ಬರ್ಫಿ - ಮುಗ್ಧ ಪ್ರೇಮದ ಹಲವು ಮುಖಗಳು

ದೈಹಿಕ/ಮಾನಸಿಕ ದೌರ್ಬಲ್ಯಗಳುಳ್ಳ ಪಾತ್ರಗಳನ್ನೇ ಕೇಂದ್ರವಾಗಿರಿಸಿಕೊಂಡು ಬಾಲಿವುಡ್‍ನಲ್ಲಿ ಸಾಕಷ್ಟು ಚಿತ್ರಗಳು ಬಂದಿದ್ದರೂ, ಅವುಗಳಲ್ಲಿ ಪರಿಣಾಮಕಾರಿ ಕಥನ ಮತ್ತು ನಿರೂಪಣೆಯುಳ್ಳ ಚಿತ್ರಗಳು ಬೆರಳೆಣಿಕೆಯಷ್ಟು."ಸದ್ಮಾ" ಚಿತ್ರದಲ್ಲಿನ ಶ್ರೀದೇವಿ ಮತ್ತು ಕಮಲ್ ಹಾಸನ್ ರ ಅಭಿನಯವನ್ನು ಜನರು ಇಂದಿಗೂ ಮೆಚ್ಚುಗೆಯಿಂದ ನೆನೆಸಿಕೊಳ್ಳುತ್ತಾರೆ. "ಪಾ", "ಮೈ ನೇಮ್ ಈಸ್ ಖಾನ್"ನಂಥ ಚಿತ್ರಗಳು ಬಂದಿವೆಯಾದರೂ ಅವುಗಳಲ್ಲಿನ "ದೌರ್ಬಲ್ಯ ಪೀಡಿತ" ಪಾತ್ರಗಳು ಆಪ್ತವಾಗಿ ಉಳಿಯಲಿಲ್ಲ. "ಘಜಿನಿ" ಚಿತ್ರದಲ್ಲಿ ನೆನಪು-ಮರೆವುಗಳ ನಡುವೆ ಸಿಲುಕಿ ತಲ್ಲಣಿಸುವ ಪಾತ್ರವಿದ್ದರೂ, ಪ್ರೇಯಸಿಯ ಸಾವಿನ ಸೇಡಿನ ವೈಭವೀಕರಣ ಪಾತ್ರದ ಬೇರೆ ವೈಶಿಷ್ಟ್ಯಗಳನ್ನು ಮಾಸಲುಗೊಳಿಸಿತ್ತು. ಆದರೂ ಇತ್ತೀಚಿನ "ತಾರೆ ಝಮೀನ್ ಪರ್" ಮತ್ತು ಸುಮಾರು ಒಂದು ದಶಕದ ಹಿಂದೆ ತೆರೆಕಂಡಿದ್ದ "ಬ್ಲಾಕ್" ಚಿತ್ರಗಳು ಈ ನಿಟ್ಟಿನಲ್ಲಿ ಪ್ರಶಂಸೆ ಹಾಗೂ ಮೆಚ್ಚುಗೆ ಪಡೆದ ಚಿತ್ರಗಳು. ಮಾರುಕಟ್ಟೆಯ ಸೂತ್ರಗಳಿಗೆ ತಕ್ಕ ರಂಜಕ ಗುಣಗಳ ಮೇಲೆಯೇ ಪ್ರಾಶಸ್ತ್ಯ ನೀಡುವುದರಿಂದಲೋ ಅಥವಾ ಥಳುಕು-ಬಳುಕು, ತಾರಾ ವರ್ಚಸ್ಸು, ನಾಟಕೀಯತೆ, ವೈಭವೀಕರಣಗಳ ವಿಪರೀತ ವ್ಯಾಮೋಹದಿಂದಲೋ ಬಹುತೇಕ ನಿರ್ದೇಶಕರು ಸಿನೆಮಾದ ಸಿದ್ಧ ಮಾದರಿಗಳಿಗೆ ಶರಣಾಗಿರುವುದಂತೂ ಸುಳ್ಳಲ್ಲ. ಎರಡು ವಾರಗಳ ಕೆಳಗೆ ಬಿಡುಗಡೆಗೊಂಡಿರುವ "ಬರ್ಫಿ...