ಮರೆತು ಹೋಗಿದ್ದ ಮಳೆರಾಯನ ನೆನೆದು

ಧೋ ಎಂದು ಸುರಿದ ಮಳೆ ಒಮ್ಮೆಲೆ ನಿಲ್ಲಲಿಲ್ಲ. ಮೊದಲಿಗೆ ಶಾಂತವಾಗಿ, ನಂತರ ತುಂತುರು ಹನಿಗಳಾಗಿ, ತದನಂತರ ತುಂತುರು ಹನಿಗಳನ್ನೂ ಇಡಿ ಇಡಿಯಾಗಿ ಒಡೆದು ಹರವಿ ಸಿಂಪಡಿಸಿದಂತೆ. ಸೂರ್ಯ ಪಡುವಣಕ್ಕೆ ಮತ್ತಷ್ಟು ಹತ್ತಿರವಾಗುತ್ತಿದ್ದ, ಮಳೆ ಪೂರ್ತಿ ನಿಂತ ಮೇಲೆ ಒಗ್ಗಟಿನಲ್ಲಿದ್ದಂತೆ ಕಂಡ ಮೊಡಗಳೆಲ್ಲ ಆಟ ಮುಗಿಸಿ ಹೋಮ್ ವರ್ಕ್ ಚಿಂತೆಯಲ್ಲಿ ಮನೆಗೆ ಮರಳುವ ಮಕ್ಕಳಂತೆ ಚದುರುತ್ತಿದ್ದವು. ಗಾಳಿಯಂತೂ ಸುಯ್ ಎಂದು ಬೀಸುತ್ತ ಮಳೆಯಲ್ಲಿ ಮಿಂದು ತೊಯ್ದ ನೆಲದ ಪರಿವೀಕ್ಷಣೆಗೆ ಬಂದಂತೆ. ಮಳೆಯ ಪರಿಮಳ ಎಲ್ಲೆಲ್ಲಿಗೆ ತಲುಪಿಲ್ಲ ಎಂದು ಅವಲೋಕಿಸಿದ ಹಾಗೆಯೂ ಆಗಬೇಕು. ಸದಾ ಪಕ್ಕದ ರಸ್ತೆಯಲ್ಲಿ ಕರ್ಕಶ ಹಾರ್ನ್ ಮೊಳಗಿಸುತ್ತ ಹೊಗೆಯುಗುಳುತ್ತಾ ಸಾಗುವ ವಾಹನಗಳನ್ನು ನೋಡಿ ಬೇಸರಗೊಂಡು ಕಹಿಯಾಗಿದ್ದ ಹುಣಸೇ ಮರದ ಮುಖದಲ್ಲಿ ಕಂಡರಿಯದ ಲವಲವಿಕೆ! ಅಡಿಯಿಂದ ಮುಡಿಯವರೆಗೆ ಎಲ್ಲವೂ ಒದ್ದೊದ್ದೆ. ಆ ಅಸಂಖ್ಯ ಟಿಸಿಲುಗಳ ತುದಿಯಲ್ಲಿ ಫಳ ಫಳನೆ ಹೊಳೆಯುತ್ತಿವೆ ಮಳೆಯ ಹನಿಗಳು... ಅಲ್ಲ ಅಲ್ಲ! ಮುತ್ತಿನ ಮಣಿಗಳು. ಆ ಮರದ ಹಿಂಬದಿಯಲ್ಲಿ ಮೋಡದ ಮರೆಯಲ್ಲಿ ಇಣುಕುತ್ತಿರುವ ನೇಸರನ ಎಳೆ ಬಿಸಿಲ ಹಿನ್ನೆಲೆಯಲ್ಲಿ ಹುಣಸೆ ಮರಕ್ಕೆ ದೀಪಾಲಂಕಾರದ ಮೆರುಗು ಮೂಡಿತ್ತು. ಚೈತ್ರದಲ್ಲಿ ಕೆಂದಳಿರ ಗರಿಗಳ ಮುಡಿದು ನಳನಳಿಸುವ ಹುಣಸೇ ಮರಕ್ಕೆ, ಗ್ರೀಷ್ಮ ಋತು ಬರುತ್ತಿದ್ದಂತೆಯೆ ಈ ಮತ್ತೊಂದು ಬಗೆಯ ವಿಶಿಷ್ಟ ಅಲಂಕಾರ ಯೋಗ.

ಅರೆ! ಹೀಗೆಲ್ಲ ಯೋಚನೆಗಳು ಮೂಡಿ ಅದೆಷ್ಟು ಕಾಲವಾಗಿತ್ತು! ಪ್ರೇಮಿಗಳಿಗೆ ರೊಮ್ಯಾಂಟಿಕ್ ಎನಿಸುವ, ಮಕ್ಕಳಿಗೆ ಕುತೂಹಲ ಮೂಡಿಸುವ, ದೊಡ್ಡವರಲ್ಲಿ ಹಳೆ ನೆನಪುಗಳನ್ನು ಕೆದಕಿ ಭಾವನೆಗಳನ್ನು ಕೆಣಕುವ, ನಿಸರ್ಗ ಸಿರಿಯ ಸೊಬಗನ್ನು ಚಿತ್ರಿಸುವ ರಮ್ಯ ರಮಣೀಯ ಮಳೆ ಇನ್ನಿಲ್ಲವಾಯಿತೆ? ಎಂಥವರಲ್ಲೂ ಅಡಿಗಿ ಸುಪ್ತವಾಗಿರುವ ಕವಿತ್ವವನ್ನು ಜಾಗೃತಗೊಳಿಸುವ, ಯಾವ ಮಾನವ ವಿರಚಿತ ಕಲೆಯೂ ಸಪ್ಪೆಯೆನಿಸಿಬಿಡುವ ಆ ಮಳೆಯ ಸೌಂದರ್ಯಕ್ಕೆ, ಅದು ತೆರೆದಿಡುವ ಅಗಣಿತ ವಿಸ್ಮಯಗಳಿಗೆ, ಅದು ತೆರೆಕಾಣಿಸುವ ಮೋಹಕ ಚಿತ್ರಗಳಿಗೆ, ಅದು ತಂದುಕೊಡುವ ಪುಳಕಗಳಿಗೆ ಬೆರಗಾಗುವುದನ್ನು, ಸ್ಪಂದಿಸುವುದನ್ನು, ಅದರ ಸವಿಯ ಆಸ್ವಾದಿಸುವುದನ್ನು ಮನಸ್ಸು ಮರೆತೆ ಹೋಗಿದೆಯೊ ಹೇಗೆ? ಯಾವುದಕ್ಕೂ ಪುರುಸೊತ್ತು ಸಿಗದ ಅತಿವೇಗದ ಬದುಕಿನಲ್ಲಿ ಈ ಸಂಗತಿಗಳೆಲ್ಲ ಗೌಣವಾಗಿಬಿಟ್ಟವೆ? ಬಿಸಿ ಬಿಸಿ ಚಹಾ ಹೀರುತ್ತ ಜೊತೆಯಲ್ಲಿ ಮೆಣಸಿನಕಾಯಿ ಬಜ್ಜಿ ತಿನ್ನುವ ಹಂಬಲ, ಕಿಟಕಿಯ ಪಕ್ಕದಲ್ಲಿ ನಿಂತು ಮಳೆನೀರು ಎರಚಿಸಿಕೊಳ್ಳುವ ತುಂಟ ಆಸೆ, ಮನೆಯೆದುರಲ್ಲಿರುವ ತೊಯ್ದ ಸಂಪಿಗೆ ಮರವನ್ನು ಜೋರಾಗಿ ಅಲುಗಾಡಿಸಿ ಮತ್ತೊಂದು ಮಳೆ ಸುರಿಸಿ ತಾಕತ್ತು ಮೆರೆವ ಹುಡುಗಾಟ ಇವೆಲ್ಲ ಮಳೆಯ ಜೊತೆಯಲ್ಲೆ ಹುಟ್ಟುವಂಥ ವಿನೋದಗಳು, ಬದುಕಿನ ಏಕತಾನತೆಯನ್ನು ಮುರಿದುಹಾಕುವ ಸುಲಭ ಸಾಧನಗಳು, ಜೀವನಪ್ರೀತಿಯನ್ನು ಉಕ್ಕಿಸುವಂಥ ಆಟಗಳು. ಇವೆಲ್ಲವನ್ನು ನಾವು ಬಲವಂತವಾಗಿ ದೂರವಿಟ್ಟಿದ್ದೇವೆ. ಇದಾವುದನ್ನೂ ಮಾಡುತ್ತಾ ಕೂರಲು ವ್ಯವಧಾನವಿಲ್ಲ ಎಂಬ ಕಟು ನಿರ್ಧಾರ ಕೈಗೊಂಡು ಒಪ್ಪಲೊಲ್ಲದ ಮನಸ್ಸನ್ನು ಲಗಾಮು ಹಾಕಿ ಒಪ್ಪಿಸಿಬಿಟ್ಟಿದ್ದೇವೆ.

ಮಳೆಯಲ್ಲಿ ನೆಂದು ಆಟವಾಡುವುದಿರಲಿ, ಅದನ್ನು ದೂರದಿಂದ ನೋಡಿ ಆನಂದಿಸುವ ಕಾಲಾವಕಾಶವೂ ಇರದಷ್ಟು ಬ್ಯುಸಿ ಆಗಿದ್ದೇವೆ. ಕೊನೆ ಮೊದಲು ತಿಳಿಯದ ದೈನಿಕ ಹಳವಂಡಗಳಲ್ಲಿ, ದುಡಿಮೆಯ ವೈಪರೀತ್ಯದಲ್ಲಿ, ಬದುಕಿನ ಯಾಂತ್ರಿಕ ಯಾನದಲ್ಲಿ ಮುಂಗಾರಿನ ಸಂಭ್ರಮಗಳು ಅದೆಲ್ಲಿ ಕಳೆದು ಹೋದವೋ! ನಗರ ಜೀವನವೇ ಹಾಗನಿಸುತ್ತದೆ. ಮಳೆ ಸುರಿಯಿತೆಂದರೆ, ಊರ ತುಂಬ ನರಕವನ್ನೆ ಭುವಿಗಿಳಿಸುವಂಥ ಟ್ರಾಫಿಕ್ ಜಾಮ್ ಗಳು, ರಸ್ತೆಗಳಲ್ಲಿನ ತಗ್ಗುಗಳಲ್ಲಿ ಮಳೆ ನೀರು ತುಂಬಿ ಅಯೋಮಯ ಲೋಕದ ಸೃಷ್ಟಿ. ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗುವ ಪ್ರಯಾಣದ ಸಮಯ ಇಮ್ಮಡಿಗೊಳ್ಳುತ್ತದೆ. ಹೊರಡುವುದು ಬಿಡುವುದು ನಮ್ಮ ಕೈಯ್ಯಲ್ಲಿ, ತಲುಪುವುದು ಮಾತ್ರ ಆ ದೇವರ ಕೈಲೂ ಇಲ್ಲ ಎನ್ನುವಂಥ ಘೋರ ಪರಿಸ್ಥಿತಿಯ ನಿರ್ಮಾಣ. "ಯಾವಾಗ ನಿಲ್ಲುವುದೊ, ಮನೆ ಯಾವಾಗ ತಲುಪುವೆವೊ", "ಮನೆ ಸೇರುವವರೆಗೂ ಮಳೆ ಬರದಿದ್ದರೆ ಸಾಕಪ್ಪ", "ಮಳೆ ಬರುವ ಮುನ್ನ ಒಗೆದು ಒಣಗಿಸಲೆಂದು ಹಾಕಿರುವ ಬಟ್ಟೆಗಳನ್ನು ತರಬೇಕು" ಹೀಗೆ ನಮ್ಮವೆ ಮುಗಿಯದ ವ್ಯಥೆಗಳು. ಇವೆಲ್ಲವೂ ಸಾಲದೆಂಬಂತೆ ವಿದ್ಯುತ್ ಸಮಸ್ಯೆ. ಮರದ ಕೊಂಬೆ ಮುರಿದು ರಸ್ತೆಗಳಲ್ಲಿ ಬೀಳುವುದು. ಮನೆಗಳಲ್ಲಿ ನೀರು ನುಗ್ಗುವುದು. ಒಂದೆರಡಲ್ಲ ನಗರಗಳಲ್ಲಿ ಉಂಟಾಗುವ ಭಾನಗಡಿ. ಒಟ್ಟಿನಲ್ಲಿ ತುಂಬ ಹಚ್ಚಿಕೊಂಡಿದ್ದ, ಮಳೆರಾಯನೆಂಬ ಆತ್ಮೀಯ ಗೆಳೆಯನನ್ನು, ಅವನ ಸಾಂಗತ್ಯವನ್ನು ಇದ್ದಕ್ಕಿದ್ದ ಹಾಗೆ ಕಾರಣವೇ ತಿಳಿಯದೆ ಉಪೇಕ್ಷಿಸುತ್ತಿರುವಂಥ ಭಾವ.

ನಗರವಾಸಿಯಾದ ಎಂಥವರಿಗೂ ಈ ವಿಚಾರಗಳೆಲ್ಲ ಹಾಸ್ಯಾಸ್ಪದ ಎನಿಸಬಹುದು, ಇಂಪ್ರಾಕ್ಟಿಕಲ್, ಸಿಲ್ಲಿ, ಸೆಂಟಿಮೆಂಟಲ್ ಎಂದು ತೋರಬಹುದು. ಮಳೆಯ ಬಗೆಗಿನ ಸುಂದರ ಕಲ್ಪನೆಗಳೆಲ್ಲ ಇನ್ನಿಲ್ಲ, ಅವೇನಿದ್ದರೂ ಕಾಲೇಜಿನ ವಾರ್ಷಿಕ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಕವಿತೆಗಳಲ್ಲಿ ಮಾತ್ರ, ಮಲೆನಾಡಿನ ಪ್ರವಾಸ ಕೈಗೊಂಡ ಆ ಮೂರು ದಿನಗಳಿಗೆ ಮಾತ್ರ ಸೀಮಿತ ಎಂದು ನಮಗೆ ನಾವೇ ಹೇಳಿಕೊಂಡಂತಿದೆ. ಮಳೆಯೆಡೆಗಿನ ಈ ನಿರ್ಭಾವುಕ ಮನೋವೃತ್ತಿಯಿಂದ ತಪ್ಪಿಸಿಕೊಳ್ಳಲು ಮಾರ್ಗೋಪಾಯಗಳೇ ಇಲ್ಲದಂತಾಗಿದೆ. ಟ್ರಾಫಿಕ್ ಜಾಮ್ ರಾಕ್ಷಸನ ಅಟ್ಟಹಾಸಕ್ಕೆ ಬೆದರಿ ನಲುಗಿ ಒಳಮನಸ್ಸಿನ ಸಂವೇದನೆಗಳನ್ನೆಲ್ಲ ನಿವೃತ್ತಿಗೆ ನೂಕೆಲೇಬೇಕಾಗಿದೆ. ಹೀಗೆಯೆ ಇದ್ದುಬಿಡಬೇಕೆಂದು ಅಂದುಕೊಂಡು ಅದನ್ನೆ ಯಾವುದೋ ನಿಯಮದಂತೆ ನಿಷ್ಠೆಯಿಂದ ಪಾಲಿಸುತ್ತಲೂ ಇದ್ದೇವೆ.

ಕಾಲಚಕ್ರ ತಿರುಗಿ ಮತ್ತೊಮ್ಮೆ ಮುಂಗಾರಿನ ಹೊಸ್ತಿಲಲ್ಲಿದೆ. ಆಗಸದಲ್ಲಿ ಮೋಡಗಳ ಬಳಗ ಜಮಾಯಿಸುತ್ತಿದೆ. ಗುಡುಗು-ಮಿಂಚುಗಳು ಹಣಕಿ ಹಾಕುತ್ತಿವೆ. ಅಲ್ಲಲ್ಲಿ ಮಳೆಯಾಗುತ್ತಿರುವ ವರದಿಗಳು ಮಾಧ್ಯಮಗಳಲ್ಲಿ ಬಿತ್ತರಗೊಳ್ಳುತ್ತಿವೆ. ಮಳೆಯ ಆಟಾಟೋಪಗಳು ಒಂದಷ್ಟು ಕರುಣೆ ತೋರಲಿ. ಟ್ರಾಫಿಕ್ ಜಾಮ್ ಗಳ ಮಧ್ಯದಲ್ಲೂ ಮಳೆಯ ಸಾವಿರಾರು ಬಣ್ಣಗಳು ಕಣ್ಣಿಗೆ ಗೋಚರಿಸುವಂತಾಗಲಿ. ಬಿಡುವಿರದ ಓಟಗಳ ನಡುವೆ ಅದುಮಿಟ್ಟಿದ್ದ ಮನಸ್ಸು ಒಂದಿಷ್ಟು ಸಡಿಲವಾಗಲಿ, ಮಳೆಯ ತುಂಟಾಟಗಳಿಗೆಲ್ಲ ಮತ್ತೆ ಜೀವ ಬರಲಿ ಸವಿಭಾವ ಮರಳಲಿ. ಈ ಬಾರಿಯಾದರೂ ಮಳೆರಾಯನ ಹಳೆಯ ಗೆಳೆತನ ನೆನಪಾಗಲಿ. ಅವನನ್ನು ಬಾಹುಗಳಲ್ಲಿ ತಬ್ಬಿಕೊಳ್ಳಲಾಗದಿದ್ದರು ಬೊಗಸೆಗಳಲ್ಲಿ ತುಂಬಿಕೊಳ್ಳುವಂತಾಗಲಿ. ಮತ್ತೊಮ್ಮೆ ಪುಟಿದೇಳುವುವೆ ಆ ಮುಗ್ಧ ಸುಂದರ ಭಾವಗಳು?

ಜೂನ್ ೧೭, ೨೦೧೦ ರಂದು ದಟ್ಸ್ ಕನ್ನಡ.ಕಾಂನಲ್ಲಿ ಪ್ರಕಟಗೊಂಡ ಲೇಖನ

Comments

Pramod P T said…
ಹೌದಲ್ಲಾ! ಈ ಬ್ಯುಸಿ ಲೈಫ್ ನಲ್ಲಿ ಈ ಭಾವನೆಗಳೆಲ್ಲಾ ಸಿಲ್ಲಿ ಅನ್ಸೋದು ಸಹಜ. ನಮ್ಗೆಲ್ಲಾ ವೀಕ್ ಡೇಸ್ ಮಳೆ ಕಿರಿಕಿರಿ. ವೀಕೇಂಡ್ ಮಳೆ ಒಕೆ ಒಕೆ ಅನ್ಸೊಕೆ ಶುರುವಾಗಿದೆ.
ಬರಹ ಚೆನ್ನಾಗಿದೆ.
ಪ್ರತಿಕ್ರಿಯೆಗೆ ಧನ್ಯವಾದಗಳು :)

Popular posts from this blog

ಮಾತು-ಮೌನ-ಮನಸ್ಸು

ಬೀದಿ ಬದಿಯ ಬಾಣಸಿಗ

ಗೆಳೆಯನ ಬೀಳ್ಕೊಡುಗೆಗೆ ಎರಡು ಕವಿತೆಗಳು