ಹೊಳೆಯ ಹಾದಿ ಹಿಡಿದು

ಏನು ಎತ್ತ ಎಂದು ಕೇಳದೆ
ಸುಮ್ಮನೆ ಹೊರಟು ಬಿಡೋಣ
ಹುಣ್ಣಿಮೆಯ ಬೆಳದಿಂಗಳಿಗೋ, ಕಂಪು ಹೊತ್ತ ತಂಗಾಳಿಗೋ
ಕಾಯುವುದು ಬೇಡ ಇನ್ನು

ಹಿಡಿಯುವ ಆ ಹೊಳೆಯ
ಕಾಲು ದಾರಿಯ ಜಾಡು
ಬಿಟ್ಟು ಚಂದಿರನಿಗೆ
ಅವನ ಪಾಡು

ಹನಿವ ಮಳೆಗೆರಡು ಬೊಗಸೆ
ಸುಡುವ ಬಿಸಿಲಿಗೆ ನಾಲ್ಕು ಒಲವ ಮಾತು
ಕೊರೆವ ಚಳಿಗೆ ತೋಳ ಬಳಸು
ತುಸು ದೂರದ ನಡಿಗೆಯಷ್ಟೇ

ಬೆಸೆದಿರಲಿ ಕೈಯೊಳು ಕೈ
ನಿಂತಿರಲಿ ಬಾಯ ತುದಿಯಲಿ
ಹೇಳಬೇಕೆಂದ ಸವಿ ನುಡಿ

ಕಣ್ಣಂಚಿನ ಮಿನುಗು
ಮರೆಮಾಚುವುದು ನೋಡು
ಆ ತುಂಟ ನಗೆಯನು

ಹೊಳೆಯ ದಂಡೆಯಲಿ
ಎದೆಗಾತು ಕೂತಿರೆ ನೀನು
ತೆರೆಗಳ ಗುಂಜನದೊಳು
ರೆಪ್ಪೆ ಮುಚ್ಚಲು ನಾನು
ನೆನಪಾಗಿ ಥಟ್ಟನೆ
ನೀನಂದು ಮೈಮರೆಸಿದ ಹಾಡು

ಕೈಯ ಹಣೆಮುಟ್ಟಿಸಿ
ನೋಟದಲ್ಲೇ ಅಹವಾಲು ಇಡುವೆನು
ಅದೇ ಹಾಡನು ಆ ಮೋಹಕ ನಾದವನು
ಒಲವ ಸುಧೆಯೊಳದ್ದಿ ಹರಿಯಬಿಡೆಂದು
ಅವೇ ಪದಗಳಿಗೊಮ್ಮೆ ನಿನ್ನ ದನಿಯ
ಜೇನು ಪೂಸಿಬಿಡೆಂದು

ಗೊತ್ತಿಲ್ಲದೇನಿಲ್ಲ ನಿನಗೆ
ನಿನ್ನಾ ಹಾಡಿಗೆ ಎದೆ ಹನಿವುದು ಇನ್ನಿಲ್ಲದಂತೆ
ಕಂಠ ಬಿಗಿವುದು ಮಾತು ಹೊರಡದಂತೆ

ಬೇಕಿಲ್ಲ ಅಲ್ಲವೆ
ಇನ್ಯಾವ ರಸಘಳಿಗೆಯ ನಿರೀಕ್ಷೆ?
ನಿನ್ನ ಹಾಡು ನನ್ನ ಮೈಮರೆವು
ಕೊರಳ ಇಂಪು ಕವಿತೆಯ ಕಂಪು
ಅರಳಿ ನಗುವ ಮಲ್ಲಿಗೆ ಮುಗಿಲು
ಬಯಲ ತುಂಬಾ ಪ್ರೀತಿ ಹೊನಲು
ಸಾಕಲ್ಲವೆ ಇಷ್ಟು
ಕನಸಿನ ಜೋಳಿಗೆ ತುಂಬಿಸಲು?

ಹೊರಡೋಣ ನಡಿ ಇನ್ನು
ಬಿಟ್ಟರಾಯಿತು ಕರಗುವ ಸಮಯವ
ಋತುಗಳ ಪಾಲಿಗೆ
ಹಂಚಿದರಾಯಿತು ಕಿರುನಗೆಯ
ಹೂಗಳ ಸಾಲಿಗೆ

Comments

ಆಹ್!!!
ನನ್ನ ಭಾವನೆಗಳನ್ನ, ಕನಸನ್ನ, ಹಂಬಲವನ್ನ ನಿಮ್ಮ ಅಕ್ಷರಗಳಲ್ಲಿ ನೇಯ್ದು ಬಿಟ್ಟಿದ್ದ್ದೀರಿ.
ಈ ನನ್ನ ತಲ್ಲಣಗಳ ಘಳಿಗೆಗಳಲ್ಲಿ ನನ್ನದೇ ಭಾವಕೋಶದ ವಿಸ್ತರಣೆಯಂತಿರುವ ಈ ಸವಿಗವಿತೆ ಓದಿ ಮಾತಿಗೆ ಸಿಕ್ಕದ ಹಿತ.
ತುಂಬ ಚೆನ್ನಾಗಿದೆ. ಬರೀತಾ ಇರಿ.
-ಪ್ರೀತಿಯಿಂದ,ಸಿಂಧು
ಸಖತ್! ಇಷ್ಟ ಆಯ್ತು..
Parisarapremi said…
simple aagi beautiful aagide... :-)
@ಸಿಂಧು
ನಿಮ್ಮ ಭಾವತರಂಗದ ಜೊತೆ ಈ ಕವಿತೆ ಅನುರಣಿಸಿದೆಯೆಂದು ತಿಳಿದು ಖುಷಿಯಾಯಿತು. ಧನ್ಯವಾದ
@ಸುಶ್ರುತ, ಅರುಣ್
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು :)
Chidambara said…
Hi Kiran
I just glanced your blog.
My appreciation for your poetic taste.
Please keep it up.

Regards
Prof.Chidambara Kalamanji

Popular posts from this blog

ಮಾತು-ಮೌನ-ಮನಸ್ಸು

ಗುಂಗು ಹಿಡಿಸುವ ಮಧುರಾನುಭವ

ನಿರೀಕ್ಷೆ