ಶುಕ್ರ ಸಂಕ್ರಮಣ
ಜೂನ್ ೬, ೨೦೧೨ ರಂದು ಒಂದು ಅಪರೂಪದ ವಿದ್ಯಮಾನ ಅಂತರಿಕ್ಷದಲ್ಲಿ ಸಂಭವಿಸಲಿದೆ. ಅದನ್ನು ನೇರವಾಗಿ ವೀಕ್ಷಿಸುವ ಅವಕಾಶ ಹೊಂದಿರುವ ನಾವೆಲ್ಲ ಅದೃಷ್ಟವಂತರೇ ಸರಿ! ವಿಜ್ಞಾನಿಗಳು, ಖಗೋಳಶಾಸ್ತ್ರಜ್ಞರು, ಹವ್ಯಾಸಿಗಳು, ವೃತ್ತಿಪರರು, ವಿಜ್ಞಾನಾಸಕ್ತರು ಮತ್ತು ಸಾಮಾನ್ಯ ಜನತೆ ಕೂಡ ಅಂತರಿಕ್ಷದಲ್ಲಿ ನಡೆಯಲಿರುವ ಈ ದೃಶ್ಯ ಚಮತ್ಕಾರದ ವೀಕ್ಷಣೆಯ ಪ್ರತಿಕ್ಷಣವನ್ನೂ ಆನಂದಿಸಲು ಅಣಿಯಾಗುತ್ತಿದ್ದಾರೆ. ಅದುವೆ "ಶುಕ್ರ ಗ್ರಹದ ಸಂಕ್ರಮಣ"! ಶುಕ್ರ ಗ್ರಹವು ಕಪ್ಪು ಚುಕ್ಕಿಯಂತೆ ಸೂರ್ಯನ ಮೇಲೆ ಮಂದವಾಗಿ ಹಾದುಹೋಗಲಿದೆ ಮತ್ತು ಈ ಚಲನೆಯ ದೃಶ್ಯ ಸೂರ್ಯೋದಯದಿಂದ ಬೆಳಿಗ್ಗೆ ೧೦.೩೦ರ ವರೆಗೆ ಗೋಚರಿಸಲಿದೆ. ಈ ವಿದ್ಯಮಾನ ಯಾಕೆ ಅಪರೂಪ ಮತ್ತು ನಾವೇಕೆ ಇದನ್ನು ವೀಕ್ಷಿಸಬಹುದಾದ ಭಾಗ್ಯಶಾಲಿಗಳು? ಜೂನ್ ೬, ೨೦೧೨ ರಂದು ಇದರ ವೀಕ್ಷಣೆ ತಪ್ಪಿಸಿಕೊಂಡಲ್ಲಿ ನಾವಿದನ್ನು ನಮ್ಮ ಜೀವಮಾನದುದ್ದಕ್ಕೂ ನೋಡಲಾರೆವು. ಕಾರಣ ಇದು ಮತ್ತೆ ಸಂಭವಿಸಲಿರುವುದು ೧೧ ಡಿಸೆಂಬರ್, ೨೧೧೭ಕ್ಕೆ. ಈ ಹಿಂದೆ ಇದೇ ರೀತಿಯ ಘಟನೆ ನಡೆದದ್ದು ಜೂನ್ ೮, ೨೦೦೪ರಲ್ಲಿ. ಇದು ಲೆಕ್ಕಾಚಾರ ಅಥವಾ ಇನ್ನಾವುದೇ ಅಳತೆಗೆ ಸಿಗದ ಯಾದೃಚ್ಛಿಕ ವಿದ್ಯಮಾನವಲ್ಲ. ಇದಕ್ಕೊಂದು ಕ್ರಮವಿದೆ. ಶುಕ್ರ ಸಂಕ್ರಮಣವು ೮ ವರ್ಷಗಳ ಅಂತರವಿರುವ ಜೋಡಿ ಇಸವಿಗಳಲ್ಲಿ ಸಂಭವಿಸುತ್ತದೆ. ಮಾತ್ರವಲ್ಲದೆ ಈ ಜೋಡಿ ಇಸವಿಗಳ ನಡುವಿನ ಅಂತರ ೧೨೧.೫ ಮತ್ತು ೧೦೫.೫ ವರ್ಷಗಳಂತೆ ಅದಲು ಬದಲಾಗುತ್ತಿರುತ್ತದೆ....