ಹೋಗೋಣವೆ ಕನಸಿನೂರಿಗೆ...

ಇಂಚರದ ಹಕ್ಕಿಯಾಗಿ ನೀ ಭುವಿಗೆ ಬಂದ ದಿನವಿದು
ಹೊಳೆವ ಕಣ್ಣುಗಳ ಜಗಕೆ ತೋರಿದ ದಿನವಿದು
ಅಮ್ಮನ ಮಡಿಲನು ತುಂಬಿ ಬಾಳ ಬೆಳಕಾದ ದಿನವಿದು
ಕೈ ಹಿಡಿದ ಪ್ರಾಣಸಖಿ ನಿನ್ನ ಜನುಮ ದಿನವಿದು

ಹೇಳು ಗೆಳತಿ ತೆರಳೋಣವೆ ಸಂಭ್ರಮಿಸಲು
ಅಂದು ಕನಸಿನಲಿ ನಾ ಕಂಡ ಊರಿಗೆ
ಹೇಗೆ ಬಣ್ಣಿಸಲಿ ಅಲ್ಲೇನಿದೆಯೆಂದು
ಯಾರೂ ಕಂಡಿರದ ಮೋಹಕ ತಾಣವದು

ಕಡಲ ಅಲೆಯಂತೆ ಉಕ್ಕಿ ಉಕ್ಕಿ ನಾನಲ್ಲಿ ಬಂದಂತೆ
ಅಪ್ಪಿ ಅಪ್ಪಿ ಕಳಿಸಲು ಕಿನಾರೆಯಾಗಿ ನೀನೇ ನಿಂತಂತೆ
ನಿನ್ನನರಸಿ ಬರುವ ನಾನಲ್ಲಿ ದುಂಬಿಯಂತೆ
ಮಲ್ಲಿಗೆಯಾಗಿ ಘಮ್ಮೆಂದು ನೀನೇ ಅರಳಿದಂತೆ

ನೀನಲ್ಲಿ ಮುಗಿಲನೇ ದಿಟ್ಟಿಸುತ ಶಿಲೆಯಾಗಿ ನಿಂತಂತೆ
ಮಳೆಯಾಗಿ ಸುರಿದು ನಾ ನಿನ್ನ ಆವರಿಸಿದಂತೆ
ಕಾನನದಿ ಮೌನಿಯಾಗಿ ನಾನಲ್ಲಿ ಅಲೆದಂತೆ
ಕುಹು ಗಾನದ ಕೋಗಿಲೆಯಾಗಿ ನೀ ಬಂದು ಕೂಗಿದಂತೆ

ಅಗಲಿಸುವರಿಲ್ಲ ನಲ್ಲೆ ನಮ್ಮನಲ್ಲಿ
ತೆಕ್ಕೆಯೊಳು ಸೇರಿದರೆ ಸಮಯವೇ ನಿಂತಂತೆ
ನಾ ನನ್ನನು ನೀ ನಿನ್ನನು ಮರೆತಂತೆ
ಇರಲಾರದು ನಮಗಲ್ಲಿ ಇನ್ನಾವ ಚಿಂತೆ

ಕನಸು ಕೈ ಜಾರುವ ಮೊದಲು ಕನಸೊಳು ಜಾರೋಣ
ಕಾಣಲಾರೆಯ ಆಕಾಶದಿ ಕದವೊಂದು ತೆರೆದಿದೆ
ನಿನ್ನ ಹುಟ್ಟು ಹಬ್ಬದ ಸಡಗರಕಾಗಿ
ಆ ಮಾಯಾನಗರಿಗೆ ಹಾರೋಣ ಜೊತೆಯಾಗಿ

Comments

Suryanarayan said…
Hi Kiran

Iam really proud of your talent.

I wish you carry on this with more

zeal.I expect more from you in lite

rature and wish you all the best.
"ಇಂಚರದ ಹಕ್ಕಿಯಾಗಿ ನೀ ಭುವಿಗೆ ಬಂದ ದಿನವಿದು
ಹೊಳೆವ ಕಣ್ಣುಗಳ ಜಗಕೆ ತೋರಿದ ದಿನವಿದು"

ಈ ಸಾಲುಗಳು ಗಮನ ಸೆಳೆದವು.. ಕವನದಲ್ಲಿ ಕವಿಯ ಆಶಯ ತುಂಬಾ ಚೆನ್ನಾಗಿ ಮೂಡಿಬಂದಿದೆ.. ಹೀಗೆ ಮುಂದುವರೆಯಲಿ ಕವಿತಾಲೋಕದಲ್ಲಿ ನಿಮ್ಮ ಪಯಣ..
ನಿಮ್ಮವ,
ನ. ಗೋ. ಪ್ರ.

Popular posts from this blog

ಮಾತು-ಮೌನ-ಮನಸ್ಸು

ಬೀದಿ ಬದಿಯ ಬಾಣಸಿಗ

ಗೆಳೆಯನ ಬೀಳ್ಕೊಡುಗೆಗೆ ಎರಡು ಕವಿತೆಗಳು