ಅಲೆದಾಟದ ಜೊತೆಗಾರನಿಗೊಂದು ಪತ್ರ

ಗೆಳೆಯ,
ಎಲ್ಲಿಂದ ಪ್ರಾರಂಭಿಸಬೇಕೊ ತಿಳಿಯುತ್ತಿಲ್ಲ. ಮೊನ್ನೆ ಜಯನಗರದ ೩ನೇ ಬ್ಲಾಕ್ ನ ಟ್ರಾಫಿಕ್ಕ್ ಸಿಗ್ನಲ್ಲಿನಲ್ಲಿ ನೀನು ಯಾವುದೋ ಯೋಚನೆಯಲ್ಲಿ ಕಳೆದು ಹೋಗಿ ಒಬ್ಬೊಬ್ಬನೆ ನಗುತ್ತಾ ಬರುವುದನ್ನು ನಾನು ದೂರದಿಂದಲೇ ನೋಡಿದ ಕ್ಷಣದಿಂದಲೋ ಅಥವಾ ೩ ವರ್ಷಗಳ ಹಿಂದೆ ವಿಪ್ರೋ ಸಂಸ್ಥೆ ಸೇರಿದ ಹೊಸತರಲ್ಲಿ ತರಬೇತಿಯ ತರಗತಿಗಳಲ್ಲಿ ನಾವಿಬ್ಬರೂ ಎದುರಾಗಿ ಪರಿಚಯಗೊಂಡ ಕ್ಷಣದಿಂದಲೋ. ನಾವು ಭೇಟಿಯಾದಾಗ ನನ್ನ-ನಿನ್ನ ಸ್ನೇಹದ ಸೇತುವಾಗಿದ್ದು ಬರಿ ಮೇಲ್ಮೇಲಿನ ಪರಿಚಯವಷ್ಟೆ. ಈಗ ಆ ಸೇತುವೆಗೆ ಒಡನಾಟ, ಪುಸ್ತಕಗಳು, ಸಾಹಿತ್ಯ, ನಾಟಕ, ಭೈರಪ್ಪನವರ ವೈಚಾರಿಕತೆ ಎಂಬ ಅಮೂರ್ತ ಸ್ತಂಭಗಳು ಹುಟ್ಟಿಕೊಂಡಂತೆ ತೋರುತ್ತಿದೆ.

ಜೀವನವನ್ನು ನಾವು ಕೆಲವೊಮ್ಮೆ ಖುಷಿಯಿಂದ ಕಳೆದಿರುತ್ತೇವೆ, ಹಾಗೆಯೇ ದುಃಖದಲ್ಲಿ ಬೆಂದೂ ಇರುತ್ತೇವೆ. ನಗು, ಅಳು, ಮೌನ, ಅಸಮಾಧಾನ ಇತ್ಯದಿ ವಿವಿಧ ಭಾವನೆಗಳ ಅಲೆಗಳು ಅಪ್ಪಳಿಸಿರುತ್ತವೆ. ಹೀಗೆ ಗತಿಸಿದ ಕ್ಷಣಗಳು ನೆನಪುಗಳಾಗಿ ಆಗೊಮ್ಮೆ ಈಗೊಮ್ಮೆ ಬದುಕೆಂಬ ಪಯಣದ ಹೆದ್ದಾರಿಯಲ್ಲಿ ತಂಗುದಾಣಗಳಂತೆ ಕಾಣುತ್ತವೆ. ನಮ್ಮ ಮುಂದೆ ಸರಿಯುತ್ತಿರುವ ಕಾಲ ಮತ್ತು ನಮ್ಮನ್ನೂ ಒಳಗೊಂಡು ನಾಟಕವಲ್ಲದ ನಾಟಕದಂತೆ ನಡೆಯುವ ಘಟನಾವಳಿಗಳು ಒಂದು ರೀತಿಯಲ್ಲಿ ವಿಶಿಷ್ಟವೆನಿಸಿ "ಇದು ನನ್ನ ಬಾಳಿನಲ್ಲಿ ಮರೆಯಲಾಗದ ನೆನಪಾಗಿ ಉಳಿಯುತ್ತದೆ" ಎಂದು ನಮಗೆ ಆ ಕ್ಷಣವೇ ಅನಿಸತೊಡಗುವುದು ಸೋಜಿಗವೆನಿಸುತ್ತದೆ. ಮೊನ್ನೆ ಶನಿವಾರ ನಾವಿಬ್ಬರೂ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಅಂಕಿತ ಪುಸ್ತಕದ ಮಳಿಗೆಗೆ ಭೇಟಿ ಕೊಟ್ಟಿದ್ದು ಅಂಥದ್ದೊಂದು ಘಟನೆ ಎನಿಸುತ್ತಿದೆ. ನೀನು ಅಂದು ಹೇಳಿದ್ದು ನೆನಪಾಗುತ್ತಿದೆ. "ಶನಿವಾರ, ಭಾನುವಾರ ಬಂತೆಂದರೆ ಬೆಂಗಳೂರಿನ ಜನ ಸಿನೆಮಾ, ಶಾಪ್ಪಿಂಗ್ ಮಾಲ್, ಹೋಟೇಲು, ಪಬ್ಬು ಅಂತೆಲ್ಲ ತಿರುಗುತ್ತಾರೆ. ನಾವಿಬ್ಬರೂ ಪುಸ್ತಕ ಓದಲು ಹೋಗುತ್ತಿದ್ದೇವೆ" ಎಂದು ನೀನು ಹೇಳಿದ್ದಕ್ಕೆ ಇಬ್ಬರೂ ನಕ್ಕಿದ್ದೆವು. ಹೌದು. ನಮ್ಮಿಬ್ಬರಲ್ಲಿ ಸುಪ್ತವಾಗಿದ್ದ ಸಾಹಿತ್ಯಪ್ರೇಮ, ಕಾಲಕ್ರಮೇಣ ಅರಳುತ್ತಾ ಬಂತು. ಸಮಾನಾಭಿರುಚಿಯು ಸ್ನೇಹವನ್ನು ಗಾಢವಾಗಿಸುತ್ತದೆ ಎಂದು ಹೇಳುತ್ತಾರೆ. ಅದರ ಹೊರತಾಗಿಯೂ ಸ್ನೇಹಿತರು ಆಪ್ತರಾಗಿರುವುದನ್ನು ನೋಡಿದ್ದೇನೆ. ಆದರೂ ಸಮಾನಭಿರುಚಿಯೆ ಇಷ್ಟು ದಿನಗಳವರೆಗೂ ನನ್ನನ್ನು ನಿನ್ನನ್ನು ಹತ್ತಿರವಾಗಿಸಿಟ್ಟಿದೆ ಎಂದು ನನ್ನ ನಂಬಿಕೆ.

ಅಂದು ನಾವಿಬ್ಬರೂ ಬಸ್ಸು ಹತ್ತಿ ವರ್ಲ್ಡ್ ಕಲ್ಚರ್ ಕಡೆಗೆ ಹೊರಟಾಗ ಯಾವುದೋ ಸಮಾರಂಭಕ್ಕೋ ಸಂತೋಷಕೂಟಕ್ಕೋ ಹೊರಟಂತೆ ನಮ್ಮಿಬ್ಬರ ಮುಖಗಳು ಹಿಗ್ಗಿದ್ದವು. ನಿನಗೆ ವರ್ಲ್ಡ್ ಕಲ್ಚರ್‍ ನ ಗ್ರಂಥಾಲಯ ತೋರಿಸುವ ಸಂಭ್ರಮ ನನಗಿತ್ತು. ಅಲ್ಲಿ ಚೆಂದದ ಪುಸ್ತಕಗಳಿವೆ ಎಂದು ನನ್ನ ಸ್ನೇಹಿತರಿಂದ ಕೇಳಿದ್ದೆ. ಗ್ರಂಥಾಲಯದಲ್ಲಿ ನಿನಗೆ ತೇಜಸ್ವಿಯವರ ಬಗ್ಗೆ ಬೇರೆ ಬೇರೆ ಲೇಖಕರ ಬಿಡಿ ಬರಹಗಳ ಪುಸ್ತಕವೊಂದು ಸಿಕ್ಕಿ ಅದನ್ನು ನೀನು ಇಷ್ಟ ಪಟ್ಟಿದ್ದನ್ನು ಕಂಡು ನನ್ನ ಬೆನ್ನನ್ನು ನಾನೇ ತಟ್ಟಿಕೊಂಡಂತಾಯಿತು. ಹಳೆಯ ಪುಸ್ತಕಗಳ ಹಾಳೆಗಳ ವಾಸನೆ ನಿನಗೆ ಹಿಡಿಸುವುದಿಲ್ಲ ಎನ್ನುವ ವಿಷಯ ನನಗೆ ಗೊತ್ತಾಗಲು ವರ್ಲ್ಡ್ ಕಲ್ಚರ್ ಲೈಬ್ರರಿಗೆ ಹೋಗಬೇಕಾಯಿತು. ಅದೆಲ್ಲ ಬಿಡು. ಒಂದು ವಿಷಯ ಮಾತ್ರ ನಿಜಕ್ಕೂ ವಿಶೇಷ. ಏನದು ಹೇಳು? ಒಂದು ಕಾಲದಲ್ಲಿ ಸಾಹಿತ್ಯ ಕ್ಷೇತ್ರದ ದಿಗ್ಗಜರೆಲ್ಲ ವಿರಾಮದ ಓದಿಗೆಂದು ಬರುತ್ತಿದ್ದ ಜಾಗದಲ್ಲಿ ಕೂತು ಪುಸ್ತಕ ಓದುವುದೆಂದರೆ ಸುಮ್ಮನೆಯೆ? ರೋಮಂಚನವಾಗುತ್ತದೆ ಅಲ್ಲವೆ?

ಸಂಜೆ ಐದುವರೆ ಹೊತ್ತಿಗೆ ನಾವಿಬ್ಬರೂ ಅಂಕಿತ ಪುಸ್ತಕದ ಅಂಗಡಿಗೆ ಹೋಗೋಣವೆಂದುಕೊಂಡು ಹೊರನಡೆದೆವು. ಜಯಂತರ ಭಾಷಣವನ್ನು ಅಂದು ಮಧ್ಯಾಹ್ನವಷ್ಟೇ Youtubeನಲ್ಲಿ ನೋಡಿದ್ದೆ. ನಿಜಜೀವನದ ವೃತ್ತಾಂತವೊಂದನ್ನು ಉದಾಹರಿಸಿ ಸಾಹಿತ್ಯ ಮತ್ತು ಮಾನವೀಯತೆಯ ನಡುವೆ ಇರುವ ಸಂಬಂಧದ ಬಗ್ಗೆ ಅವರು ಹೇಳಿದ್ದರು. ಅದನ್ನೇ ನಿನಗೆ ನಾನು ಹೇಳುತ್ತಾ ಗಾಂಧಿಬಜಾರಿನ ಫುಟ್ ಪಾತಿನ ಮೇಲೆ ಹೋಗುವಾಗ ನಮ್ಮ ಸುತ್ತ ಶನಿವಾರದ ಸಂಜೆಯ ವಿಹಾರಕ್ಕೆಂದು ಬಂದಿದ್ದ ಜನರ ಮೇಲೆ ನನ್ನ ಗಮನ ಹೋಯಿತು. ಅವರ ನಡಿಗೆಯಲ್ಲಿ ಎನೋ ಅವಸರವಿರುವಂತೆ ಅನಿಸಿತು. ಕುಟುಂಬದವರ ಜೊತೆ ಸರಿಯಾಗಿ ಸಮಯ ಕಳೆಯಲು ವಾರಕ್ಕೆ ಎರಡೇ ದಿನ ಮಾತ್ರ. ಮೊದಲು ಏನಾದರೂ ಹೊರಗಿನ ತಿಂಡಿ ತಿನ್ನೋಣವೆ, ಮನೆಯ ದಿನಸಿ ಖರೀದಿಸೋಣವೆ, ಮಗನಿಗೆ ಪುಸ್ತಕ ಕೊಡಿಸೋಣವೆ, ಕಿತ್ತು ಹೋಗಿರುವ ಚಪ್ಪಲಿ ಸರಿಮಾಡಿಸೋಣವೆ ಹೀಗೆ ಹಲವಾರು ಗೊಂದಲಗಳು ಅವರ ಮುಖಗಳಲ್ಲಿ. ಆ ಜನರನ್ನು ನೋಡಿ ನನ್ನ ಮನಸ್ಸಿನಲ್ಲೇ ಅಂದುಕೊಂಡೆ. ಈಗಂತೂ ನಮಗೆ ಬೇರೆ ಜವಾಬ್ದಾರಿಗಳಿಲ್ಲ. ಮುಂದೊಂದು ದಿನ ನಾವೂ ಸಂಸಾರನೌಕೆಯ ನಾವಿಕರಾಗುತ್ತೇವೆ. ಆಗ ನಾವೂ ಸಹ ಈ ಜನರಂತೆಯೆ ಸಂಸಾರ, ಮಕ್ಕಳು, ಮನೆ, ಮಠವೆಂದು ಹೀಗೆಯೆ ಇಲ್ಲೇ ಅಲೆದಾಡಲು ಬರಬಹುದು. ಆಗ ಅಂಕಿತ ಪುಸ್ತಕದ ಅಂಗಡಿಯೊ, ವರ್ಲ್ಡ್ ಕಲ್ಚರ್ ಗ್ರಂಥಾಲಯವೊ ನಮಗೆ ಕಂಡರೆ ನಮ್ಮ ಕಾಲುಗಳು ಲಯ ತಪ್ಪಬಹುದು, ಮನಸ್ಸು ಹಾರಿ ಎಂದೋ ನೋಡಿ ಹಣವಿಲ್ಲದೆ ಇನ್ನೆಂದಾದರೂ ಕೊಂಡುಕೊಂಡರಾಯಿತು ಎಂದು ಅಲ್ಲೆ ಬಿಟ್ಟು ಬಂದ ಪುಸ್ತಕದ ಕಡೆ ಹೋಗಬಹುದು. ಬಹಳ ದೂರದ ಆಲೋಚನೆ ಅಂತೀಯ?

ಅದೇನೆ ಇರಲಿ, ಬಾಳಿನಲ್ಲಿ ಏನೇ ಜಂಜಾಟಕ್ಕೆ ಒಳಗಾದರೂ, ನಾನು ನೀನು ಬಸವನಗುಡಿಯ ಬೀದಿಗಳಲ್ಲಿ ಹೀಗೆ ಅಲೆದಾಡಲು ಬರೋಣ, ಚರ್ಚಿಸೋಣ, ಪುಸ್ತಕಗಳ ಬೇಟೆಯಾಡೋಣ. ನಮ್ಮ ಸಾಹಿತ್ಯೋಪಾಸನೆಯ ಯತ್ನಗಳನ್ನು ಅವಿರತವಾಗಿ ನಡೆಸೋಣ.

ಅಂದ ಹಾಗೆ, ಅಂಕಿತ ಪುಸ್ತಕದಂಗಡಿಯ ಒಳಗೆ ನೀನು ಇದ್ದಕ್ಕಿದ್ದ ಹಾಗೆ "ಏನೊ ಕಿರಣ, ಮತ್ತೇನೂ ಬರೆಯಲೇ ಇಲ್ಲವಲ್ಲ ನೀನು?" ಎಂದು ನನ್ನನ್ನು ಕೇಳಿದಾಗ ನಾನು ಈ ಬರಹದ ಕಲ್ಪನೆಯಲ್ಲಿದ್ದೆ. ನಿನಗೆ ಅದನ್ನು ಹೇಳೇಬಿಟ್ಟರಾಯಿತು ಎಂದುಕೊಂಡ ಮನಸ್ಸು ಮಾತನ್ನು ನಾಲಿಗೆಯ ತುದಿಯವರೆಗೂ ಕಳುಹಿಸಿ ಮತ್ತೇನೋ ನೆನಪಾದಂತೆ ಸರಕ್ಕನೆ ಒಳಗೆಳೆದುಕೊಂಡಿತು. ಇದನ್ನು ಮಾತಿನಲ್ಲಿ ಹೇಳೋದು ಬೇಡ ಎನ್ನುವುದೆ ಅದರ ಉದ್ದೇಶವಿರಬೇಕು.

-
ಮತ್ತೆ ಸಿಗೋಣ.
ಸೂರ್ಯಕಿರಣ್ ಜೋಯಿಸ್.

Comments

Unknown said…
ಸುಲಲಿತ ಬರಹ, ನಿಮ್ಮ ಸಾಹಿತ್ಯಾಭಿರುಚಿ ನೋಡಿ ಮೆಚ್ಚುಗೆ ಆಯಿತು. ಹೀಗೆ ಬರೆಯುತ್ತಾ ಇರಿ.
Shrinidhi Hande said…
ಹೌದು. ಪುಸ್ತಕ ಓದುವವರು ಈ ದಿನಗಳಲ್ಲಿ ಬಹಳ ಕಡಿಮೆ...
raviii... said…
mamu jaan super fantasticu wonderpullu i too sometimes feel writing blog defn not in kannada as u know may be time constraint and constarints of patience hope tommrow will post my first blog want a comment from you a serious one
Unknown said…
Re.... Nimma ee Blog na naanu akasmatha agi odide, adre nimma abhiruchi ge, nimma baraha ke naanu fan aderee... Really its good.

Popular posts from this blog

ಮಾತು-ಮೌನ-ಮನಸ್ಸು

ನಿರೀಕ್ಷೆ

ಗುಂಗು ಹಿಡಿಸುವ ಮಧುರಾನುಭವ