ಹೈಟೆಕ್ ಕಾರ್ಮಿಕರು

ಭಾರತವನ್ನೂ ಒಳಗೊಂಡು ಪ್ರಪಂಚದ ಸುಮಾರು ೮೦ ದೇಶಗಳಲ್ಲಿ ಮೇ ೧ ರಂದು ಕಾರ್ಮಿಕರ ದಿನಾಚರಣೆ ಆಚರಿಸಲಾಗುತ್ತದೆ. ಅಂದು ಆ ಎಲ್ಲಾ ದೇಶಗಳಲ್ಲಿ ರಾಷ್ಟ್ರೀಯ ರಜಾ ದಿನ. ಕಾರ್ಮಿಕರ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವುದು ವಿಶ್ವ ಕಾರ್ಮಿಕರ ದಿನಾಚರಣೆಯ ಮೂಲ ಧ್ಯೇಯಗಳಲ್ಲಿ ಒಂದು. ವಿವಿಧ ಕಾರ್ಮಿಕ ಪರ ಸಂಘ ಸಂಸ್ಥೆಗಳು ಈ ದಿನದಂದು ಸಮಾವೇಶ, ವಿಚಾರ ಸಂಕಿರಣಗಳನ್ನು ಹಮ್ಮಿಕೊಂಡು ಕಾರ್ಮಿಕರ ಬದುಕು-ಬವಣೆ, ಹಕ್ಕುಗಳ ಕುರಿತು ಚಿಂತಿಸುವುದು ಇದರ ವಿಶೇಷ. ಐಟಿ ಉದ್ದಿಮೆಯ ಸಂದರ್ಭದಲ್ಲಿ ಕಾರ್ಮಿಕರ ದಿನಾಚರಣೆಯು ಬಹಳಷ್ಟು ಐಟಿ ಉದ್ಯೋಗಿಗಳಿಗೆ ಬೇರೆ ಎಲ್ಲ ರಜಾದಿನಗಳಂತೆ ಮತ್ತೊಂದು ರಜೆಯಷ್ಟೆ. ಖಾಸಗಿ ವಲಯದ ಇತರೆ ಉದ್ದಿಮೆಗಳಲ್ಲಿರುವ ಕಾರ್ಮಿಕರಿಗೆ ಹೋಲಿಸಿದರೆ, ಐಟಿ ಕಾರ್ಮಿಕರಲ್ಲಿ ಕಾರ್ಮಿಕರ ದಿನಾಚರಣೆ ಹಾಗೂ ಹಕ್ಕುಗಳ ಮಹತ್ವದ ಬಗೆಗಿನ ಜಾಗೃತಿ ನಿರಾಸೆ ಮೂಡಿಸುವಷ್ಟು ಕಡಿಮೆಯಿದೆ. ಕೆಲ ಐಟಿ ಕಂಪನಿಗಳಲ್ಲಿ ಈ ದಿನವನ್ನು ಐಚ್ಛಿಕ ರಜೆಯನ್ನಾಗಿಸಿರುವುದು ಈ ದಿನದ ಬಗೆಗೆ ಐಟಿ ಕಂಪನಿಗಳು ತಳೆದಿರುವ ನಿಲುವನ್ನು ಎತ್ತಿ ಹಿಡಿಯುತ್ತದೆ. ಐಟಿ ಮಂದಿ ತಮ್ಮನ್ನು ತಾವು ಕಾರ್ಮಿಕರೆಂದು ಗುರುತಿಸಿಕೊಳ್ಳುವುದರಲ್ಲೇ ತುಸು ಹಿಂದುಳಿದಿದ್ದಾರೆಂದರೆ ತಪ್ಪಾಗಲಾರದು. ಹಾಗೇನಾದರೂ ಗುರುತಿಸಿಕೊಂಡರೂ ತಾವು ಮೇಲ್ವರ್ಗದ ಕಾರ್ಮಿಕರೆಂಬ ಭಾವನೆ ಇಲ್ಲಿನ ಉದ್ಯೋಗಿಗಳದ್ದು. ಇವರೆಲ್ಲ ಕಾರ್ಮಿಕ ವರ್ಗಕ್ಕೆ ಸೇರಿದರೂ "ಟೆಕ್ಕಿ" ಎಂಬ ಸಂಭಾವಿತ ಗುಂಪಿಗೆ ಪ್ರತ್ಯೇಕಿಸಲ್ಪಟ್ಟಿದ್ದಾರೆ. ಸರಕುಗಳನ್ನು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸುವ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ವರ್ಗ ಮಾತ್ರ "ಕಾರ್ಮಿಕರು" ಎನ್ನುವ ಅಭಿಪ್ರಾಯ ಇಂದಿಗೂ ಕೂಡ ಜನಮಾನಸದಲ್ಲಿ ವ್ಯಾಪಿಸಿರುವಂತಿದೆ. ಜಾಗತೀಕರಣದ ಹೊಸ ಚಹರೆಗಳು ಅನಾವರಣಗೊಂಡಂತೆ ಜನ್ಮ ತಳೆದಿರುವ, ತಳೆಯುತ್ತಿರುವ ಹೊಸ ಹೊಸ ಉದ್ದಿಮೆಗಳಲ್ಲಿ "ಕಾರ್ಮಿಕ" ಎಂಬ ಪದದ ಪ್ರಸ್ತುತತೆ ಮಸುಕಾಗಿದೆ. ಈ ಕ್ಷೇತ್ರದಲ್ಲಿ ವೈಯಕ್ತಿಕ ನೆಲೆಯಲ್ಲಿ ನೌಕರರಿಗೆ ಸಿಗುವ ಅಪರಿಮಿತ ಆರ್ಥಿಕ ಲಾಭಗಳು ಹಾಗೂ ಇದ್ದಕ್ಕಿದ್ದಂತೆ ದೊರಕುವ ಸಾಮಾಜಿಕ ಮಾನ್ಯತೆ ಹಾಗೂ ಭದ್ರತೆ, ಅವರನ್ನು ಇನ್ನುಳಿದ ಕ್ಷೇತ್ರಗಳ ಕಾರ್ಮಿಕರಿಂದ ಬೇರ್ಪಡಿಸಿಟ್ಟಿರುವುದಷ್ಟೆ ಅಲ್ಲದೆ ಕಾರ್ಮಿಕರ ಹಕ್ಕುಗಳ ಬಗೆಗಿನ ಮೂಲಭೂತ ಅರಿವಿನ ಅವಶ್ಯಕತೆಯನ್ನೂ ಸಹ ಇಲ್ಲವಾಗಿಸಿದೆ. ಇತ್ತೀಚೆಗೆ ಏರುತ್ತಿರುವ ಜೀವನಶೈಲಿ ಸಂಬಂಧಿತ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿರುವವರಲ್ಲಿ ಹೆಚ್ಚಿನ ಪಾಲು ಐಟಿ ನೌಕರರದ್ದು. ದಿನವೊಂದಕ್ಕೆ ಒಬ್ಬ ಕಾರ್ಮಿಕ ತನ್ನ ಕಾರ್ಖಾನೆ/ಕಚೇರಿಯಲ್ಲಿ ದುಡಿಯಬೇಕಾದ ಸಮಯದ ಗರಿಷ್ಠ ಮಿತಿ ನಿರ್ಲಕ್ಷ್ಯಕ್ಕೆ ಒಳಪಟ್ಟಿರುವುದು ಐಟಿ ಕಾರ್ಮಿಕರು ಮೂಕವಾಗಿ ಎದುರಿಸುತ್ತಿರುವ ಬಹುದೊಡ್ಡ ಸವಾಲು. ಇದರ ಹಿಂದಿರುವ ಕಾರಣಗಳ ಮೇಲೆ ಬೆಳಕು ಚೆಲ್ಲುವ ಯತ್ನ ಇಲ್ಲಿದೆ.

ಐಟಿ ಉದ್ದಿಮೆ ಜಾಗತಿಕ ಆರ್ಥಿಕ ಹಿನ್ನಡೆಯ ಹೊಡೆತಕ್ಕೆ ಸಿಲುಕಿ ತನ್ನ ಕರಾಳಪರ್ವವನ್ನು ಸಾಕ್ಷ್ಯಗೊಳಿಸಿದ್ದರೂ ಸಹ ಮತ್ತೆ ಸಹಜಸ್ಥಿತಿಗೆ ಮರಳಿ, ಇಂದಿಗೂ ಸಮಾಜದ ಕೆಳ ಮಧ್ಯಮ ಮತ್ತು ಮಧ್ಯಮ ವರ್ಗದ ಜನರಿಗೆ ಅದು ಉದ್ಯೋಗಗಳ ಅಭಯಸ್ಥಾನವಾಗಿದೆ. ಈ ಕ್ಷೇತ್ರದ ನೌಕರಿಗಳಿಗೆ ಬೇಕಿರುವ ಕನಿಷ್ಠ ಅರ್ಹತೆಯನ್ನು ಗಳಿಸಲು ಮಧ್ಯಮ ವರ್ಗ ಇನ್ನೂ ಕನವರಿಸುತ್ತಿದೆ. ಐಟಿ ಕಂಪನಿಗಳು ತಮ್ಮ ನೌಕರರಿಗೆ ನೀಡುವ ಆಕರ್ಷಕ ಸಂಬಳಗಳು, ಇಂಜಿನಿಯರಿಂಗ್ ಪದವಿಯ ಅಂತಿಮ ವರ್ಷದಲ್ಲೇ ವಿದ್ಯಾರ್ಥಿಗಳನ್ನು ಸೆಳೆಯಲಾರಂಭಿಸುತ್ತವೆ. ಇಲ್ಲಿನ ನೌಕರಿಗಳನ್ನು ಹಿಡಿಯುವ ಯುವ ಜನಾಂಗಕ್ಕೆ ಚಿಕ್ಕ ವಯಸ್ಸಿನಲ್ಲೆ ಆರ್ಥಿಕ ಸ್ವಾತಂತ್ರ್ಯ ಸುಲಭಸಾಧ್ಯ. ಈ ಕ್ಷೇತ್ರ, ನೌಕರರಿಗೆ ಕಡಿಮೆ ಕಾಲಾವಧಿಯಲ್ಲಿ ಆರ್ಥಿಕ ಸುಭದ್ರತೆ ಹಾಗೂ ವಿದೇಶ ಪ್ರಯಾಣದ ಅವಕಾಶಗಳನ್ನು ನೀಡುವುದರಿಂದ ಇದರ ಸೆಳೆತ ಇನ್ನೂ ಪ್ರಬಲವಾಗಿದೆ. ಪ್ರಾಥಮಿಕ ಹಂತದಲ್ಲಿ ಇಲ್ಲಿನ ತಾಂತ್ರಿಕ ಹುದ್ದೆಗಳಿಗೆ ಬೇಕಾಗುವ ಕೌಶಲ್ಯ ಗಣಕಶಾಸ್ತ್ರಕ್ಕೆ ಸಂಬಂಧಿಸಿದ್ದಾದರೂ, ಮೂಲಭೂತ ತಾಂತ್ರಿಕ ಸಮಸ್ಯೆಗಳಿಗೆ ತಾರ್ಕಿಕ ಪರಿಹಾರ ಹುಡುಕುವ ಸಾಮರ್ಥ್ಯವುಳ್ಳ ಹಾಗೂ ಯಾವುದೇ ಕ್ಷೇತ್ರದಲ್ಲಿ ಇಂಜಿನಿಯರಿಂಗ್ ಪದವಿ ಪಡೆದವರು ಈ ನೌಕರಿಗಳನ್ನಲಂಕರಿಸಲು ಅರ್ಹರು. ಮಾತ್ರವಲ್ಲ, ಎಲ್ಲ ನೌಕರರಿಗೂ ಪ್ರಾರಂಭದ ದಿನಗಳಲ್ಲಿ ಗಣಕಶಾಸ್ತ್ರದ ಕುರಿತು ಮೂಲಭೂತ ತರಬೇತಿಯನ್ನೂ ನೀಡಲಾಗುತ್ತದೆ. ಐಟಿ ಕ್ಷೇತ್ರದಲ್ಲಿ ಪ್ರಮುಖ ಹಾಗೂ ಗಮನಾರ್ಹ ಅಂಶವೆಂದರೆ ಸ್ಪರ್ಧೆ. ದಿನ ದಿನಕ್ಕೂ ಹೊಸತನ್ನು ಕಾಣುವ ತಂತ್ರಜ್ಞಾನ ಕ್ಷೇತ್ರಕ್ಕೆ ಎಡತಾಕಿಕೊಂಡಿರುವ ಐಟಿ ಕ್ಷೇತ್ರದಲ್ಲಿ ಉದ್ಯೋಗಿಗಳು ಬಹುಕಾಲ ಉಳಿಯಬೇಕಾದಲ್ಲಿ, ಹೊಸತನ್ನು ಕಲಿಯುತ್ತಿರಲೇಬೇಕು. ಈ ಪರಿಪಾಠ ಕೆಲಸಕ್ಕೆ ಸೇರಿದ ಹೊಸತರಿಂದಲೇ ರೂಢಿಯಾಗುತ್ತದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಗರಿಷ್ಠ ಬೆಳವಣಿಗೆ ಕಾಣಬಹುದಾದ್ದರಿಂದ, ತಮ್ಮ ತಮ್ಮ ವೃತ್ತಿಬದುಕಿನಲ್ಲಿ ಎತ್ತರಕ್ಕೇರುವ ಕನಸು ಹೊತ್ತ ಯುವ ಉದ್ಯೊಗಿಗಳು, ಮೊದಲಿನಿಂದಲೇ ಪರಿಶ್ರಮದ ಜೀವನಶೈಲಿಗೆ ತಮ್ಮನ್ನು ತಾವು ಅಳವಡಿಸಿಕೊಂಡುಬಿಡುತ್ತಾರೆ. ದಿನಕ್ಕೆ ೧೦ ರಿಂದ ೧೫ ಘಂಟೆಗಳ ದುಡಿಮೆ ತೀರಾ ಸಾಮಾನ್ಯ ವಿಚಾರವಾಗಿದ್ದು, ಬಹುತೇಕ ನೌಕರರಿಗೆ ಕಾರ್ಮಿಕರ ಕಾಯ್ದೆಗೆ ಅನುಗುಣವಾಗಿ ದಿನಕ್ಕೆ ಒಬ್ಬ ಕಾರ್ಮಿಕ ದುಡಿಯಬಹುದಾದ ಗರಿಷ್ಠ ಸಮಯದ ಮಿತಿಯ(೮ ಘಂಟೆಗಳು) ಬಗೆಗೆ ಯಾವ ಮಾಹಿತಿಯೂ ಇರುವುದಿಲ್ಲ. ವೃತ್ತಿಜೀವನದ ಬೆಳವಣಿಗೆಯು ಕಾರ್ಮಿಕನೊಬ್ಬನ ಸರ್ವತೋಮುಖ ಬೆಳವಣಿಗೆಗೆ ಬೇಕಾದ ಇನ್ನಿತರ ಅಂಶಗಳನ್ನು ಗೌಣವಾಗಿಸಿ ಐಟಿ ನೌಕರರನ್ನು ಕ್ರಮೇಣ ಕಾರ್ಯವ್ಯಸನಿಗಳನ್ನಾಗಿಸುತ್ತದೆ. ಬಹುತೇಕ ಐಟಿ ಕಂಪನಿಗಳು ತಮ್ಮ ನೌಕರರ ಅತಿಯಾದ ದುಡಿಮೆಗೆ ಹೊಣೆಯಾಗುವ ಗೋಜಿಗೆ ಹೋಗುವುದಿಲ್ಲ. ನೌಕರಿಗೆ ಸೇರುವ ಮುನ್ನ ಪ್ರತಿಯೊಬ್ಬ ಉದ್ಯೋಗಾಕಾಂಕ್ಷಿಯೂ ಕಂಪನಿಯ ನೀತಿ-ನಿಯಮಗಳಿಗೆ ಬದ್ಧನಾಗಿರುತ್ತೇನೆಂದು ಒಪ್ಪಂದವೊಂದಕ್ಕೆ ಸಹಿ ಹಾಕಬೇಕಾಗಿರುತ್ತದೆ. ಸಾಮಾನ್ಯವಾಗಿ ಇಂಥ ಒಪ್ಪಂದಗಳಲ್ಲಿ ದಿನಕ್ಕೆ ೮ ಘಂಟೆಗಳ ಕಾಲ ಕೆಲಸ ಮಾಡಬೇಕೆಂಬ ನಿಯಮವಿದ್ದರೂ ಅದರ ಜೊತೆಯಲ್ಲೆ ೮ ಘಂಟೆಗಳನ್ನು ಮೀರಿದಲ್ಲಿ ಅದು ಕಂಪನಿಯ ಜವಾಬ್ದಾರಿಗೆ ಹೊರತೆಂಬ ಅರ್ಥವಿರುವಂಥ ಷರತ್ತುಗಳು ಇರುತ್ತವೆ. ಸಹಿ ಹಾಕುವ ಮುನ್ನ ಯಾವ ಉದ್ಯೋಗಾರ್ಥಿಯೂ ಅದನ್ನು ಪ್ರಶ್ನಿಸುವುದಿಲ್ಲ. ಹೀಗೆ ಪ್ರಶ್ನಿಸಿದರೆ ಸಿಕ್ಕ ನೌಕರಿ ಕೈಜಾರಿ ಹೋಗಬಹುದೆಂಬ ಅಭದ್ರತೆ ಅವರನ್ನು ತಡೆಯುತ್ತದೆ. ಅದನ್ನು ತೊರೆದು ಮತ್ತೊಂದು ಕಂಪನಿಯ ನೌಕರಿ ಹಿಡಿಯಬಹುದಾದರೂ ಅಲ್ಲೂ ಸಹ ಇದೇ ವ್ಯಥೆ. ಹಾಗೆಯೇ. ಇಂಥ ನೌಕರಿಗಳಲ್ಲಿ ಉದ್ಯೋಗಿಗಳ ಕಾರ್ಯಕ್ಷಮತೆಯ ಅಳತೆಗೋಲುಗಳು ಅವರು ದಿನಕ್ಕೆ ೮ ಘಂಟೆಗಳಿಗಿಂತ ಹೆಚ್ಚು ಕಾಲ ದುಡಿಯುವುದನ್ನು ಅನಿವಾರ್ಯವಾಗಿಸುತ್ತವೆ. ಪ್ರತಿಯೊಂದು ಐಟಿ ಕಂಪನಿಯಲ್ಲೂ ಮಾನವ ಸಂಪನ್ಮೂಲ ವಿಭಾಗಗಳಿದ್ದರೂ ಸಹ ಅವುಗಳ ಕಾರ್ಯಕ್ಷೇತ್ರ ನೌಕರರಿಗೆ ಬಡ್ತಿ, ವಿಮೆ, ಪ್ರಶಸ್ತಿ-ಪುರಸ್ಕಾರಗಳು ಮತ್ತು ಇನ್ನಿತರ ಸವಲತ್ತುಗಳನ್ನು ನೀಡುವುದಕ್ಕಷ್ಟೇ ಸೀಮಿತ. ಅತಿಯಾದ ಕೆಲಸದಿಂದುಂಟಾಗುವ ಒತ್ತಡ ಹಾಗೂ ವಿವಿಧ ಆರೋಗ್ಯ ಸಮಸ್ಯೆಗಳನ್ನು ನಿಭಾಯಿಸಲು ಆಪ್ತ ಸಮಾಲೋಚನೆ ಮತ್ತು ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ, ಸಂವಾದಗಳನ್ನು ಏರ್ಪಡಿಸುವ ಹಲವಾರು ಐಟಿ ಕಂಪನಿಗಳಿದ್ದರೂ, ಈ ಸಮಸ್ಯೆಗಳಿಗೆ ಮೂಲಕಾರಣವಾದ ಅತಿಯಾದ ದುಡಿಮೆಯ ಕುರಿತು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಕೆಲವೊಮ್ಮೆ, ಈ ವಿಭಾಗಗಳಲ್ಲೂ ಸಹ ಸಿಬ್ಬಂದಿಯ ನಡುವಣ ಸ್ಪರ್ಧೆಯೇ ಮಿಕ್ಕೆಲ್ಲ ಅಂಶಗಳನ್ನು ಹಿಂದೆ ತಳ್ಳುತ್ತದೆ.

ಕಾರ್ಮಿಕರ ಹಕ್ಕುಗಳ ಈ ಉಪೇಕ್ಷೆಗೆ ಸ್ವತಃ ಐಟಿ ನೌಕರರ ಪಾಲು ಹಿರಿದಾಗಿದೆ. ನೌಕರಿಗೆ ಬೇಕಾಗುವ ಕೌಶಲ್ಯಗಳನ್ನು ಮೊನಚುಗೊಳಿಸಿಕೊಳ್ಳುವ ತವಕ ಮತ್ತು ಹುಮ್ಮಸ್ಸುಗಳಲ್ಲಿ ಅವಿವಾಹಿತ ನೌಕರರು ತಮ್ಮ ಕಚೇರಿಯ ಕೆಲಸಗಳಲ್ಲಿ ಎಷ್ಟರ ಮಟ್ಟಿಗೆ ಮುಳುಗಿರುತ್ತಾರೆಂದರೆ ಅವರಿಗೆ ಸಾಮಾಜಿಕ ಜೀವನದ ಅಗತ್ಯವೇ ಇಲ್ಲವಾಗಿರುತ್ತದೆ. ಹಲವಾರು ಯುವ ನೌಕರರು ಬೇರೆ ಬೇರೆ ಊರುಗಳಿಂದ ಬಂದು ಬೆಂಗಳೂರಿನಂತಹ ಮಹಾನಗರಗಳಲ್ಲಿ ನೆಲೆಸಿರುತ್ತಾರೆ. ಸ್ನೇಹಿತರ ಜೊತೆ ಸೇರಿ ಒಂದು ಬಾಡಿಗೆ ಮನೆಯಲ್ಲಿ ವಾಸಕ್ಕಿರುವ ಅವರಂತಹ ಅನೇಕ ಮಂದಿಗೆ "ಕೆಲಸ ಬೇಗ ಮುಗಿಸಿ ಮನೆಗೆ ಹೋಗಿ ಮಾಡುವುದೇನು?" ಎಂಬ ಪ್ರಶ್ನೆ, ಅತಿಯಾದ ದುಡಿಮೆಯಿಂದುಂಟಾಗುವ ಅಡ್ಡ ಪರಿಣಾಮಗಳಿಗಿಂತಲೂ ಗಂಭೀರವಾಗಿ ತಲೆದೋರುತ್ತದೆ! ಈ ಬಗೆಯ ನೌಕರರ ಕಾರ್ಯವೈಖರಿ ಇತರೆ ನೌಕರರ ಮೇಲಿನ ನಿರೀಕ್ಷೆಯ ಮಟ್ಟವನ್ನು ಏರಿಸಿ ಅವರ ನಡುವಲ್ಲೇ ಸ್ಪರ್ಧೆಯೊಂದನ್ನು ಹುಟ್ಟು ಹಾಕಿರುತ್ತದೆ. ಪರೋಕ್ಷವಾಗಿ, ಇತರೆ ನೌಕರರು ತಮ್ಮನ್ನು ತಾವು ಸ್ಪರ್ಧೆಯಲ್ಲಿ ಸಕ್ರಿಯವಾಗಿಟ್ಟುಕೊಳ್ಳಲು ಕಚೇರಿಯಲ್ಲಿ ಹೆಚ್ಚುವರಿ ಸಮಯವನ್ನು ಕಳೆಯಲೇಬೇಕಾದ ಸಂದಿಗ್ಧ ಎದುರಿಸಬೇಕಾಗುತ್ತದೆ. ಇದು ಅವಿವಾಹಿತರ ಸಮಸ್ಯೆಯಾದರೆ, ವಿವಾಹಿತರ ಸಮಸ್ಯೆ ಇನ್ನೊಂದು ಬಗೆಯದು. ಮಹಾನಗರಗಳಲ್ಲಿ ಮನೆ/ನಿವೇಶನ ಕೊಳ್ಳುವ ಕನಸು ಕಟ್ಟಿಕೊಳ್ಳುವ ಟೆಕ್ಕಿ ಜೋಡಿಗಳು ಮದುವೆಯಾದ ಹೊಸತರಿಂದಲೇ ಹಣ ಸಂಪಾದಿಸುವ ಉದ್ದೇಶದಿಂದ ಒಬ್ಬರಿಂದೊಬ್ಬರು ದೂರವಿರುವುದನ್ನೂ ಲೆಕ್ಕಿಸದೇ ವೃತ್ತಿಜೀವನವನ್ನು ಅತಿಯಾಗಿ ಹಚ್ಚಿಕೊಂಡಿರುತ್ತಾರೆ. ವೃತ್ತಿಯಲ್ಲಿ ಮೇಲೇರುವ ಅವಕಾಶಗಳನ್ನು ಕಳೆದುಕೊಳ್ಳಲಾರದೆ ವೈವಾಹಿಕ ಜೀವನದ ಹಲವಾರು ಜವಾಬ್ದಾರಿಗಳನ್ನು ಸುಲಭವಾಗಿ ದೂರ ಸರಿಸಿಡುತ್ತಾರೆ. ವಿಷಾದಕರ ಸಂಗತಿಯೆಂದರೆ ಮನೆಯಲ್ಲಿ ಜೊತೆಯಿರಲು ಸಿಗುವ ಅಲ್ಪ-ಸ್ವಲ್ಪ ಸಮಯದಲ್ಲೂ ತಮ್ಮ ವೃತ್ತಿಯ ತಾಂತ್ರಿಕ ಸಮಸ್ಯೆಗಳು, ಮಾನವ ಸಂಪನ್ಮೂಲ ನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಂಗಾತಿಯೊಡನೆ ಚರ್ಚಿಸುತ್ತಾ ವೈಯಕ್ತಿಕ ಜೀವನವನ್ನು ಸಾರಾಸಗಟಾಗಿ ಅವಗಣಿಸುವ ಅನೇಕರಿದ್ದಾರೆ.

ಈ ಸಮಸ್ಯೆಗಳ ಮತ್ತೊಂದು ಮುಖವೆಂಬಂತೆ ಐಟಿ ಕ್ಷೇತ್ರದಲ್ಲಿ ಕಾರ್ಮಿಕರ ಒಕ್ಕೂಟಗಳಿಲ್ಲ. ಕಾರ್ಮಿಕರ ಒಕ್ಕೂಟಗಳಿಂದ ಬೇರೆ ರೀತಿಯ ಸಂಕಟಗಳು ಎದುರಾಗಬಹುದೆಂಬುದು ನಿಜವಾದರೂ, ಐಟಿ ನೌಕರರಿಗೆ ಒಕ್ಕೊರಲಿನ ದನಿ ನೀಡಲು ಸಶಕ್ತವಾಗಿರುವ ಯಾವ ಸಂಘ-ಸಂಸ್ಥೆಯೂ ಇಲ್ಲ. ಈ ಬಗ್ಗೆ ಹಲವಾರು ನೌಕರರಿಗೆ ಆಸಕ್ತಿಯಿದ್ದರೂ ಐಟಿ ಕಂಪನಿಗಳು ಇದನ್ನು ಸುತರಾಂ ಬೆಂಬಲಿಸದಿರುವ ಕಾರಣ ನೌಕರಿ ಕಳೆದುಕೊಳ್ಳುವ ಭೀತಿಯಲ್ಲಿ ಯಾರೂ ಇದನ್ನು ಕಾರ್ಯರೂಪಕ್ಕೆ ತರುವ ಸಾಹಸಗೈದಿಲ್ಲ. ಜಾಗತಿಕ ಮಟ್ಟದಲ್ಲಿ ಐಟಿ ಕಂಪನಿಗಳ ನಡುವೆ ಪಾಶ್ಚಿಮಾತ್ಯ ಕಂಪನಿಗಳಿಂದ ಹೊರಗುತ್ತಿಗೆ ಪ್ರಕಲ್ಪಗಳನ್ನು ಪಡೆಯುವಲ್ಲಿ ಅಪಾರ ಸ್ಪರ್ಧೆಯಿದೆ. ಈ ನಿಟ್ಟಿನಲ್ಲಿ, ಮಾರುಕಟ್ಟೆಯಲ್ಲಿ ಉಳಿಯಲು ಈ ಕಂಪನಿಗಳು ಹೂಡುವ ತಂತ್ರಗಳು ಬಹುತೇಕ ಬಾರಿ ನೌಕರರ ಪರವಾಗಿರುವುದಿಲ್ಲ. ಹೊರಗುತ್ತಿಗೆ ಪಡೆವ ಈ ಕಂಪನಿಗಳಿಗೆ ಆದಾಯದ ಲೆಕ್ಕಾಚಾರ, ಪ್ರತಿಯೊಬ್ಬ ನೌಕರನ ದುಡಿಮೆಯ ಅವಧಿಯ ಪ್ರತಿ ಘಂಟೆಯನ್ನು ಆಧರಿಸಿರುತ್ತದೆ. ಗುತ್ತಿಗೆ ನೀಡುವ ಮತ್ತು ಗುತ್ತಿಗೆ ಪಡೆವ ಕಂಪನಿಗಳ ನಡುವೆ ನಡೆಯುವ ಒಪ್ಪಂದದಲ್ಲಿ ಆ ಪ್ರಕಲ್ಪದಲ್ಲಿ ಕೆಲಸ ಮಾಡುವ ಪ್ರತಿ ನೌಕರನ ಪ್ರತಿ ಘಂಟೆಗೆ ದರವನ್ನು ನಿಗದಿ ಮಾಡಲಾಗುತ್ತದೆ. ಅಷ್ಟಲ್ಲದೆ, ಪ್ರಕಲ್ಪದಲ್ಲಿ ಕೆಲಸ ಮಾಡಬೇಕಿರುವ ನೌಕರರ ಸಂಖ್ಯೆಯನ್ನೂ ಸೀಮಿತಗೊಳಿಸಿರಲಾಗುತ್ತದೆ. ಗುತ್ತಿಗೆಯನ್ನು ಸ್ಪರ್ಧೆಯಲ್ಲಿ ಗೆಲ್ಲಲು ಅಗ್ರಗಣ್ಯ ಕಂಪನಿಗಳು ಹಲವಾರು ಚಾಣಾಕ್ಷ ತಂತ್ರಗಳನ್ನನುಸರಿಸುತ್ತವೆ. ಉದಾಹರಣೆಗೆ ೧೦ ನೌಕರರನ್ನಿಟ್ಟುಕೊಂಡು ೨ ತಿಂಗಳಲ್ಲಿ ಕೆಲಸ ಮುಗಿಸಿಕೊಡುವ ಮಂಡನೆಯನ್ನು ಒಂದು ಕಂಪನಿ ಮುಂದಿಟ್ಟರೆ, ಅದೇ ಪ್ರಕಲ್ಪಕ್ಕೆ ೮ ನೌಕರರನ್ನು ಬಳಸಿಕೊಂಡು ಒಂದು ವರೆ ತಿಂಗಳಲ್ಲೆ ಕೆಲಸ ಮುಗಿಸುವ ಮಂಡನೆಯೊಂದಿಗೆ (ತನ್ನದೇ ನೌಕರರ ಹಿತವನ್ನು ಗಾಳಿಗೆ ತೂರಿ) ಇನ್ನೊಂದು ಕಂಪನಿ ಸ್ಪರ್ಧಿಸುತ್ತದೆ. ಈ ಮಟ್ಟದ ವ್ಯವಹಾರಗಳಲ್ಲಿ ಪಾಲ್ಗೊಳ್ಳುವವರು ಕಂಪನಿಯ ಉನ್ನತ ದರ್ಜೆಯ ನೌಕರರಾದರೂ, ಪ್ರಕಲ್ಪದ ಗುರಿ ಮುಟ್ಟುವ ನಾಗಾಲೋಟದಲ್ಲಿ ಪೆಟ್ಟು ತಿನ್ನುವವರು ಮಾತ್ರ ತಾಂತ್ರಿಕ ವರ್ಗದ ನೌಕರರು. ತ್ರೈಮಾಸಿಕ ಲಾಭಗಳನ್ನು ಏರಿಸಿಕೊಂಡು ಉದ್ಯಮದ ಸ್ಪರ್ಧೆಯೊಳಗೆ ಮುಂಚೂಣಿಯಲ್ಲಿ ಉಳಿಯಬೇಕೆಂಬ ಹವಣಿಕೆಗೆ ಬಿದ್ದಿರುವ ಕಂಪನಿಗಳು ಕಾರ್ಮಿಕರ ಪರವಾಗಿ ಈ ಸಂಬಂಧ ರಾಜಿಯಾಗಲು ದುಸ್ಸಾಧ್ಯವಾಗುವಂತಹ ಪರಿಸ್ಥಿತಿ ಸೃಷ್ಟಿಸಿಕೊಂಡಿವೆ. ಕಾರ್ಮಿಕ ವರ್ಗದೆದುರು ಸದಾ ಲಾಭ-ನಷ್ಟಗಳ ಲೆಕ್ಕಾಚಾರಗಳ ಮೇಲೆಯೇ ತನ್ನೆಲ್ಲ ಗಮನವನ್ನು ಕೇಂದ್ರೀಕರಿಸಿರುವ ಬಂಡವಾಳಶಾಹಿ ವರ್ಗದ್ದೇ ಮೇಲುಗೈಯ್ಯಾಗುತ್ತದೆ. ಈ ಸಮಸ್ಯೆಯ ಅರಿವಿದ್ದರೂ ಅದಕ್ಕೆ ಪ್ರತಿರೋಧ ತೋರುವ ಇಚ್ಛಾಶಕ್ತಿ ಕಳೆದುಕೊಂಡು ಜಾಣ ಪೆದ್ದುತನದ ಮನೋವೃತ್ತಿಯನ್ನು ಕಾರ್ಮಿಕ ವರ್ಗ ಮೈಗೂಡಿಸಿಕೊಂಡಿದೆ.

ಐಟಿ ಕ್ಷೇತ್ರದಲ್ಲಿ, ದಿನದ ದುಡಿಮೆಯ ಅವಧಿಯ ಗರಿಷ್ಠ ಮಿತಿಯ ಸುತ್ತ ಹೆಣೆದುಕೊಂಡಿರುವ ಸಮಸ್ಯೆಯೇ ಈ ಮಟ್ಟದ ಸಂಕೀರ್ಣತೆಗೆ ಒಳಪಟ್ಟಿದೆ. ತಿಂಗಳ ಸಂಬಳ, ವಿದೇಶ ಪ್ರಯಾಣ, ವರ್ಷಕ್ಕೊಮ್ಮೆ ತುಟ್ಟಿ ಭತ್ಯೆ, ಬಡ್ತಿ - ಈ ರೀತಿಯ ವೈಯಕ್ತಿಕ ಲಾಭಗಳ ನಡುವೆ ಐಟಿ ಕಾರ್ಮಿಕ ತನ್ನದೇ ಮೂಲಭೂತ ಹಕ್ಕುಗಳಿಗೆ ಆದ್ಯತೆ ನೀಡುತ್ತಿಲ್ಲ. ಸ್ಪರ್ಧೆ ಹಾಗೂ ತಾನಾಗೇ ರೂಢಿಯಾಗುವ ಕಾರ್ಯವ್ಯಸನ - ಇವುಗಳ ವಿಷವರ್ತುಲದಲ್ಲಿ ಕಾರ್ಮಿಕ ಹಕ್ಕುಗಳಿಗೆ ಐಟಿ ಕಾರ್ಮಿಕರೇ ಬೆನ್ನು ಮಾಡಿ ನಿಂತಿದ್ದಾರೆ. ಸಮಸ್ಯೆಯ ಹಲವು ಒಳಸುಳಿಗಳನ್ನು ತಿಳಿದಿದ್ದರೂ ಸಹ ಕಾರ್ಮಿಕ ವರ್ಗ ಅದನ್ನು ಸಮಸ್ಯೆಯೇ ಅಲ್ಲವೆಂಬಂತೆ ಪರಿಭಾವಿಸಿದಂತಿದೆ. ಐಟಿ ಕಂಪನಿಗಳ ಕಾರ್ಮಿಕ ಪರವಲ್ಲದ ಷರತ್ತುಗಳನ್ನು ಪ್ರಶ್ನಿಸಿ ಸಾಂಘಿಕ ಹಾಗೂ ಶಾಂತಿಯುತ ಹೋರಾಟ ನಡೆಸುವ ಸಾಧ್ಯತೆಯಂತೂ ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವ ಇಂದಿನ ಸಮಾಜದಲ್ಲಿ ವಾಸ್ತವಕ್ಕೆ ದೂರವಾಗಿದೆ. ಕಾರ್ಮಿಕ ಎಂದು ಕರೆಯಿಸಿಕೊಳ್ಳಲು ಆಸಕ್ತಿಯಿರದ ಐಟಿ ನೌಕರರು, ಸಂಬಳ, ಸವಲತ್ತು ಹಾಗೂ ಆರ್ಥಿಕ ಅಭ್ಯುದಯಗಳ ಭ್ರಮೆಗಳಿಂದ ಹೊರಬಂದು ಪ್ರಜ್ಞಾಪೂರ್ವಕವಾಗಿ ಹಾಗೂ ಸಕ್ರಿಯವಾಗಿ ತಮ್ಮ ಕ್ಷೇತ್ರದಲ್ಲಿರುವ ಕಾರ್ಮಿಕ ಸಮಸ್ಯೆಗಳನ್ನು ಅವಲೋಕಿಸುವ ಯತ್ನ ಈ ಕ್ಷಣಕ್ಕೆ ಅತ್ಯಂತ ಅವಶ್ಯಕವೆನಿಸುತ್ತದೆ.

ಏಪ್ರಿಲ್ ೨೯ರ ವಿಜಯವಾಣಿ ಪತ್ರಿಕೆಯ ರವಿವಾರದ ಪುರವಣಿ "ವಿಜಯ ವಿಹಾರ"ದಲ್ಲಿ ಪ್ರಕಟಿತ

Comments

Popular posts from this blog

ಮಾತು-ಮೌನ-ಮನಸ್ಸು

ಗುಂಗು ಹಿಡಿಸುವ ಮಧುರಾನುಭವ

ನಿರೀಕ್ಷೆ