಿತ್ರಕಥೆ. ಚಿತ್ರಕಥೆಯೆಂದರೆ, ಕಲ್ಪಿತ ಕಥೆಯನ್ನು ಕಥೆಯ ಪಾತ್ರಗಳ ಮೂಲಕ ಪರದೆಯ ಮೇಲೆ ಮೂಡಿಸಿವ ಒಂದು ವಿಧಾನ. ಯಾವ ದೃಶ್ಯವನ್ನು ಯಾವ ತಾಣದಲ್ಲಿ ಯಾವ ನಟರನ್ನು ಬಳಸಿಕೊಂಡು, ಎಂಥ ಹಿನ್ನೆಲೆ ಸಂಗೀತದೊಡನೆ ಚಿತ್ರಿಸಬೇಕು ಎಂಬ ರೂಪುರೇಷೆಯನ್ನು ಚಿತ್ರಕಥೆ ಒಳಗೊಂಡಿರುತ್ತದೆ. ಒಂದು ಅತ್ಯುತ್ತಮ ಕಥೆ, ನೀರಸ ಚಿತ್ರಕಥೆಯಿಂದ ಬೇಜಾರು ತರಿಸಬಹುದು. ಪ್ರೇಕ್ಷಕರನ್ನು ಚಿತ್ರದ ಮೊದಲಿನಿಂದ ಕೊನೆಯವರೆಗೂ ಹಿಡಿದಿಟ್ಟು ಕೂಡಿಸಿ ಚಿತ್ರ ನೋಡುವಂತೆ ಮಾಡುವ ಶಕ್ತಿ ಚಿತ್ರಕಥೆಗಿರುತ್ತದೆ. ಒಮ್ಮೊಮ್ಮೆ ಚಿತ್ರವೊಂದರ ಸೋಲಿಗೆ ನೇರ ಕಾರಣವಾಗಲೂಬಹುದು.

ಸಂಭಾಷಣೆ ಮತ್ತು ಚಿತ್ರಸಾಹಿತ್ಯ:
ಚಿತ್ರಕಥೆಯ ಜೊತೆ ಜೊತೆಗೆ ಸಾಗುವ ಇನ್ನೊಂದು ಪ್ರಮುಖ ವಿಭಾಗ, ಸಂಭಾಷಣೆ ಮತ್ತು ಸಾಹಿತ್ಯ. ಶಿವರಾಮ ಕಾರಂತರು ಹೇಳುವಂತೆ "ಕಲೆಯು ಆ ಕಲೆಯನ್ನು ಪೋಷಿಸುವವರ ಸಂಸ್ಕೃತಿಯನ್ನು ಬಿಂಬಿಸುತ್ತದೆ". ಸಿನೆಮಾಗೂ ಈ ಮಾತು ಯಾವುದೇ ಅಪವಾದಗಳಿಲ್ಲದೆ ಅನ್ವಯಿಸುತ್ತದೆ. ಚಿತ್ರದ ಸಂಭಾಷಣೆ ಮತ್ತು ಸಾಹಿತ್ಯ ಆ ಚಿತ್ರವನ್ನು ತೆಗೆದ ಜನರ ಮತ್ತು ಆ ಕಲೆಯನ್ನು ಪೋಷಿಸುವವರ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ನೇರವಾಗಿ ತೋರಿಸುತ್ತದೆ. ಇಂದಿನ ಸಿನೆಮಾ ಸಾಹಿತ್ಯ ಮತ್ತು ಸಂಭಾಷಣೆಯ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಪರಭಾಷೆಯವರು ಬಳಸುತ್ತಾರೆಂದು ಇಲ್ಲಿಯೂ ಸಹ ದ್ವಂದ್ವಾರ್ಥದ
ಸಂಭಾಷಣೆ ಅವ್ಯಾಹತವಾಗಿ ಬಳಸಲ್ಪಡುತ್ತಿದೆ. ಇದು ಕೇವಲ ಒಂದು ವರ್ಗದ (ಪಡ್ಡೆ ಹುಡುಗರು) ಪ್ರೇಕ್ಷಕರನ್ನು ಮಾತ್ರ ಆಕರ್ಷಿಸುತ್ತದೆ. ಮಿಕ್ಕವರಿಗೆ ಮುಜುಗರದ ಸಂಗತಿಯಾಗಿದೆ. ಇಂದಿನ ಪೀಳಿಗೆಯವರಿಗೆ ಇಂಗ್ಲೀಷ್ ವ್ಯಾಮೋಹ ಜಾಸ್ತಿಯಿರುವುದರಿಂದ, ಅವರುಗಳು ತಮ್ಮ ತಮ್ಮಲ್ಲೇ ಕನ್ನಡ ಮಾತನಾಡುವುದು ಕಡಿಮೆ. ಅಂಥವರು ಆಗೊಮ್ಮೆ ಈಗೊಮ್ಮೆ ಕನ್ನಡ ಸಿನೆಮಾಗಳನ್ನು ನೋಡಿದರೆ ಕೇಳುವುದು ದ್ವಂದ್ವಾರ್ಥದ ಸಂಭಾಷಣೆ ಮತ್ತು ಹಾಡುಗಳು. ಇದರ ಪರಿಣಾಮವನ್ನು ನಾವು ನೀವು ಊಹಿಸಬಹುದು. ಚಿತ್ರರಂಗದವರು ಇದರ ಬಗೆ ಒಂದಿನಿತೂ ತಲೆಕೆಡಿಸಿಕೊಂಡಂತಿಲ್ಲ. "ಕಣ್ಣು ರೆಪ್ಪೆ ಒಂದನೊಂದು
ಮರೆವುದೆ", "ಬಾಡಿ ಹೋದ ಬಳ್ಳಿಯಿಂದ ಹೂವು ಅರಳಬಲ್ಲದೆ?" "ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ", "ಹಾಡು ಹಳೆಯದಾದರೇನು ಭಾವ ನವ ನವೀನ" ಈ ತೆರನಾದ ಅರ್ಥಪೂರ್ಣವಾದ ಸಾಹಿತ್ಯದ ಜೊತೆ "ಐತಲಕಡಿ", "ಚಿತ್ರಾನ್ನ, ಚಿತ್ರಾನ್ನ", "ಕೆಂಚಾಲೋ ಮಂಚಾಲೋ" "ಧೂಳು ಮಗ ಧೂಳ್" ಈ ತೆರನಾದ ದ್ವಂದ್ವಾರ್ಥದ ವಿಕೃತಿಗಳನ್ನು ಹೋಲಿಸುವುದೇ ಘೋರಾಪರಾಧ. ಚಿತ್ರದ ಹಾಡುಗಳ ಸಾಹಿತ್ಯವನ್ನು ಕೇಳಿದರೆ, ಅದರ ಭಾವಾರ್ಥ ಮನಮುಟ್ಟುವಂತಿರಬೇಕು. ಕಾವ್ಯದಲ್ಲಿ ಆಸಕ್ತಿಯನ್ನು ಕೆರಳಿಸುವಂತಿರಬೇಕು. ಹೀಗೆಂದ ಮಾತ್ರಕ್ಕೆ ಎಲ್ಲಾ ಹಾಡುಗಳೂ ಕಾವ್ಯೋಪಾದಿಯಲ್ಲಿರಬೇಕೆಂದಲ್ಲ. ಸಾಹಿತ್ಯವು ಕೆಟ್ಟ ಅರ್ಥಗಳಿಂದ ಕೂಡಿರದೆ, ಚಿತ್ರದ ಕಥೆಗೆ ಅಥವಾ ಸನ್ನಿವೇಶಕ್ಕೆ ಪೂರಕವಾಗಿದ್ದರೆ ಸಹ್ಯ. ಸಾಹಿತ್ಯದಲ್ಲೂ ವೈವಿಧ್ಯತೆ ಇರಬೇಕಾದುದು ಅವಶ್ಯ. ಪ್ರೀತಿ, ಪ್ರೇಮದ ಕಥಾವಸ್ತುವಿದ್ದರೆ ಇಂದು ಬರುತ್ತಿರುವ ಬಹುಪಾಲು ಹಾಡುಗಳಲ್ಲಿ ಮೋಡ, ಮಳೆ, ಕನಸು, ಮನಸು, ಹಸಿರು, ಪ್ರಾಣ ಇತ್ಯಾದಿ ಹೀಗೆ ತಿರುಗ-ಮುರುಗ ಅವೇ ಪದಗಳ ಪುನರಾವರ್ತನೆಯಾಗುತ್ತಿದೆ.
ಇತ್ತೀಚೆಗೆ ಬಿಡುಗಡೆಯಾಗಿರುವ ಬುದ್ಧಿವಂತ ಚಿತ್ರದ ಹಾಡುಗಳನ್ನು ಕೇಳಿದ ಮೇಲೆ ನನಗನ್ನಿಸಿದ್ದು - ಉಪೇಂದ್ರರಂತಹ ಸೃಜನಶೀಲ ನಿರ್ದೇಶಕರು ನಿರ್ದೇಶನವನ್ನು ತೊರೆದು ರೀಮೇಕ್ ಹಂಗಿಗೆ ಬಿದ್ದು ಅಡ್ಡದಾರಿ ಹಿಡಿದಿದ್ದು ಕನ್ನಡ ಚಿತ್ರದ ಇಲ್ಲಿಯವರೆಗಿನ ದುರಂತಗಳಲ್ಲಿ ಒಂದು. ಹಿಂದೆಲ್ಲಾ ತಮ್ಮ ಚಿತ್ರಗಳಿಗೆ ಒಳ್ಳೆಯ ಸಾಹಿತ್ಯವನ್ನು ಬರೆದು ಈಗ "ಚಿತ್ರಾನ್ನ ಚಿತ್ರಾನ್ನ" ಎಂಬ ಹಳಸನ್ನದಂಥ ಸಾಹಿತ್ಯವನ್ನು ರಚಿಸಿ ಅದಕ್ಕೆ ಕರ್ಣಕಠೋರವಾದ ಸಂಗೀತವಿದ್ದರೂ ಅದರ ಬಗ್ಗೆ ಹೆಮ್ಮೆಯ ಮಾತನಾಡುತ್ತಿರುವುದನ್ನು ನೋಡಿದರೆ ವಿಪರ್ಯಾಸವೆನಿಸುತ್ತದೆ. ಇಷ್ಟಲ್ಲದೆ "ರವಿವರ್ಮನ ಕುಂಚದ ಕಲೆ" ಎಂಬ ಸುಶ್ರಾವ್ಯ
ಗೀತೆಯ ಮಾರಣಹೋಮವೂ ಇದೇ ಬುದ್ಧಿವಂತ ಚಿತ್ರದಲ್ಲಿ ಉಪೇಂದ್ರರ ಆಕಾಂಕ್ಷೆಯ ಮೇರೆಗೆ ನಡೆದಿದೆ. ಮೂಲ ಗೀತೆಗೆ ಸಂಗೀತ ಸಂಯೋಜಿಸಿದ ಮಾಂತ್ರಿಕ ಜಿ.ಕೆ.ವೆಂಕಟೇಶ್ ಇಂದು ನಮ್ಮ ನಡುವೆ ಇಲ್ಲ. ಇಳಿ ವಯಸ್ಸಿನಲ್ಲಿರುವ ಮೂಲ ಗಾಯಕರಾಗಿರುವ ಪಿ.ಬಿ.ಶ್ರೀನಿವಾಸ್ ಅವರು ಈ ಗೀತೆಯನ್ನು ಹರಿಹರನ್ ಅವರ ವಜ್ರಕಂಠದಿಂದ ಕೇಳದಿರುವುದೇ ಒಳಿತು.

ಸಂಗೀತ:
ಚಲನಚಿತ್ರವು ಕಲೆಯ ಅಭಿವ್ಯಕ್ತಿಯಾದರೆ ಆ ಅಭಿವ್ಯಕ್ತಿಗೆ ಸಂಗೀತದ ಬೆಂಬಲ ಇದ್ದರೆ ಮತ್ತಷ್ಟು ಸತ್ವಪೂರ್ಣವಾಗಿರುತ್ತದೆ. ಒಂದು ಚಿತ್ರದ ಮೌಲ್ಯವನ್ನು ವರ್ಧಿಸುವ ತಾಕತ್ತು ಸಂಗೀತಕ್ಕಿದೆ. ಒಂದೊಂದು ರಾಗವು ಒಂದೊಂದು ಭಾವವನ್ನು ಮೂಡಿಸುವ ವಿಶಿಷ್ಟತೆಯನ್ನು ಪಡೆದಿದೆ. ಕಥೆ ಮತ್ತದರ ನಿರೂಪಣೆಯನ್ನು ಪರಿಣಾಮಕಾರಿಯಾಗುಸುವುದರಲ್ಲಿ ಸಂಗೀತ ವಹಿಸಿವ ಪಾತ್ರ ಅಗ್ರಮಾನ್ಯ. ಚಿತ್ರದ ಸಾಹಿತ್ಯ ರಾಗ-ತಾಳಗಳಿಲ್ಲದೆ ಜನರನ್ನು ತಲುಪುವುದು ಕಷ್ಟ. ಹಾಗೆ ತಲುಪಿದರೂ ಅದು ತಲುಪುವ ವ್ಯಾಪ್ತಿ ಅತ್ಯಂತ ಸೀಮಿತವಾದಂಥದ್ದು. ಬರಿ ಕಾವ್ಯ/ಸಾಹಿತ್ಯದಲ್ಲಿ ಆಸಕ್ತಿ ಇರುವವರಿಗೆ ರುಚಿಸಬಹುದೇನೊ. ಒಂದು ಚಿತ್ರ ಪ್ರೇಕ್ಷಕನನ್ನು ಅದರ ಕುರಿತು ತನ್ಮಯನನ್ನಾಗಿಸುವುದು ಸಂಗೀತದ ಮುಖಾಂತರವೇ. ಸಂಗೀತ ಅದ್ಭುತವಾಗಿ ಮೂಡಿ ಬಂದರೆ ಅದು ನಿಸ್ಸಂದೇಹವಾಗಿ ಚಿತ್ರದ ಪ್ರಮುಖ ಆಕರ್ಷಣೆ. ಹೀಗಾದಗಲೆಲ್ಲ, ಸಂಗೀತಕ್ಕೆ ಸಂವೇದಿಯಾಗುವಂತೆ ಕಥಾವಸ್ತು ಇರಬೇಕು. ಅಬ್ಬರದ ಸಂಗೀತ ಮೈಮರೆಸಬಹುದಾಗಿದ್ದರೂ ಅದು ತಾತ್ಕಾಲಿಕ ಮಾತ್ರ. ಪ್ರೇಕ್ಷಕರ ಮನಗಳಲ್ಲಿ ಇಂದಿಗೂ ಚಿರಸ್ಥಾಯಿಯಾಗಿ
ಉಳಿದಿರುವ ಹಾಡುಗಳು ಮಾಧುರ್ಯಪ್ರಧಾನವಾದವು ಮಾತ್ರ. ಇಂದಿನ ಚಿತ್ರಗಳಲ್ಲಿ ಸಂಗೀತ ಮತ್ತು ಚಿತ್ರದ ಕಥೆಗಳು ಒಂದಕ್ಕೊಂದು ಹೊಂದಾಣಿಕೆಯಾಗುತ್ತಿಲ್ಲ. ಕೆಲವು ಚಿತ್ರಗಳಿಗೆ ಅತ್ಯಂತ ಇಂಪಾದ ಸಂಗೀತ ಇರುವುದನ್ನು ಗಮನಿಸಿರಬಹುದು. ಆದರೆ ಚಿತ್ರದಲ್ಲೇನಿರಬಹುದೆಂದು ನೋಡಹೋದ ಪ್ರೇಕ್ಷಕನಿಗೆ ಎದುರಾಗುವುದು ನಿರಾಶೆ. ಮುಂಗಾರು ಮಳೆ ಚಿತ್ರ ಬಿಡುಗಡೆ ಆದ ನಂತರ, ಬಹುಪಾಲು ಸಂಗೀತ ನಿರ್ದೇಶಕರು (ಮನೋಮೂರ್ತಿ ಅವರನ್ನೂ ಒಳಗೊಂಡು) ಭ್ರಮೆಯೊಂದಕ್ಕೆ ಒಳಗಾಗಿರುವುದನ್ನು ನಾವು ಮನಗಾಣಬಹುದು. ಒಂದೇ ರೀತಿ ಎನಿಸುವ ರಾಗ ಸಂಯೋಜನೆಗಳು "ಈ ಹಾಡು ಈ ಸಂಗೀತ ನಿರ್ದೇಶಕನ ಹಿಂದಿನ ಚಿತ್ರದ ಹಾಡಿನಂತೆಯೇ ಇದೆಯಲ್ಲ..." ಎಂಬ ಇರುಸು-ಮುರುಸಿನ ಅಭಿಪ್ರಾಯಗಳು ಪ್ರೇಕ್ಷಕವರ್ಗದಿಂದ ಇತ್ತೀಚೆಗೆ ಕೇಳಿಬರುತ್ತಿದೆ. ಒಂದು ಹಾಡು ಜನಪ್ರಿಯವಾದರೆ, ಆ ಹಾಡಿನ ಛಾಯೆ ತನ್ನ ಮುಂದಿನ ಕೃತಿಗಳಲ್ಲಿ ಒಂದಿಷ್ಟೂ ಕಾಣಬಾರದು ಎನ್ನುವ ಎಚ್ಚರ ಸಂಗೀತ ನಿರ್ದೇಶಕರು ವಹಿಸಬೇಕು. ಅದೇ ಧಾಟಿಯ ಮತ್ತೊಂದಷ್ಟು ಹಾಡುಗಳನ್ನು ಪ್ರೇಕ್ಷಕರು ಅಪೇಕ್ಷಿಸುತ್ತಾರೆ ಎನ್ನುವ ತಪ್ಪು ಕಲ್ಪನೆ ಸಂಗೀತ ನಿರ್ದೇಶಕರಲ್ಲಿ ಇಲ್ಲವಾಗಬೇಕು. ಆ ಹಾಡು ನೀಡಿದ್ದ ಮುದಕ್ಕಿಂತಲು ಮಿಗಿಲಾದ ಅಥವಾ ಅದಕ್ಕಿಂತ ಗುಣಮಟ್ಟದಲ್ಲಿ ಯಾವುದೇ ರೀತಿಯಲ್ಲಿ ಕಡಿಮೆ ಎನ್ನಲಾಗದ ಮತ್ತೊಂದು ರಾಗವನ್ನು ಸಂಯೋಜಿಸುವ ನೈಪುಣ್ಯ ಮತ್ತು ಸಂಗೀತ ಜ್ಞಾನ ಸಂಗೀತ ನಿರ್ದೇಶಕನಿಗಿರಬೇಕಾದ ಕನಿಷ್ಠ ಅರ್ಹತೆಗಳು.
ಚಿತ್ರಕಥೆಗೆ ಜೀವಕಳೆಯನ್ನು ತುಂಬುವುದು ಅದರ ಹಿನ್ನೆಲೆ ಸಂಗೀತ. ದೃಶ್ಯ ಮಾಧ್ಯಮದಲ್ಲಿ ಬರಿಯ ಸಂಭಾಷಣೆಯ ಮೂಲಕ ಮಾತ್ರ ಕಲೆಯ ರಸವನ್ನು ಪ್ರೇಕ್ಷಕರಿಗೆ ಉಣಬಡಿಸಲು ಆಗುವುದಿಲ್ಲ. ಹಿನ್ನೆಲೆ ಸಂಗೀತದ ಮೂಲಕವೇ ಅದನ್ನು ಪೂರ್ಣಪ್ರಮಾಣದಲ್ಲಿ ಸಾಧಿಸಬಹುದು. ಇಂದಿನ ಚಿತ್ರಗಳಲ್ಲಿ ಹಿನ್ನೆಲೆ ಸಂಗೀತವನ್ನು ಅಸಮರ್ಪಕವಾಗಿಯೇ ಬಳಸಿಕೊಳ್ಳಲಾಗುತ್ತಿದೆ. ಕೆಲವು ಚಿತ್ರಗಳಲ್ಲಿ ಒಳ್ಳೆಯ ಸಂಗೀತ ಇದ್ದರೂ ಅದರ ಕಥೆ ಮತ್ತು ನಿರೂಪಣೆ ಶೋಚನೀಯವಾಗಿರುತ್ತದೆ. ಕಥೆ ಮತ್ತು ನಿರೂಪಣೆ ಮೆಚ್ಚಿಗೆಯಾಗುವಂಥ ಚಿತ್ರಗಳಲ್ಲಿ, ಸಂಗೀತ ಪೂರಕವಾಗಿ ನಿಲ್ಲುವುದಿಲ್ಲ. ಬೇಡದ ಸನ್ನಿವೇಶಗಳಲ್ಲಿ ಅನರ್ಥವೆನಿಸುವ ಹಾಡುಗಳು ದೊಂಬರಾಟಕ್ಕಿಳಿಯುತ್ತವೆ. ಚಿತ್ರದ ಸಂಗೀತವು ಅದರ ನಿರ್ದೇಶಕನ ಅಭಿರುಚಿಗೆ ಹಿಡಿದ ಕನ್ನಡಿ. ಐಟಮ್ ಸಾಂಗ್ ಗಳು ಚಿತ್ರದ ಪ್ರಚಾರದಲ್ಲಿ ಉಪಯೋಗಿಸುವ ಸಾಮಾನ್ಯ ತಂತ್ರವಾಗಿಬಿಟ್ಟಿದೆ. ಸಂಗೀತ ನಿರ್ದೇಶಕರಿಗೆ ಸಿಗಬೇಕಾದ ಸ್ವಾತಂತ್ರ್ಯದಲ್ಲೂ ವ್ಯತ್ಯಯ ಬಂದಂತಿದೆ. ಈಗೀಗಂತೂ ಪ್ರತಿಭಾವಂತ ಸಂಗೀತ ನಿರ್ದೇಶಕರೆನಿಸಿಕೊಂಡಿರುವವರೂ ಸಹ ನಿರ್ದೇಶಕರ ಕೈಗೊಂಬೆಗಳಂತೆ ಕೀಳುಮಟ್ಟದ ಸಂಗೀತವನ್ನೊದಗಿಸುತ್ತಿದ್ದಾರೆ.

ಉಪಸಂಹಾರ:
ವ್ಯವಹಾರವನ್ನೇ ಮೂಲ ಉದ್ದೇಶವನ್ನಾಗಿಟ್ಟುಕೊಂಡು ಚಲನಚಿತ್ರರಂಗ ಉದ್ಯಮವಾಗಿ ಬೆಳೆದುನಿಂತಿರುವ ಈ ದಿನಗಳಲ್ಲಿ, ಚಿತ್ರರಂಗದವರು ಪ್ರೇಕ್ಷಕರಿಗೇನು ಬೇಕು ಎಂದು ವಿಚಾರಮಾಡುವುದರಲ್ಲಿ ಸಂಪೂರ್ಣವಾಗಿ ಸೋತಿದ್ದಾರೆ. ಅಲ್ಲದೆ, ಪರಭಾಷಾ ಚಿತ್ರಗಳ ಅಂಧಾನುಕರಣೆಯ ಸೋಗಿಗೆ ಬಿದ್ದು ಇಂದಿನ ಸಿನೆಮಾಗಳು ಪ್ರೇಕ್ಷಕನಿಗೆ ಅವಸರದ ಅವಲಕ್ಕಿಯನ್ನು ಕುಟ್ಟಿ ಕೊಡುವುದರಲ್ಲಿ ಕಳೆದುಹೋದಂತೆ ತೋರುತ್ತಿದೆ. ಸೃಜನಶೀಲತೆಯ ಮೃಷ್ಠಾನ್ನವನ್ನು ಉಣಬಡಿಸುವ ನಿಟ್ಟಿನಲ್ಲಿ ಯಾರಿಗೂ ಶ್ರಮಿಸುವ ಮನಸ್ಸಿದ್ದಂತಿಲ್ಲ. ಸಿನೆಮಾಗಳು ಜನರಲ್ಲಿ ಜೀವನದ ಬಗ್ಗೆ ಒಲವು ಮೂಡಿಸುವಂತೆ ಕೆಲಸಮಾಡಬೇಕು.
ಜೀವನದ ಪಾಠಗಳನ್ನು ಮನರಂಜನೆಯ ಮೂಲಕ ಪ್ರೇಕ್ಷಕನಿಗೆ ತಿಳಿಹೇಳಿ ಅಂತರಂಗವನ್ನು ಅರಳಿಸಬೇಕು. ಜೀವನದ ಬಗೆಗಿನ ದೃಷ್ಟಿಕೋನದ ಹಲವು ಮಜಲುಗಳ ಮೇಲೆ ಬೆಳಕು ಚೆಲ್ಲುವಂತಿರಬೇಕು. ವೈವಿಧ್ಯತೆಯ ಹಣತೆಯಲ್ಲಿ ಪ್ರಯೋಗಶೀಲತೆಯ ಎಣ್ಣೆ ಬತ್ತದಂತೆ ಕ್ರಿಯಾಶೀಲರಾಗಿ ದುಡಿಯುವ ಹಾದಿಯಲ್ಲಿ ಚಲನಚಿತ್ರ ಕಲಾವಿದರು ಮುನ್ನಡೆಯಬೇಕು. ಏಕತಾನತೆಯ ಅಪಸ್ವರಗಳು ಕೇಳದಂತೆ ಮೈಮನ ಮರೆಸುವ ಸಂಗೀತ, ಭಾಷೆ ಮತ್ತು ಸಂಸ್ಕೃತಿಗೆ ಮಸಿಬಳೆಯದಂತೆ ಅವುಗಳ ಹಿರಿಮೆಯನ್ನು ಹೆಚ್ಚಿಸುವಂಥ ಸಾಹಿತ್ಯ ಸಿನೆಮಾಗಳ ಆಕರ್ಷಣೆಯಾಗುವಂತಾಗಬೇಕು. ಸಿನೆಮಾದ ಪ್ರತಿಯೊಂದು ಅಂಗವೂ ಮೌಲ್ಯಾಧಾರಿತ ನೆಲೆಯಲ್ಲಿ ಕಾರ್ಯವಹಿಸಿ, ಬೇರೆ ಬೇರೆ ಸ್ತರಗಳಲ್ಲಿ ಮಾನವೀಯ ಮೌಲ್ಯಗಳನ್ನು ಸಮಾಜಕ್ಕೆ ಮತ್ತೆ ಮತ್ತೆ ನೆನಪು ಮಾಡಿಕೊಡುವ ಬಗ್ಗೆ ಸಿನೆಮಾ ಮಾಡುವವರಿಗೆ ಮನವರಿಕೆಯಾಗಬೇಕು. ಮೂರು ತಾಸುಗಳಲ್ಲಿ ಮನಸ್ಸಿನ ಬೇಜಾರು ಕಳೆಯುವ ಅಪೇಕ್ಷೆ ಇಟ್ಟುಕೊಂಡಿರುವ ಪ್ರೇಕ್ಷಕನಿಗೆ ಅವನು ತೆತ್ತ ಬೆಲೆಗೆ ಉತ್ಕೃಷ್ಟವೆನಿಸುವ ಮನರಂಜನೆ ಸಿಗಬೇಕು. ಹೀಗಾದರೆ ಮಾತ್ರ ಚಿತ್ರರಂಗ ನಿಜವಾದ ಬೆಳೆವಣಿಗೆಯನ್ನು ಕಾಣಲು ಸಾಧ್ಯ.

Comments

Popular posts from this blog

ಮಾತು-ಮೌನ-ಮನಸ್ಸು

ಗುಂಗು ಹಿಡಿಸುವ ಮಧುರಾನುಭವ

ನಿರೀಕ್ಷೆ