ತ್ಯಾಜ್ಯದಿಂದ ವಿದ್ಯುತ್ - ತ್ಯಾಜ್ಯ ನಿರ್ವಹಣೆಯ ಸಮಸ್ಯೆಗೆ ಶಾಶ್ವತ ಪರಿಹಾರ?
ಕಸದಿಂದ ರಸ ತೆಗೆಯುವ ಅನೇಕ ವಿಧಾನಗಳು ನಮಗೆ ಪರಿಚಿತ. ಆದರೆ ಕಸದಿಂದ ವಿದ್ಯುತ್ ಕೂಡ ತಯಾರಿಸಬಹುದೆಂದು ನಮ್ಮಲ್ಲಿ ಬಹುತೇಕರಿಗೆ ಗೊತ್ತಿರಲಾರದು. ಇಲ್ಲಿ ಕಸ ಎಂದರೆ ಯಾವುದೋ ಒಂದು ಬಗೆಯ ಕಸ ಮಾತ್ರವಲ್ಲ. ಬೆಂಗಳೂರಿನ ಸದ್ಯದ ಕಸ ವಿಲೇವಾರಿ ಸಮಸ್ಯೆಯಿಂದ ಅಲ್ಲಲ್ಲಿ ತಿಪ್ಪೆಗಳಾಗಿ ರಾಶಿ ರಾಶಿಯಾಗಿ ಕಾಣಸಿಗುವ ಒಣ ಮತ್ತು ಹಸಿ ಮಿಶ್ರಿತ ತ್ಯಾಜ್ಯ, ಕೈಗಾರಿಕಾ ಕಸ, ಜೈವಿಕ ತ್ಯಾಜ್ಯ, ಪ್ಲಾಸ್ಟಿಕ್ ಇನ್ನೂ ಹಲವು ಬಗೆಯ ತ್ಯಾಜ್ಯ - ಇವೆಲ್ಲವುಗಳನ್ನು ಬಳಸಿ ವಿದ್ಯುತ್ ಉತ್ಪಾದಿಸುವ "ಅನಿಲೀಕರಣ" ತಂತ್ರಜ್ಞಾನ ಲಭ್ಯವಿದೆ. ತ್ಯಾಜ್ಯ ವಿಲೇವಾರಿ ಸಮಸ್ಯೆಯನ್ನೇ ದೊಡ್ಡದಾಗಿಸಿಕೊಂಡು ಬೆಂಗಳೂರಿನ ಬಿ.ಬಿ.ಎಂ.ಪಿ ಒದ್ದಾಡುತ್ತಿರುವಾಗ, ಪುಣೆಯಲ್ಲಿ ತ್ಯಾಜ್ಯದ ಅನಿಲೀಕರಣದಿಂದ ವಿದ್ಯುತ್ ಉತ್ಪಾದಿಸುವ ಘಟಕ ಸ್ಥಾಪಿತಗೊಂಡು ಅದರಿಂದ ವಿದ್ಯುತ್ ಸರಬರಾಜಾಗುತ್ತಿದೆ. ತ್ಯಾಜ್ಯ ವಿಂಗಡನೆ, ವಿಸರ್ಜನೆಗಳ ಸುತ್ತ ಎದ್ದಿರುವ ಸಮಸ್ಯೆಗಳ ಭರಾಟೆಯಲ್ಲಿ, ಇದಕ್ಕೆ ಸರಿಯಾದ ಪ್ರಚಾರವಿಲ್ಲದೆ, ಸರ್ಕಾರವೂ ಈ ನಿಟ್ಟಿನಲ್ಲಿ ಚಿಂತಿಸದೇ ಇದು ಬೆಳಕಿಗೆ ಬರದಿರುವುದು ವಿಪರ್ಯಾಸದ ಸಂಗತಿ. ಈ ತಂತ್ರಜ್ಞಾನವನ್ನು ಅವಲೋಕಿಸುವ ಮುನ್ನ ತ್ಯಾಜ್ಯ ನಿರ್ವಹಣೆಗೆ ಈಗ ಬಿ.ಬಿ.ಎಂ.ಪಿ ಅನುಸರಿಸುತ್ತಿರುವ ವಿಧಾನದಲ್ಲಿರುವ ಸಮಸ್ಯೆ, ಕೊರತೆ ಹಾಗೂ ಸವಾಲುಗಳನ್ನು ಗಮನಿಸೋಣ. ತ್ಯಾಜ್ಯ ನಿರ್ವಹಣೆಗಾಗಿ ಸದ್ಯ ಬಳಕೆಯಲ್ಲಿರುವ ಪ್ರಕ್ರಿಯೆ ಹೀಗಿದೆ: 1. ಪ್ರತಿ ವಾರ್ಡ್‍ನ ಪ್ರತಿ...