ಚಿತ್ರಶಾಲೆ

ಜಿನುಗುತ ಮಿನುಗುತ ಸವಿಗಾನವ ಗುನುಗುತ
ಧರೆಗೆ ಲಗ್ಗೆ ಇಟ್ಟಿದೆ ಮುಂಗಾರು
ಕನಸುಗಳ ಕಟ್ಟುತ ಕಂಗಳ ಕೋರೈಸುತ
ಬಿತ್ತರಗೊಂಡಿವೆ ಬಣ್ಣಗಳು ನೂರಾರು

ಕಪ್ಪು-ಬಿಳುಪಿನ ಮುಗಿಲ ಪರದೆಗಳಲಿ
ಮುದ್ದಾಗಿ ಮೂಡಿದೆ ನೆನಪಿನ ಚಿತ್ರಾವಳಿ
ಜಡಿಮಳೆಯ ಹಸಿಬಣ್ಣಗಳನು ಎರಚಿದೆ ತಂಗಾಳಿ
ಆರ್ದ್ರವಾಗಿದೆ ಮನವು ಓಕುಳಿಯಲಿ

ತರು-ಲತೆಗಳ ಬೇರಿನಡಿಯಲಿ
ಮನಬಿಚ್ಚಿ ಅರಳಿದೆ ಮಣ್ಣಿನ ಕೆಂಬಣ್ಣ
ನೇಗಿಲ ಹೊತ್ತು ನಿದ್ದೆಯ ಮರೆತ
ಕೃಷಿಕನ ಕಣ್ತುಂಬಿದೆ ಆಶಾಕಿರಣದ ಹೊಂಬಣ್ಣ

ಸುಮಗಳ ಸೊಬಗು ಭ್ರಮರಕೆ ಸಮ್ಮೋಹದ ಗುಂಗು
ಮಕರಂದವ ಜೇನಾಗಿಸಿದೆ ಅನುರಾಗದ ರಂಗು
ಅವಿನಾಭಾವ ಬಂಧಗಳ ಬೆಸೆಯಲು
ಸಾಕೇನು ಏಳೇ ಬಣ್ಣ?

ಚಿಟ್ಟೆಯ ರೆಕ್ಕೆಗೆ ಚಿತ್ತಾರದ ಮೊಹರು
ಸೋನೆಯ ಸಿಂಚನಕೆ ಜಗವೆಲ್ಲ ಹಸಿರು
ರಂಗೇ ಇರದ ಜಲವು ಅವನಿಯ ರಂಗೇರಿಸುವುದೆಂತು?
ಋತುಗಳ ಲೀಲೆಯೋ ಪ್ರಕೃತಿಯ ಬಗೆಯೋ!

Comments

ಇದನ್ನು ಓದಿದಾಗ ಮಲೆನಾಡು/ಕರಾವಳಿಯ ಮಳೆಗಾಲದ ನೆನಪಾಗ್ತಾ ಇದೆ. ಬಿಸಿ ಚಹಾ ಮತ್ತೆ ಹಲಸಿನ ಹಪ್ಪಳ ಸವಿಯುವ ಸಮಯ :-)

Popular posts from this blog

ಮಾತು-ಮೌನ-ಮನಸ್ಸು

ಬೀದಿ ಬದಿಯ ಬಾಣಸಿಗ

ಗೆಳೆಯನ ಬೀಳ್ಕೊಡುಗೆಗೆ ಎರಡು ಕವಿತೆಗಳು