ಅವಸಾನ

ಇನ್ನೂ ಬದುಕುಳಿದಿರುವೆ, ಅರೆಜೀವಂತಿಕೆಯಲಿ
ತಿಳಿದವರಿಗೆ ನಾನೊಂದು ಕಪೋತವಷ್ಟೆ
ಲಾಭವೇನು ನನ್ನಿಂದ ಯಾರಿಗೆ?
ಹೆಸರು ನನ್ನದು ನೆನಪಿದೆ ಯಾರಿಗೆ?

ಹಾಗೂ ಹೀಗೂ ಸವಕಲು ರೆಕ್ಕೆಗಳ ಬಡಿಯುತ್ತ
ಮೇಲೇರುವೆ.ಮೊದಲಿನಂತಲ್ಲ.
ಹೆಚ್ಚು ಹಾರಲಾರೆ
ಆಗಸವೆಲ್ಲ ಕೆಂಪು ಕೆಂಪು
ಮುಸ್ಸಂಜೆಯ ನಸುಗೆಂಪಲ್ಲ ಅದು
ಸಿಡಿದ ಹಸಿನೆತ್ತರ ಗಾಢ ಕೆಂಪು
ಬಾನೆತ್ತರದ ಕನಸುಗಳೆಲ್ಲ ಮಿಂದಿವೆ ಇದೇ ರಕ್ತವರ್ಣದಲ್ಲಿ

ಎದೆ ನಡುಗುವುದು ಒಮ್ಮೆಲೆ
ಕಿವಿಗಡಚಿಕ್ಕುವ ಅಟ್ಟಹಾಸಕೆ
ಅದೆಂಥದ್ದೊ ಬೀಭತ್ಸ ರೂಪ
ಗುರುತಿಗೇ ಸಿಗದ ಆಕಾರ
ಹಿಂದೊಮ್ಮೆ ಮನುಷ್ಯನಂತಿದ್ದ
ತಾ ಹೇಳಿದ್ದೇ ನೀತಿ,ಮುನ್ನುಗ್ಗಿದ್ದೇ ಪ್ರಗತಿ
ಆಳದಲ್ಲೆಲ್ಲೋ ದಳ್ಳುರಿಯ ಹೊತ್ತಿಸಿಕೊಂಡು
ವಿಷಮಕೊಳದಲ್ಲಿ ಜೀಕುತಿಹನಿಂದು

ಇನ್ನು ಹಾರಲಾರನೇನೋ!
ಗಾಳಿಯೂ ಕುದಿಯುತಿದೆ
ಇನ್ನೆಷ್ಟು ಹಗುರಾಗಲಿ?
ಉರಿವ ಕೊಳ್ಳಿಯಾದರೂ ಆರೀತು
ಉರಿಸುವ ಕೈಗಳು ತಣ್ಣಗಾದಾವೆ?

Comments

"uriva kolliyaadaroo nndeetu, uriso kaigalu tannagaadaave ?" :)mast.

Popular posts from this blog

ಮಾತು-ಮೌನ-ಮನಸ್ಸು

ನಿರೀಕ್ಷೆ

ಗುಂಗು ಹಿಡಿಸುವ ಮಧುರಾನುಭವ