ಗಟ್ಟಿಮೇಳ


ಮದುವೆ ಮನೆಯಲ್ಲಿ
ದೇವರೇ ಪ್ರತ್ಯಕ್ಷನಾದಂತೆ
ಎದ್ದು ನಿಲ್ಲುತ್ತಾರೆ ಎಲ್ಲ
ಗಟ್ಟಿ ಮೇಳದ ಅಲೆಗಳು ತೇಲಿಬಂದೊಡನೆ
ಅಕ್ಷತೆ ಹಾಕುತ್ತಾರೆ
ದಿಕ್ಕುಗೆಟ್ಟ ಕುರ್ಚಿಗಳಲಿ ಹರಟುತ್ತಿದ್ದವರೆಲ್ಲ
ಉಕ್ಕುವ ಹಾಲನ್ನು ತಡೆಯಲು ಧಾವಿಸಿದವರಂತೆ
ಅಲ್ಲಿಂದಲೆ ಮುಂದೆ ಓಡಿದಂತೆ
ಎಸೆಯುತ್ತಾರೆ ಅಕ್ಕಿ ಕಾಳು
ಮುಂದೆ ನಿಂತು ಕಣ್ಣು ಹನಿಸುವವರ ಮೇಲೆಯೇ
ಮುಗಿಯಿತಿನ್ನು!
ಹಠಾತ್ ದೊಡ್ಡವರಾಗಿಬಿಟ್ಟರು ವಧು-ವರರು
ಘನ ಗಾಂಭೀರ್ಯದ ಮೂಟೆ ಹೊತ್ತೇ
ಸಪ್ತಪದಿಯಿಡಬೇಕು ಅವರಿನ್ನು
ಅವರ ನಡೆ ನುಡಿ
ಉಸಿರು ನೋಟ ನಗು
ಎಲ್ಲಕ್ಕೂ ಹೊಣೆಯ ಹೊರೆ
ಅವಳು ಕೈ ಜೋಡಿಸಿದಳಷ್ಟೆ
ಬಗ್ಗಿ ನಮಸ್ಕರಿಸಲಿಲ್ಲವಲ್ಲ!
ಅವನಾಗಲೇ ಅವಳ ಸೆರಗ ಹಿಂಬಾಲಿಸುತ್ತಿದ್ದಾನಲ್ಲಾ!
ಪಿಸುಗುಟ್ಟುತ್ತಿದ್ದಾರೆ ಮದುವೆ ಮನೆಯ
ಗಳಗಳ ಮಾತುಗಳ ನಡುವೆ
ಅಗ್ನಿಗೆ ಅರಳು ಹುಯ್ಯಲು ಬಾರದು ಅವಳಿಗೆ
ಆಪೋಷಣೆಗೆ ಅಂಗೈ ಗುಳಿ ಮಾಡಲು ತಿಳಿಯದು ಅವನಿಗೆ
ಇವರೆಂಥ ಸಂಸಾರ ಮಾಡಿಯಾರು!
ಎನ್ನುತ್ತ ಹಪ್ಪಳದ ಪರಿಮಳಕ್ಕೆ ಸೋತು
ಊಟದ ಪಂಕ್ತಿಯೊಳಗೆ ಉಪ್ಪಿನಕಾಯಿಯ ಮೆಚ್ಚಿಕೊಂಡರು
ಎಲೆ ಅಡಿಕೆ ಮೆಲ್ಲುತ್ತ
ನವ ದಂಪತಿಗಳಿಗೆ ಆಶೀರ್ವದಿಸುತ್ತಾರೆ
ಶೀಘ್ರಮೇವ ಸಂತಾನಪ್ರಾಪ್ತಿರಸ್ತು
ಹುಡುಗಾಟಿಕೆ ಸಲ್ಲದು ಮುಂದೆ
ಎಲ್ಲೂ ತಪ್ಪದೆ ಎಲ್ಲ ನಿಭಾಯಿಸಬೇಕೆಂದು
ಚಿತಾವಣೆ ಕೊಡುತ್ತಾರೆ
ಮದು"ಮಕ್ಕಳೇ", ಭೂಮದೂಟಕ್ಕೇಳಿ
ಯಾರೋ ಕೂಗುತ್ತಾರೆ
ಯಾವ ಮಕ್ಕಳೆಂದು ತಬ್ಬಿಬ್ಬಿನಲ್ಲಿ
ಇಬ್ಬರೂ ಮುಖ ನೊಡಿಕೊಂಡು
ನಾವೇ ಹೌದೆಂದು
ಜೀರಿಗೆ ಬೆಲ್ಲದ ಗಂಟಿನೊಡನೆ
ಮಣೆಯೇರುತ್ತಾರೆ ಪಾಪ!

Comments

Popular posts from this blog

ಮಾತು-ಮೌನ-ಮನಸ್ಸು

ಬೀದಿ ಬದಿಯ ಬಾಣಸಿಗ

ಗೆಳೆಯನ ಬೀಳ್ಕೊಡುಗೆಗೆ ಎರಡು ಕವಿತೆಗಳು