Saturday 31 July 2010

ಹಿಂತಿರುಗದಿರಿ ವಾಸ್ತವಕೆ



ಮಲಗಿಬಿಡಿ ಬಾಲೆಯರೆ
ಇರುಳ ಚಾದರವ ಪೂರ್ತಿ ಹೊದ್ದು
ಅದ ನೇಯ್ದ ಮಾಂತ್ರಿಕನ ನೆನೆದು
ದುಗುಡ ಭೀತಿಗಳ ತೊರೆದು
ಕಣ್ಣಾಲಿಗಳ ತೆರೆಯದಿರಿ

ನಿಶೆಯ ಹೆರಳು
ಹರಡಿರಲು
ಅರಳಿವೆ ಬಣ್ಣಗಳ ಹೊಮ್ಮಿಸಿ
ಹೂಗಳು
ಪರಿವೆಯ ಅರಿವೆ
ಕಿತ್ತೆಸೆದು
ಮರೆತು ಮಲಗಿರಿ

ಎಚ್ಚರಗೊಂಡಿರೆ
ಸ್ವಪ್ನದ ನಸುಕು ಒಡೆದು
ಇಹದ ಕತ್ತಲೆ ಕವಿದೀತು
ಮಿಸುಕಾಡಿ ಎಬ್ಬಿಸಿಕೊಳ್ಳದಿರಿ
ಎದುರಿಸಬೇಕಾದೀತು
ಮಿಥ್ಯ ಲೋಕದ ಘೋರ ಸತ್ಯಗಳ

ಕಂಡೀರಿ ಗೋಮುಖಗಳ
ಕಾಣಲಾರಿರಿ ಹಿಂದಿರುವ
ವ್ಯಾಘ್ರಗಳ!
ಹಿಂತಿರುಗದಿರಿ ವಾಸ್ತವಕೆ
ಮರಳಿ ಕೊರಗಿ ಸೊರಗದಿರಿ
ತಲ್ಲಣಿಸದಿರಿ ಎಚ್ಚರಗೊಂಡು
ಆಗಿಹೋದೀರಿ
ಮದಿರೆಯ ಶೀಶೆಯ ಮೇಲಿನ
ಅರೆನಗ್ನ ಚಿತ್ರವಾಗಿ

ಭೋಗದ ಸಂಕೋಲೆಯು
ಅರಸಿ ಬಂದೀತು
ನೀಡದಿರಿ ಕೊರಳು
ಮಾಯೆಯ ನಶೆ ಬೀರಿ
ಸೆಳೆದೀತು
ಮೋಹ ಪಾಶ
ಆಗದಿರಿ ಮರುಳು

ಜಾರಿಬಿಡಿ ಕೋಮಲೆಯರೆ
ಸವಿನಿದ್ದೆಯೊಳು
ಬೇರುಗಳು ಭುವಿಯೊಡಲ ತಬ್ಬಿದಂತೆ
ಆಲಿಂಗಿಸಿ ನಿದ್ದೆಯನು
ಹಾರಿ ಬರಲಿದೆ
ಸವಿಗನಸ ಹಕ್ಕಿಯೊಂದು
ತೇಲುತ ಸಾಗಿ ದೂರಕೆ
ರೆಕ್ಕೆಗಳ ತೆಕ್ಕೆಯೊಳು
ಬಂಧಿಯಾಗಿ

ಸಡಿಲಿಸದಿರಿ ಕನಸಿನ ಲಂಗರುಗಳ
ಇಳಿಸಿರಿ ಇನ್ನಷ್ಟು ಆಳಕೆ
ನಿದಿರೆಯ ಕಡಲ ಒಳಗೆ
ಸೇರಿಬಿಡಿ ಇರುಳು
ಕರಗುವ ಮೊದಲು
ನಿದಿರಾದೇವಿಯ ಮಡಿಲು

ಚಿತ್ರಕೃಪೆ: ಮಯೂರ ಮಾಸ ಪತ್ರಿಕೆ

0 ಪ್ರತಿಕ್ರಿಯೆ(ಗಳು):