ನಿರಂತರ

ಅದೆಷ್ಟು ವಸಂತಗಳು ಅಸಂಖ್ಯ ಚಿಗುರುಗಳು ಗೋಡೆಯ ಬಿರುಕಿನ ಮರವು ಗೋಡೆಗೆ ಬೆಂಬಲವೋ ಹೊರೆಯೋ ಬಲ್ಲವರಾರು? ಬೇರಿನ ಕಣ್ಣಿಗೆ ಕಾಣದು ಟಿಸಿಲೊಡೆಯುವ ತುದಿಗಳು ಚಿವುಟಿಸಿಕೊಂಡ ಕುಡಿಗಳು ಪೊರೆಗಟ್ಟದ ಅವ್ವನ ಕಣ್ಣೆದುರು ಸುಳಿದಾಡಿ ಮಬ್ಬುಗಟ್ಟಿಸುತಿದೆ ಸವೆಸಿದ ಹಾದಿಯ ನೆನಪು ತುಳಿದ ಮುಳ್ಳುಗಳು ಮುಡಿದ ಹೂಗಳು ಹಿಂಬಾಲಿಸುತ್ತಿವೆ ಹೆಜ್ಜೆಯ ಭಾರವ ಮರೆಸಲು "ಇನ್ನೇನು ತಲುಪಿದೆನಪ್ಪ" ಎಂದು ಅವ್ವ ಎದುರು ನೋಡುತಿರುವ ಗುರಿಯಾವುದು? ಉರುಳಬಹುದು ಕಾಂಡ ಕುಸಿಯಬಹುದು ಗೋಡೆ ಬಿಡಿಸಲಾಗದು ಮಣ್ಣು-ಬೇರಿನ ನಂಟು ಹಾದಿ ಮುಗಿದು ಪಯಣ ನಿಂತರೂ ಕೊನೆಗಾಣದು ಅವ್ವನ ಅದಮ್ಯ ಪ್ರೀತಿ ಅಗಾಧ ವಾತ್ಸಲ್ಯ..!! ಚಿತ್ರಕೃಪೆ: ಮಯೂರ ಮಾಸ ಪತ್ರಿಕೆ