ಎಲೆ


ಹೊಂಬೆಳಕಿನ ಚಾದರದಲಿ ಕಂಗೊಳಿಸುತ
ಬಿಸಿಲ ಬೇಗೆಯ ನುಂಗುತ
ಆಶ್ರಿತ ಜೀವಕೆ ನೆರಳಿನ ಸಿಂಚನ

ವಸಂತದಲಿ ಚಿಗುರು
ಮುಂಗಾರಿನಲಿ ಹಚ್ಚ ಹಸಿರು
ಶೀತಲದಲಿ ಇದರ ಕೊನೆಯುಸಿರು

ಭೂತಾಯಿ ಉಟ್ಟ ಹಸಿರಿನ ಸೀರೆಯ ನೂಲು
ಒಡಲ ತುಂಬ ನರ ನಾಡಿಗಳ ಕವಲು
ರವಿಚಂದ್ರರಿಗೂ ಹರಿತ್ತಿನ ಹೊನಲು

ಉಣಬಡಿಸುತ ಸಸ್ಯಕೆ ಪ್ರಾಣಾನ್ನ
ಹಳೆ ಬೇರು ಕೊಂಬೆಗಳಿಗೆ ನವಚೈತನ್ಯ
ಮಂಜಿನ ಹನಿಗಳ ಮೈದಾನ

ತೋರಣವಿರಲಿ ಚಪ್ಪರವಿರಲಿ
ಮನೆಯಂಗಳಕೆ ಸಿಂಗಾರ
ಮನದಂಗಳದಿ ಚಿತ್ತಾರ

ಹೂವ ಅಂದವ ಮೋಹಿಸುವರು
ಎಲೆಮರೆಯ ಕಾಯೆನ್ನುವರು
ಎಲೆಯ ಸೊಬಗನ್ನೇ ಮರೆ ಮಾಡಿಹರು!

Comments

Popular posts from this blog

ಮಾತು-ಮೌನ-ಮನಸ್ಸು

ಗುಂಗು ಹಿಡಿಸುವ ಮಧುರಾನುಭವ

ನಿರೀಕ್ಷೆ