ಅಪಭ್ರಂಶ

ಮಧ್ಯಾಹ್ನ ಆವರಿಸಲು ಇನ್ನೇನು ಒಂದೇ ತಾಸು ಬಾಕಿಯಿದ್ದರೂ ಮಾಗಿಯ ಚಳಿ ಮಾತ್ರ ಗಾಳಿಯಲ್ಲಿ ಹಾಗೆಯೇ ಅಡಗಿತ್ತು. ಫ಼ುಟ್ಪಾತಿನ ಮೇಲೆ ನಡೆಯುವಾಗ ಬಿಸಿಲಿನಿಂದ ನೆರಳೊಳಗೆ ನುಸುಳಿದಂತೆಲ್ಲ ಅರ್ಧ ಅಂಗಿ ತೊಟ್ಟ ಶ್ಯಾಮನ ಕೈ ಮೇಲಿನ ಒಡೆದ ಚರ್ಮ ಹಿಗ್ಗಿದಂತಾಗಿ ಸಣ್ಣಗೆ ಚಿಟಿ ಚಿಟಿ ಉರಿದು ಅಹಿತವುಂಟು ಮಾಡುತ್ತಿತ್ತು. ಬಸ್ ಸ್ಟಾಪ್ ಇನ್ನು ೧೦ ನಿಮಿಷಗಳ ಕಾಲ್ನಡಿಗೆಯಷ್ಟು ದೂರ. ಯಾವಾಗಲೂ ಆಫೀಸು ಮುಗಿಸಿಕೊಂಡು ಶುಕ್ರವಾರ ರಾತ್ರಿಯೇ ಬಸ್ಸು ಹತ್ತಿ ಮಧ್ಯರಾತ್ರಿಯಲ್ಲಿ ದುರ್ಗ ಸೇರಿಬಿಡುತ್ತಿದ್ದ ಶ್ಯಾಮ ಈ ಬಾರಿ ಮಾತ್ರ ಊರಿಗೆ ಹೋಗುವುದೋ ಬೇಡವೋ ಎಂಬ ದ್ವಂದ್ವದಲ್ಲೇ ಹಿಂದಿನ ಮಧ್ಯರಾತ್ರಿಯವರೆಗೂ ಒದ್ದಾಡಿ ಹಾಗೆಯೇ ನಿದ್ದೆ ಹೋಗಿದ್ದ. ಬೆಳಿಗ್ಗೆ ತಡವಾಗಿ ಎದ್ದು ಹಾಸಿಗೆಯ ಮೇಲೆ ಕೂತವನೇ ಒಂದು ದೀರ್ಘವಾದ ಉಸಿರು ತೆಗೆದುಕೊಳ್ಳುತ್ತಾ ಹೊರಟೇಬಿಡುವುದೆಂದುಕೊಂಡವನು ಸ್ನಾನ ಮುಗಿಸಿ, ತಿಂಡಿಯ ಬಗ್ಗೆ ತಲೆ ಕೆಡಿಸಿಕೊಳ್ಳದೆ ತನ್ನ ಹೆಗಲಚೀಲವನ್ನೇರಿಸಿಕೊಂಡು ಹೊರಬಿದ್ದಿದ್ದ. ಪ್ರತಿ ಬಾರಿಯೂ ದುರ್ಗಕ್ಕೆ ಹೊರಡುವಾಗ, ಶಹರದ ಧೂಳು, ಹೊಗೆ, ಒತ್ತಡಗಳ ಜಂಜಡಗಳಿಂದ ತುಸು ಕಾಲ ಬಿಡುಗಡೆ ಹೊಂದುವ ತಹತಹದಲ್ಲಿ ಹೊರಟು, ಮತ್ತೆ ಮನೆಯವರನ್ನೆಲ್ಲ ಕಂಡ ಹುರುಪಿನೊಂದಿಗೆ ನವೀಕರಣಗೊಂಡ ಯಂತ್ರದಂತಾಗಿ ಹಿಂತಿರುಗಿ ಬರುತ್ತಿದ್ದ ಶ್ಯಾಮ. ಈ ಬಾರಿ ಯಾಕೋ ಬೆಂಗಳೂರಿನ ಯಾಂತ್ರಿಕ ಬದುಕಿನೆದುರು ಅಲ್ಲಿಗೆ ಹೋಗಿ ಬರುವುದೇ ಸಪ್ಪೆಯೆನಿಸತೊಡಗಿತ್ತು ಅವನಿಗೆ. ಅಪ್ಪನಿಗೆ ವಾದಿ ಮಾವನ ಮೇಲಿನ ಅಸಹನೆ, ಅಸಮಾಧಾನಗಳು ತಾರಕಕ್ಕೇರಿದ್ದವು. ಹಿಂದಿನ ದಿನ ಸಂಜೆ ಅಪ್ಪ ಫೋನಿನಲ್ಲಿ "ವಯಸ್ಸು ೪೦ ದಾಟಿದೆ ಕಣೋ. ಅವನು ಇನ್ಯಾವಾಗ ದುಡಿದು ತಿಂತಾನೋ!" ಎಂದು ಪೇಚಾಡಿದ್ದರು.

ವಾದಿ ಕೆಲಸ ಮಾಡುತ್ತಿದ್ದ ಆಯಿಲ್ ಮಿಲ್ ಬಾಗಿಲು ಮುಚ್ಚಿ, ಹೋದ ಸೋಮವಾರಕ್ಕೆ ಸರಿಯಾಗಿ ೯ ವರ್ಷಗಳು. ಅಲ್ಲಿ ವಾದಿಯದು ಮಿಲ್ ನ ಲೆಕ್ಕ ಪತ್ರಗಳನ್ನು ನೋಡಿಕೊಳ್ಳುವ ಕೆಲಸ. ಮಿಲ್ ನ ಮೇಲಿದ್ದ ಸಾಲ ಮಿತಿ ಮೀರಿದ್ದರಿಂದ ಸಾಲ ಕೊಟ್ಟ ಬ್ಯಾಂಕ್ ಗಳು ಬೀಗ ಮುದ್ರೆ ಜಡಿಸಿದ್ದವು. ಕೆಲಸ ಹೋದ ದಿನ ಜೋಭದ್ರ ಮುಖ ಹೊತ್ತು ಮನೆಗೆ ಹಿಂದಿರುಗಿದ ವಾದಿ, ಒಂದು ವಾರ ಯಾರೊಡನೆಯೂ ಸರಿಯಾಗಿ ಮಾತನಾಡಿರಲಿಲ್ಲ. ಒಬ್ಬೊಬ್ಬನೆ ಮನೆಯ ಮಾಳಿಗೆಯ ಮೇಲೆ ಹೋಗಿ ಕಣ್ಮುಚ್ಚಿ ಕೂತುಬಿಡುತ್ತಿದ್ದ. ಅಂದಿನಿಂದ ಇಂದಿನವರೆಗೂ ಅವನಿಗೆ ಸರಿಯಾದ ಉದ್ಯೋಗವಿಲ್ಲ. ಎಲ್ಲರೂ ಹೇಳುತ್ತಾರೆ, "ವಾದಿ ಮೊದಲಿಂದಲೂ ಹಾಗೆಯೆ, ಲವಲವಿಕೆಯಿಲ್ಲ, ಒಂದಿಷ್ಟೂ ಚುರುಕಾಗಿಲ್ಲ. ದುರ್ಗ ಬಿಟ್ಟು ಹೊರಹೋಗಿ ಕೆಲಸ ಹುಡುಕಿಕೊಂಡು ಬದುಕುವ ಛಾತಿ ಇಲ್ಲ" ಎಂದೆಲ್ಲ. ಅವನನ್ನು ನೋಡಿದವರಿಗೆಲ್ಲ ಅನಿಸುವುದು ಹಾಗೆಯೇ. ಮಾತು ಬಹಳ ಕಡಿಮೆ. ಮನೆಗೆ ಯಾರಾದರೂ ಹೊಸಬರು ಬಂದರೆ, ಅವರಿಗೊಂದು ಸಣ್ಣ ನಗೆ ಬೀರಿ, ಹಾಗೆಯೆ ಅವರನ್ನು ನೋಡುತ್ತಿದ್ದರೆ "ಅವರೆಲ್ಲಿ ತನ್ನ ಹಿನ್ನೆಲೆಯನ್ನೆಲ್ಲ ಕೇಳಿಬಿಡುತ್ತಾರೋ" ಎನ್ನುವ ರೀತಿಯಲ್ಲಿ ಅವರ ಮುಖವನ್ನು ಮತ್ತೆ ನೋಡದೆಯೇ ಎದ್ದು ಅಂಗಿಯೇರಿಸಿಕೊಂಡು ಸೀದಾ ಹೊರನಡೆದು ಬೀದಿಯ ಕೊನೆಯ ಅಂಗಡಿಯ ಸಮೀರನೊಂದಿಗೆ ಹರಟುತ್ತಾ ನಿಂತುಬಿಡುತ್ತಿದ್ದ. ಆ ಅತಿಥಿಗಳು ಹೋಗುವವರೆಗೂ ಮನೆಯ ಕಡೆ ಸುಳಿಯುತ್ತಿರಲಿಲ್ಲ.

ಶ್ಯಾಮ ಮೆಜೆಸ್ಟಿಕ್ ತಲುಪಿ ದುರ್ಗದ ಬಸ್ಸು ಹತ್ತಿದ. ಮಧ್ಯದಲ್ಲೆಲ್ಲಾದರೂ ಬಸ್ ನಿಲ್ಲಿಸಿದಾಗ ಏನನ್ನಾದರೂ ತಿಂದರಾಯಿತೆಂದು ಬಸ್ ಹತ್ತುವವರೆಗೂ ಏನನ್ನೂ ತಿನ್ನಲಿಲ್ಲ. ಬಸ್ ಹೊರಟು ರಾಜಾಜಿನಗರದ ಮೂಲಕ ಹಾದು ಹೋಗುತ್ತಿರುವಾಗ ಬಸ್ ನೊಳಗಿನಿಂದ ಒಬ್ಬ ವ್ಯಕ್ತಿ ಮೇಲಕ್ಕೆದ್ದು ಎಲ್ಲರ ಗಮನ ಸೆಳೆಯುತ್ತ, ತನ್ನ ಬಳಿ ಇರುವ ಕೆಲ ವಸ್ತುಗಳನ್ನು ಒಂದೊಂದಾಗಿಯೇ ಹರಾಜು ಹಾಕಲಾರಂಭಿಸಿದ. ಯಾವುದೋ ಅಗ್ಗದ ಶಾಲು, ಪಂಚೆ, ಸೀರೆ ಹೀಗೆ ವಿಧ ವಿಧವಾದ ವಸ್ತುಗಳನ್ನು ಹರಾಜಿಗೆ ಕೂಗಲಾರಂಭಿಸಿದ. ಡ್ರೈವರ್ ನ ಆಸನದಿಂದ ಹಿಂದಿನ ಆಸನದವರೆಗೂ ಕೂತಿದ್ದ ಎಲ್ಲ ಪ್ರಯಾಣಿಕರ ಮುಖದ ಮುಂದೆಯೇ ವಸ್ತುಗಳನ್ನು ಹಿಡಿದು ತೋರಿಸಿ, ಪರೀಕ್ಷಿಸಿ ನೋಡಿಯೇ ಬೆಲೆ ಕೂಗಿರೆಂದು ಪದೇ ಪದೇ ಹೇಳುತ್ತಲೇ ಆ ವಸ್ತುಗಳ ಮೌಲ್ಯವನ್ನು ಮೀರುವ ಬೆಲೆಗೆ ಅವೆಲ್ಲವನ್ನೂ ಬಿಕರಿಗೊಳಿಸಿದ. ವಸ್ತುಗಳನ್ನು ಮುಖದ ಮುಂದೆ ಪರೀಕ್ಷೆಗೆಂದು ಅವನು ಹಿಡಿಯುವ ರೀತಿಯಲ್ಲೇ ಆ ವಸ್ತುವಿನ ಗಿಲೀಟು ಪ್ರಯಾಣಿಕರ ತಬ್ಬಿಬ್ಬಿನ ಮುಂದೆ ಕರಗಿ ಹೋಗಿ ಯಾವುದೋ ಒಂದು ಬೆಲೆ ಅವರ ಬಾಯಿಂದ ಹೊರಬಂದುಬಿಡುತ್ತಿತ್ತು. "ಬೆಲೆ ಕೂಗುವುದಕ್ಕೆ ದುಡ್ಡಿಲ್ಲ ನೋಡಿ, ಬೆಲೆ ಕೂಗುವುದಕ್ಕೆ ದುಡ್ಡಿಲ್ಲ ನೋಡಿ" ಎಂದು ಹೇಳುವುದರಲ್ಲೇ ಅವನು ಅವುಗಳನ್ನು ಅರ್ಧ ಮಾರಿಬಿಟ್ಟಂತಾಗುತ್ತಿತ್ತು. ಕೂಗಿದವರಿಗೆಲ್ಲ ಒಂದೊಂದು ಪುಟಾಣಿ ದಿನದರ್ಶಿಕೆಯನ್ನು ಉಡುಗೊರೆಯಾಗಿ ನೀಡಿ, ಕೂಗದವರೂ ಸಹ ಕೂಗುವಂತೆ ಮಾಡಿಬಿಡುತ್ತಿದ್ದ. ಶ್ಯಾಮ ಮಾತ್ರ ಬೆರಗಿನಿಂದ ನಡೆಯುತ್ತಿದ್ದುದನ್ನು ನೋಡುತ್ತಾ ಕುಳಿತಿದ್ದ. ಹರಾಜು, ಮಾರಾಟಗಳೆಲ್ಲ ಮುಗಿದ ಮೇಲೆ, "ವಾದಿ ಮಾವನಿಗಿರುವುದು ಇದೇ ಚುರುಕುತನದ ಕೊರತೆಯೆ?" ಎಂದೆನಿಸಿತು. "ಇಲ್ಲ, ಮಾವ ಮಾತನಾಡುವುದೇ ಕಡಿಮೆ, ಅದರಲ್ಲಿ ಅವನು ಹೀಗೆಲ್ಲ ಪಾದರಸದಂತೆ ಓಡಾಡಿಕೊಂಡಿರುವುದು, ಇಲ್ಲ, ಸಾಧ್ಯವೇ ಇಲ್ಲ" ಎಂದೆನಿಸಿತು ಅವನಿಗೆ. ಹರಾಜು ಮುಗಿಸಿ ಗೊರಗುಂಟೆಪಾಳ್ಯದ ಸಿಗ್ನಲ್ ನ ಬಳಿ ಇಳಿದು ಅಸಂಖ್ಯ ಜನರ ಸಂದಣಿಯೊಳಗೆ ಇನ್ನೇನು ಮಾಯವಾಗುವುದರಲ್ಲಿದ್ದ ಆತನನ್ನೇ ಕಿಟಕಿಯಿಂದ ನಿರುಕಿಸುತ್ತಿದ್ದ ಶ್ಯಾಮನಿಗೆ "ಭಲಾ!, ಇವನದ್ದು ನಿಜಕ್ಕೂ ಭರ್ಜರಿ ಛಲ. ಇಷ್ಟು ವಸ್ತುಗಳನ್ನು ಹೀಗೆ ಹರಾಜು ಹಾಕಿ ಹೋದವನು, ಇವುಗಳನ್ನು ಕೊಳ್ಳಲು ಎಷ್ಟು ಬಂಡವಾಳ ಹಾಕಿರಬಹುದು? ಅಥವಾ ಅದೆಲ್ಲಾ ಕದ್ದ ಮಾಲಿರಬಹುದೇ? ಅಥವಾ ತನ್ನದೇ ಮನೆಯಲ್ಲಿದ್ದ ಹಳೆಯ ಸಾಮಾನುಗಳನ್ನು ಹೀಗೆ ತಂದು ಮಾರಿ ಹೋದನೇ?" ಎಂದೆಲ್ಲ ಯೋಚಿಸತೊಡಗಿದ. ಆ ವ್ಯಕ್ತಿಯ ಬೆನ್ನು ಆ ಸಂದಣಿಯಲ್ಲಿ ಕಾಣುತ್ತಿದ್ದರೂ, ಆ ಬದಿಗೆ ತಿರುಗಿದ್ದ ಅವನ ಮುಖ ಮಾತ್ರ ಶ್ಯಾಮನ ನೆನಪಿಗೆ ಉಳಿಯಲಿಲ್ಲ. ಆ ಮುಂಡಕ್ಕೆ ವಾದಿ ಮಾವನ ಮುಖದ ಕಲ್ಪನೆ ಪದೇ ಪದೇ ಶ್ಯಾಮನನ್ನು ಕಾಡುತ್ತಿತ್ತಾದ್ದರೂ ಅದನ್ನು ಒಪ್ಪಲಾಗದೇ ದೃಷ್ಟಿ ಬೇರೆಡೆ ನೆಟ್ಟ. ಬಸ್ಸು ಮುಂದೆ ಸಾಗುತ್ತಿದ್ದಂತೆ, ಕಿಟಕಿಯ ಗಾಜಿಗೆ ಒರಗಿದ.

"ವಾದಿಗೆ ಮೊದಲಿನಿಂದಲೂ ಮಂದ ಬುದ್ಧಿ. ಅದರಿಂದಲೆ ಅವನು ಇಂದು ಹೀಗಾಗಿರುವುದು" ಎಂದೆಲ್ಲ ಸಂಬಂಧಿಕರು ಹೇಳುತ್ತಿದ್ದಾಗ ಮೊದಮೊದಲು ಶ್ಯಾಮನಿಗೆ ಹೌದೆನಿಸಿದ್ದರೂ, ಇತ್ತೀಚಿನ ಕೆಲ ವರ್ಷಗಳಿಂದ ಆ ಬಗ್ಗೆ ಶ್ಯಾಮನ ಅಭಿಪ್ರಾಯ ಬದಲಾಗಿತ್ತು. ಶ್ಯಾಮನ ಅಜ್ಜಿಗೆ ಇಬ್ಬರೇ ಮಕ್ಕಳು. ಸುಮಿತ್ರತ್ತೆಯೇ ದೊಡ್ಡವರು. ಸುಮಿತ್ರತ್ತೆಯ ಗಂಡ ಕುಡಿತಕ್ಕೆ ಬಿದ್ದು ಅವರನ್ನು ಬಿಟ್ಟು ದೇಶಾಂತರ ಹೋದ ತರುವಾಯ, ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದ ಶ್ಯಾಮನ ಅಜ್ಜಿ, ಮಗಳು-ಮೊಮ್ಮಗನನ್ನು ತಮ್ಮ ಬಳಿ ಇರಿಸಿಕೊಂಡು ಸಾಕಿದ್ದರು. ಶ್ಯಾಮನ ಅಪ್ಪನಿಗೂ ಸುಮಿತ್ರತ್ತೆಗೂ ಎರಡೇ ವರ್ಷಗಳ ಅಂತರ. ತನ್ನ ಅಕ್ಕನ ಗಂಡ ವರ್ಷಾನುಗಟ್ಟಲೆ ಪತ್ತೆಯಿಲ್ಲದಿದ್ದರೂ ಪ್ರತಿ ಗೌರಿ ಹಬ್ಬಕ್ಕೆ ಸುಮಿತ್ರತ್ತೆಗೆ ಬಾಗಿನ ಕೊಡುವುದನ್ನು ತಪ್ಪಿಸುತ್ತಿರಲಿಲ್ಲ ಶ್ಯಾಮನ ತಂದೆ. ವಾದಿಯ ಪ್ರೌಢ ಶಾಲಾ ದಿನಗಳಿಂದಲೂ ಅವನನ್ನು ಬೆಳೆಸಿದ್ದು ಅಜ್ಜಿಯೇ. ಎಸ್ ಎಸ್ ಎಲ್ ಸಿ ಯಲ್ಲಿ ಅನುತ್ತೀರ್ಣನಾಗಿದ್ದಾಗಲಂತೂ ಅವನ ಸಹಸ್ರನಾಮ ಮಾಡಿಬಿಟ್ಟಿದ್ದರು ಅಜ್ಜಿ. ಶ್ಯಾಮನಿಗೆ ಒಂದೂವರೆ ವರ್ಷ ತುಂಬಿತ್ತು ಆಗ. ಅಪ್ಪನ ಬ್ಯಾಂಕ್ ನೌಕರಿ ದೂರದ ಯಲವಗಿಯಲ್ಲಿದ್ದಿದ್ದರಿಂದ, ಶ್ಯಾಮನ ಅಪ್ಪ, ಅಮ್ಮ ಅಲ್ಲೆ ವಾಸವಾಗಿದ್ದರು. ಶ್ಯಾಮನ ಅಮ್ಮನಿಗೆ ಮನೆಗೆ ಹೊಸದಾಗಿ ಬಂದಾಗಿನಿಂದಲೂ ವಾದಿಯ ಬಗ್ಗೆ ವಿಶೇಷ ಕಾಳಜಿ. ವಾದಿ ಅನುತ್ತೀರ್ಣನಾದಾಗಲಂತೂ ತನಗೊದಗಿ ಬಂದ ನಷ್ಟೆವೆಂಬಂತೆ ತನ್ನ ಅತ್ತೆಯ ಜೊತೆ ನಿಷ್ಠುರಳಾಗಿ ವಾದಿಯನ್ನು ಯಲವಗಿಗೆ ಕರೆದೊಯ್ದಳು. ಅಲ್ಲಿಯೇ ವಾದಿಗೆ ಮನೆ ಪಾಠ ಹೇಳಿ ಅವನನ್ನು ಎಸ್ ಎಸ್ ಎಲ್ ಸಿ ಮೊದಲನೆ ದರ್ಜೆಯಲ್ಲಿ ಪಾಸು ಮಾಡಿಸಿಯೂ ಬಿಟ್ಟಳು. ಅಜ್ಜಿಯಂತೂ ಯಾರಿಗೂ ಯಾವುದನ್ನೂ ಸ್ವತಂತ್ರವಾಗಿ ನಡೆಸಲು ಬಿಟ್ಟವರಲ್ಲ. ತಂದೆ ಇಲ್ಲದ ಹುಡುಗ, ಕಣ್ಣೆದುರಿಗೇ ಇರಬೇಕೆಂದು ವಾದಿಯನ್ನು ಓದಲು ಒಳ್ಳೆಯ ಕಾಲೇಜು ಇರುವ ಯಾವ ಊರಿಗೂ ಕಳುಹಿಸದೇ ದುರ್ಗದಲ್ಲಿರುವ ಕಾಲೇಜಿನಲ್ಲೇ ಓದಿಕೊಳ್ಳಲಿ ಎಂದಿದ್ದರು. ಯಾವುದೋ ಒಂದು ಡಿಗ್ರೀ ಇದ್ದರೆ ಸಾಕು, ಇಲ್ಲಿಯೇ ಓದಲಿ ಎನ್ನುವ ನಿರ್ಧಾರವನ್ನೂ ವಾದಿಗೆ ವಿದ್ಯೆ ಕೊಡಿಸುವ ಜವಾಬ್ದಾರಿಯ ಭಾಗವಾಗಿಸಿಕೊಂಡಿದ್ದರು ಅಜ್ಜಿ. ಅಜ್ಜಿಯ ನಿರಂತರ ದುಡಿಮೆ ಅವರನ್ನು ಎಷ್ಟು ಕಠಿಣವಾಗಿಸಿತ್ತೆಂದರೆ ವಾದಿ ಏನು ಓದುತ್ತಿದ್ದಾನೆ, ಏನು ಓದಬೇಕಿತ್ತು ಎನ್ನುವುದಕ್ಕಿಂತ ಅವನು ಥರ್ಡ್ ಕ್ಲಾಸಿನಲ್ಲಿ ಪಾಸಾಗುತ್ತಿದ್ದುದೇ ಅವರನ್ನು ಕುಪಿತಗೊಳಿಸುತ್ತಿತ್ತು. ವೈಫಲ್ಯ ಎದುರಾದಾಗಲೆಲ್ಲ ಒಂದಷ್ಟು ಹೊತ್ತು ಅವನನ್ನು ಬೈದು ಸುಮ್ಮನಾಗುತ್ತಿದ್ದರು. ಆಗಿನಿಂದಲೂ ಅವನು ಚುರುಕಿಲ್ಲ ಎನ್ನುವ ಮಾತು ಅವನ ಬೆನ್ನಿಗಂಟಿಕೊಂಡೆ ಬಂದಿತ್ತು. ವಾದಿಯೂ ಹೀಗೆ ಬಯ್ಯಿಸಿಕೊಳ್ಳುತ್ತಲೇ ಅದನ್ನೆಲ್ಲ ಮೈಕೊಡವಿಕೊಂಡಂತೆ ಹೊರಗೆ ಗೆಳೆಯರೊಡನೆ ತಿರುಗಿ, ಹರಟಿ ಬಂದು ಹಾಗೆಯೇ ಮರೆತುಬಿಡುತ್ತಿದ್ದ. ಮನೆಗೆ ಬಂದವರೆದುರು ಸಹ ಇದೇ ರೀತಿ ಅವನನ್ನು ಬಯ್ಯುತ್ತಿದ್ದ ಅಜ್ಜಿ ಅವನು ಕ್ರಮೇಣ ಕೀಳರಿಮೆ ಬೆಳೆಸಿಕೊಂಡಿದ್ದನ್ನು ಮನಗಾಣಲೇ ಇಲ್ಲ. ಸುಮಿತ್ರತ್ತೆಗಂತೂ ಯಾವುದೂ ತಿಳಿಯುತ್ತಿರಲಿಲ್ಲ. ತನ್ನ ತಾಯಿ ತನ್ನದೇ ಮಗನನ್ನು ಬೈದಾಗ, ಅದರ ಹಿನ್ನೆಲೆ, ಮಗನ ಏಳಿಗೆ - ಎಲ್ಲವೂ ಮಸುಕಾಗಿ ಮಮಕಾರದ ಮೂರ್ತಿಯಾಗಿ, ಮಗನೆಲ್ಲಿ ಮನಸ್ಸಿಗೆ ಹಚ್ಚಿಕೊಂಡು ಬಿಡುತ್ತಾನೋ ಎಂದು ಹತ್ತಿರ ಹೋಗಿ ಮೆಲುದನಿಯಲ್ಲೆ ಸಂತೈಸುತ್ತಿದ್ದಳು.

ನಿದ್ದೆಯ ಜೊಂಪು ಕಳೆದು ಶ್ಯಾಮ ಕಣ್ಬಿಟ್ಟಾಗ ಬಸ್ಸು ತುಮಕೂರು ಪ್ರವೇಶಿಸುತ್ತಿತ್ತು. ಕಿಟಕಿಯ ಗಾಜಿನ ಮೇಲೆ ತಲೆ ಕೂದಲಿಗೆ ಹಚ್ಚಿದ್ದ ಎಣ್ಣೆ ಮೆತ್ತಿ ಹೊರಗಿನ ಬಯಲೆಲ್ಲ ಮಬ್ಬಾಗಿ ಕಾಣುತ್ತಿತ್ತು. ಕನಸಿನಲ್ಲಿ ವಾದಿ ಮಾವನ ಜೊತೆ ದುರ್ಗದ ಬೆಟ್ಟ ಹತ್ತುತ್ತಿರುವಂತೆ ಏನೋ ನೆನಪು. ಬೇಸಿಗೆಯ ರಜೆಗೆ ಅಜ್ಜಿಯ ಮನೆಗೆ ಬರುತ್ತಿದ್ದ ಶ್ಯಾಮನಿಗೆ ವಾದಿ ಮಾವನನ್ನು ಕಂಡರೆ ಎಲ್ಲಿಲ್ಲದ ವ್ಯಾಮೋಹ. ವಾದಿ ಅವನ ಗೆಳೆಯರನ್ನು ಭೇಟಿಯಾಗಲು ಸೈಕಲ್ ಹತ್ತಿ ಹೊರಟಾಗಲೆಲ್ಲ, ಶ್ಯಾಮ ತನ್ನನ್ನೂ ಜೊತೆಗೆ ಕರೆದೊಯ್ಯಬೇಕೆಂದು ದುಂಬಾಲು ಬೀಳುತ್ತಿದ್ದ. ಎಷ್ಟೋ ಬಾರಿ ಶ್ಯಾಮ ಹಾಗೆ ದುಂಬಾಲು ಬೀಳುವನೆಂದು ತಿಳಿದಿದ್ದ ವಾದಿ, ಶ್ಯಾಮನ ಕಣ್ತಪ್ಪಿಸಿ ಹೋಗಿ, ಅದು ಆಮೇಲೆ ಶ್ಯಾಮನಿಗೆ ತಿಳಿದು ಅತ್ತು ಅಜ್ಜಿಯ ಮುಂದೆ ರಂಪ ಮಾಡಿಬಿಡುತ್ತಿದ್ದ. ಒಂದೊಮ್ಮೆ ವಾದಿ ಶ್ಯಾಮನನ್ನು ತನ್ನ ಸೈಕಲ್ ನ ಹಿಂದೆ ಕೂರಿಸಿಕೊಂಡು ಎಲ್ಲಿಗೋ ಕರೆದೊಯ್ಯುತ್ತಿರುವಾಗ ಶ್ಯಾಮನ ಕಾಲು ಸೈಕಲ್ ಚಕ್ರದೊಳಗೆ ಸಿಲುಕಿ ರಸ್ತೆಯಲ್ಲೆ ಅವನು ವಿಪರೀತ ಕಿರುಚಾಡಿದ್ದ. ಮನೆಗೆ ಬಂದ ಮೇಲೆ ಅಜ್ಜಿಯಿಂದ ಬೈಗುಳ ತಿಂದದ್ದು ವಾದಿಯೇ. ಯಲವಗಿಯಲ್ಲಿ ವಾದಿ ಶ್ಯಾಮನ ತಂದೆ ತಾಯಿಯ ಜೊತೆಯಿದ್ದಾಗ, ಅವನು ಶಾಲೆ ಮುಗಿಸಿಕೊಂಡು ಬಂದೊಡನೆ, ಇಡೀ ಮನೆಗೆ ಕೇಳುವಂತೆ ಶ್ಯಾಮ ಕೇಕೆ ಹಾಕುತ್ತ ಅಂಬೆಗಾಲಿನಲ್ಲಿ ಸರ ಸರನೆ ಬಂದು ವಾದಿಯ ಕಾಲುಗಳನ್ನು ಗಟ್ಟಿಯಾಗಿ ಹಿಡಿದುಬಿಡುತ್ತಿದ್ದ. ದುರ್ಗದ ಬೆಟ್ಟಕ್ಕೆ ಹೋದಾಗಲಂತೂ ವಾದಿ ಬತೇರಿ ಹತ್ತುವುದನ್ನು ಕಣ್ಣು ಮಿಟುಕಿಸದೆ ನೋಡುತ್ತ ನಿಲ್ಲುತ್ತಿದ್ದ ಶ್ಯಾಮ.

ಶ್ಯಾಮ ಬೆಳೆಯುತ್ತ ಓದಿನಲ್ಲಿ ಮುಂದೆ ಬರಲಾರಂಭಿಸಿದ. ಶಾಲೆಯಲ್ಲಿ ಪ್ರತಿ ತರಗತಿಯಲ್ಲೂ ಅವನದು ಪ್ರಥಮ ದರ್ಜೆ. ರಜೆ ಕಳೆಯಲೆಂದು ಶ್ಯಾಮ ದುರ್ಗಕ್ಕೆ ಬಂದಾಗ ಅಜ್ಜಿಯಂತೂ ಅವನನ್ನು ಉದಾಹರಿಸಿ ವಾದಿಯನ್ನು ಹೀನಾಯ ಮಾಡಿಬಿಡುತ್ತಿದ್ದರು. ಶ್ಯಾಮನಿಗೂ ವಾದಿಗೂ ವಯಸ್ಸಿನ ಅಂತರ ದೊಡ್ದದಿದ್ದರೂ ಶ್ಯಾಮನ ಸ್ತುತಿಯಿಂದ ವಾದಿಗೆ ಕಿರಿಕಿರಿಯಾಗುತ್ತಿತ್ತು. ಅಜ್ಜಿ ಹೊಗಳಿದಾಗಲೆಲ್ಲ ಶ್ಯಾಮನಿಗೆ ತನ್ನ ಕುರಿತು ತನಗೆ ಹೆಮ್ಮೆಯೆನಿಸಿದರೂ ತನ್ನ ಮಾವನಿಗೆ ಅದರಿಂದಾಗುವ ಹಿಂಸೆ ಕಾಣುತ್ತಿರಲಿಲ್ಲ. ಆದರೂ ಎಲ್ಲದಕ್ಕೂ ವಾದಿಯ ದುಂಬಾಲು ಬೀಳುವುದನ್ನು ಮಾತ್ರ ನಿಲ್ಲಿಸಲಿಲ್ಲ ಶ್ಯಾಮ. ಭಾನುವಾರ ಸಂಜೆ ವಾದಿ ಹೊರಗೆ ಹೊರಟನೆಂದರೆ ಯಾವುದೋ ಸಿನೆಮಾಗೆ ಹೋಗುತ್ತಿದ್ದನೆಂದು ತಿಳಿದುಬಿಡುತ್ತಿತ್ತು ಶ್ಯಾಮನಿಗೆ. ತನ್ನ ಗೆಳೆಯರೊಡನೆ ಒಂದಷ್ಟು ಕಾಲ ಬಿಡುವಾಗಿ ಮಾತು ಕತೆಗಳಾಡಿಕೊಂಡು ಬರೋಣವೆಂದುಕೊಳ್ಳುತ್ತಿದ್ದ ವಾದಿಗೆ ಶ್ಯಾಮ ತೊಡರುಗಾಲಿನಂತಿರುತ್ತಿದ್ದ. ಸಮಾನ ಮನಸ್ಕ ಗೆಳೆಯರ ಗುಂಪಿನಲ್ಲಿ ಶ್ಯಾಮ ಮಾತ್ರ ಅದಕ್ಕೆ ಹೊರತಾಗಿರುತ್ತಿದ್ದುದು ಮಾತ್ರವಲ್ಲದೆ ಅವನ ಬಗ್ಗೆ ವಾದಿ ಕಾಳಜಿ ಕೂಡ ವಹಿಸಬೇಕಾಗುತ್ತಿತ್ತು. ಕರೆದೊಯ್ಯದಿದ್ದರೆ ಅಜ್ಜಿಯನ್ನು ಎದುರಿಸಬೇಕಾಗುತ್ತದೆ. "ಆ ಮಗುವಿಗೆ ಮನೆಯಲ್ಲಿ ಬೇಸರವಾಗುವುದಿಲ್ಲವೆ, ಕರೆದೊಯ್ದರೆ ನಿನ್ನ ಗಂಟೇನು ಹೋಗುವುದು?" ಎಂದುಬಿಡುತ್ತಿದ್ದರು ಅಜ್ಜಿ. ಇಬ್ಬರೂ ತನ್ನದೇ ಮೊಮ್ಮಕ್ಕಳಾದರೂ ಶ್ಯಾಮ ಚಿಕ್ಕವನಾದ ಕಾರಣಕ್ಕೆ ಅಜ್ಜಿಯ ವ್ಯಾಮೋಹ ಅವನ ಮೇಲೆಯೆ ಹೆಚ್ಚಾಗಿರುತ್ತಿತ್ತು. ಇವೆಲ್ಲ ಒತ್ತಡಗಳಿಗೆ ಮಣಿಯಲೇಬೇಕಾಗಿ ಶ್ಯಾಮನನ್ನು ಕರೆದೊಯ್ಯುತ್ತಿದ್ದ ವಾದಿ, ಹೊರಗೆ ಅವನೊಡನೆ ಮಾತೇ ಆಡುತ್ತಿರಲಿಲ್ಲ. ಮನೆಗೆ ವಾಪಸ್ಸಾಗುವವರೆಗೂ ಶ್ಯಾಮನ ಕುಶಲೋಪರಿ ನಡೆಯುತ್ತಿದ್ದುದು ತನ್ನ ಮಾವನ ಸ್ನೇಹಿತರೊಡನೆಯೆ. ವಾದಿ ಏನೇ ಮಾಡಲು ಹೋದರೂ ಕಡೆಗೆ ತಾನೇ ತಪ್ಪಿತಸ್ಥನಾಗುತ್ತಿದ್ದ. ಅಜ್ಜಿ ಇತರರೊಂದಿಗೆ ವಾದಿಯನ್ನು ಹೋಲಿಸುತ್ತಿದ್ದುದ್ದರಿಂದಲೇ ಅವನು ಇನ್ನಷ್ಟು ಕುಗ್ಗಿ ಹೋದ. ತನ್ನ ಪದವಿ ಶಿಕ್ಷಣ ಮುಗಿದು ಉದ್ಯೋಗ ಹುಡುಕುವಷ್ಟರಲ್ಲಿ ಅವನಲ್ಲಿರಬೇಕಿದ್ದ ಆತ್ಮವಿಶ್ವಾಸ ಕಿಂಚಿತ್ತೂ ಇರಲಿಲ್ಲ. ಹಲವಾರು ಗೆಳೆಯರು, ಸಂಬಂಧಿಕರು ಬೆಂಗಳೂರಿಗೆ ಹೋಗಿ ಯಾವುದಾದರೂ ಕೆಲಸ ಹುಡುಕುವ ಸಲಹೆಗಳನ್ನಿತ್ತರೂ, ಅಜ್ಜಿ ಮಾತ್ರ ಅದಕ್ಕೆ ಸೊಪ್ಪು ಹಾಕಲಿಲ್ಲ. ತಂದೆಯ ನೆರಳು ಸಿಗದ ಹುಡುಗ, ನನ್ನ ಕಣ್ಮುಂದೆಯೇ ಇರಲಿ ಎಂದು ವಾದಿ ಮಾವನನ್ನು ಅಲ್ಲಿಯೇ ಉಳಿಸಿಕೊಳ್ಳುತ್ತಿದ್ದರು. ಮಳೆ, ನೀರಾವರಿಗಳಿಲ್ಲದೆ ಬರಗಾಲಕ್ಕೆ ಸಿಲುಕುತ್ತಿದ್ದ ಚಿತ್ರದುರ್ಗ ಜಿಲ್ಲೆ, ಯಾವ ದೊಡ್ಡ ಉದ್ದಿಮೆಯೂ ಇಲ್ಲದೆ, ಅಲ್ಲಿನ ಯುವಕರೆಲ್ಲ, ಉದ್ಯೋಗಕ್ಕಾಗಿ ಪರಸ್ಥಳಗಳನ್ನು ಆಶ್ರಯಿಸಲೇಬೇಕಿತ್ತು. ಆದರೂ ದುರ್ಗದಲ್ಲಿಯೇ ಯಾವುದಾದರೊಂದು ಶಾಲೆಯಲ್ಲಿ ಶಿಕ್ಷಕನಾಗೆಂದು ಬಿ.ಎಡ್ ಕಾಲೇಜಿಗೆ ಸೇರಿಸಿದರು ಅಜ್ಜಿ. ಅದರಲ್ಲಿ ಆಸಕ್ತಿಯಿಲ್ಲದೆ ವಾದಿ ನಪಾಸಾದ.

ರಸ್ತೆಯ ಬದಿಯ ಸಾಲು ಮರಗಳು ಒಂದೊಂದೆ ಹಿಂದೆ ಸರಿದಂತೆ, ಈ ನೆನೆಪುಗಳೆಲ್ಲ ಶ್ಯಾಮನ ಸ್ಮೃತಿಪಟಲದಿಂದ ಎದ್ದು ಬಂದಂತಾಗಿ ಹಿಂದೆ ಸರಿಯುತ್ತಿದ್ದವು. ತನ್ನಿಂದಾಗಿ ವಾದಿ ಮಾವ ಅಜ್ಜಿಯಿಂದ ತಿಂದ ಬೈಗುಳಗಳ ಬಗ್ಗೆ ಯೋಚಿಸತೊಡಗಿದ. ಆ ದಿನಗಳಲ್ಲಿ ತನಗೆ ಸಾಸಿವೆ ಕಾಳಿನಷ್ಟೂ ಸೂಕ್ಷ್ಮ ಪ್ರಜ್ಞೆಯಿರಲಿಲ್ಲವಲ್ಲ ಎಂದೆನಿಸಿತು. "ವಾದಿ ಮಾವನನ್ನು ಎಲ್ಲರೂ ಹಾಗೆ ನಡೆಸಿಕೊಳ್ಳದಿದ್ದರೆ, ಇಂದು ಅವನು ಹೀಗಿರುತ್ತಿದ್ದನೆ? ಕೆಲಸ ಹೋಗಿ ೯ ವರ್ಷಗಳಾಗಿವೆ. ದುರ್ಗ ಬಿಟ್ಟು ಹೊರಬಂದರೆ ಯಾವುದಾದರೊಂದು ಉದ್ಯೋಗ ಸಿಗದೇ ಇರುವುದಿಲ್ಲವೇ?" ಎಂದು ಯೋಚಿಸುತ್ತ ಕುಳಿತ ಶ್ಯಾಮನಿಗೆ ತನ್ನ ಆಫೀಸಿನ ಮುಂದೆ ಪ್ರತಿದಿನ ಬೆಳಗ್ಗೆ ಕರಪತ್ರಗಳನ್ನು ಹಿಡಿದು ನಿಂತಿರುವ ಮಂದಿ ನೆನಪಾದರು. "ಹೌದು, ಅವರೆಲ್ಲ ಅಲ್ಲಿ ದುಡಿಯುತ್ತಿದ್ದಾರಲ್ಲವೇ! ಅವರ ಕೆಲಸ, ನಮ್ಮ ಆಫೀಸಿನವರೆಲ್ಲ ಬೆಳಿಗ್ಗೆ ಮುಖ್ಯದ್ವಾರದಿಂದ ಒಳಹೋಗುವಾಗ ಅವರ ಕೈಗೆ ಬ್ಯಾಂಕ್‍ ಸಾಲದ ಮಾಹಿತಿಯುಳ್ಳ ಕರಪತ್ರಗಳನ್ನು ಕೊಡುವುದು, ಅಷ್ಟೆ. ಅವರ ಹೆಗಲುಗಳಲ್ಲಿ ಒಂದು ಚೀಲ, ಕೈಗಳಲ್ಲಿ ಒಂದು ಕಟ್ಟು ಕರಪತ್ರಗಳಿರುತ್ತವೆ. ಪ್ರತಿಯೊಬ್ಬ ಉದ್ಯೋಗಿ ಮುಖ್ಯದ್ವಾರದ ಹತ್ತಿರ ಬಂದ ಕೂಡಲೆ, ಈ ಮಂದಿ ಕರಪತ್ರ ಹಿಡಿದು ಕೈ ಚಾಚುತ್ತ ಮುಂದೆ ಬರುತ್ತಾರೆ. ಕೆಲ ಉದ್ಯೋಗಿಗಳು ಅದನ್ನು ಸ್ವೀಕರಿಸಿ ಮುಂದೆ ಹೋದರೆ, ಮತ್ತೆ ಕೆಲವರು ಆ ಕರಪತ್ರ ಹಂಚುವವರ ಮುಖವನ್ನೂ ನೋಡದೆ ಒಳನಡೆದುಬಿಡುತ್ತಾರೆ. ಇನ್ನೂ ಕೆಲವರು, ಬೇಡ, ಬೇಡ ಎಂದು ಕೈ ಸನ್ನೆ ಮಾಡುತ್ತಲೇ ಸಾಗುತ್ತಾರೆ." ಇವರೆಲ್ಲರ ದುಡಿಮೆ ಈ ಕರಪತ್ರಗಳನ್ನು ಹಂಚುವುದರಿಂದ ಮಾತ್ರವೋ, ಅಥವಾ ಇವರ ಆದಾಯಕ್ಕೆ ಇನ್ಯಾವುದಾದರೂ ಮೂಲವಿದೆಯೋ ಎಂದು ಹಲವಾರು ಬಾರಿ ಶ್ಯಾಮ ಅಚ್ಚರಿ ಪಟ್ಟಿದ್ದುಂಟಾದರೂ ಒಂದು ದಿನವೂ ಅವರನ್ನು ಖುದ್ದಾಗಿ ಕೇಳಿರಲಿಲ್ಲ. "ಅಭಿವೃದ್ಧಿಯ ಹುಚ್ಚು ನಾಗಾಲೋಟದಲ್ಲಿ ದಿನ ದಿನಕ್ಕೂ ಹೊಸ ಎತ್ತರಗಳಿಗೇರುತ್ತಿರುವ ಬೆಲೆಗಳ ಮಧ್ಯೆ ಈ ನಗರ ಇವರನ್ನೂ ಹೇಗೋ ಸಲಹುತ್ತಿದೆ. ನಮ್ಮ ಆಫೀಸಿನ ಬಳಿ ಅವರ ಕೆಲಸ ಎಷ್ಟು ಹೊತ್ತಿರಬಹುದು? ಅಲ್ಲಿನ ಕೆಲಸ ಮುಗಿದ ನಂತರ ಅವರ ಮುಂದಿನ ದಾರಿ ಯಾವುದು? ಅವರ ಬದುಕಿನ ಸಂಘರ್ಷಗಳ ಸ್ವರೂಪಗಳ ಕಲ್ಪನೆ ಶ್ಯಾಮನ ಮನಸ್ಸನ್ನಾವರಿಸಿತು. ಎಲ್ಲಿಂದಲೋ ಬರುವರು ಅವರೆಲ್ಲ, ಹೇಗೋ ತಮ್ಮ ತುತ್ತಿನ ಚೀಲಗಳನ್ನು ತುಂಬಿಸಿಕೊಳ್ಳುತ್ತಿದ್ದಾರೆ. ಮದುವೆಯಾಗಿ ಸಂಸಾರ ಹೂಡಿಕೊಂಡಿರುವವರಿದ್ದಾರೆ, ಮನೆಯಲ್ಲಿ ಖಾಯಿಲೆಯ ತಂದೆ-ತಾಯಿಯರಿರುವವರಿದ್ದಾರೆ, ಸಾಲಗಳ ಹೊರೆ ಹೊತ್ತವರಿದ್ದಾರೆ, ಶಹರವು ಎಂಥೆಂಥವರನ್ನೂ ತನ್ನ ಮಡಿಲು ತುಂಬಿಸಿಕೊಂಡಿದೆ. ಇಷ್ಟಿದ್ದರೂ ಇನ್ನೂ ಜನರು ಬರುತ್ತಲೇ ಇದ್ದಾರೆ. ರಸ್ತೆ ಬದಿಯಲ್ಲಿ ಅನ್ನ ಬೇಯಿಸಿ, ಅದೆಷ್ಟೋ ಮಂದಿಗೆ ಬಿಸಿಯೂಟ ಬಡಿಸುವವರು ಒಂದು ಕಡೆಯಾದರೆ, ಬಿಸಿಲು ಚಳಿಯೆನ್ನದೆ, ರಸ್ತೆಯ ಕಸ ಗುಡಿಸುತ್ತಾ ಬೆವರು ಸುರಿಸುವವರು ಮತ್ತೊಂದು ಕಡೆ. ವಾದಿ ಮಾವ ಮನಸ್ಸು ಮಾಡಿ ಬೆಂಗಳೂರಿಗೆ ಬಂದು ನೌಕರಿ ಹಿಡಿದಿದ್ದರೆ ಇಂದು ಸುಖವಾಗಿ ಇದ್ದುಬಿಡುತ್ತಿದ್ದನೇ?" ತನ್ನ ಪ್ರಶ್ನೆ ತನಗೇ ಅಸಮಂಜಸ ಎನಿಸಿ, "ಸುಖ-ದುಃಖಗಳ ಸಿದ್ಧ ಸೂತ್ರ ಇಂತಿಪ್ಪ ಹೀಗೆ ಎಂದು ಎಲ್ಲಾದರೂ ಉಂಟೇ! ಆದಾಯಕ್ಕೊಂದು ಮೂಲವಾದರೂ ಆಗುತ್ತಿತ್ತಷ್ಟೆ. ನೌಕರಿಯಿಲ್ಲದೆ ಅವನು ಇಂದು ಪಡುತ್ತಿರುವ ಬವಣೆ ತಪ್ಪುತ್ತಿತ್ತು" ಎಂದುಕೊಂಡ.

ಸಮಯ ಎರಡು ಘಂಟೆಯಾಗಿತ್ತು. ಊಟಕ್ಕೆಂದು ಶಿರಾದಲ್ಲಿ ಬಸ್‍ ನಿಲ್ಲಿಸಲಾಯಿತು. ಬೆಳಿಗ್ಗೆ ಸರಿಯಾದ ತಿಂಡಿಯಿರದಿದ್ದರೂ, ಶ್ಯಾಮನಿಗೇಕೋ ಹಸಿವು ಮುಚ್ಚಿದಂತಾಗಿತ್ತು. ಕೆಳಗಿಳಿದು ಹೋಟೆಲಿನಲ್ಲಿ ಎರಡು ಇಡ್ಲಿ ತಿಂದ. ನಂತರ ಹೊರಗಡೆ ಇದ್ದ ಪೆಟ್ಟಿಗೆ ಅಂಗಡಿಯಲ್ಲಿ ಒಂದು ಬಾಳೆ ಹಣ್ಣನ್ನು ತಿಂದ. "ಮಾವನನ್ನು ನಾನೇ ಏಕೆ ಬೆಂಗಳೂರಿಗೆ ಕರೆದುಕೊಂಡು ಹೋಗಬಾರದು?" ಎಂದುಕೊಂಡ. "ಕರೆತಂದು ಎಲ್ಲಿಗೆ ಸೇರಿಸುವುದು? ಮೊದಲು ಅದನ್ನು ನಿಗದಿ ಮಾಡಿಕೊಳ್ಳಬೇಕು. ಮಾವನಿಗೆ ಸರಿ ಹೊಂದುವ ನೌಕರಿ ಯಾವುದಿದೆ ಬೆಂಗಳೂರಿನಲ್ಲಿ? ಆಯಿಲ್‍ಮಿಲ್‍ನ ಕೆಲಸ ಕಳೆದುಕೊಂಡಾಗ ಅಜ್ಜಿ ಇನ್ನೂ ಇದ್ದರು. ಅಜ್ಜಿಯ ಆಪ್ತವಲಯದಲ್ಲೊಬ್ಬರಿಂದ ಕಲ್ಯಾಣಿ ನರ್ಸಿಂಗ್‍ಹೋಂ‍ನಲ್ಲಿ ಲೆಕ್ಕ-ಪತ್ರಗಳ ಮೇಲ್ವಿಚಾರಣೆಯ ನೌಕರಿ ಸಿಕ್ಕಿತ್ತು. ಸೇರಿದ ಒಂದು ವಾರದಲ್ಲೇ ಮಾವ ಆ ನೌಕರಿ ಬೇಡವೆಂದು ಮನೆಯಲ್ಲಿ ತನ್ನ ಕೋಣೆಯೊಳಗೆ ಸೇರಿಕೊಂಡವನು ಎರಡು ದಿನ ಯಾರೊಡನೆಯೂ ಮಾತನಾಡಿರಲಿಲ್ಲ. ನೌಕರಿ ಕೊಡಿಸಿದ ವ್ಯಕ್ತಿ ಅಜ್ಜಿಯ ಮುಂದೆ ತನಗಾದ ಮುಖಭಂಗವನ್ನು ಹೇಳಿಕೊಂಡಾಗಲಂತೂ ಮಾವನೆದುರು ಅಜ್ಜಿ ಆಕಾಶ-ಭೂಮಿ ಒಂದಾಗಿಸಿಬಿಟ್ಟಿದ್ದರು. ಆಮೇಲೆ ಹದಿನೈದು ದಿನಗಳಾದ ನಂತರವೇ ಮಾವ ಬಾಯಿ ಬಿಟ್ಟಿದ್ದು. ಅವರು ತನ್ನನ್ನು ನೇಮಿಸಿಕೊಂಡದ್ದು ಅಲ್ಲಿ ನಡೆಯುವ ಅವ್ಯವಹಾರಗಳ ಸುಳ್ಳು ಲೆಕ್ಕ ಬರೆಯಲೆಂದು. ಇದನ್ನು ಹೇಳಿಕೊಂಡಾಗ ಮನೆಯಲ್ಲಿ ಯಾರೂ ಮಾವನನ್ನು ನಂಬಲಿಲ್ಲ. "ಪ್ರಪಂಚವೇ ಹಾಗೆ, ಎಲ್ಲಿಲ್ಲ ಮೋಸ? ನೋಡಿದರೂ ನೋಡದಂತೆ ಇದ್ದರಾಗುತ್ತಿತ್ತು." ಹೀಗೆ ಶುರುವಾದ ಮಾತುಗಳು, "ಮೈಗಳ್ಳ, ಮೈಬಗ್ಗಿಸಿ ದುಡಿದು ತಿನ್ನಲು ಸೋಮಾರಿತನ" ಎನ್ನುವವರೆಗೂ ತಲುಪಿತು. ತನ್ನ ಅಭಿಪ್ರಾಯಕ್ಕೆ ಬಿಡಿಗಾಸಿನ ಬೆಲೆಯೂ ಇಲ್ಲವೆಂದು ಮಾವ ರಾತ್ರಿ ಎಲ್ಲರೂ ಮಲಗಿದಾಗ ಕಣ್ಣೀರಿಡುತ್ತಿದ್ದ. ಅವನ ಈ ಹತಾಶ ಭಾವವೇ ಅವನನ್ನು ಸಿನಿಕನನ್ನಾಗಿಸಿರುವುದು. ಈ ಅಂಗಡಿ ಲೆಕ್ಕಾಚಾರದ ನೌಕರಿಗಳ ಬಗ್ಗೆ ಸಾಕಷ್ಟು ಜನ ಅಪ್ಪನ ಬಳಿ ಹೇಳಿ ಹೋಗಿದ್ದರು. ಒಂದನ್ನೂ ಮಾವ ಒಪ್ಪಿಕೊಳ್ಳಲಿಲ್ಲ. ಹೋದಲ್ಲೆಲ್ಲಾ ಅವನಿಗೆ ಅಲ್ಲಿನ ಅವ್ಯವಸ್ಥೆಗಳೇ ಎದ್ದುಕಾಣುತ್ತಿದ್ದವು. ತನ್ನನ್ನು ಅಸಮರ್ಥನೆಂದ ಜಗತ್ತು ಅದೆಷ್ಟರ ಮಟ್ಟಿಗೆ ಸಮರ್ಥವಾಗಿದೆ ಎನ್ನುವ ಪ್ರಶ್ನೆ ಮಾವನ ತಲೆಯೊಳಗೆ ಸದಾ ಕಾಡುತ್ತಾ ಅವನನ್ನು ಕೆಣಕುತ್ತಿತ್ತು. ಅವನ ಜೀವನ ದೃಷ್ಟಿಯೇ ಹೀಗೆ ಪಲ್ಲಟಗೊಂಡಿರುವಾಗ ನಗರ ಜೀವನ ಒಡ್ಡುವ ಸಂಕೀರ್ಣ ಸವಾಲುಗಳಿಗೆ ಮಾವ ಇನ್ನಷ್ಟು ತತ್ತರಿಸಿಹೋದಾನು!"
ತಾನು ಬರುತ್ತಿರುವುದನ್ನು ಮಾವನಿಗೆ ಹೇಳೋಣವೆಂದುಕೊಂಡು ಶ್ಯಾಮ ಮಾವನಿಗೆ ಕರೆ ಮಾಡಿದ.
 
"ಮಾವ, ಎಲ್ಲಿದ್ದೀಯ? ನಾನೀಗ ಹಿರಿಯೂರು ದಾಟಿ ಮುಂದೆ ಬರುತ್ತಿದ್ದೇನೆ. ಸಂಜೆ ೪.೩೦ಕ್ಕೆ ಮನೆ ತಲುಪಬಹುದು."
"ಓಹ್! ಏನಿದು ದಿಢೀರ್ ಭೇಟಿ? ಇಲ್ಲೇ ಸಮೀರನಂಗಡಿಯ ಹತ್ತಿರ ಇದ್ದೇನೆ. ಬಾ, ಬಾ" ಎಂದ ವಾದಿ.
ತಾನು ಬರುತ್ತಿರುವ ಉದ್ದೇಶ ಸ್ಪಷ್ಟವಾಗಿ ಗೊತ್ತಿದ್ದರೂ ಫೋನಿನಲ್ಲಿ ವಾದಿ ಮಾವನಿಗೆ ಅದನ್ನು ಹೇಳುವ ಪರಿ ತಿಳಿಯದೆ ಶ್ಯಾಮನಿಗೆ ಸ್ವರ ಹೊರಡಲಿಲ್ಲ. ಮಾವನ ವಯಸ್ಸೇನು? ತನ್ನ ವಯಸ್ಸೇನು? ಸಿನಿಮಾಗೆ ಕರೆದುಕೊಂಡು ಹೋಗೆಂದು ಕೇಳಬೇಕೆಂದಿದ್ದಲ್ಲಿ ಸುಲಭವಾಗುತ್ತಿತ್ತೇನೋ. ಆದರೆ ಶ್ಯಾಮನಿಗೆ ಇದು ಹೊಸದಾಗಿ ಒದಗಿ ಬಂದಿರುವ ಅನಿರೀಕ್ಷಿತ ಜವಾಬ್ದಾರಿಯಂತೆ ತೋರುತ್ತಿತ್ತು. ತಾನು ಮಾವನೊಡನೆ ಅವನದೇ ಜೀವನೋಪಾಯದ ಕುರಿತು ಮಾತುಗಳಾಡಲು ಹೊರಟಿರುವುದೆಂದು ಹೊಳೆದು ಒಮ್ಮೆಗೇ ಆ ಮಾತುಗಳ ಭಾರದ ಅರಿವಾಯಿತು.
ಮುಂದಿನ ಮಾತುಗಳಿಗೆ ಹೆಣಗಾಡುತ್ತ ಗಂಟಲು ಸರಿಪಡಿಸಿಕೊಂಡವನಂತೆ ಸದ್ದು ಮಾಡುತ್ತಿರುವಾಗಲೇ "ನಿಮ್ಮಪ್ಪ ಮಾತಾಡಿದ್ರಾ?" ಎಂದ ವಾದಿ.
"ಹ್ಞಾಂ, ಹ್ಞಾಂ, ಮಾತಾಡಿದ್ರು. ಆದರೆ ಅಲ್ಲಿಗೆ ಬಂದು ಸುಮಾರು ದಿನಗಳಾದವಲ್ಲ. ಹಾಗೇ ಬರುತ್ತಿದ್ದೇನೆ" ಎಂದ ಶ್ಯಾಮ. "ಸರಿ, ಮನೆಯಲ್ಲೆ ಇರ್ತೀನಿ ಬಾ"
"ಆಗಲಿ ಮಾವ" ಇನ್ನೇನು ಕರೆಯ ಸಂಪರ್ಕ ಕಡಿತಗೊಳಿಸುವುದರಲ್ಲಿದ್ದ ಶ್ಯಾಮ.
"ಶ್ಯಾಮ, ಡಿಟಿಪಿ ಮಾಡಬೇಕು ಅಂತಿದ್ದೀನಿ, ನೀನು ಬಾ, ಮಾತಾಡಬೇಕು" ಎಂದ ವಾದಿ
"ಓಹ್! ಒಳ್ಳೇದು ಮಾವ. ಬರ್ತೀನಿ ಇರು, ಇನ್ನೇನು ಮುಕ್ಕಾಲು ಘಂಟೆ"
"ಸರಿ ಸರಿ. ಅದೇನೋ ವರ್ಡ್ ಅನ್ನುವ ಸಾಫ್ಟ್ವೇರ್ ಅಂತಿದೆಯಂತಲ್ಲ, ಅದನ್ನು ಕಲೀಬೇಕಂತ ಸ್ನೇಹಿತರೊಬ್ಬರು ಹೇಳಿದ್ದಾರೆ, ಅದರ ಬಗ್ಗೆ ಮಾತಾಡಬೇಕು, ಮನೆಯಲ್ಲಿರ್ತೀನಿ" ಎಂದವನೇ ಕರೆ ಅಂತ್ಯಗೊಳಿಸಿಬಿಟ್ಟ ಮಾವ.

ಡಿಟಿಪಿ ಮತ್ತು ಮಾವ! ಸಂಬಂಧವೇ ಇರದ ಎರಡು ಜಗತ್ತುಗಳಂತೆ ಕಾಣಿಸತೊಡಗಿದವು. ವಾದಿ ತನ್ನ ವಿದ್ಯಾರ್ಥಿ ದಿನಗಳಲ್ಲಿ ಟೈಪ್‍ರೈಟಿಂಗ್ ಕಲಿತಿದ್ದನಾದರೂ, ಈಚಿನ ದಿನಗಳಲ್ಲಿ ಎಲ್ಲೆಡೆ ಕಂಪ್ಯೂಟರುಗಳನ್ನ ಬಳಸುವುದರಿಂದ ಅದಕ್ಕೆ ಬೇಡಿಕೆಯಿಲ್ಲದೆ, ತನ್ನ ಟೈಪಿಂಗ್ ಕೌಶಲವೇ ನಿಷ್ಪ್ರಯೋಜಕ ಎಂದುಕೊಂಡಿದ್ದ. ನೌಕರಿ ಸಿಗದ ಹತಾಶೆಯಲ್ಲಿ ಕಂಪ್ಯೂಟರ್ ಕಲಿಯುವದಕ್ಕೂ ತನ್ನದೇ ಪೂರ್ವಗ್ರಹಗಳನ್ನಿಟ್ಟುಕೊಂಡಿದ್ದ. ಕಂಪ್ಯೂಟರ್ ತರಗತಿಗಳಲ್ಲಿ ಕಲಿಸುವುದು ಇಂಗ್ಲಿಷ್ ಭಾಷೆಯಲ್ಲಿ ಮಾತ್ರ, ತನಗೆ ಅಷ್ಟು ಇಂಗ್ಲಿಷ್ ತಿಳಿಯುವುದಿಲ್ಲ ಎನ್ನುವುದು ಅವನ ಅಳಲಾಗಿತ್ತು. ಈಗ ಡಿಟಿಪಿಯಲ್ಲಿ ತನ್ನ ಟೈಪಿಂಗ್ ಪ್ರತಿಭೆ ಬಳಸಿಕೊಳ್ಳಬಹುದೆಂದು ಮಾವನಿಗೆ ಯಾರೋ ತಿಳಿಸಿರುವುದು ಶ್ಯಾಮನಿಗೆ ತುಸು ಸಮಾಧಾನ ನೀಡಿತಾದರೂ, ತನಗೇಕೆ ಈ ಆಲೋಚನೆ ಬಂದು ಮೊದಲೇ ಮಾವನಿಗೆ ಹೇಳಲಾಗಲಿಲ್ಲ ಎಂಬ ಪ್ರಶ್ನೆಯೂ ಮೂಡಿತು. ಹೋದ ನಂತರ ಮಾವನಿಗೆ ಹೊರಗಿನ ಯಾವುದಾದರೂ ಸೈಬರ್ ಕೆಫೆಗೆ ಕರೆದೊಯ್ದು ವರ್ಡ್ ಬಗ್ಗೆ ಮೂಲಭೂತ ವಿಷಯಗಳನ್ನು ಹೇಳಿಕೊಡಬೇಕು ಎಂದು ನಿರ್ಧರಿಸಿದ ಶ್ಯಾಮ. ಚಿಕ್ಕಂದಿನಲ್ಲಿ ರಜೆಗೆಂದು ದುರ್ಗಕ್ಕೆ ಬರುತ್ತಿದ್ದ ನೆನಪುಗಳು ಮತ್ತೆ ಒತ್ತರಿಸಿ ಸುಳಿದವು. ರಜೆಯಲ್ಲಿ ಶ್ಯಾಮನ ಚೇಷ್ಟೆ ಜಾಸ್ತಿಯಿರುತ್ತದೆಯೆಂದು ಗೊತ್ತಿದ್ದ ಶ್ಯಾಮನ ಅಮ್ಮ, ಪ್ರತಿದಿನ ಸಂಜೆ ಅವನನ್ನು ಕೂರಿಸಿಕೊಂಡು ಮಗ್ಗಿ ಒಪ್ಪಿಸಿಕೋ ಎಂದು ವಾದಿಗೆ ತಾಕೀತು ಮಾಡಿರುತ್ತಿದ್ದಳು. ಅದರಂತೆಯೇ, ವಾದಿಯೂ ಶ್ಯಾಮನಿಗೆ ಅಭ್ಯಾಸ ಮಾಡಿಸುತ್ತಿದ್ದ. ಅಜ್ಜಿ ಆಗ ಮಾತ್ರ ಶ್ಯಾಮನನ್ನು ಬಚಾವು ಮಾಡುತ್ತಿರಲಿಲ್ಲ. ಮಗ್ಗಿ ತಪ್ಪು ಹೇಳಿದಾಗ ನಿಲ್ಲಿಸಿ ಸರಿಯಾಗಿ ಹೇಳಿಕೊಡುತ್ತಿದ್ದ ವಾದಿ. ಶ್ಯಾಮ ಮಗ್ಗಿಯ ಪ್ರತಿ ಸಾಲು ಹೇಳಿದಾಗಲೂ ಅದು ಸರಿಯೋ ತಪ್ಪೋ ವಿಶ್ವಾಸ ಮೂಡದೇ ಮಾವನ ಮುಖ ನೋಡಿಕೊಂಡೇ ಹೇಳುತ್ತಿದ್ದ. ಕೆಲವೊಮ್ಮೆ ಸರಿ ಹೇಳಿದರೂ ಮಧ್ಯದಲ್ಲಿ ನಿಲ್ಲಿಸಿ, ಮಾವನ ಆಣತಿ ಸಿಕ್ಕ ಮೇಲೆಯೇ ಮುಂದಿನ ಸಾಲು ಹೇಳುತ್ತಿದ್ದ. "ಮಾವನಿಗೆ ಈಗ ನಾನು ಇನ್ನೇನನ್ನೋ ಕಲಿಸಲು ಹೊರಟಿದ್ದೇನೆಯೇ?" ಎಂದುಕೊಳ್ಳುತ್ತಾ ಮಗ್ಗಿ ಒಪ್ಪಿಸುವಾಗ ಅವನಿಗಾಗುತ್ತಿದ್ದ ತೊಡರುಗಳು ಮತ್ತೊಮ್ಮೆ ಎದುರಾದಂತಾಗಿ ಇದ್ದಕ್ಕಿದ್ದಂತೆ ಅವನ ಯೋಚನೆಗಳೆಲ್ಲ ಥಟ್ಟನೆ ನಿಂತಂತಾಯಿತು. ತಾನು ಯೋಚಿಸಿದ್ದು ಸರಿಯೆಂದು ಸೂಚಿಸಲು ಯಾರೂ ಇಲ್ಲ ಅಲ್ಲಿ. ಬಸ್ಸಿನೊಳಗಂತೂ ನಿದ್ದೆ ಹೋದ ಜನರು, ಹೊರಗೆ ಶೂನ್ಯವನ್ನೇ ಪ್ರತಿಬಿಂಬಿಸುವ ನಿರ್ಲಿಪ್ತ ಬಯಲು. "ಮಾವನಿಗೆ ಹೇಗೋ ಹೊಸದೊಂದು ದಾರಿ ತಿಳಿಯಿತಲ್ಲ" ಎಂದು ನಿಟ್ಟುಸಿರು ಬಿಟ್ಟು ಮತ್ತೆ ಕಿಟಕಿಗೊರಗಿದ.
ಸಣ್ಣ ಮಂಪರು ಹತ್ತಿ ಕಣ್ಣು ಬಿಡುವುದರೊಳಗೆ ಶ್ಯಾಮನಿದ್ದ ಬಸ್ಸು ಗುಡ್ಡಗಳ ನಡುವೆ ಹೆದ್ದಾರಿ ಹಾಯುವಲ್ಲಿ ಸಾಗುತ್ತಿತ್ತು. ಆ ಕಿರುಗಣಿವೆಯ ಪ್ರದೇಶ ಬಂತೆಂದರೆ, ದುರ್ಗ ತಲುಪಿದಂತೆಯೆ. ಅಲ್ಲಿಂದ ಶ್ಯಾಮ ಇಳಿಯಬೇಕಾದ ನಿಲ್ದಾಣ ೫ ನಿಮಿಷಗಳಷ್ಟು ದೂರ. ಸುತ್ತಲಿರುವ ಬಯಲ ತುಂಬಾ ಎಲ್ಲಿ ನೋಡಿದರಲ್ಲಿ ಗಾಳಿ ವಿದ್ಯುತ್ ಘಟಕದ ಯಂತ್ರಗಳು. ಒಂದೊಂದು ಯಂತ್ರವೂ ಒಂದೊಂದು ವೇಗದಲ್ಲಿ ತಿರುಗುತ್ತಿದೆ. ಕೆಲ ಯಂತ್ರಗಳ ರೆಕ್ಕೆಗಳು ಪೂರ್ತಿಯಾಗಿ ನಿಂತುಬಿಟ್ಟಿವೆ. ದೂರದಲ್ಲೊಂದು ಯಂತ್ರ, ಚಲನೆಯ ಗುರುತೇ ಸಿಗದಷ್ಟು ಮಂದವಾಗಿ ತಿರುಗುತ್ತಿದೆ. ಅದೆಷ್ಟು ಬಗೆಯ ನೌಕರಿಗಳು, ಅದರಲ್ಲೇ ಬದುಕಿನ ಹೋರಾಟ ನಡೆಸುವ ಕರ್ಮಚಾರಿಗಳು, ಕೆಲವರ ಓಘ ಜೋರಿರುತ್ತದೆ ಮತ್ತೆ ಕೆಲವರದು ಮಂದ ಗತಿ, ಕೆಲವರದ್ದು ಲಯಬದ್ಧವಾಗಿರುತ್ತದೆ, ಮತ್ತೆ ಕೆಲವರದ್ದು ಎಲ್ಲಿಯೂ ಸಾಗಲಾರದೇ ನಿಂತುಬಿಟ್ಟಿರುತ್ತದೆ. ಎಲ್ಲ ರೀತಿಯ ಯಂತ್ರಗಳನ್ನೂ ತನ್ನೊಳಗೇ ಹಿಡಿದಿಟ್ಟುಕೊಂಡೂ ಸಹ ಖಾಲಿಯಾಗೇ ಕಾಣುತ್ತಿದ್ದ ಆ ವಿಶಾಲ ಬಯಲು ಮಾತ್ರ ಮೂಕವಾಗಿ ಶ್ಯಾಮನನ್ನು ಬರಮಾಡಿಕೊಳ್ಳುತ್ತಿತ್ತು.

ಮೇ ೨೦ರ ವಿಜಯವಾಣಿ ಪತ್ರಿಕೆಯ ರವಿವಾರದ ಪುರವಣಿ "ವಿಜಯ ವಿಹಾರ"ದಲ್ಲಿ ಪ್ರಕಟಗೊಂಡ ಕಥೆ 

Comments

Anonymous said…
ಕಿರಣ್,

ನಿಮ್ಮ ಕಥೆ ಇಷ್ಟವಾಯಿತು. ನಮ್ಮಲ್ಲಿ ಹಲವರು ಒಮ್ಮೆ ಶ್ಯಾಮನ ಹಾಗೆ ಯೊಚಿಸಿರುತ್ತೇವೆ.
ವಂದನೆಗಳು ಸುಂದರ ಕಥೆಗಾಗಿ :)

--ಮಶೀ
Veerendra C said…
ತುಂಬಾ ಚೆನ್ನಾಗಿ ನಿಮ್ಮ್ ಮನಸ್ಸಿನ ಭಾವನೆಯನ್ನು ಕಥೆಯ ರೂಪದಲ್ಲಿ ಬರೆದ್ದಿದಿರಾ

Popular posts from this blog

ಮಾತು-ಮೌನ-ಮನಸ್ಸು

ಗೆಳೆಯನ ಬೀಳ್ಕೊಡುಗೆಗೆ ಎರಡು ಕವಿತೆಗಳು

ಬೀದಿ ಬದಿಯ ಬಾಣಸಿಗ