ಬಿಟಿಎಂ ಲೇಔಟ್


ಅರೆ ನಿದ್ದೆಯ ಕಣ್ಣುರಿ ತುಂಬಿ
ಸಂತೆಯ ಸಂದಣಿಯಲ್ಲಿ ದೂಡಿ
ಕಿವಿಯಲ್ಲಿ ಉಸುರುತ್ತದೆ
"ಓಡು ಮಗುವೆ
ಬಸ್ಸಿನ ಛಾವಣಿಯ ಕಂಬಿಗೆ
ಜೋತು ಬಿದ್ದು ನಿದ್ದೆಯ ದಣಿವಾರಿಸಿಕೊ
ಮನೆಯ ಖಾಲಿ ಬಿಟ್ಟು ದಿನವೆಲ್ಲ
ಒಂದಿಷ್ಟು ಬೆವರು ಸುರಿಸಿಕೊ
ಮನೆಯಿರುವುದು ರಾತ್ರಿ ಉಂಡು ಮಲಗಲಷ್ಟೆ
ಓಡಿನ್ನು ಬೇಗ
ಗಿರಗಿರನೆ ತಿರುಗುವ ಚಕ್ರಗಳ ಮೇಲಿನ
ಯಂತ್ರದ ರಥಗಳಿಂದ ಕಿಕ್ಕಿರಿದ ರಸ್ತೆಯನೊಮ್ಮೆ ನೋಡು
ಜೊಂಪು ನಿದ್ದೆಗೂ ಬಿಡುವಿಲ್ಲ ಅದಕೆ
ಹೋಗುತ್ತಲೇ ಕರಗಿಬಿಡು ಸಂತೆಯೊಳಗೆ
ಹೋಗಿ ತೀರಿಸಿ ಬಾ ದಿನಕರನಂತೆ
ದಿನಕ್ಕೆ ಕೊಡಬೇಕಿರುವ ನಿನ್ನ ಬಾಬ್ತು
ಒಂದಿಷ್ಟು ಬೆಂದು ಒಂದಿಷ್ಟು ಉರಿದು
ನಿನ್ನನೇ ನೀನು ತೀಡಿಕೊಂಡು
ಒಂದಿಷ್ಟು ಹೊಳೆಯಬಲ್ಲೆಯೇನೋ ನೋಡು"
ಸಂಜೆ ಸುರಿದ ಮೇಲೆ ಇರುಳ ಚಪ್ಪರ ಕಟ್ಟುತ್ತಲೇ
ಬರ ಮಾಡಿಕೊಳ್ಳುತ್ತದೆ
ಬಣ್ಣದಾಗಸ ನೋಡಲಾಗದ್ದಕ್ಕೆ
ಮೈದಡವಿ ಸಂತೈಸುತ್ತದೆ
ದುಡಿಮೆಯ ಕೀಲಿ ಕೊಡಿಸಿಕೊಂಡ ಬೊಂಬೆಗಳ
ಹಣೆ ನೀವುತ್ತದೆ
ಹೋಟೆಲಿನ ಮೇಜು ಒರೆಸುವ ಪೋರನ
ಗುನುಗು ಗೀತೆಯಾಗುತ್ತದೆ
ಮನೆ ಮುಟ್ಟಿಸಲು ಬಂದ ಕ್ಯಾಬ್ ಚಾಲಕನ
ಇಷ್ಟದ ತಿರುವಾಗುತ್ತದೆ
ಠೀವಿಯಾಗುತ್ತದೆ ಲಲನೆಯರ ನಡಿಗೆಯಲ್ಲಿ
ತುಳುಕಾಡುತ್ತದೆ ಮೈದಾನದ ಮಕ್ಕಳ ಕೇಕೆಯಲ್ಲಿ
ಉಡುಪಿ ಗಾರ್ಡನ್‌ನಿಂದ ಮಡಿವಾಳ ಕೆರೆ
ಜಯದೇವದಿಂದ ತಾವರೆಕೆರೆ
ಎಡಬಿಡದೆ ಎಲ್ಲರನಲೆಸಿ
ಸಂತೆಯ ಲೀಲೆಯಲ್ಲಿ ಸಂಭ್ರಮಿಸುತ್ತದೆ
ವಾಹನ ಸರಮಾಲೆ ಧರಿಸಿ ನರ್ತಿಸುತ್ತದೆ
ಸಲಹುತ್ತದೆ ಉಬ್ಬುತ್ತದೆ ಬಿಕ್ಕುತ್ತದೆ
ಉನ್ಮತ್ತಗೊಂಡು ಮೆರೆಯುತ್ತದೆ
ಹಬ್ಬಕ್ಕೆ ಹೆಗಲ ಚೀಲ ಹೊತ್ತು ಹೋಗುವವರ
ನೋಡುತ್ತದೆ ಮೌನದಲಿ
ಖಾಲಿ ರಸ್ತೆಗಳ ಬಿಕೋ
ತಾಳಲಾರದೆ ನಿರುಕಿಸುತ್ತದೆ ದಾರಿಯನ್ನು
ಹಾಳು ಸುರಿಯುವ ಖಾಲಿತನದ ಬೇಸರಿಕೆಯಲಿ
ಬಣಗುಡುತ್ತದೆ
ಹಿಂತಿರುಗುವವರ ಹೆಜ್ಜೆ ಕಂಡು ಹಿಗ್ಗುತ್ತದೆ
ಮತ್ತೆ ಮತ್ತೆ
ಸಂತೆಯ ಸರಭರಕ್ಕೆ ಅಣಿಯಾಗುತ್ತಲೆ
ಎಲ್ಲರ ಒಳಸೆಳೆದಿಟ್ಟುಕೊಳ್ಳುತ್ತಲೇ
ಜನನಿಬಿಡ ಒಗಟಾಗುತ್ತದೆ

Comments

Popular posts from this blog

ಮಾತು-ಮೌನ-ಮನಸ್ಸು

ಗುಂಗು ಹಿಡಿಸುವ ಮಧುರಾನುಭವ

ನಿರೀಕ್ಷೆ