ಬೆಳಕೇ

ಬೆಳಕೇ,
ಹಾಸಿರುತ್ತೀಯಲ್ಲವೇ ನಿನ್ನ ಹೊದಿಕೆಯ
ಸೂರು ಸೋರುವ ಗುಡಿಸಲುಗಳ ಮೇಲೆಲ್ಲಾ
ಪಾತ್ರೆ ಹಾಸಿಗೆ ತೊಟ್ಟಿಲು ನೆನೆದು
ನಡುಗುವ ದೇಹಗಳ ಸುತ್ತುಗಟ್ಟಿರುತ್ತೀಯ
ಹೊತ್ತಾಗಲು ಇಲ್ಲವಾಗಿ ಬುಡ್ಡಿಯ ಎಣ್ಣೆಗಲೆಸುತ್ತೀಯ

ಬೆಳಕೇ,
ಇಳೆ ಬಿಟ್ಟಿರುತ್ತೀಯಲ್ಲವೇ ನಿನ್ನ ಕೋಲನು
ಹೆಂಚುಗಳ ಸಂದಿಯೊಳಿಂದ ನುಸುಳಿ
ಹೊರಗಿನ ಕಾವನೆಲ್ಲ ಸುರುಳಿ ಸುತ್ತಿ
ನೆಲವ ತಬ್ಬಿ ಹೊಳೆವ ಬಿಲ್ಲೆಯಾಗಿರುತ್ತೀಯ
ಒಲೆಯ ಮುಂದೆ ಬೇಯುವ ಜೀವದ ಬವಣೆ ಕಾಣುತ್ತಿರುತ್ತೀಯ

ಬೆಳಕೇ,
ಝಗಮಗಿಸುತ್ತಿರುತ್ತೀಯ ಮಹಲು ಭವನಗಳಲಿ
ಹಾಯುತ್ತಿರುತ್ತೀಯ ಇರುಳ ರಸ್ತೆಗಳಲಿ ವಾಹನಗಳನೇರಿ
ಹೊಳೆಯುತ್ತಿರುತ್ತೀಯ ಚಿಂದಿಯುಡುಗೆ ತೊಟ್ಟ ಚಿಣ್ಣರ ಕಣ್ಣೊಳು
ಹುಟ್ಟು ಹಬ್ಬಗಳ ಮೋಂಬತ್ತಿಯ ತುದಿಯಲಿ
ಹೋದ ಜೀವದ ಒಂಟಿ ಹಣತೆಯಲಿ

ಇರದ ಜಾಗವಿಲ್ಲವೆಂಬ ಗರ್ವವಿರಬಹುದೇ ನಿನಗೆ?
ಹಿಡಿಯಲಾಗದೆಂಬ ಠೇ೦ಕಿದ್ದರೂ ಸರಿಯೇ
ಬಂದು ಹೋಗುತ್ತಿರಬೇಕು ನೀನು ಬೊಗಸೆಯಿಂದ ಬೊಗಸೆಗೆ
ಹಗಲುಗಳ ಕಣ್ಣು ತಪ್ಪಿಸಿ ಜಾರಿ ಹೋಗುತ್ತಿರಬೇಕು ಕತ್ತಲೆಡೆಗೆ
ಹಾದು ಹೋಗುತ್ತಿರಬೇಕು ಕಣ್ಣಿಂದ ಕಣ್ಣಿಗೆ
ಹೌದು, ಹಾಗೆಯೇ...
ಆದರೂ ಒಂದು ಸಣ್ಣ ಹೊಳಹಾಗಿ ಉಳಿದಿರಬೇಕು ಮನಸ ಒಳಗೆ

Comments

Popular posts from this blog

ಮಾತು-ಮೌನ-ಮನಸ್ಸು

ನಿರೀಕ್ಷೆ

ಗುಂಗು ಹಿಡಿಸುವ ಮಧುರಾನುಭವ